ದೇವರಹಿಪ್ಪರಗಿ ತಾಲೂಕಿನ ಸಾತಿಹಾಳ ಗ್ರಾಪಂ ಹಾಗೂ ತಾಲೂಕು ಆಡಳಿತ ಸಹಯೋಗದಲ್ಲಿ ಕಚೇರಿ ಆವರಣದಲ್ಲಿ ಶನಿವಾರ ನಡೆದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮವನ್ನು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ

ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮ ಮುಂದಿನ ದಿನಗಳಲ್ಲಿ ಮತ್ತಷ್ಟು ಪರಿಣಾಮಕಾರಿಯಾಗಿ ನಡೆದು, ಸರ್ಕಾರಿ ಸೇವೆಗಳು ಜನರ ಮನೆ ಬಾಗಿಲಿಗೆ ತಲುಪುವಂತಾಗಬೇಕು ಎಂದು ಶಾಸಕ ರಾಜುಗೌಡ ಪಾಟೀಲ ಕುದರಿಸಾಲವಾಡಗಿ ಹೇಳಿದರು.

ತಾಲೂಕಿನ ಸಾತಿಹಾಳ ಗ್ರಾಪಂ ಹಾಗೂ ತಾಲೂಕು ಆಡಳಿತ ಸಹಯೋಗದಲ್ಲಿ ಕಚೇರಿ ಆವರಣದಲ್ಲಿ ಶನಿವಾರ ನಡೆದ ಪ್ರಜಾ ಸೇವೆ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಕರ್ನಾಟಕ ಸರ್ಕಾರದ ವತಿಯಿಂದ ಪ್ರಾರಂಭವಾಗಿರುವ ಪ್ರಜಾ ಸೇವಾ ಆಂದೋಲನ, ಇದು ಬಡಜನರ ಸಮಸ್ಯೆಗಳನ್ನು ಪರಿಹರಿಸುವ ವೇದಿಕೆಯಾಗಬೇಕು. ಎಲ್ಲಾ ಅಧಿಕಾರಿಗಳು ಈ ಕಾರ್ಯಕ್ರಮವನ್ನು ಗಂಭೀರವಾಗಿ ತೆಗೆದುಕೊಂಡು ಸಾರ್ವಜನಿಕರ ಕುಂದುಕೊರತೆ ನಿವಾರಿಸಲು ಪ್ರಯತ್ನಿಸಬೇಕು. ಈ ಕಾರ್ಯಕ್ರಮ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಿದದ್ದಲ್ಲ. ಇದು ಸರ್ಕಾರದ ಕಾರ್ಯಕ್ರಮವಾಗಿದ್ದು, ಅಧಿಕಾರಿಗಳು ಸರ್ಕಾರದ ಸೇವಕರಾಗಿ ಪಕ್ಷ ಬೇಧವಿಲ್ಲದೆ ಬಡಜನರ ಸಮಸ್ಯೆಗಳನ್ನು ಪರಿಹರಿಸಬೇಕು. ತಾಲೂಕಿನ ಜನರೂ ಕೂಡ ಈ ಕಾರ್ಯಕ್ರಮದ ಸದುಪಯೋಗಪಡಿಸಿಕೊಂಡು ತಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದವರು ಮನವಿ ಮಾಡಿದರು.

ತಹಸೀಲ್ದಾರ್‌ ನಿಂಗಣ್ಣ ಬಿರಾದಾರ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಜಾಸೇವೆ ಆಂದೋಲನದಡಿ ಸುಮಾರು 57ಕ್ಕೂ ಅಧಿಕ ಸಾರ್ವಜನಿಕರ ಅರ್ಜಿ ಸ್ವೀಕರಿಸಲಾಗಿದೆ. ಅದರಲ್ಲಿ 18 ಅರ್ಜಿಗಳನ್ನು ಸ್ಥಳದಲ್ಲಿಯೇ ಪರಿಹರಿಸಿದ್ದೇವೆ. ಬಾಕಿ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ವರ್ಗಾಯಿಸಲಾಗಿದೆ. ಪಾರದರ್ಶಕತೆಯಿಂದ ಶಾಸಕರ ನೇತೃತ್ವದಲ್ಲಿ ನಿಮ್ಮೆಲ್ಲರ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.

ಮುಖಂಡರಾದ ಶೇಖರಗೌಡ ಹಿರೇಗೌಡ, ಸುನೀಲ ಮಾಗಿ, ನಾಗರಾಜ ಅವಟಿ, ಕುಮಾರ ರಾಠೋಡ ಸೇರಿದಂತೆ ಹಲವಾರು ಜನ ಮುಖಂಡರು ತಮ್ಮ ಗ್ರಾಮಗಳ ಸಮಸ್ಯೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.

ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಭಾರತಿ ಚೆಲುವಯ್ಯ, ಸಿಡಿಪಿಒ ಶಿಲ್ಪಾ ಹಿರೇಮಠ,ಝೆ.ಪಿ ವಿ.ಎ.ರಾಠೋಡ, ಕೃಷಿ ಇಲಾಖೆ ಅಧಿಕಾರಿ ಶರಣಗೌಡ ಬಿರಾದಾರ, ಪಶು ಸಂಗೋಪನಾ ಇಲಾಖೆ ಅಧಿಕಾರಿ ಡಾ.ರಾಮು ರಾಠೋಡ,ಗ್ರಾ.ಕು ನೀರು ಎಇಇ ವ್ಹಿ.ಬಿ.ಗುಂದಗಿ, ಹೆಸ್ಕಾಂ ಎಇಇ ಕೆ.ಎಂ.ಸಾವಳಗಿ, ತಹಸೀಲ್ದಾರ್ -2 ಎಂ,ಜಿ, ಬಿರಾದಾರ, ಅರಣ್ಯ ಇಲಾಖೆಯ ಜಿ.ಬಿ.ರಾಮಗಿರಿಮಠ, ಕೆಬಿಜೆಎನ್ಎಲ್ ಎಸ್.ಒ ಶ್ರೀಶೈಲ ಬಿರಾದಾರ, ಪಿಡಿಒ ಎಂ.ಎಸ್.ಕತ್ತಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಕಂದಾಯ ಇಲಾಖೆಯ ಶಿರಸ್ತೇದಾರ ಸುರೇಶ ಮ್ಯಾಗೇರಿ ನಿರೂಪಿಸಿ, ಸ್ವಾಗತಿಸಿ, ವಂದಿಸಿದರು.