ಸಾರಾಂಶ
ಕನ್ನಡಪ್ರಭ ವಾರ್ತೆ ದೊಡ್ಡಬಳ್ಳಾಪುರ
ಕಲಾವಿದರು ಮಾಸಾಶನ ಪಡೆಯಲು ವರ್ಷಗಟ್ಟಲೇ ವಿಳಂಬವಾಗುತ್ತಿದೆ. ಇದರೊಂದಿಗೆ ಈಗಾಗಲೇ ಪಡೆಯುತ್ತಿರುವ ಬೇರೆ ರೀತಿಯ ಮಾಸಾಶನ ನಿಲ್ಲಿಸಿ, ಕಲಾವಿದರ ಮಾಸಾಶನ ಪಡೆಯಲು ಸಹ ವರ್ಷಗಟ್ಟಲೇ ಕಾಯಬೇಕಿದ್ದು, ಯಾವುದೇ ರೀತಿಯ ಮಾಸಾಶನ ದೊರೆಯದೇ ಕಲಾವಿದರು ಮಾಸಾಶನದಿಂದ ವಂಚಿತರಾಗಬೇಕಾದ ಪರಿಸ್ಥಿತಿ ಉಂಟಾಗಿದೆ. ಈ ದಿಸೆಯಲ್ಲಿ ಕಲಾವಿದರ ಸಂಕಷ್ಟಗಳನ್ನು ಅರ್ಥ ಮಾಡಿಕೊಂಡು, ಕಲಾವಿದರಿಗೆ ನೆರವು ನೀಡಲು ಸರ್ಕಾರ ಮುಂದಾಗಬೇಕಿದೆ ಎಂದು ಕಲಾವಿದರ ಸಂಘದಿಂದ ಒತ್ತಾಯಿಸಲಾಗುತ್ತಿದೆ ಎಂದು ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ತಿಳಿಸಿದ್ದಾರೆ.ನಗರದ ತಾಲೂಕು ಕಲಾವಿದರ ಸಂಘದ ಕಾರ್ಯಾಲಯ ಕಲಾಭವನದಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಅವರು ಮಾತನಾಡಿದರು.
ಸರ್ಕಾರ ಕಲಾವಿದರಿಗೆ ₹2,500 ಮಾಸಾಶನ ನೀಡುತ್ತಿದೆ. ಇದಕ್ಕೆ ಕಲಾವಿದರು 58 ವರ್ಷ ತುಂಬಿದ ನಂತರ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಅರ್ಜಿ ಹಾಕಬೇಕು. ಮಾಸಾಶನಕ್ಕೆ ಅರ್ಜಿ ಹಾಕಿದ ಮೂರ್ನಾಲ್ಕು ವರ್ಷದ ನಂತರ ಮಾಸಾಶನ ಮಂಜೂರು ಅಗುತ್ತಿದೆ. ಅದರೆ ಅರ್ಜಿ ಹಾಕುವಾಗಲೇ ಇಲಾಖೆಯವರು ಕಂದಾಯ ಇಲಾಖೆಯಿಂದ ನೀಡುವ ವೃದ್ದಾಪ್ಯ ವೇತನ ಪಡೆಯಬಾರದೆಂದೂ, ಒಂದು ವೇಳೆ ಪಡೆಯುತ್ತಿದ್ದರೆ ಅದನ್ನು ನಿಲ್ಲಿಸಿ, ಅರ್ಜಿ ಹಾಕಬೇಕೆಂದೂ ಹೇಳಿದ್ದಾರೆ. ಇತ್ತ ಕಲಾವಿದರ ಮಾಸಾಶನವೂ ಇಲ್ಲದೆ ವೃದ್ಧಾಪ್ಯ ವೇತನವೂ ಇಲ್ಲದೆ ಕಲಾವಿದರು ತೊಂದರೆ ಅನುಭವಿಸುತ್ತಿದ್ದಾರೆ.ಅರ್ಜಿ ಹಾಕಿದ ನಾಲ್ಕೈದು ವರ್ಷದ ನಂತರ ಮಾಸಾಶನ ಮಂಜೂರಾಗುತ್ತಿದೆ. ಈ ದಿಸೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಮಾಸಾಶನ ಮಂಜೂರು ಮಾಡಿದ ನಂತರ ವೃದ್ದಾಪ್ಯ ವೇತನ ನಿಲ್ಲಿಸಿ, ನಂತರ ಕಲಾವಿದರಿಗೆ ಮಾಸಾಶನ ಬಿಡುಗಡೆ ಮಾಡಬೇಕೆಂದು ಕಲಾವಿದರ ಸಂಘ ಒತ್ತಾಯಿಸುತ್ತಿದ್ದು, ಕಲಾವಿದರ ಮಾಸಾಶನಕ್ಕೆ ಅರ್ಜಿ ಹಾಕುವ ಮೊದಲೇ ಕಂದಾಯ ಇಲಾಖೆಯಿಂದ ನೀಡುವ ₹1,200 ವೃದ್ದಾಪ್ಯ ವೇತನ ನಿಲ್ಲಿಸುವ ನಿಯಮ ಬದಲಿಸಬೇಕು. ಈ ಬಗ್ಗೆ ಇಲಾಖೆಯ ನಿರ್ದೆಶಕರು ಹಾಗೂ ಸಚಿವರು ಪರಿಸೀಲಿಸಿ ಮರು ಅದೇಶ ಮಾಡಬೇಕು ಎಂದರು.
