ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ಸಮವಸ್ತ್ರ ಹಾಗೂ ಶೂ ವಿತರಣೆಗೆ ಮನವಿ ಮಾಡಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು.
ಕನ್ನಡಪ್ರಭ ವಾರ್ತೆ ಮಧುಗಿರಿ
ಅಂಗನವಾಡಿ ಮಕ್ಕಳಿಗೆ ಸರ್ಕಾರದಿಂದ ಸಮವಸ್ತ್ರ ಹಾಗೂ ಶೂ ವಿತರಣೆಗೆ ಮನವಿ ಮಾಡಲಾಗುವುದು ಎಂದು ಶಾಸಕ ಕೆ.ಎನ್.ರಾಜಣ್ಣ ಹೇಳಿದರು.ಭಾನುವಾರ ತಾಲೂಕಿನ ದೊಡ್ಡೇರಿ ಹೋಬಳಿ ಕವಣದಾಲ ಗ್ರಾಮದಲ್ಲಿ ನಿರ್ಮಿಸಿರುವ ಗ್ರಾಪಂ ಕಟ್ಟಡ ನವೀಕರಣ, ಗುಬಲಗುಟ್ಟೆ ಶ್ರೀ ಆಂಜನೇಯಸ್ವಾಮಿ ದೇಗುಲದ ಸಮೀಪ ನೂತನ ರಸ್ತೆ ಲೋಕಾರ್ಪಣೆ ಹಾಗೂ ವಿಶೇಷ ಚೇತನರಿಗೆ ಹಲವು ಸವಲತ್ತು ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಂಗನವಾಡಿಗಳಲ್ಲಿ ಎಲ್ಲ ಜನಾಂಗದ ಮಕ್ಕಳು ಕಲಿಯುತ್ತಿದ್ದು, ಇವರಿಗೆ ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಸಮವಸ್ತ್ರ, ಒಂದು ಜೊತೆ ಶೂ ಅಥವಾ ಚಪ್ಪಲಿ ವಿತರಿಸುವಂತೆ ಸರ್ಕಾರವನ್ನು ಒತ್ತಾಯಿಸುತ್ತೇನೆ. ಒಂದು ವೇಳೆ ಸರ್ಕಾರ ಈ ಹೊಸ ಯೋಜನೆ ಮುಂದೂಡಿದರೆ ಮುಂಬರುವ ದಿನಗಳಲ್ಲಿ ನಮ್ಮ ತಾಲೂಕಿನ ಅಂಗನವಾಡಿ ಮಕ್ಕಳಿಗೆ ವಿತರಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.ಹಳ್ಳಿಗರು ಸಾಮಾಜಿಕ, ಆರ್ಥಿಕ ಹಾಗೂ ಶೈಕ್ಷಣಿಕವಾಗಿ ಸದೃಢವಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯ. ಹಳ್ಳಿಗಳು ಭಾರತದ ಬೆನ್ನೆಲುಬು, ಶ್ರಮ ಜೀವನ ನಡೆಸುವ ನಿಟ್ಟಿನಲ್ಲಿ , ಬೆವರು ಸುರಿಸಿ ಬದುಕು ಕಟ್ಟಿಕೊಳ್ಳುವ ಮೂಲಕ ಆರ್ಥಿಕವಾಗಿ ಸದೃಢರಾಗಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿ ಸತ್ಪ್ರಜೆಗಳನ್ನಾಗಿಸಿ ಸ್ವಾಭಿಮಾನದ ಬದುಕು ನಡೆಸಬೇಕಿದೆ ಎಂದು ಕರೆ ನೀಡಿದರು. ರಾಜಕಾರಣದಲ್ಲಿ ಅಧಿಕಾರ ಯಾರಿಗೂ ಶಾಶ್ವತವಲ್ಲ, ಅಧಿಕಾರ ಸಿಕ್ಕಾಗ ಶ್ರೀಸಾಮಾನ್ಯರಿಗೆ ಅಗತ್ಯವಾದ ಮೂಲ ಸೌಲಭ್ಯ ಕಲ್ಪಿಸಿ ಕ್ಷೇತ್ರದ ಜನರ ಪ್ರೀತಿ, ವಿಶ್ವಾಸ ಗಳಿಸಿ ಸೈ ಎನಿಸಿಕೊಳ್ಳಬೇಕು. ಬೇಸಿಗೆ ಸಮೀಸುತ್ತಿದ್ದು, ಅಧಿಕಾರಿಗಳು ಎಲ್ಲಿಯೂ ಕುಡಿವ ನೀರು ಮತ್ತು ವಿದ್ಯುತ್ ಕೊರತೆ ಆಗದಂತೆ ಕ್ರಮ ಕೈಗೊಳ್ಳಬೇಕು. ಈ ವ್ಯಾಪ್ತಿಯಲ್ಲಿ 8 .30 ಕೋಟಿ ರು.ಗಳನ್ನು ಪಕ್ಷಾತೀತವಾಗಿ ಸಾಲ ವಿತರಿಸಲಾಗಿದೆ. ರೈತರು ತಮ್ಮ ಬೇಸಾಯದ ಜೊತೆಗೆ ಉಪ ಕಸುಬು ಅಳವಡಿಕೊಳ್ಳಬೇಕು ಎಂದರು.
