ಇತ್ತೀಚೆಗಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ನಿರ್ಲಕ್ಷದಿಂದ ಅವುಗಳು ಮುಚ್ಚಿ ಹೋಗುತ್ತಿವೆ ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿರುವುದು ವಿಷಾದನೀಯ.
ಸಂಡೂರು: ಸರ್ಕಾರಿ ಶಾಲೆ ಹಾಗೂ ಆಸ್ಪತ್ರೆಗಳು ರಕ್ತ ಮಾಂಸಗಳಂತೆ. ಅವುಗಳನ್ನು ನಿರ್ಲಕ್ಷಿಸಿದರೆ ನಮ್ಮ ಆರೋಗ್ಯ ನಿರ್ಲಕ್ಷಿಸಿದಂತೆ. ವಿದ್ಯಾರ್ಥಿಗಳಲ್ಲಿ ಸಮಾನತೆ, ಜಾತ್ಯಾತೀತ, ಭಾತೃತ್ವದ ಆಶಯಗಳನ್ನು ಕಲಿಸಿಕೊಡುವುದು ಸರ್ಕಾರಿ ಶಾಲೆಗಳು ಎಂದು ಸಾಹಿತಿ ವಸುಧೇಂದ್ರ ಅಭಿಪ್ರಾಯಪಟ್ಟರು.ಪಟ್ಟಣದ ಕುಮಾರಸ್ವಾಮಿ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಶಾಲೆಯ ಹಳೆಯ ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಗುರುವಂದನೆ ಹಾಗೂ ಹಳೆ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಅವರು ಉಪನ್ಯಾಸ ನೀಡಿದರು.
ಇತ್ತೀಚೆಗಿನ ವರ್ಷಗಳಲ್ಲಿ ಸರ್ಕಾರಿ ಶಾಲೆಗಳ ನಿರ್ಲಕ್ಷದಿಂದ ಅವುಗಳು ಮುಚ್ಚಿ ಹೋಗುತ್ತಿವೆ ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿರುವುದು ವಿಷಾದನೀಯ. ಅಮೆರಿಕ ಹಾಗೂ ಇಂಗ್ಲೆಂಡ್‌ನಂತಹ ದೇಶಗಳ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಕ್ರಮವಾಗಿ ಶೇ.೧೩ರಿಂದ ೧೪ ಹಾಗೂ ೨೦ರಿಂದ ೨೨ರಷ್ಟು ಮೀಸಲಿಡುತ್ತಾರೆ. ನಮ್ಮ ದೇಶದಲ್ಲಿ ಇದರ ಪ್ರಮಾಣ ಶೇ.೨.೫೪ ಮಾತ್ರ. ಶಿಕ್ಷಣದಿಂದ ವಂಚಿತರಾದವರು ಸೌಲಭ್ಯಗಳಿಂದ ವಂಚಿತರಾಗುತ್ತಾರೆ. ಇಂದಿನ ಮಕ್ಕಳಿಗೆ ಡಿಜಿಟಲ್ ಜ್ಞಾನವೂ ಬೇಕಾಗಿದೆ. ಜ್ಞಾನ ಬದುಕಿನ ಸವಲತ್ತುಗಳನ್ನು ಬಳಸಿಕೊಳ್ಳಲು ಅಗತ್ಯ.ಸರ್ಕಾರಿ ಶಾಲೆಗಳಲ್ಲಿ ಜಾರಿಗೆ ತರಲಾಗಿರುವ ಮಧ್ಯಾಹ್ನದ ಬಿಸಿಯೂಟದ ಯೋಜನೆ ಉತ್ತಮ ಯೋಜನೆಯಾಗಿದೆ. ಮಕ್ಕಳು ಆರೋಗ್ಯದಿಂದ ಇದ್ದರೆ ದೇಶ ಆರೋಗ್ಯದಿಂದ ಇರುತ್ತದೆ. ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಹಾಗೂ ನೈತಿಕ ಶಿಕ್ಷಣ ಅಗತ್ಯವಾಗಿದೆ ಎಂದು ತಿಳಿಸಿದರಲ್ಲದೆ, ಸಂಡೂರಿನಲ್ಲಿನ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿದರು.
ಅಕ್ಷರ ಸಂಸ್ಕೃತಿ ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು:ಶಾಸಕಿ ಅನ್ನಪೂರ್ಣ ತುಕಾರಾಂ ಮಾತನಾಡಿ, ಶಿಕ್ಷಕರು ನಾಗರಿಕ ಸಮಾಜಕ್ಕೆ ಬುನಾದಿ ಹಾಕಿದವರು. ಶಾಲೆಗಳು ಮೌಲ್ಯ ಕಲಿಸಿದ ದೇವಾಲಯಗಳು. ಅಕ್ಷರ ಸಂಸ್ಕೃತಿಯನ್ನು ಬೆಳೆಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು. ಈ ಹಿನ್ನೆಲೆಯಲ್ಲಿ ಸಂಸದ ಈ. ತುಕಾರಾಂ ತಾಲೂಕಿನಲ್ಲಿ ಶಿಥಿಲವಾಗಿದ್ದ ೪೮ ಶಾಲೆಗಳನ್ನು ಪುನರುಜ್ಜೀವನಗೊಳಿಸಿದ್ದಾರೆ. ತಾಲೂಕಿನಲ್ಲಿ ಉತ್ತಮ ಮೂಲ ಸೌಕರ್ಯಗಳನ್ನು ಹೊಂದಿದ ೧೦ ಮೊರಾರ್ಜಿ ವಸತಿ ಶಾಲೆಗಳನ್ನು ತೆರೆಯಲಾಗಿದೆ. ಪ್ರತಿ ಶಾಲೆಯಲ್ಲಿಯೂ ಬಾಲಕಿಯರಿಗೆ ಪ್ರತ್ಯೇಕವಾದ ಶೌಚಾಲಯ ಹಾಗೂ ವಿಶ್ರಾಂತಿ ಕೊಠಡಿಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುತ್ತಿದ್ದೇವೆ ಎಂದರು.
