ಸಾರಾಂಶ
ಕನ್ನಡಪ್ರಭ ವಾರ್ತೆ ಪಾಂಡವಪುರ
ರೈತರು ಮತ್ತು ಸಾರ್ವಜನಿಕರು ಸರ್ಕಾರಿ ಸೇವೆ ಪಡೆಯಲು ತಮ್ಮ ವೈಯಕ್ತಿಕ ಕೆಲಸ, ಕಾರ್ಯಗಳನ್ನು ಬಿಟ್ಟು ಕಚೇರಿಗಳನ್ನು ಅಲೆಯುವುದನ್ನು ತಪ್ಪಿಸಲು ಸರ್ಕಾರಿ ಸೇವೆಗಳು ಮನೆ ಬಾಗಿಲಿಗೆ ಎಂಬ ವಿನೂತನ ಜನಸ್ಪಂದನಾ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಬನ್ನಂಗಾಡಿ ಗ್ರಾಪಂ ಆವರಣದಲ್ಲಿ ಸೋಮವಾರ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಒಂದು ವಾರಗಳ ಕಾಲ ನಡೆಯುವ ಕಾರ್ಯಕ್ರಮದಲ್ಲಿ ಕಂದಾಯ ಇಲಾಖೆ, ಪಂಚಾಯತ್ ರಾಜ್, ಕೃಷಿ, ನೀರಾವರಿ, ತೋಟಗಾರಿಕೆ, ಶಿಶು ಅಭಿವೃದ್ಧಿ, ಸೆಸ್ಕ್ ಸೇರಿದಂತೆ ತಾಲೂಕು ಮಟ್ಟದ ಎಲ್ಲಾ ಇಲಾಖೆಗಳ ಅಧಿಕಾರಿಗಳನ್ನು ಒಂದೇ ಸೂರಿನಡಿಯಲ್ಲಿ ಕುಳಿತು ಜನರ ಸಮಸ್ಯೆಗಳನ್ನು ಇತ್ಯರ್ಥ ಪಡಿಸಲಿದ್ದಾರೆ ಎಂದರು.
ಈಗಾಗಲೇ ತಾಲೂಕಿನ ಕೆನ್ನಾಳು ಮತ್ತು ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಚಂದಗಾಲು ಗ್ರಾಮದಲ್ಲಿ ಆಯೋಜಿಸಿದ್ದ ಜನಸ್ಪಂದನಾ ಕಾರ್ಯಕ್ರಮ ಯಶಸ್ವಿಯಾಗಿದೆ. ಹೀಗಾಗಿ ಪಂಚಾಯ್ತಿ ವ್ಯಾಪ್ತಿಯ ಜನರು ಹೆಚ್ಚಿನ ರೀತಿಯಲ್ಲಿ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.ಬನ್ನಂಗಾಡಿ ಗ್ರಾಪಂ ವ್ಯಾಪ್ತಿಯಲ್ಲಿ ಸುಮಾರು 1677 ಮನೆಗಳಿವೆ. ಕೇವಲ 800 ಮನೆಯವರು ಮಾತ್ರ ಇ-ಸ್ವತ್ತು ಪಡೆದುಕೊಂಡಿದ್ದಾರೆ. ಉಳಿಕೆ 877 ಮನೆಗಳ ಪೈಕಿ 67 ಮನೆಯವರು ಜನಸ್ಪಂದನಾ ಕಾರ್ಯಕ್ರಮದಲ್ಲಿ ಅರ್ಜಿ ಸಲ್ಲಿಸಿದ್ದಾರೆ ಎಂದರು.