ಶೀಘ್ರ ಸಂದರ್ಶನ ನಡೆಸಿ :ಕಲಾವಿದರ ಮರಣಾನಂತರ ಕಲಾವಿದರ ಪತ್ನಿಯರಿಗೆ ನೀಡುವ ವಿಧವಾ ವೇತನ. ಕೇವಲ ₹500 ಮಾತ್ರ ಆದರೆ ಅದೇ ಕಂದಾಯ ಇಲಾಖೆಯು ನೀಡುವ ವಿಧವಾ ವೇತನ ₹1,200 ಆಗಿದೆ. ಸರ್ಕಾರ ಈ ಬಗ್ಗೆ ಗಮನ ಹರಿಸಿ ಕಲಾವಿದರಿಗೆ ನೀಡುವ ಮಾಸಾಶನದ ಮೊತ್ತವನ್ನೇ ಮರಣದ ನಂತರ ಅವರ ಪತ್ನಿಯರಿಗೂ ನೀಡುವ ಬಗ್ಗೆ ಮರು ಆದೇಶ ಮಾಡಬೇಕು. ಇನ್ನು ಬಹಳಷ್ಟು ಕಲಾವಿದರು ಅನಾರೋಗ್ಯಕ್ಕೆ ತುತ್ತಾಗಿ, ಸಂಕಷ್ಟದಲ್ಲಿರುತ್ತಾರೆ. ಅಂತಹವರು, ಸಲ್ಲಿಸಿರುವ ಅರ್ಜಿಗಳು ಮಂಜೂರು ಮಾಡಲು ವರ್ಷಗಳೇ ಕಳೆಯುತ್ತವೆ. ಇತ್ತ ವೃದ್ಯಾಪ್ಯ ವೇತನವೂ ಇಲ್ಲ ಅತ್ತ ಮಾಸಾಶನವೂ ಇಲ್ಲವಾಗಿ ಕಲಾವಿದರು ತ್ರಿಶಂಕು ಸ್ಥಿತಿಯಲ್ಲಿ ಇರಬೇಕಾದ ಸ್ಥಿತಿ ಬಂದಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕು ಕಲಾವಿದರ ಸಂಘದ ಅಧ್ಯಕ್ಷ ಎನ್.ರಾಮಾಂಜಿನಪ್ಪ ಮಾತನಾಡಿ, ಕಲೆಯನ್ನು ನಂಬಿರುವ ಬಹುತೇಕ ಕಲಾವಿದರು ಬಡ ಹಾಗೂ ಆರ್ಥಿಕವಾಗಿ ಹಿಂದುಳಿದವರು, ಹಿಂದುಳಿದ ಸಮುದಾಯದವರಾಗಿದ್ದಾರೆ. ಕಲಾವಿದರು ಹತ್ತಾರು ಸಾವಿರ ಖುರ್ಚು ಮಾಡಿಕೊಂಡು ಕಲಾ ಪ್ರದರ್ಶನ ನೀಡಬೇಕಾಗಿದೆ. ಕಲಾವಿದರು ಅನಾರೋಗ್ಯಗೊಂಡರೆ ಅವರಿಗೆ ಯಾವುದೇ ನೆರವು ಇರುವುದಿಲ್ಲ. ಈ ದಿಸೆಯಲ್ಲಿ ಸರ್ಕಾರ ಮಾಸಾಶನದ ವಯಸ್ಸನ್ನು 50 ವರ್ಷಕ್ಕೆ ಸೀಮಿತವಾಗಿಸಬೇಕು. ಕಲಾವಿದರಿಗೆ ₹3 ಸಾವಿರ ನೀಡುವ ಭರವಸೆ ಇನ್ನೂ ಈಡೇರಿಲ್ಲ. ಇಂದಿನ ಪರಿಸ್ಥಿತಿಗೆ ತಕ್ಕಂತೆ ಮಾಸಾಶನ ₹5 ಸಾವಿರಕ್ಕೆ ಏರಿಸಬೇಕು ಎಂದರು.ತಾಲೂಕು ಕಲಾವಿದರ ಸಂಘದ ಉಪಾಧ್ಯಕ್ಷ ಎಚ್.ಪ್ರಕಾಶ್ ರಾವ್, ಖಜಾಂಚಿ ಎಚ್.ಮುನಿಪಾಪಯ್ಯ ಮಾತನಾಡಿ, ಕಲಾವಿದರು ಮರಣ ಹೊಂದಿದಾಗ ಅಂತ್ಯಕ್ರಿಯೆಗೆ ಸರ್ಕಾರ ₹10 ಸಾವಿರ ನೀಡಬೇಕು ಎಂದು ಒತ್ತಾಯಿಸಿದರು.
ತಾಲೂಕು ಕಲಾವಿದರ ಸಂಘದ ಸಹಕಾರ್ಯದರ್ಶಿ ಎ.ಮಂಜುನಾಥ್, ಜಂಟಿ ಕಾರ್ಯದರ್ಶಿ ಮುದ್ದು ಕೃಷ್ಣಪ್ಪ, ನಿರ್ದೇಶಕರಾದ ರವಿಕುಮಾರ್, ತಮ್ಮಣ್ಣ, ಶಶಿಧರ್, ಜಿ.ರಾಮು, ಸಂಚಾಲಕ ನಾಗರಾಜ್ ಹಾಜರಿದ್ದರು.ಫೋಟೋ-
26ಕೆಡಿಬಿಪಿ1- ದೊಡ್ಡಬಳ್ಳಾಪುರ ತಾಲೂಕು ಕಲಾವಿದರ ಸಂಘದ ವತಿಯಿಂದ ನಡೆದ ಸುದ್ಧಿಗೋಷ್ಟಿಯಲ್ಲಿ ಸಂಘದ ಸಂಘದ ಪ್ರಧಾನ ಕಾರ್ಯದರ್ಶಿ ಬಿ.ಚಂದ್ರಶೇಖರ್ ಮಾತನಾಡಿದರು.