ಈ ಹಿಂದೆ 4 ಸಾವಿರಕ್ಕೂ ಅಧಿಕ ಗ್ಯಾಸ್ ವಿತರಿಸಿದ್ದು, ಅದರ ಪರಿಣಾಮ ಕಾಡಿನಂಚಿನಲ್ಲಿ ಸೌದೆ ಕಡಿಯುವವರ ಸಂಖ್ಯೆ ಕಡಿಮೆಯಾಗಿದೆ. ಅರಣ್ಯವನ್ನು ನಮ್ಮ ಪ್ರಕೃತಿ ಪೂರ್ವಿಕರ ಕೂಡುಗೆಯಾಗಿದ್ದು, ಅವುಗಳನ್ನು ನಮ್ಮ ಮುಂದಿನ ಪೀಳಿಗೆಗೆ ಉಳಿಸಿ ಬೆಳಸಬೇಕು ಎಂದರು.ಎಸಿ ಗೋಟೂರು ಶಿವಪ್ಪ ಮಾತನಾಡಿ, ವ್ಯವಸಾಯದ ಜೊತೆಗೆ ಉಪ ಕಸುಬು ಮಾಡುತ್ತಾ, ಹಳ್ಳಿಗಳ ಏಳಿಗೆಗೆ ಶ್ರಮಿಸಬೇಕು. ಗ್ರಾಮಗಳ ಅಭಿವೃದ್ಧಿ ಕಾರ್ಯಗಳು ದೇಶದ ಪ್ರಗತಿಗೆ ಪೂರಕ ಎಂದರು.
ಡಿಸಿಸಿ ಬ್ಯಾಂಕ್ ಉಪಾಧ್ಯಕ್ಷ ಜಿಜೆ.ರಾಜಣ್ಣ ತುಂಗೋಟಿ ರಾಮಣ್ಣ,ಮಾತನಾಡಿದರು. ಕಾರ್ಯಕ್ರಮದಲ್ಲಿ ಡಿಸಿಸಿ ಬ್ಯಾಂಕ್ ನಿರ್ದೇಶಕ ಬಿ.ನಾಗೇಶ್ ಬಾಬು,ತಾಪಂ ಮಾಜಿ ಅಧ್ಯಕ್ಷ ಕೆ.ಮಹಾಲಿಂಗಯ್ಯ, ನಾರಾಯಣಪ್ಪ,ಮುಖಂಡ ಮೈದನಹಳ್ಳಿ ಕಾಂತರಾಜು, ಕೆಪಿಸಿಸಿ ಸದಸ್ಯ ಸಿದ್ದಾಪುರ ರಂಗಶ್ಯಾಮಣ್ಣ, ಗ್ಯಾರಂಟಿ ಸಮಿತಿ ಅಧ್ಯಕ್ಷ ಚೌಡಪ್ಪ,ನಜೀರ್ ಸಾಬ್, ಇಒ ಲಕ್ಷ್ಮಣ್,ಎಡಿಒ ಧನಂಜಯ್,ಗ್ರಾಂ ಅಧ್ಯಕ್ಷೆ ದಿವ್ಯಶ್ರೀ,ಉಪಾಧ್ಯಕ್ಷೆ ಕೋಟಮ್ಮ,ಸದಸ್ಯರುಗಳಾದ ರಂಗಮ್ಮ, ರಾಧ, ಗಂಗಮ್ಮ, ಮಂಗಳಗೌರಮ್ಮ, ನಂದಕುಮಾರಿ, ಪುಟ್ಟಲಕ್ಷ್ಮಯ್ಯ, ಸೌಭಾಗ್ಯಮ್ಮ, ಚಂದ್ರಮ್ಮ, ಜಗನ್ನಾಥ್, ಮಲ್ಲೇಶ್, ಮಲ್ಲಿಕಾರ್ಜುನಯ್ಯ, ಕಾಮರಾಜು, ನಾಗರಾಜು ,ಮೂಡ್ಲಗರಿಯಪ್ಪ, ಲಕ್ಷಣ್, ಶಿವಣ್ಣ, ಕೃಷ್ಮಪ್ಪ, ಭೀಮರಾಜು, ನಾರಾಯಣಪ್ಪ, ಬಸವರಾಜು, ಪುಟ್ಟಣ್ಣ, ಬಂಡಿ ವೀರಪ್ಪ,ಚೌಡಪ್ಪ ನಜೀರ್ ಸಾಬ್ ಮುದ್ದರಾಜು ಇತರರಿದ್ದರು.