ಸಾರಾಂಶ
ಹುಬ್ಬಳ್ಳಿ: ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಖಾಸಗಿ ಸಂಸ್ಥೆಗಳಿಗೂ ಕಾರ್ಯಕ್ರಮ ಆಯೋಜಿಸಲು ಸರ್ಕಾರ ಅವಕಾಶ ನೀಡುವ ಮೂಲಕ ಘನತೆ, ಗೌರವ ಹಾಳು ಮಾಡುವ ಕೆಲಸ ಮಾಡುತ್ತಿದೆ ಎಂದು ವಿಧಾನಸಭೆ ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಬ್ಯಾಂಕ್ವೆಟ್ ಹಾಲ್‍ನಲ್ಲಿ ಮಾಜಿ ಅಡ್ವೊಕೇಟ್ ಜನರಲ್ ಪ್ರೊ. ರವಿವರ್ಮಕುಮಾರರ 50 ವರ್ಷದ ವೃತ್ತಿ ಸಂಭ್ರಮ ಸಮಾರಂಭಕ್ಕೆ ಅವಕಾಶ ನೀಡಲಾಗಿದೆ. ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಸೀಮಿತವಾಗಿರುವ ಹಾಲ್‍ನಲ್ಲಿ ಖಾಸಗಿಯವರಿಗೂ ಅವಕಾಶ ನೀಡಿರುವುದು ಸರಿಯಲ್ಲ. ಇದರಿಂದ ಬ್ಯಾಂಕ್ವೆಟ್ ಹಾಲ್ ಘನತೆಗೆ ಧಕ್ಕೆ ಬರಲಿದೆ ಎಂದು ಕಿಡಿಕಾರಿದ್ದಾರೆ.ಸರ್ಕಾರ ಯಾವುದೋ ಒತ್ತಡಕ್ಕೆ ಮಣಿದು ಇಂದು ಖಾಸಗಿ ವ್ಯಕ್ತಿಗಳಿಗೆ ನೀಡಿರಬಹುದು. ಇದನ್ನೇ ನೆಪವಾಗಿಸಿಕೊಂಡು ಮುಂದಿನ ದಿನಗಳಲ್ಲಿ ಮಂತ್ರಿಗಳು, ಸರ್ಕಾರದ ಉನ್ನತ ಮಟ್ಟದ ಅಧಿಕಾರಿಗಳು ಸೇರಿ ಧನವಂತರು ತಮ್ಮ ಕುಟುಂಬಸ್ಥರ ಜನ್ಮದಿನ, ವಿವಾಹ ವಾರ್ಷಿಕೋತ್ಸವ ಸೇರಿ ಇತರ ಖಾಸಗಿ ಕಾರ್ಯಕ್ರಮಗಳಿಗೆ ಬ್ಯಾಂಕ್ವೆಟ್ ಹಾಲ್ ಕೇಳುವಂತಹ ಪ್ರಸಂಗ ಬರಬಹುದು. ಇದಕ್ಕೆ ಸರ್ಕಾರದ ಇಂದಿನ ನಿರ್ಧಾರವೇ ಕಾರಣವಾಗಲಿದೆ. ಹೀಗಾಗಿ, ಸರ್ಕಾರ ಯಾವುದೇ ಮುಲಾಜಿಗೆ ಒಳಗಾಗದೆ, ಸರ್ಕಾರಿ ಕಾರ್ಯಕ್ರಮಗಳಿಗೆ ಮಾತ್ರ ಬ್ಯಾಂಕ್ವೆಟ್ ಹಾಲ್ ಸೀಮಿತವಾಗಿಡಬೇಕು ಎಂದು ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.
ನೋಂದಣಿ ಶುಲ್ಕ ಯಥಾಸ್ಥಿತಿ ಕಾಪಾಡಲಿಯಾವುದೇ ಪೂರ್ವಸೂಚನೆಯಿಲ್ಲದೆ ಆಸ್ತಿ ನೊಂದಣಿ ಶುಲ್ಕವನ್ನು ಸರ್ಕಾರ ಏಕಾಏಕಿ ದುಪ್ಪಟ್ಟುಗೊಳಿಸಿದೆ. ಜೀವನಪೂರ್ತಿ ದುಡಿದು ಸಾಲ ಮಾಡಿ ಸ್ವಂತ ಮನೆ ಕಟ್ಟಿಕೊಳ್ಳುವ ಕನಸು ಕಾಣುತ್ತಿರುವ ಬಡವರಿಗೆ ಮತ್ತು ಮಧ್ಯಮ ವರ್ಗದವರಿಗೆ ಈಗ ಶೇ. 7.6 ರಷ್ಟು ನೊಂದಣಿ ಮತ್ತು ಮುದ್ರಾಂಕ ಶುಲ್ಕ ಭರಿಸುವುದು ಭಾರವಾಗಲಿದೆ ಎಂದು ವಿಧಾನಸಭೆ ವಿರೋಧಪಕ್ಷದ ಉಪನಾಯಕ ಅರವಿಂದ ಬೆಲ್ಲದ ಹೇಳಿದ್ದಾರೆ.
ಈ ಕುರಿತು ಪ್ರಕಟಣೆ ನೀಡಿರುವ ಅವರು, ಜನವಿರೋಧಿ ನಿರ್ಧಾರದಿಂದ ಸ್ವಂತ ಸೂರು ಕಟ್ಟಿಕೊಳ್ಳುವ ಕನಸು ಕಾಣುವವರ ಆಸೆಗೆ ಕಾಂಗ್ರೆಸ್ ಸರ್ಕಾರ ತಣ್ಣೀರೆರಚಿದೆ. ಭ್ರಷ್ಟಾಚಾರದಲ್ಲಿ ಮುಳುಗಿರುವ ಈ ಸರ್ಕಾರ ತನ್ನ ಭ್ರಷ್ಟಾಚಾರ ಕಡಿಮೆ ಮಾಡಿಕೊಳ್ಳುವ ಬದಲು ಬರೀ ಜನರ ರಕ್ತವನ್ನೇ ಹೀರುತ್ತಿದೆ. ಜನ ವಿರೋಧಿ ನೀತಿಯನ್ನು ಬಿಟ್ಟು ನೋದಣಿ ಶುಲ್ಕವನ್ನು ಯಥಾ ಸ್ಥಿತಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.