ಸರ್ಕಾರ ಆಯುರ್ವೇದ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಆರಂಭಿಸಲಿ

| Published : Mar 04 2025, 12:35 AM IST

ಸರ್ಕಾರ ಆಯುರ್ವೇದ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರ ಆರಂಭಿಸಲಿ
Share this Article
  • FB
  • TW
  • Linkdin
  • Email

ಸಾರಾಂಶ

Government should start an Ayurvedic cancer treatment center

-ಖ್ಯಾತ ಪಂಚಗವ್ಯ ತಜ್ಞ ಡಾ. ಡಿ.ಪಿ ರಮೇಶ ಸರ್ಕಾರಕ್ಕೆ ಕರೆ । ಕ್ಯಾನ್ಸರ್‌ಗೆ ಪಂಚಗವ್ಯ ಚಿಕಿತ್ಸೆ ಕಡಿಮೆ ಖರ್ಚನದ್ದು, ಸರ್ಕಾರ ಅವಕಾಶ ನೀಡಲಿ

----

ಕನ್ನಡಪ್ರಭ ವಾರ್ತೆ, ಬೀದರ್‌

ಸರ್ಕಾರ ರಾಜ್ಯದ ಎಲ್ಲಾ ಜಿಲ್ಲಾಸ್ಪತ್ರೆಗಳಲ್ಲಿ ಆಯುರ್ವೇದ ಕ್ಯಾನ್ಸರ್‌ ಚಿಕಿತ್ಸಾ ಕೇಂದ್ರಗಳನ್ನು ಆರಂಭಿಸಿ ಪಾರಂಪರಿಕ ವೈದ್ಯರಿಗೆ ತರಬೇತಿ ನೀಡಬೇಕೆಂದು ಬೆಂಗಳೂರಿನ ಖ್ಯಾತ ಪಂಚಗವ್ಯ ತಜ್ಞ ಡಾ. ಡಿ.ಪಿ.ರಮೇಶ ತಿಳಿಸಿದರು.

ಅವರು ಜಿಲ್ಲಾಡಳಿತ, ಕರ್ನಾಟಕ ಜೀವ ವೈವಿಧ್ಯ ಮಂಡಳಿ ಬೆಂಗಳೂರು, ಪಾರಂಪರಿಕ ವೈದ್ಯ ಪರಿಷತ್ತು ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ತು ಲಿಂಗಸುಗೂರು ಇವರ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ನಡೆಯುತ್ತಿರುವ 15ನೇ ಪಾರಂಪರಿಕ ವೈದ್ಯ ಸಮ್ಮೇಳನದ ನಾಲ್ಕನೇ ಗೋಷ್ಠಿ ಉದ್ದೇಶಿಸಿ ಮಾತನಾಡಿದರು.

ಕ್ಯಾನ್ಸರ್‌ ಚಿಕಿತ್ಸೆ ಎಂದರೆ ಕೇವಲ ಕಿಮೋಥೆರಪಿ, ರೆಡಿಯೋಥೆರಪಿ ಅಲ್ಲ. ಅವುಗಳಿಗೂ ಮೀರಿದ ಅಡ್ಡ ಪರಿಣಾಮಗಳಿಲ್ಲದ ಚಿಕಿತ್ಸೆ ಭಾರತೀಯ ಆಯುರ್ವೇದದಲ್ಲಿದೆ. ಪಂಚಗವ್ಯ ಚಿಕಿತ್ಸೆ ಅತ್ಯಂತ ಕಡಿಮೆ ಹಣದಲ್ಲಿ ಪಡೆಯಬಹುದು. ಇದಕ್ಕೆ ಸರ್ಕಾರ ಅವಕಾಶ ನೀಡಬೇಕಾಗಿದೆ. ಕ್ಯಾನ್ಸರ್ ಬರದಂತೆ ತಡೆಯಬೇಕಾದರೆ ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದರು.

ಪ್ಲಾಸ್ಟಿಕ್‌ ಬಾಟಲಿಗಳ ನೀರು, ಸಿಂಟ್ಯಾಕ್ಸ ಒಳಗಿಂದ ಬರುವ ನೀರು, ಮಿನರಲ್‌ ವಾಟರ್‌, ಚಹಾ ಕಪ್‌ ಇವು ಕ್ಯಾನ್ಸರ್‌ ರೋಗಕ್ಕೆ ಮೂಲ ಕಾರಣವಾಗಿವೆ. ಚಿಕ್ಕ ಮಕ್ಕಳು ಕುರಕುರೆ ತಿನ್ನುವುದರಿಂದ ಮಕ್ಕಳ ದೇಹದ ಮೇಲೆ ಅತಿಯಾದ ದುಷ್ಪರಿಣಾಮ ಬೀರುತ್ತಿದೆ. ಇದಕ್ಕೆ ಆಯುರ್ವೇದ ಸೂಕ್ತ ಚಿಕಿತ್ಸೆಯಾಗಿದೆ ಎಂದರು.