ಉಳಿದವರು ಯಾಕೆ ಅರ್ಜಿ ಸಲ್ಲಿಸುತ್ತಿಲ್ಲ ಎಂಬುದೇ ತಿಳಿಯುತ್ತಿಲ್ಲ. ಕಾರ್ಯಕ್ರಮದ ಯಶಸ್ಸಿಗಾಗಿ ಅಂಗನವಾಡಿ ಕಾರ್ಯಕರ್ತೆಯರು ಪ್ರತಿ ಮನೆಗಳಿಗೂ ತೆರಳಿ ಅಗತ್ಯವಿರುವ ಸೇವೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ. ಆದರೆ, ಬಹುತೇಕರು ಸಮಸ್ಯೆಗಳನ್ನೇ ಹೇಳಿಕೊಂಡಿಲ್ಲ ಎಂದರು.ಈ ಕಾರ್ಯಕ್ರಮದಲ್ಲಿ ರಸ್ತೆ ಒತ್ತುವರಿ ತೆರವು, ಪೌತಿ ಖಾತೆ, ಪಹಣಿ ತಿದ್ದುಪಡಿ, ಖಾತೆ, ಇ-ಸ್ವತ್ತು, ವೃದ್ಧಾಪ್ಯ, ವಿಧವಾ, ಅಂಗವಿಕಲರ ಪಿಂಚಣಿ, ಮನಸ್ವಿನಿ, ಜಾತಿ ಮತ್ತು ಆದಾಯ ದೃಢೀಕರಣ ಪತ್ರ ಸೇರಿದಂತೆ ಎಲ್ಲಾ ರೀತಿಯ ಸೇವೆಗಳು ಲಭ್ಯವಿದ್ದು, ಅಧಿಕಾರಿಗಳು ಸ್ಥಳದಲ್ಲೇ ಪರಿಹಾರ ಒದಗಿಸಲಿದ್ದಾರೆ. ಆಸ್ತಿ ಹಂಚಿಕೆ ವಿಚಾರದಲ್ಲಿ ಸಹೋದರರು ಮತ್ತು ಕುಟುಂಬ ಸದಸ್ಯರ ನಡುವೆ ವಿವಾದಗಳಿದ್ದರೆ ಗ್ರಾಮದ ಯಜಮಾನರುಗಳ ಸಮ್ಮುಖದಲ್ಲಿ ಸಾಧ್ಯವಾದಷ್ಟು ಮಟ್ಟಿಗೆ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದರು.
ತಹಸೀಲ್ದಾರ್ ಎಸ್.ಸಂತೋಷ್ ಮಾತನಾಡಿ, ಜನ ಸಮಸ್ಯೆಗಳನ್ನು ಹೊತ್ತು ಕಚೇಗಳಿಗೆ ಅಲೆಯುವುದನ್ನು ತಪ್ಪಿಸಬೇಕು ಎಂಬುದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರ ಆಶಯವಾಗಿದೆ. ಪೌತಿ ಖಾತೆಗೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ 24 ಅರ್ಜಿಗಳ ಪೈಕಿ ಈಗಾಗಲೇ 12 ಅರ್ಜಿ ಇತ್ಯರ್ಥ ಪಡಿಸಲಾಗಿದೆ ಎಂದರು.ಕಾರ್ಯಕ್ರಮಕ್ಕೂ ಮುನ್ನ ಮಹಿಳೆಯರು ಶಾಲಾ ಮಕ್ಕಳ ಬ್ಯಾಂಡ್‌ಸೆಟ್‌ನೊಂದಿಗೆ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ವೇದಿಕೆಗೆ ಕರೆತಂದರು. ಸ್ಥಳದಲ್ಲಿ ವಿವಿಧ ಪಿಂಚಣಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರ ವಿತರಿಸಲಾಯಿತು.
ಕಾರ್ಯಕ್ರಮದಲ್ಲಿ ಗ್ರಾಪಂ ಅಧ್ಯಕ್ಷ ಪ್ರಭಾಕರ್, ತಾಪಂ ಮಾಜಿ ಅಧ್ಯಕ್ಷ ಹುಚ್ಚೇಗೌಡ, ಮುಖಂಡರಾದ ಬಿ.ಪಿ.ಶ್ರೀನಿವಾಸ್, ಕೆ.ಕುಬೇರ, ದೇವರಾಜು, ಬಿ.ಡಿ.ಸ್ವಾಮಿ, ರೇವಣ್ಣ, ಬಿ.ಕೆ.ಸ್ವಾಮಿ, ಪಿಡಿಒ ಲಕ್ಷ್ಮೇಗೌಡ ಇತರರು ಇದ್ದರು.