ಕೆರೆಗಳ ಅಭಿವೃದ್ಧಿಗೆ ಸರ್ಕಾರ ನಿರ್ಲಕ್ಷ್ಯ ಸಲ್ಲ: ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು

| Published : Nov 17 2024, 01:19 AM IST

ಸಾರಾಂಶ

ಕೆರೆಗಳ ಸಂರಕ್ಷಣೆ ವಿಷಯದಲ್ಲಿ ಸರ್ಕಾರ ಸೇರಿದಂತೆ ಸಾರ್ವಜನಿಕರ ನಿರ್ಲಕ್ಷ್ಯ ಮನೋಭಾವನೆ ದುರದೃಷ್ಟಕರ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ನೀರಿನ ಬವಣೆ ನೀಗಿಸಿಕೊಳ್ಳಲು ಮುಂದೊಂದು ದಿವಸ ವಾಸವಿದ್ದ ಗ್ರಾಮಗಳನ್ನು ಬಿಟ್ಟು ಬೇರೆಡೆಗೆ ತೆರಳಬೇಕಾಗುತ್ತದೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಎಚ್ಚರಿಸಿದರು.

ಬ್ಯಾಡಗಿ: ಕೆರೆಗಳ ನಿರ್ಮಾಣ ಸಾವಿರಾರು ವರ್ಷಗಳ ಹಿಂದೆಯೇ ನಮ್ಮ ಪೂರ್ವಜರ ಆಲೋಚಿಸಿ, ನಿರ್ಮಿಸಿರುವ ಶಾಶ್ವತ ಜಲಮೂಲಗಳಾಗಿದ್ದು, ಅವುಗಳಿಲ್ಲದೇ ಮನುಷ್ಯ ಬದುಕಲು ಸಾಧ್ಯವಿಲ್ಲ, ಆದರೆ ಕೆರೆಗಳ ಸಂರಕ್ಷಣೆ ವಿಷಯದಲ್ಲಿ ಸರ್ಕಾರ ಸೇರಿದಂತೆ ಸಾರ್ವಜನಿಕರ ನಿರ್ಲಕ್ಷ್ಯ ಮನೋಭಾವನೆ ದುರದೃಷ್ಟಕರ. ಇನ್ನಾದರೂ ನಾವು ಎಚ್ಚೆತ್ತುಕೊಳ್ಳದಿದ್ದಲ್ಲಿ ನೀರಿನ ಬವಣೆ ನೀಗಿಸಿಕೊಳ್ಳಲು ಮುಂದೊಂದು ದಿವಸ ವಾಸವಿದ್ದ ಗ್ರಾಮಗಳನ್ನು ಬಿಟ್ಟು ಬೇರೆಡೆಗೆ ತೆರಳಬೇಕಾಗುತ್ತದೆ ಎಂದು ಸಿರಿಗೆರೆಯ ತರಳಬಾಳು ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಎಚ್ಚರಿಸಿದರು.

ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ಜಿಲ್ಲಾ ಮತ್ತು ತಾಲೂಕು ಘಟಕಗಳ ನೇತೃತ್ವದಲ್ಲಿ ಆಣೂರು ಏತ ನೀರಾವರಿ ಯೋಜನೆಯಡಿ ಆಣೂರು ಸೇರಿದಂತೆ ನಂದಿಹಳ್ಳಿ, ಶಿಡೇನೂರ, ಕೆರವಡಿ ಇನ್ನಿತರ ಗ್ರಾಮಗಳ ಕೆರೆಗಳಿಗೆ ಬಾಗಿನ ಅರ್ಪಿಸುವ ಕಾರ್ಯಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ನಮ್ಮ ಪೂರ್ವಜರ ದೂರದೃಷ್ಟಿ ಚಿಂತನೆಗಳು ಇಂದಿನ ಯಾವುದೇ ತಾಂತ್ರಿಕ ವಿದ್ಯೆಗಿಂತ ಮಿಗಿಲಾಗಿದ್ದು ಅವರ ವಿಚಾರ ಧಾರೆಗಳು ಶಾಶ್ವತ ಪರಿಹಾರಕ್ಕಾಗಿ ಮೀಸಲಿದ್ದವು ಎಂಬುದಕ್ಕೆ ನೈಸರ್ಗಿಕವಾಗಿ ನೀರು ಸಂಗ್ರಹಕ್ಕೆ ಮುಂದಾಗಿರುವುದೇ ನಮ್ಮ ಎದುರಿಗಿರುವ ಉದಾಹರಣೆಯಾಗಿದೆ ಎಂದರು.

ಸ್ವಯಂಪ್ರೇರಿತ ಕಡಿವಾಣ ಹಾಕಿಕೊಳ್ಳಿ: ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ, ಅತಿಕ್ರಮಣ ನಿಲ್ಲಬೇಕು ಕೆರೆಗಳ ಪುನಶ್ಚೇತನ ನಿರಂತರವಾಗಿ ನಡೆಯಬೇಕು, ರಾಜ್ಯದಲ್ಲಿ ಒಟ್ಟು 36000 ಕೆರೆಗಳಿವೆ. ನಮ್ಮ ಅಧಿಕಾರದ ಅವಧಿಯಲ್ಲಿ ಸುಮಾರು 5 ಸಾವಿರಕ್ಕೂ ಹೆಚ್ಚು ಕೆರೆಗಳಿಗೆ ನೀರು ತಂಬಿಸುವ ಕಾರ್ಯಕ್ಕೆ ಚಾಲನೆ ನೀಡಿದ್ದೇನೆ, ಸಾರ್ವಜನಿಕರು ನಮ್ಮೆಲ್ಲರಿಗೂ ಜೀವಾಳವಾಗಿರುವ ಕೆರೆಗಳ ಅತೀಕ್ರಮಣಕ್ಕೆ ಸ್ವಯಂಪ್ರೇರಿತ ಕಡಿವಾಣ ಹಾಕಿಕೊಳ್ಳುವಂತೆ ಸಲಹೆ ನೀಡಿದರು.