ಗದಗ ಜಿಲ್ಲೆಯ ವೈದ್ಯ ಹನುಮಂತ ಮಳಲಿ ಮಾತನಾಡಿ, ಭಾರತೀಯ ಆಯುರ್ವೇದದ ಬಗ್ಗೆ ಸಂವಿಧಾನದಲ್ಲಿ ಉಲ್ಲೇಖವಾಗಿದೆ. ಪ್ರಾಕೃತಿಕ ವೈದ್ಯ ಪದ್ಧತಿಯನ್ನು ಸಾಂಸ್ಕೃತಿಕ ಪದ್ಧತಿಯೆಡೆಗೆ ಕೊಂಡೊಯ್ಯುವುದೇ ಭಾರತದ ಆಯುರ್ವೇದ ವೈದ್ಯ ಪದ್ಧತಿ. ಭಾರತದಲ್ಲಿ ಒಟ್ಟು 6ಲಕ್ಷ ಪಾರಂಪರಿಕ ವೈದ್ಯರಿದ್ದಾರೆ. ಕರ್ನಾಟಕದಲ್ಲಿ 31 ಸಾವಿರ ವೈದ್ಯರಿದ್ದಾರೆ. ಇವರಿಗೆಲ್ಲ ಸರ್ಕಾರ ಮಾನ್ಯತೆ ನೀಡಿದರೆ ಜನರ ರೋಗ ವಾಸಿಯಾಗಿ ಆರೋಗ್ಯಯುತ ರಾಷ್ಟ್ರ ನಿರ್ಮಾಣವಾಗುವುದರಲ್ಲಿ ಸಂದೇಹವಿಲ್ಲ ಎಂದರು.

ಆಯುರ್ವೇದ ಮೇಲೆ ದಾಳಿ ಇಡೀ ಭಾರತದ ಮೇಲಿನ ದಾಳಿಯಾಗಿದೆ. ಅದು ತಡೆಗಟ್ಟಲು ಸರ್ಕಾರ ಕ್ರಮ ವಹಿಸಬೇಕು. ಹಿರಿಯ ವೈದ್ಯರು ತಮ್ಮ ಪಾರಂಪರಿಕ ಜ್ಞಾನವನ್ನು ಮುಂದಿನ ಪೀಳಿಗೆಗೆ ಹೇಳಿಕೊಡಬೇಕು ಯಾವುದೇ ಕಾರಣಕ್ಕೂ ಮುಚ್ಚಿಡಬಾರದು ಎಂದರು.

ಗೋ ಸೇವಕರಾದ ಚನ್ನಬಸವಂತರೆಡ್ಡಿ ಮಾತನಾಡಿದರು. ಪಾರಂಪರಿಕ ವೈದ್ಯರು ಹಾಗೂ ಸಂಪನ್ಮೂಲ ವ್ಯಕ್ತಿಗಳ ನಡುವೆ ಕ್ಯಾನ್ಸರ್‌ ರೋಗ ಗುಣಮುಖ ಕುರಿತು ಸಂವಾದ ನಡೆಯಿತು. ರಂಗಮಂದಿರ ಆವರಣದಲ್ಲಿ ಬೆಂಗಳೂರಿನ ಪಂಚಗವ್ಯ ವೈದ್ಯರು ಉಚಿತ ಆರೋಗ್ಯ ತಪಾಸಣೆ ನಡೆಸಿದರು.

ಈ ಸಂದರ್ಭದಲ್ಲಿ ವೈದ್ಯ ಹಾದಿಮನಿ ದಾವಣಗೇರೆ, ಹರೀಶ ಸಾಮುಗ ಉಡುಪಿ, ಗೋಪಾಲಕೃಷ್ಣ ಬೆಂಗಳೂರು ಗ್ರಾಮಾಂತರ, ವಿಶ್ವನಾಥ ಕಾಂಬಳೆ ಬೆಳಗಾವಿ, ಮಲ್ಲಿಕಾರ್ಜುನಯ್ಯ ಕೋಲಾರ, ವೈದ್ಯೆ ಸವಿತಾ ಧಾರವಾಡ, ಬಸವರಾಜ ಗೋರನಳ್ಳಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ವೈದ್ಯ ಲಿಂಗಪ್ಪ ಮಡಿವಾಳ ನಿರೂಪಿಸಿದರು. ಮಹಾರುದ್ರ ಡಾಕುಳಗೆ ಸ್ವಾಗತಿಸಿದರು. ಶಿವಶರಣಪ್ಪ ಗಣೇಶಪುರ ವಂದಿಸಿದರು.

----

ಫೈಲ್‌ 3ಬಿಡಿ4