ಸಾರಾಂಶ
ಬಳ್ಳಾರಿ; ನಗರದ ತಾಳೂರು ರಸ್ತೆ, ಶ್ರೀಧರಗಡ್ಡೆ ಸೇರಿದಂತೆ ಗ್ರಾಮೀಣ ಪ್ರದೇಶದ ಶಾಲೆಗಳಿಗೆ ಹೊಸದಾಗಿ ಇಸ್ಕಾನ್ ಅಕ್ಷಯ ಪಾತ್ರೆ ಮೂಲಕ ಬಿಸಿಯೂಟ ವಿತರಣೆಗೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ಮುಖಂಡ ನಿಯೋಗ ಜಿಪಂ ಸಿಇಒಗೆ ಮನವಿ ಸಲ್ಲಿಸಿದೆ.
ನಗರ ಸೇರಿದಂತೆ ಸುತ್ತಮುತ್ತಲ ಅನೇಕ ಶಾಲೆಗಳಲ್ಲಿ ಸ್ಥಳೀಯವಾಗಿಯೇ ಬಿಸಿಯೂಟವನ್ನು ತಯಾರಿಸಲಾಗುತ್ತಿತ್ತು. ಆದರೆ, ಇದೀಗ ಅನೇಕ ಶಾಲೆಗಳಲ್ಲಿ ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ. ಇದರಿಂದ ಕಳೆದ 20 ವರ್ಷಗಳಿಂದ ಅಕ್ಷರ ದಾಸೋಹ ಯೋಜನೆಯಡಿ ಕೆಲಸ ಮಾಡುತ್ತಿದ್ದ ಮಹಿಳೆಯರು ಕೆಲಸ ಕಳೆದುಕೊಳ್ಳಲಿದ್ದಾರೆ. ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆಗೆ ಒಳಪಡುತ್ತಿದ್ದಂತೆ ಅಡುಗೆ ಸಿಬ್ಬಂದಿ ಸರಾಸರಿಯಂತೆ ಕನಿಷ್ಠ ಒಬ್ಬರು ಕೆಲಸದಿಂದ ವಂಚಿತರಾಗುತ್ತಿದ್ದು, ಕಡಿಮೆ ವೇತನದಲ್ಲೂ ಕಾರ್ಯನಿರ್ವಹಿಸುತ್ತಿರುವ ಬಿಸಿಯೂಟ ನೌಕರರ ಜೀವನ ಮತ್ತಷ್ಟು ಸಂಕಷ್ಟಕ್ಕೀಡಾಗಲಿದೆ ಎಂದು ಸಂಘದ ಮುಖಂಡರು ತಿಳಿಸಿದರು.ಇಸ್ಕಾನ್ ಸಂಸ್ಥೆಯ ಅಕ್ಷಯಪಾತ್ರೆ ಯೋಜನೆ ಸರ್ಕಾರ ಬಿಸಿಯೂಟ ಯೋಜನೆಗೆ ನೀಡುವ ಹಣದಿಂದಲೇ ನಡೆಯುತ್ತದೆ. ಸರ್ಕಾರದ ಹಣವನ್ನು ಖಾಸಗಿ ಸಂಸ್ಥೆಗಳಿಗೆ ನೀಡುವ ಬದಲು ಬಿಸಿಯೂಟ ಯೋಜನೆಯಡಿ ಈ ಹಿಂದಿನಂತೆಯೇ ಸ್ಥಳೀಯ ಮಹಿಳೆಯರಿಗೆ ಅಡುಗೆ ತಯಾರಿಸಲು ಅವಕಾಶ ಮಾಡಿಕೊಡಬೇಕು. ಪ್ರತಿ ಶಾಲೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಶುದ್ಧ ಕುಡಿವ ನೀರು, ಅಡುಗೆ ಮನೆ, ದಿನಸಿ ಸಾಮಾಗ್ರಿಗಳನ್ನು ಸಕಾಲಕ್ಕೆ ಪೂರೈಸಬೇಕು. ಬಿಸಿಯೂಟ ಕಾರ್ಮಿಕರಿಗೂ ಕೆಲಸದ ಭದ್ರತೆ ನೀಡಬೇಕು ಎಂದು ಒತ್ತಾಯಿಸಿದರು.
ಸಂಘಟನೆ ಮುಖಂಡರಿಂದ ಮನವಿಪತ್ರ ಸ್ವೀಕರಿಸಿ ಮಾತನಾಡಿದ ಜಿಪಂ ಸಿಇಒ ರಾಹುಲ್ ಶರಣಪ್ಪ ಸಂಕನೂರ, ಸಂಘಟನೆಯ ಮುಖಂಡರು ಹೇಳುತ್ತಿರುವ ಶಾಲೆಗಳಲ್ಲಿ ಇಸ್ಕಾನ್ ಅಕ್ಷಯ ಪಾತ್ರೆ ಯೋಜನೆ ಜಾರಿಗೆ ತರುವ ಯಾವುದೇ ಯೋಚನೆ ಸದ್ಯಕ್ಕಿಲ್ಲ.ಯಾರನ್ನೂ ಸಹ ಸೇವೆಯಿಂದ ತೆಗೆದು ಹಾಕದಂತೆ ಕ್ರಮ ವಹಿಸಲಾಗುವುದು. ಜಿಲ್ಲೆಯ ಎಲ್ಲ ಕಡೆ ಬಿಸಿಯೂಟ ಯೋಜನೆ ಸಮರ್ಪಕವಾಗಿ ನಡೆಯುವಂತೆ ಈಗಾಗಲೇ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.ಎಐಯುಟಿಯುಸಿ ಜಿಲ್ಲಾ ಕಾರ್ಯದರ್ಶಿ ಡಾ.ಪ್ರಮೋದ್, ಸಂಘದ ಸಲಹೆಗಾರರಾದ ನಾಗರತ್ನಎಸ್.ಜಿ, ಮುಖಂಡರಾದ ಮಂಜುಳಾ, ಜಯಮ್ಮ ದುರ್ಗಮ್ಮ, ಬಸಮ್ಮ, ಮಂಗಳಮ್ಮ, ಹೇಮಾವತಿ , ಶಾಮಲಾ, ನೀಲಮ್ಮ ಇತರರಿದ್ದರು.
ಬಳ್ಳಾರಿಯ ತಾಳೂರು ರಸ್ತೆ, ಶ್ರೀಧರಗಡ್ಡೆ ಶಾಲೆಗಳಲ್ಲಿ ಇಸ್ಕಾನ್ ಅಕ್ಷಯಪಾತ್ರೆ ಬಿಸಿಯೂಟ ಯೋಜನೆಯನ್ನು ಜಾರಿಗೊಳಿಸಬಾರದು ಎಂದು ಒತ್ತಾಯಿಸಿ ರಾಜ್ಯ ಸಂಯುಕ್ತ ಅಕ್ಷರ ದಾಸೋಹ ಕಾರ್ಮಿಕರ ಸಂಘದ ನಿಯೋಗ ಜಿಪಂ ಸಿಇಒ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿತು.