ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ಒದಗಿಸುವ ನಿಟ್ಟಿನಲ್ಲಿ ತಾಲೂಕಿನ ಕೆನ್ನಾಳು ಗ್ರಾಪಂ ವ್ಯಾಪ್ತಿಯ ಗ್ರಾಮಗಳ ನಿವಾಸಿಗಳಿಗೆ ಆಯೋಜಿಸಿರುವ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ, ಇದು ಸೇವೆಯಲ್ಲ, ನಮ್ಮ ಕರ್ತವ್ಯ ಕಾರ್ಯಕ್ರಮ ಮಂಗಳವಾರವೂ ಮುಂದುವರೆಯಿತು.ಈವರೆಗೂ ವಿವಿಧ ಸೇವೆಗಳಿಗಾಗಿ 400ಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರವಾಗಿವೆ. ಕೆಲವು ಸಮಸ್ಯೆಗಳಿಗೆ ಪರಿಹಾರ ಒದಗಿಸಲಾಗಿದೆ. ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಆಲೋಚನೆಯಂತೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಕಂದಾಯ, ತಾಲೂಕು ಪಂಚಾಯಿತಿ, ಕೃಷಿ, ತೋಟಗಾರಿಕೆ, ಸೆಸ್ಕ್, ಭೂ ಮಾಪನ ಇಲಾಖೆ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆ ಅಧಿಕಾರಿಗಳು ಭಾಗಿಯಾಗಿ ಜನರಿಗೆ ಅಗತ್ಯವಿರುವ ಸೇವೆಗಳನ್ನು ನೋಂದಣಿ ಮಾಡಿಕೊಂಡು ಸೇವೆಗಳನ್ನು ಒದಗಿಸುವ ಕೆಲಸ ಮಾಡುತ್ತಿದ್ದಾರೆ.
ನಿವಾಸಿಗಳಲ್ಲಿ ಸಂತಸ:ಶನಿವಾರ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮದಡಿ ಸ್ವೀಕರಿಸಲಾದ ಅರ್ಜಿಗಳನ್ನು ಹೊರತುಪಡಿಸಿ 400ಕ್ಕೂ ಹೆಚ್ಚು ಅರ್ಜಿಗಳು ಸ್ವೀಕಾರವಾಗಿದ್ದು, ಕೆಲವು ಕ್ಲಿಷ್ಟಕರ ಸಮಸ್ಯೆಗಳಿಗೂ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕೆಲಸ ಮಾಡುತ್ತಿರುವುದು ಈ ಭಾಗದ ನಿವಾಸಿಗಳಲ್ಲಿ ಸಂತಸ ತಂದಿದೆ.
ರಸ್ತೆ ಮತ್ತು ಕೆರೆ ಜಮೀನು, ಪೌತಿ ಖಾತೆ, ಸರ್ಕಾರಿ ನಿವೇಶನ ಅತಿಕ್ರಮಣ, ಗೋಮಾಳ, ಖರಾಬು ಇತ್ಯಾದಿಗಳನ್ನು ಸರ್ವೇ ಮಾಡಿ ಗಡಿ ಗುರುತಿಸುವಿಕೆ ಸೇರಿದಂತೆ ಸೆಸ್ಕ್ ಇಲಾಖೆ ವತಿಯಿಂದ ಶಿಥಿಲಗೊಂಡ ವಿದ್ಯುತ್ ಕಂಬಗಳ ತೆರವು, ಜೋತು ಬಿದ್ದ ವಿದ್ಯುತ್ ತಂತಿ ಬದಲಾವಣೆ, ಅಗತ್ಯವಿರುವ ಕಡೆಗಳಲ್ಲಿ ವಿದ್ಯುತ್ ಪರಿವರ್ತಕ ಅಳವಡಿಕೆ ಕಾರ್ಯಗಳು ನಡೆಯುತ್ತಿದೆ.ತೋಟಗಾರಿಕೆ ಇಲಾಖೆ ಮತ್ತು ಕೃಷಿ ಇಲಾಖೆ ವತಿಯಿಂದ ಸರ್ಕಾರದಿಂದ ಸಿಗಬಹುದಾದ ಸವಲತ್ತುಗಳು, ಕೃಷಿ ಯಂತ್ರೋಪಕರಣಗಳು ಖರೀದಿ ಮತ್ತು ಇತರೆ ವಿಚಾರಗಳ ಮಾಹಿತಿ ಒದಗಿಸಲಾಗುತ್ತಿದೆ. ಅಂಗನವಾಡಿ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕುಟುಂಬಗಳಿಗೆ ಅಗತ್ಯವಿರುವ ಸೌಲಭ್ಯಗಳ ಮಾಹಿತಿ ಪಡೆದು ಕೊಳ್ಳುತ್ತಿದ್ದು, ಮಾಹಿತಿ ಆಧಾರದ ಮೇಲೆ ಸೇವೆಗಳನ್ನು ಒದಗಿಸಲಾಗುತ್ತಿದೆ.ಜನರಿಂದ ಅಹವಾಲು ಸ್ವೀಕರಿಸಿದ ಬಳಿಕ ಶಾಸಕ ದರ್ಶನ್ ಪುಟ್ಟಣ್ಣಯ್ಯ ಮಾತನಾಡಿ, ಜನರಿಗೆ ಅಗತ್ಯಕ್ಕೂ ಮೊದಲೇ ಸರ್ಕಾರಿ ಸೇವೆಗಳನ್ನು ಒದಗಿಸುವುದು ಈ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ. ಇದಕ್ಕಾಗಿಯೇ ಪೂರ್ಣ ಪ್ರಮಾಣದಲ್ಲಿ ತಯಾರಿ ಮಾಡಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಲು ಅಧಿಕಾರಿ ವರ್ಗ ಶ್ರಮಿಸುತ್ತಿದೆ ಎಂದರು.
