ಭಾಷೆ ಉಳಿಯಲು ಸರ್ಕಾರ ಮನಸ್ಸು ಮಾಡಲಿ

| Published : Jan 22 2025, 12:30 AM IST

ಸಾರಾಂಶ

ಸಮ್ಮೇಳನಗಳಲ್ಲಿ ಅನೇಕ ಯೋಜನೆ ಹಾಗೂ ಯೋಚನೆಗಳು ಬರುತ್ತವೆ. ಆದರೆ ಪರಿಣಾಮ ಮಾತ್ರ ಶೂನ್ಯ ಎಂಬುದು ನೋವಿನ ಸಂಗತಿ

ಗಜೇಂದ್ರಗಡ: ಭಾಷೆ ಉಳಿಯಲು ಸರ್ಕಾರ ಮನಸ್ಸು ಮಾಡಬೇಕು. ಕಚೇರಿಗಳಲ್ಲಿನ ಕಡತ, ಅಧಿಕಾರಿಗಳಿಂದ ಕನ್ನಡ ಬಳಕೆ ಕಡ್ಡಾಯ ನಿಯಮ ತಂದಾಗ ಜನರು ಅದನ್ನು ಪಾಲಿಸಿದಾಗ ಮಾತ್ರ ಇಂತಹ ಸಮ್ಮೇಳನಗಳಿಗೆ ಅರ್ಥ ಬರಲಿದೆ ಎಂದು ಶಿರಹಟ್ಟಿಯ ಫಕೀರೇಶ್ವರ ಸಂಸ್ಥಾನಮಠದ ದಿಂಗಾಲೇಶ್ವರ ಸ್ವಾಮೀಜಿ ಹೇಳಿದರು.

ಪಟ್ಟಣದ ರೋಣ ರಸ್ತೆಯ ಸಿಬಿಎಸ್‌ಸಿ ಶಾಲೆಯಲ್ಲಿ ನಡೆದ ೧೦ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದರು.

ಸಮ್ಮೇಳನಗಳಲ್ಲಿ ಅನೇಕ ಯೋಜನೆ ಹಾಗೂ ಯೋಚನೆಗಳು ಬರುತ್ತವೆ. ಆದರೆ ಪರಿಣಾಮ ಮಾತ್ರ ಶೂನ್ಯ ಎಂಬುದು ನೋವಿನ ಸಂಗತಿ. ನಮ್ಮ ಭಾಷೆಯನ್ನು ಮಾತನಾಡಿದರೆ ಅದರ ಸಂಸ್ಕೃತಿ ಹಾಗೂ ಪರಂಪರೆ ಹೆಚ್ಚಾಗುತ್ತದೆ. ಸ್ವಾತಂತ್ರ‍್ಯ ಹೋರಾಟದ ಅಗ್ರಗಣ್ಯ ಬಾಲಗಂಗಾಧರ ತಿಲಕ ರಾಜ್ಯಕ್ಕೆ ಬಂದ ವೇಳೆ ಅವರನ್ನು ಮರಾಠಿಯಲ್ಲಿ ಪರಿಚಯಿಸುವಾಗ ನಿಲ್ಲಿಸಿದ್ದ ಬಾಲಗಂಗಾಧರ ತಿಲಕ ಅವರು ಕನ್ನಡದಲ್ಲಿ ಪರಿಚಯ ಮಾಡಿ ಎಂದಂತೆ, ನಾವೆಷ್ಟು ಜನರಿಗೆ ನಿಲ್ಲಿಸಿ ಕನ್ನಡದಲ್ಲಿ ಮಾತನಾಡಿ ಎಂದಿದ್ದೇವೆ ಎಂದು ಪ್ರಶ್ನಿಸಿದ ಸ್ವಾಮೀಜಿ, ಇಂದು ಬಹುತೇಕ ತಾಯಂದಿರು ಮಮ್ಮಿ ಎಂದು ಕರೆಸಿಕೊಳ್ಳಲು ಇಷ್ಟ ಪಡುತ್ತಾರೆ. ಆದರೆ ಅವ್ವದಲ್ಲಿ ಇರುವ ಭಾವನೆ ಮಮ್ಮಿ ಎನ್ನುವುದರಲ್ಲಿ ಇಲ್ಲ. ಈಗಿನ ಬರಹಗಾರರು ಕಂಗ್ಲಿಷ್ ಭಾಷೆಯಲ್ಲಿ ಇರುತ್ತವೆ ಎಂದು ಬೇಸರ ವ್ಯಕ್ತಪಡಿಸಿ ತಾಲೂಕಿನಲ್ಲಿ ಎಂ.ಎ. ಒಡೆಯರ್ ರಂತಹ ಅನೇಕರನ್ನು ಗುರುತಿಸಬೇಕಿದೆ ಎಂದು ಕಸಾಪ ಜಿಲ್ಲಾಧ್ಯಕ್ಷರಿಗೆ ತಿಳಿಸಿದರು.