ಅಕ್ಷಮ್ಯ ಅಪರಾಧ:ಮಾಜಿ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಮಾತನಾಡಿ, ಕೆರೆಗಳ ನೀರು ಬಳಕೆ ಮತ್ತು ಅವಶ್ಯಕತೆ ಕುರಿತು ನಾವೆಲ್ಲಾ ಬಹಳಷ್ಟು ಮಾತನಾಡುತ್ತೇವೆ ಆದರೆ ಜಲಮೂಲಗಳನ್ನು ಉಳಿಸಿಕೊಳ್ಳುವುದು ಸುಲಭದ ಮಾತಲ್ಲ, ಈ ನಿಟ್ಟಿನಲ್ಲಿ ಬಹಳಷ್ಟು ಹೋರಾಟಗಳೇ ದೇಶದೆಲ್ಲೆಡೆ ನಡೆಯುತ್ತಿವೆ, ಹೀಗಿದ್ದರೂ ನಮ್ಮೂರಿನ ಕೆರೆಗಳನ್ನೇ ಮುಚ್ಚುವಂತಹ ಕೆಲಸಕ್ಕೂ ನಾವುಗಳು ಕೈಹಾಕುತ್ತಿದ್ದು ಇದೊಂದು ಅಕ್ಷಮ್ಯ ಅಪರಾಧವಾಗಿದೆ ಎಂದರು.

ರೈತರ ಅಕ್ಷಯಪಾತ್ರೆ: ಶಾಸಕ ದರ್ಶನ ಪುಟ್ಟಣ್ಣಯ್ಯ ಮಾತನಾಡಿ, ಕೆರೆಗಳು ರೈತಾಪಿ ಜನರಿಗೆ ಅಕ್ಷಯಪಾತ್ರೆಗಳಿದ್ದಂತೆ ಅವುಗಳನ್ನು ಉಳಿಸುವುದು ಸೇರಿದಂತೆ ಯಥಾಸ್ಥಿತಿಯಲ್ಲಿ ಮುಂದಿನ ಪೀಳಿಗೆ ಬಳಕೆಗೆ ಅನುಕೂಲ ಕಲ್ಪಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ, ಗ್ರಾಮೀಣ ಭಾಗದ ಜನರ ಶಾಶ್ವತ ಅಭಿವೃದ್ಧಿಗೆ ಸಮಗ್ರ ಕೆರೆಗಳ ಅಭಿವೃದ್ಧಿಗೆ ಸಹಕರಿಸಬೇಕಾಗಿದೆ ಎಂದರು.

ಸಾರ್ವಜನಿಕರ ಸಹಕಾರ: ಗ್ಯಾರಂಟಿ ಯೋಜನೆಗಳ ರಾಜ್ಯ ಉಪಾಧ್ಯಕ್ಷ ಎಸ್.ಆರ್.ಪಾಟೀಲ ಮಾತನಾಡಿ, ಸಮುದಾಯಕ್ಕೆ ಅವಶ್ಯವಿರುವ ಕಾರ್ಯಕ್ರಮಗಳ ಅನುಷ್ಠಾನದಲ್ಲಿ ಸ್ಥಳೀಯರ ಸಹಭಾಗಿತ್ವ ಪ್ರಮುಖವಾಗಿದೆ, ಇದಕ್ಕೆ ಪೂರಕವಾಗಿ ನಮ್ಮ ಕೆರೆಗಳ ಅಭಿವೃದ್ಧಿ ವಿಚಾರವಾಗಿ ಗ್ರಾಮಸ್ಥರೇ ಅವಶ್ಯವಿರುವ ಸಹಕಾರ ನೀಡಿದ್ದಲ್ಲಿ ಇನ್ನುಷ್ಟು ಪರಿಣಾಮಕಾರಿಯಾಗಿ ನಡೆಸಬಹುದಾಗಿದೆ ಎಂದರು.

ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ರಾಮಣ್ಣ ಕೆಂಚಳ್ಳೇರ, ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ, ಮುಖಂಡರಾದ ಚಿಕ್ಕಪ್ಪ ಛತ್ರದ, ಮಾಲತೇಶ ಪೂಜಾರ ರುದ್ರಗೌಡ ಕಾಡನಗೌಡ್ರ, ಮಹದೇವಪ್ಪ ಶಿಡೇನೂರ, ಪ್ರಕಾಶ ಬನ್ನಿಹಟ್ಟಿ, ಪ್ರವೀಣ ಹೊಸಗೌಡ್ರ, ಬಸವರಾಜ ಬಡ್ಡಿಯವರ, ಪರಮೇಶ ನಾಯಕ್, ನಂಜುಂಡಯ್ಯ ಹಾವೇರಿಮಠ ಹಾಗೂ ಇನ್ನಿತರಿದ್ದರು.