ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಶುಲ್ಕ ತುಂಬಾ ಹೊರೆಯಾಗಿದೆ. ಹಾಗಾಗಿ ಸಾಕಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳು ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಉಚಿತ ತರಬೇತಿ ನೀಡಿದರೆ ಬಹಳಷ್ಟು ಮಂದಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗಲು ಸಹಕಾರಿಯಾಗುತ್ತದೆ.

ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ

ರಾಜ್ಯ ಸರ್ಕಾರ ಪ್ರತಿ ತಾಲೂಕು ಕೇಂದ್ರಗಳಲ್ಲೂ ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರಗಳನ್ನು ಸ್ಥಾಪಿಸಬೇಕು ಎಂದು ಬಿಜೆಪಿ ಯುವ ಮುಖಂಡ ಇಂಡುವಾಳು ಎಸ್. ಸಚ್ಚಿದಾನಂದ ಆಗ್ರಹಿಸಿದರು.

ತಾಲೂಕಿನ ಕೂಡಲಕುಪ್ಪೆ ಗ್ರಾಮದ ಸತೀಶ್ ಚಂದ್ರಬಾಬು (ಅಣ್ಣಯ್ಯಪ್ಪ) ಅವರ ಪುತ್ರಿ ಯೋಗ ಎಸ್.ಗೌಡರು ಪ್ರಸಕ್ತ ಸಾಲಿನಲ್ಲಿ ನೀಟ್ ಪರೀಕ್ಷೆ ಮೂಲಕ ಎಂಬಿಬಿಎಸ್ ಕೋರ್ಸ್‌ಗೆ ಉಚಿತ ಪ್ರವೇಶ ಪಡೆದಿದ್ದು, ಎನ್.ಶಂಕರೇಗೌಡ ಚಾರಿಟಬಲ್ ಟ್ರಸ್ಟ್‌ನಿಂದ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ಕುಟುಂಬಗಳ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಶುಲ್ಕ ತುಂಬಾ ಹೊರೆಯಾಗಿದೆ. ಹಾಗಾಗಿ ಸಾಕಷ್ಟು ಪ್ರತಿಭಾನ್ವಿತ ವಿದ್ಯಾರ್ಥಿಗಳು ತರಬೇತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಸರ್ಕಾರದಿಂದ ಉಚಿತ ತರಬೇತಿ ನೀಡಿದರೆ ಬಹಳಷ್ಟು ಮಂದಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜೊತೆಗೆ ಅವರು ಸ್ಪರ್ಧಾತ್ಮಕ ಪರೀಕ್ಷೆಗೆ ಹೋಗಲು ಸಹಕಾರಿಯಾಗುತ್ತದೆ ಎಂದರು.

ನಗರ ಪ್ರದೇಶದ ಮಕ್ಕಳು ಜಿಲ್ಲಾ ಕೇಂದ್ರದಲ್ಲಿರುವ ಖಾಸಗಿ ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರಗಳಲ್ಲಿ ಕಲಿಯುತ್ತಾರೆ. ಆದರೆ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಹತ್ತಿರದಲ್ಲಿ ಯಾವುದೇ ನೀಟ್ ಅಥವಾ ಸಿಇಟಿ ತರಬೇತಿ ಕೇಂದ್ರಗಳು ಇಲ್ಲದ ಕಾರಣ ಎಷ್ಟೋ ಮಂದಿ ವಿದ್ಯಾರ್ಥಿಗಳು ಇದರಿಂದ ವಂಚಿತರಾಗುತ್ತಿದ್ದಾರೆ. ಇದು ಒಳ್ಳೆಯ ಬೆಳವಣಿಗೆಯಲ್ಲ ಎಂದರು.

ತಕ್ಷಣ ಸರ್ಕಾರ ತಾಲೂಕು ಮತ್ತು ಸಾಧ್ಯವಾದಲ್ಲಿ ಹೋಬಳಿ ಕೇಂದ್ರದಲ್ಲೂ ಸಿಇಟಿ ಮತ್ತು ನೀಟ್ ತರಬೇತಿ ಕೇಂದ್ರ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.

ಈ ವೇಳೆ ಪೀಕಾರ್ಡ್ ಬ್ಯಾಂಕ್ ಮಾಜಿ ಅಧ್ಯಕ್ಷ ಬಿ.ಸಿ. ಕೃಷ್ಣೇಗೌಡ, ಬಿಜೆಪಿ ನಗರ ಘಟಕದ ಅಧ್ಯಕ್ಷ ಜಿ.ಇ. ಸುಧಾಕರ್, ಮಂಡಲ ಪ್ರಧಾನ ಕಾರ್ಯದರ್ಶಿ ಬಿ.ಸಿ.ಸಂತೋಷ್‌ಕುಮಾರ್, ಮಹಿಳಾ ಘಟಕದ ಅಧ್ಯಕ್ಷೆ ಮಾನಸ, ಎಸ್ಸಿ ಘಟಕದ ಅಧ್ಯಕ್ಷ ಎಂ.ಆರ್. ಯತಿರಾಜ್, ಪುರಸಭೆ ಮಾಜಿ ಸದಸ್ಯರಾದ ಗಂಜಾಂ ಶಿವು, ಜಯಲಕ್ಷ್ಮಿ, ಮುಖಂಡರಾದ ಇಂದ್ರಕುಮಾರ್, ಶಿಲ್ಪಾ, ಪ್ರಭಾಕರ್ ಇತರರು ಇದ್ದರು.