ಮೈಸೂರು ಶಾಸ್ತ್ರಿಯ ಕನ್ನಡ ಅತ್ಯುನ್ನತ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ ನೀಲಗಿರಿ ತಳವಾರ ಮಾತನಾಡಿ, ಕನ್ನಡ ಲಿಪಿಗಳ ರಾಣಿಯನ್ನು ಬಿಟ್ಟು ಹಳ್ಳಿಯಿಂದ ದಿಲ್ಲಿವರೆಗೂ ಇಂಗ್ಲಿಷ್ ಬಿಟ್ಟರೆ ಬೇರೆ ದಾರಿಯಿಲ್ಲ ಎಂಬ ದುಸ್ಥಿತಿ ನಿರ್ಮಾಣವಾಗಿದೆ. ಕನ್ನಡ ಅನ್ನದ ಭಾಷೆಯಾಗಿದ್ದು ಹತ್ತಾರು ದಾರಿಗಳು ತೆರೆದಿದ್ದು, ಭಾಷಾ ಕೌಶಲ್ಯ ಬೆಳೆಸಿಕೊಳ್ಳಬೇಕಿದೆ. ಪ್ರಾಚೀನ ಹಾಗೂ ಆಧುನಿಕ ಸಂದರ್ಭದಲ್ಲಿಯೂ ಗದಗ ಜಿಲ್ಲೆಯ ಕೊಡುಗೆ ಅಭೂತವಾದದ್ದು. ಆದರೆ ವರ್ತಮಾನದ ಸ್ಥಿತಿ ಕನ್ನಡಕ್ಕೆ ಆಶಾದಾಯಕವಿಲ್ಲ ಎಂದ ಅವರು, ವಿಶ್ವದ ಕಣ್ಣನ್ನು ವಚನಗಳು ತೆರೆಸಿವೆ. ವಚನ ಸಾಹಿತ್ಯದ ಎಂದರೆ ಏನೋ ಎನ್ನುವ ಉತ್ಪಕ್ಷ್ರೇ ಬಂದಿದೆ. ಇದರಿಂದ ವಚನ ಸಾಹಿತ್ಯಕ್ಕೆ ಹಾನಿಯಿಲ್ಲ. ನಮಗೆ ಹಾನಿಯಿದೆ ಎಂದರು.

ಸಮ್ಮೇಳನಾಧ್ಯಕ್ಷ ಪ್ರೊ. ಚಂದ್ರಶೇಖರ ವಸ್ತ್ರದ ಮಾತನಾಡಿ, ಸಮ್ಮೇಳನಗಳು ಪರಿಣಾಮಕಾರಿ ಆಗುತ್ತವೇ ಎಂಬುದಕ್ಕೆ ಅನೇಕ ಉದಾಹರಣೆಗಳಿವೆ. ಸಮ್ಮೇಳನಾಧ್ಯಕ್ಷನಾದ ಮೇಲೆ ನಾನು ಇನ್ನಷ್ಟು ವಿಸ್ತರಿಸಿಕೊಳ್ಳಬೇಕು ಎಂಬುದನ್ನು ಇಲ್ಲಿನ ವಿಚಾರಗೋಷ್ಠಿ ಹಾಗೂ ಚಿಂತನ-ಮಂಥನ ತಿಳಿಸಿಕೊಟ್ಟಿವೆ. ಹಿರಿಯರಿಗೆ ಹಾಗೂ ಕಿರಿಯರಿಗೆ ಸಮಾನ ಅವಕಾಶ ನೀಡಿದೆ. ಹೀಗಾಗಿ ಸಮ್ಮೇಳನವು ಹೊಸ ಉತ್ಸಾಹ ನೀಡಿದೆ ಎಂದರು.

