ಸರ್ಕಾರ ದಲಿತ ನೌಕರರ ಹಿತ ಕಾಪಾಡಬೇಕು

| Published : Jun 18 2024, 12:49 AM IST

ಸಾರಾಂಶ

ನೋವನ್ನು ಉಂಡಿರುವ ಅಹಿಂದ ಸರ್ಕಾರ ಈಗಿರುವುದರಿಂದ ಆಯಕಟ್ಟಿನ ಸ್ಥಳಗಳಲ್ಲಿ ಉನ್ನತ ಹುದ್ದೆಗಳಲ್ಲಿ ಪ್ರಾಮಾಣಿವಾಗಿ ಸೇವೆ ಸಲ್ಲಿಸುತ್ತಿರುವ ದಲಿತ ಅಧಿಕಾರಿಗಳು ಇದ್ದರೂ ಕೂಡ ಅವರ ಅರ್ಹತೆಗೆ ತಕ್ಕ ಹುದ್ದೆಗಳನ್ನು ನೀಡುತ್ತಿಲ್ಲ. ಇದನ್ನು ಸರಿಪಡಿಸಬೇಕು

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಅಧಿಕಾರಕ್ಕೆ ಬರುವಲ್ಲಿ ದಲಿತ ಸಮುದಾಯದ ಕೊಡುಗೆ ಗಣನೀಯವಾಗಿರುವ ಕಾರಣ ಈ ಕೂಡಲೇ ದಲಿತ ಸಮುದಾಯದ ಹಿತಕಾಪಾಡಲು ಸರ್ಕಾರ ಮುಂದಡಿಯಿಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯಾಧ್ಯಕ್ಷ ಡಿ. ಶಿವಶಂಕರ್ ಸರ್ಕಾರವನ್ನು ಒತ್ತಾಯಿಸಿದರು.ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ಭವನದಲ್ಲಿ ನಡೆಸಿದ ಕರ್ನಾಟಕ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ಆಯೋಜಿಸಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರುವಲ್ಲಿ ಪರಿಶಿಷ್ಟ ಜಾತಿ-ಪಂಗಡದ ಕೊಡುಗೆ ಸಾಕಷ್ಟಿದೆ ಎಂದರು.

ಸಂಘಟನೆ ಬಲಪಡಿಸಬೇಕು

ಸಂವಿಧಾನಕ್ಕೆ ನಿಷ್ಠೆ ತೋರಿ ಬುದ್ಧ ಬಸವ ಅಂಬೇಡ್ಕರ್ ಅವರ ಮಾರ್ಗದಲ್ಲಿ ಸಾಗುತ್ತಿರುವ ನಮ್ಮ ಸಮುದಾಯದ ನೌಕರರ ಹಿತಕಾಯುವುದು ಸರ್ಕಾರದ ಕರ್ತವ್ಯವಾಗಬೇಕಿದೆ. ಸಂಘಟನೆಗಳು ಎಷ್ಟೇ ಪ್ರಾಮಾಣಿಕವಾಗಿ ಹೋರಾಟ ಮಾಡುತ್ತಾ ಬಂದಿದ್ದರೂ ಇವತ್ತು ಪಜಾತಿ.ಪಂಗಡದ ಸರ್ಕಾರಿ ನೌಕರರ ಸಮಸ್ಯೆಗಳು ಹಾಗೆಯೇ ಇವೆ. ಈ ನೌಕರರಿಗೆ ಸೇರಬೇಕಾಗಿದ್ದ ಸಂವಿಧಾನ ಬದ್ಧಹಕ್ಕುಗಳು ಅನುಷ್ಠಾನಕ್ಕೆ ಬರುವ ಬದಲು ಕತ್ತಲು ಸೇರುತ್ತಿರುವ ಹೊತ್ತಿನಲ್ಲಿ ಸಂಘಟನೆಯನ್ನು ಬಲಗೊಳಿಸಿ ಹೋರಾಟ ಮಾಡಬೇಕಾಗಿರುವುದು ಅನಿವಾರ್ಯವಾಗಿದೆ ಎಂದರು.

ಸರ್ಕಾರ ಕೂಡಲೇ 7ನೇ ವೇತನ ಆಯೋಗದ ಶಿಫಾರಸುಗಳನ್ನು ಕೂಡಲೇ ಅನುಷ್ಠಾನ ಮಾಡಬೇಕು. ಬ್ಯಾಕ್‌ಲಾಗ್ ಉದ್ಯೋಗದ ನೇಮಕಾತಿಯನ್ನು ಕೂಡಲೇ ಮಾಡಬೇಕು.ಎಇಪಿ ಹಿಂಪಡೆದು ಒಪಿಎಸ್ ಜಾರಿಗೊಳಿಸಬೇಕು. ನೋವನ್ನು ಉಂಡಿರುವ ಅಹಿಂದ ಸರ್ಕಾರ ಈಗಿರುವುದರಿಂದ ಆಯಕಟ್ಟಿನ ಸ್ಥಳಗಳಲ್ಲಿ ಉನ್ನತ ಹುದ್ದೆಗಳಲ್ಲಿ ಪ್ರಾಮಾಣಿವಾಗಿ ಸೇವೆ ಸಲ್ಲಿಸುತ್ತಿರುವ ದಲಿತ ಅಧಿಕಾರಿಗಳು ಇದ್ದರೂ ಕೂಡ ಅವರ ಅರ್ಹತೆಗೆ ತಕ್ಕ ಹುದ್ದೆಗಳನ್ನು ನೀಡುತ್ತಿಲ್ಲ. ಇದನ್ನು ಸರಿಪಡಿಸಬೇಕು ಎಂದರು.ಸಮಾವೇಶದಲ್ಲಿ ಕರ್ನಾಟಕ ಸರ್ಕಾರಿ ಎಸ್‌ಸಿ, ಎಸ್‌ಟಿ ನೌಕರರ ಸಮನ್ವಯ ಸಮಿತಿ ರಾಜ್ಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್, ಜಿಲ್ಲಾಧ್ಯಕ್ಷ ಕೆ.ಜಿ.ಶ್ರೀನಿವಾಸ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ನಾರಾಯಣಸ್ವಾಮಿ, ಶಿಡ್ಲಘಟ್ಟ ಸಮಿತಿ ಅಧ್ಯಕ್ಷ ಸುರೇಶ್, ಗೌರಿಬಿದನೂರು ಅಧ್ಯಕ್ಷ ರಾಮಕೃಷ್ಣಪ್ಪ, ಗುಡಿಬಂಡೆ ಅಧ್ಯಕ್ಷ ಆಂಜನೇಯ, ಚಿಂತಾಮಣಿ ಅಧ್ಯಕ್ಷ ರವಿ, ಚಿಕ್ಕಬಳ್ಳಾಪುರ ಅಧ್ಯಕ್ಷ ಎಂ.ಮರಿಯಪ್ಪ, ಬಾಗೇಪಲ್ಲಿ ಅಧ್ಯಕ್ಷ ಚಿನ್ನ ಕೈವಾರಮಯ್ಯ ಸೇರಿದಂತೆ ಎಲ್ಲಾ ತಾಲೂಕುಗಳ ಅಧ್ಯಕ್ಷರು ಪದಾಧಿಕಾರಿಗಳು ಇದ್ದರು.