ಪ್ರಾಸ್ತಾವಿಕ ನುಡಿಗಳನ್ನಾಡಿದ ಶಾಲೆಯ ಹಳೆಯ ವಿದ್ಯಾರ್ಥಿ ಜೆ.ಎಂ. ಅನ್ನದಾನಸ್ವಾಮಿ, ಕುಮಾರಸ್ವಾಮಿ ಶಾಲೆಯು ೧೮೮೯ರಲ್ಲಿಯೇ ಆರಂಭವಾಗಿದೆ. ಗೊಗ್ಗಾ ಸಿದ್ರಾಮಯ್ಯ ತಮ್ಮ ಸ್ವಂತ ಜಾಗವನ್ನು ಶಾಲೆಗಾಗಿ ದಾನ ಮಾಡಿ, ೮ ಕೊಠಡಿಗಳನ್ನು ನಿರ್ಮಿಸಿಕೊಟ್ಟಿದ್ದರು. ೧೯೬೧ ರಲ್ಲಿ ಅಂದಿನ ಉಪ ರಾಷ್ಟ್ರಪತಿಗಳಾಗಿದ್ದ ಬಿ.ಡಿ. ಜತ್ತಿ ಶಾಲಾ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ಶಿಥಿಲಗೊಂಡಿದ್ದ ಶಾಲೆಯನ್ನು ಸಂಸದ ಈ. ತುಕಾರಾಂ ಸುಮಾರು ₹೩ ಕೋಟಿ ಅನುದಾನವನ್ನು ಒದಗಿಸಿ, ೧೬ ಕೊಠಡಿಗಳನ್ನು ನಿರ್ಮಿಸಿ, ಶಾಲೆಯನ್ನು ಪುನರುಜ್ಜೀವನಗೊಳಿಸಿದ್ದಾರೆ ಎಂದರು.ಶಾಲೆಯ ಹಳೆಯ ವಿದ್ಯಾರ್ಥಿಗಳಾದ ಅರುಣ್ ಕರ್ಮರ್ಕರ್, ಜೆ.ಎಂ. ಅನಿಲ್‌ಕುಮಾರ್ ಹಾಗೂ ಮಂಜುನಾಥ್ ಶಾಲೆಯಲ್ಲಿನ ತಮ್ಮ ಬಾಲ್ಯದ ದಿನಗಳನ್ನು, ಶಿಕ್ಷಕರು ನೀಡಿದ ಸಂಸ್ಕಾರ ಹಾಗೂ ವಿದ್ಯೆಯನ್ನು ಸ್ಮರಿಸಿದರು.
ಸಂಸದ ಈ.ತುಕಾರಾಂ ಕಾರ್ಯಕ್ರಮ ಉದ್ಘಾಟಿಸಿ, ಶಾಲೆಗೆ ಜಮೀನು ದಾನ ಮಾಡಿದ ಗೊಗ್ಗ ಕುಟುಂಬದ ಗೊಗ್ಗ ವಿರುಪಾಕ್ಷ ಹಾಗೂ ಶಾಲೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ಶಿಕ್ಷಕರನ್ನು ಸನ್ಮಾನಿಸಿದರು. ಶಾಲೆಯ ಹಳೆಯ ವಿದ್ಯಾರ್ಥಿಗಳು ಗುರುವಂದನೆ ಸಲ್ಲಿಸಿದರು.ಷಣ್ಮುಖರಾವ್ ಸ್ವಾಗತಿಸಿದರು. ಜೆ.ಎಂ. ಬಸವರಾಜ್ ಕಾರ್ಯಕ್ರಮ ನಿರೂಪಿಸಿದರು. ಡಾ. ತಿಪ್ಪೇರುದ್ರ ಸಂಡೂರು ಅವರು ವಂದಿಸಿದರು. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷೆ ಶಿಲ್ಪಾ ತಿಪ್ಪೇಸ್ವಾಮಿ ಅಧ್ಯಕ್ಷತೆಯನ್ನು ವಹಿಸಿದ್ದರು. ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಐ.ಆರ್. ಅಕ್ಕಿ, ಮುಖ್ಯ ಶಿಕ್ಷಕಿ ಕೆ. ಹೊನ್ನೂರಮ್ಮ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಅಕ್ಷಯ್ ಲಾಡ್, ಪುರಸಭೆ ನಿಕಟಪೂರ್ವ ಅಧ್ಯಕ್ಷ ಎಸ್. ಸಿರಾಜ್ ಹುಸೇನ್, ಬಿ.ಷಣ್ಮುಖ, ನರಿ ಪಂಪಾಪತಿ, ಅಂಕಮನಾಳ್ ವಿಶ್ವನಾಥ್, ಇಸ್ಮಾಯಿಲ್, ವಿಜಯಲಕ್ಷ್ಮೀ ಸೇರಿದಂತೆ ಶಾಲೆಯ ಹಲವು ಹಳೆಯ ವಿದ್ಯಾರ್ಥಿಗಳು ಭಾಗವಹಿಸಿದ್ದರು.