ಬಾಕ್ಸ್

ಅತ್ಯಂತ ಸರಳ, ಸುಲಲಿತ ಭಾಷೆ ಕನ್ನಡ: ಶಾಂತಲಿಂಗ ಶ್ರೀ

ಗಜೇಂದ್ರಗಡ:

ಅತ್ಯಂತ ಸರಳ ಹಾಗೂ ಸುಲಲಿತ ಭಾಷೆ ಕನ್ನಡ.ಇಂತಹ ಭಾಷೆ ಉಳಿಯಬೇಕು. ಭಾಷಾ ಮಾಧ್ಯಮದ ತೀರ್ಪು ಯಾರನ್ನು ಹೊಣೆಗಾರರನ್ನಾಗಿ ಮಾಡಬೇಕು ಕನ್ನಡಿಯೊಳಗಿನ ಗಂಟಾಗಿದೆ ಎಂದು ಭೈರನಹಟ್ಟಿಯ ದೊರೆಸ್ವಾಮಿ ವೀರಕ್ತಮಠದ ಶಾಂತಲಿಂಗ ಸ್ವಾಮೀಜಿ ಹೇಳಿದರು.

ಸಾಹಿತ್ಯ ಸಮ್ಮೇಳನದಲ್ಲಿ ಸಾಧಕರಿಗೆ ಸುವರ್ಣ ಸಂಭ್ರಮ ಗೌರವ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ಜಿಲ್ಲೆ ಹಾಗೂ ತಾಲೂಕಿನ ಹತ್ತು ಹಲವು ಹೋರಾಟಗಾರರು ಹಕ್ಕೋತ್ತಾಯ ಮಾಡಿದ್ದಾರೆ.ಅನೇಕ ಯೋಜನೆ ಹಾಗೂ ಯೋಚನೆಗಳು ಕನ್ನಡಕ್ಕೆ ಹಾಗೂ ಕರ್ನಾಟಕಕ್ಕೆ ಬೇಕಾಗಿವೆ. ಶಾಸ್ತ್ರಿ ಸ್ಥಾಮಮಾನದ ಸೌಲಭ್ಯ ಕನ್ನಡಕ್ಕೆ ಒದಗಿಸಲು ಸರ್ಕಾರ ಹಾಗೂ ಸಾಹಿತಿಗಳು ಮಾಡಬೇಕಿದೆ ಎಂದರು.

ಈ ವೇಳೆ ಹಾಲಕೆರೆಯ ಮುಪ್ಪಿನಬಸವಲಿಂಗ ಸ್ವಾಮೀಜಿ, ನಿಡಗೊಂದಿಕೊಪ್ಪದ ಚನ್ನಬಸವ ಸ್ಬಾಮೀಜಿ ಸಾನ್ನಿಧ್ಯ ವಹಿಸಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಶಾಸಕ ಜಿ.ಎಸ್. ಪಾಟೀಲ, ಚನ್ಮಬಸವ ದೊಡ್ಡಮೇಟಿ, ವಿ.ಬಿ.ಸೋಮನಕಟ್ಟಿಮಠ, ಅಂದಾನಯ್ಯ ಕುರ್ತಕೋಟಿಮಠ, ಡಾ.ಜಿ.ಬಿ. ಬೀಡನಾಳ, ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ, ಅಮರೇಶ ಗಾಣಗೇರ, ಸಿದ್ದಣ್ಣ ಬಂಡಿ, ಕಿರಣಕುಮಾರ ಕುಲಕರ್ಣಿ, ಆರ್.ಎನ್. ಹುರಳಿ, ಮಂಜುಳಾ ಹಕಾರಿ, ಸುಭಾಸ ಮ್ಯಾಗೇರಿ, ಸವಿತಾ ಬಿದರಳ್ಳಿ, ಮುದಿಯಪ್ಪ ಮುಧೋಳ ಸೇರಿ ಇತರರು ಇದ್ದರು.