ಸರ್ವೇ ಕೆಲಸಕ್ಕೆ ಸೇರಿದಂತೆ ಎರಡು ತಂಡಗಳನ್ನು ಸಿದ್ದ ಮಾಡಿಕೊಳ್ಳಲಾಗಿದೆ. ಒಂದು ತಂಡ ರಸ್ತೆ, ಗೋಮಾಳ ಮತ್ತು ಇತರೆ ಸರ್ಕಾರಿ ಜಾಗಗಳನ್ನು ಗುರುತಿಸಿ ಸರ್ವೇ ಕಾರ್ಯ ಮಾಡುತ್ತಿದೆ. ಜನರಿಗೆ ಅನುಕೂಲ ಕಲ್ಪಿಸುವ ಸಲುವಾಗಿ ಮತ್ತೊಂದು ತಂಡ ಗ್ರಾಮ ಠಾಣಾ ಹೆಚ್ಚಿಸಲು ಕೆಲಸ ಮಾಡುತ್ತಿದೆ ಎಂದರು.ಅಂಗನವಾಡಿ ಕಾರ್ಯಕರ್ತೆಯರು ನೀಡುವ ಮಾಹಿತಿ ಆಧಾರದ ಮೇಲೆ ಖಾತೆ, ಪೌತಿ ಖಾತೆ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ, ಪಹಣಿ ತಿದ್ದುಪಡಿ, ಪೋಡ್, ದುರಸ್ತು ಇತ್ಯಾದಿ ಎಲ್ಲಾ ಕೆಲಸಗಳನ್ನು ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ ಎಂದು ಹೇಳಿದರು.ಸಮಸ್ಯೆ ಮತ್ತು ಗೊಂದಲವಿರುವ ಪ್ರಕರಣಗಳನ್ನು ಗ್ರಾಮದ ಯಜಮಾನರುಗಳ ಸಮ್ಮುಖದಲ್ಲಿ ಇತ್ಯಾರ್ಥ ಪಡಿಸಲು ಪ್ರಯತ್ನಿಸಲಾಗುತ್ತಿದೆ. ಇದರಲ್ಲಿ ಸಫಲತೆ ಕೂಡ ಕಂಡಿದ್ದೇವೆ. ಪ್ರತಿ ಮನೆಗೂ ನೀರು ಒದಗಿಸುವ ಕೆಲಸ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕೆಲವೊಂದು ಗೊಂದಲವಿದ್ದರೂ, ಎಲ್ಲವನ್ನು ಸರಿಪಡಿಸಿಕೊಂಡು ಉತ್ತಮ ಕೆಲಸ ಮಾಡಲಾಗುತ್ತಿದೆ. ಒಂದು ಕೆಲಸಕ್ಕೆ ಕಚೇರಿಗೆ ಹೋಗಿದ್ದರೆ ಮೂರ್‍ನಾಲ್ಕು ತಿಂಗಳು ಆಗುತ್ತಿತ್ತು. ಆದರೆ ಇಲ್ಲಿ ಒಂದೇ ದಿನದಲ್ಲಿ ಆಗಿದೆ. ಎಲ್ಲಾ ಇಲಾಖೆ ಅಧಿಕಾರಿಗಳು ಒಂದೇ ಸ್ಥಳದಲ್ಲಿ ಇರುವುದರಿಂದ ಈ ಕೆಲಸ ಸಾಧ್ಯವಾಗಿದೆ. ಈ ಕಾರ್ಯಕ್ರಮದಿಂದ ಅನುಭವ ಸಿಕ್ಕಿದ್ದು, ಮುಂದಿನ ಗ್ರಾಮ ಪಂಚಾಯಿತಿಗಳಲ್ಲಿ ಕೆಲಸ ಮಾಡಲು ಅನುಕೂಲವಾಗಲಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್.ಮಂಜುನಾಥ್, ತೋಟಗಾರಿಕೆ ಸಹಾಯಕ ನಿರ್ದೇಶಕಿ ಸೌಮ್ಯಾ, ಸಿಡಿಪಿಒ ಪೂರ್ಣಿಮ, ಕಂದಾಯ, ಆರೋಗ್ಯ, ತಾಪಂ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.18ಕೆಎಂಎನ್ ಡಿ19ಪಾಂಡವಪುರ ತಾಲೂಕಿನ ಕೆನ್ನಾಳು ಗ್ರಾಪಂ ಮುಂಭಾಗ ಆಯೋಜಿಸಿದ್ದ ಸರ್ಕಾರಿ ಸೇವೆಗಳು ನಿಮ್ಮನೆ ಬಾಗಿಲಿಗೆ ಕಾರ್ಯಕ್ರಮದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ಸಾರ್ವಜನಿಕರ ಅಹವಾಲು ಆಲಿಸಿದರು.