ಸಾರಾಂಶ
ಮಹಾಲಿಂಗಪುರ: ಇಂದು ಪ್ರತಿ ಕುಟುಂಬಗಳು ಮಕ್ಕಳಿಗೆ ಶಿಕ್ಷಣ ಕೊಡಿಸುವುದರಲ್ಲೇ ಜೀವನ ಕಳೆಯುವಂತಾಗಿದೆ. ಇಂದಿನ ಶಿಕ್ಷಣ ವ್ಯಾಪಾರೀಕರಣವಾಗಿದೆ. ಇದನ್ನು ತಡೆಯಲು ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಬೆಳಗಲಿಯ ಸಿದ್ದರೂಢ ಮಠದ ಸಿದ್ದರಾಮ ಶಿವಯೋಗಿ ಸ್ವಾಮಿಗಳು ಹೇಳಿದರು
ಕನ್ನಡಪ್ರಭ ವಾರ್ತೆ ಮಹಾಲಿಂಗಪುರ
ಇಂದು ಪ್ರತಿ ಕುಟುಂಬಗಳು ಮಕ್ಕಳಿಗೆ ಶಿಕ್ಷಣ ಕೊಡಿಸುವುದರಲ್ಲೇ ಜೀವನ ಕಳೆಯುವಂತಾಗಿದೆ. ಇಂದಿನ ಶಿಕ್ಷಣ ವ್ಯಾಪಾರೀಕರಣವಾಗಿದೆ. ಇದನ್ನು ತಡೆಯಲು ಸರ್ಕಾರಗಳು ಕಠಿಣ ಕ್ರಮ ತೆಗೆದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಬೆಳಗಲಿಯ ಸಿದ್ದರೂಢ ಮಠದ ಸಿದ್ದರಾಮ ಶಿವಯೋಗಿ ಸ್ವಾಮಿಗಳು ಹೇಳಿದರು.ಧವಳೇಶ್ವರ ಗ್ರಾಮದ ದುಂಡಪ್ಪ ಪಟ್ಟಣಶೆಟ್ಟಿ ಅವರ ಶಿವಾಜಿ ಸಮಗ್ರ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯ (ರಿ )ವಿವೇಕಾನಂದ ಆಂಗ್ಲ ಮಾಧ್ಯಮ ಪಬ್ಲಿಕ್ ಶಾಲೆಯ 5ನೇ ವಾರ್ಷಿಕೋತ್ಸವ 2023-24 ನೇ ಸಾಲಿನ ಶ್ರೀ ವಿವೇಕ ಉತ್ಸವ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಪ್ರತಿ ಮಗುವಿಗೆ ಪದವಿ ವರೆಗೆ ಉಚಿತ ಶಿಕ್ಷಣ ನೀಡಿದರೆ ರಾಷ್ಟ್ರೀಯತೆ ಹಾಗೂ ದೇಶದ ಮೇಲೆ ಭಕ್ತಿ ಭಾವ ಮೂಡಲು ಸಾಧ್ಯ. ವಿದ್ಯಾವಂತ ಯುವಜನತೆ ಮೇಲೆ ದೇಶದ ಭವಿಷ್ಯ ನಿಂತಿದೆ ಎಂದು ಹೇಳಿದರು.
ಕನ್ನಡ ಸಾಹಿತ್ಯ ಪರಿಷತ ಮಹಾಲಿಂಗಪುರ ವಲಯ ಘಟಕದ ಅಧ್ಯಕ್ಷ ಬಸವರಾಜ ಮೇಟಿ ಮಾತನಾಡಿ, ಪಾಲಕರು ಮಕ್ಕಳಿಗೆ ಮಾನಸಿಕ ಒತ್ತಡ ಹಾಕಬಾರದು. ಮಾನಸಿಕ ಒತ್ತಡದಿಂದ ಮಕ್ಕಳು ಖಿನ್ನತೆಗೆ ಒಳಗಾಗುವ ಸಂಭವ ಹೆಚ್ಚು. ಮಕ್ಕಳು ಅಂಕ ಗಳಿಸುವ ಯಂತ್ರದಂತೆ ಆಗಬಾರದು. ಇಂದಿನ ಮಕ್ಕಳು ಬರಿ ಮೊಬೈಲ್, ಟಿವಿ, ಇತರೆ ದುಶ್ಚಟಗಳ ದಾಸರಾಗುತ್ತಿರುವುದು ಕಳವಳಕಾರಿ. ಮೊಬೈಲ್ ಗೇಮ್, ವಾಟ್ಸಾಪ್, ಫೇಸಬುಕ್ ಇನ್ನು ಅನೇಕ ಸೋಷಿಯಲ್ ಮೀಡಿಯಾಗಳಿಂದ ಮಕ್ಕಳು ದೂರ ಇರಬೇಕು. ಮಕ್ಕಳನ್ನು ಆಟ ಆಡಲು ಮೈದಾನಕ್ಕೆ ಕಳುಹಿಸಿ. ಇದರಿಂದ ಮಕ್ಕಳು ದೈಹಿಕ, ಮಾನಸಿಕವಾಗಿ ಬಲಿಷ್ಠರಾಗಿತ್ತಾರೆ. ಆಟ ಮತ್ತು ಪಾಠ ಎರಡು ಸಮನಾಗಿದ್ದರೆ ಬದುಕು ಸುಂದರವಾಗುತ್ತದೆ ಎಂದರು.ಅನುಶ್ರೀ ಚೌಗಲಾ ಮಾತನಾಡಿ, ಮಕ್ಕಳಿಗೆ ಶಿಕ್ಷಣವೇ ಜೀವನ ಆಗಬಾರದು. ಜೀವನದ ಒಂದು ಭಾಗ ಅಷ್ಟೇ ಆಗಬೇಕು. ಸುಂದರ ಬದುಕು ರೂಪಿಸಲು ಶಿಕ್ಷಣದ ಜೊತೆಗೆ ಸಂಸ್ಕಾರ ಬಹಳ ಮುಖ್ಯವಾಗಬೇಕು ಎಂದು ಹೇಳಿದರು.
ಪ್ರಾಸ್ತವಿಕವಾಗಿ ಮಾತನಾಡಿದ ಶಾಲೆಯ ಅಧ್ಯಕ್ಷ ದುಂಡಪ್ಪ ಪಟ್ಟಣಶೆಟ್ಟಿ, ಶಾಲೆ ಆರಂಭದಿಂದ ಇಲ್ಲಿಯವರೆಗೆ ಆದ ಪ್ರಗತಿ ಪಕ್ಷಿ ನೋಟ ವಿವರಿಸಿದರು. ಇಂದು ಸುಸಜ್ಜಿತ ಕಟ್ಟಡ ಇದೆ. ಶಾಲೆಯಲ್ಲಿ ನೂರಾರು ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಉತ್ತಮ ಬೋಧಕ ಸಿಬ್ಬಂದಿ, ಸಹಾಯಕ ಸಿಬ್ಬಂದಿ ಹಾಗೂ ಬೋಧಕೇತರ ಸಿಬ್ಬಂದಿ ಹೊಂದಿದೆ ಎಂದರು.ಈ ವೇಳೆ ಮಹಾಂತೇಶ ಪಟ್ಟಣಶೆಟ್ಟಿ, ಅಭಿಷೇಕ್ ಚೌಗಲಾ ವೇದಿಕೆ ಮೇಲೆ ಇದ್ದರು. ಪಾಲಕರು ಮಕ್ಕಳು ಸೇರಿ ಹಲವರು ಕಾರ್ಯಕ್ರಮದಲ್ಲಿ ಇದ್ದರು.