ಸಾರಾಂಶ
ಕನ್ನಡಪ್ರಭವಾರ್ತೆವಿರಾಜಪೇಟೆಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ನಿವೃತ್ತ ಮೇಜರ್ ಕೆ.ಸುಶೀಲಾ ರಾಮದಾಸ್ ತಾವು ಖರೀದಿಸಿದ್ದ ಜಾಗವನ್ನು ಒಲ್ಲದ ಮನಸ್ಸಿನಿಂದಲೇ ಮಾರಾಟ ಮಾಡಿ, ನೋವು ಅನುಭವಿಸುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ. ನಿವೃತ್ತ ಸೇನಾಧಿಕಾರಿ, ಬಾಂಗ್ಲಾ ಹಾಗೂ ಚೀನಾದ ಯುದ್ದಗಳ ಸಂದರ್ಭ ಕರ್ತವ್ಯದಲ್ಲಿದ್ದ ಮೇಜರ್ ಸುಶೀಲಾ ರಾಮದಾಸ್ ಅವರ ಸ್ವಾಧೀನದಲ್ಲಿದ್ದ ಜಾಗಕ್ಕೆ ಒತ್ತುವರಿ ಸರ್ಕಾರಿ ಜಾಗವೆಂದು ಫಲಕ ಹಾಕಲಾಗಿತ್ತು. ಸತತ ಪ್ರಯತ್ನದ ಬಳಿಕ ಇತ್ತೀಚೆಗೆ ವಿರಾಜಪೇಟೆ ತಹಸೀಲ್ದಾರ್ ಸಮ್ಮುಖದಲ್ಲಿ ಫಲಕ ತೆರವುಗೊಳಿಸಲಾಗಿದೆ.ವಿವರ: ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ನಾಂಗಾಲ ಗ್ರಾಮದಲ್ಲಿ ಹದಿಮೂರು ವರ್ಷಗಳ ಹಿಂದೆ ಕೆ.ಸುಶೀಲಾ ರಾಮದಾಸ್ ಅವರು 13- 88ಎಕರೆ ಜಾಗ ಖರೀದಿಸಿದ್ದರು. ಈ ಪೈಕಿ ಸ.ನಂ.136-1ಡಿ1ರಲ್ಲಿ 5-50 ಎಕರೆ ಸರ್ಕಾರಿ ಜಾಗ ಅವರ ಅನುಭವ ಸ್ವಾಧೀನದಲ್ಲಿ ಇರುವುದಾಗಿ ಮೂರು ವರ್ಷಗಳ ಹಿಂದೆ ನೋಟಿಸ್ ಜಾರಿ ಮಾಡಲಾಗಿತ್ತು. ಆದರೆ ಕಳೆದ ಏ. 26ರಂದು 1361ಡಿ1 ರ ಸರ್ವೇ ನಂಬರ್‌ನಲ್ಲಿರುವ ಜಾಗದಲ್ಲಿ ಒತ್ತುವರಿ ತೆರವು ಫಲಕ ಹಾಕುವ ಮೂಲಕ ಇಲಾಖೆ ಅಧಿಕಾರಿಗಳು ಎಡವಟ್ಟು ಮಾಡಿದ್ದರು. ವಾಸ್ತವವಾಗಿ ಸ.ನಂ. 135-1ಡಿ1 ರಲ್ಲಿ ಕೇವಲ 2 ಎಕರೆ ಜಾಗವಿದ್ದು, ಯಾವ ಒತ್ತುವರಿಯೂ ಆಗಿರಲಿಲ್ಲ.ಈ ಕಿರುಕುಳದಿಂದ ಮನನೊಂದ ಮೇಜರ್ ಕೆ.ಸುಶೀಲಾ ರಾಮದಾಸ್ ಅವರು, ತಮ್ಮ 13-88 ಎಕರೆ ಜಾಗವನ್ನು ನಂತರ ತೆಲಂಗಾಣದ ಉದ್ಯಮಿಗಳಿಗೆ ಮಾರಾಟ ಮಾಡಿದ್ದಾರೆ. ಅದರಂತೆ, ಸ.ನಂ.136-1ಡಿ1ರ 2 ಎಕರೆ ಜಾಗ ಶ್ರೀನಿವಾಸ್ ರಾವ್ ಎಂಬುವರಿಗೆ ಖಾತೆಯೂ ಆಗಿದೆ.ತಪ್ಪು ವರದಿಯಿಂದ ಎಡವಟ್ಟುಇಲಾಖೆಯ ಅಧಿಕಾರಿಗಳು ನೀಡಿದ ವರದಿಯಲ್ಲಿ ಸ.ನಂ. 136-1 ರಲ್ಲಿ 5-50 ಎಕರೆ ಜಾಗ ಒತ್ತುವರಿ ಆಗಿರುವುದಾಗಿ ಉಲ್ಲೇಖಿಸಲಾಗಿತ್ತು. ಈ ವರದಿಯನ್ನು ಆಧರಿಸಿ ಒತ್ತುವರಿ ತೆರವು ಫಲಕವನ್ನು ಅಳವಡಿಸಲಾಗಿತ್ತು. ಫಲಕ ಅಳವಡಿಸಿದ್ದ ಸ್ಥಳದಲ್ಲಿ ಒತ್ತುವರಿ ಜಾಗ ಇಲ್ಲವೆಂದು ಕೆಲವರು ಆಕ್ಷೇಪ ವ್ಯಕ್ತಪಡಿಸಿದ ಬಳಿಕ ಮತ್ತೊಮ್ಮೆ ಹದ್ದುಬಸ್ತು ಸರ್ವೇ ಕೈಗೆತ್ತಿಕೊಳ್ಳಲಾಯಿತು. ಪಿಟಿ ಶೀಟ್ ಮತ್ತು ಗ್ರಾಮ ನಕಾಶೆಯ ಅಳತೆ ಗುರುತಿಸಿದ ಆಧಾರದಲ್ಲಿ ಸರ್ವೇ ಮಾಡಲಾಗಿತ್ತು. 2024 ಜುಲೈ 22ರಂದು ನಡೆದ ಹದ್ದುಬಸ್ತು ಸರ್ವೇಯಲ್ಲಿ 136-1ಡಿ1ರಲ್ಲಿ ಸರ್ಕಾರಿ ಜಾಗ ಒತ್ತುವರಿ ಇರುವುದಿಲ್ಲ ಎಂದು ಭೂಮಾಪಕರು ಸ್ಪಷ್ಟಪಡಿಸಿದ್ದರು.ವಿರಾಜಪೇಟೆಯ ಮಲೆತಿರಿಕೆ ಬೆಟ್ಟದ ಅಪಾಯಕಾರಿ ಸ್ಥಳದಲ್ಲಿ ನೆಲೆಸಿರುವವರಿಗೆ ಪುನರ್ವಸತಿ ಕಲ್ಪಿಸಲು ನಾಂಗಾಲದಲ್ಲಿ ಸರ್ಕಾರಿ ಜಾಗ ಗುರುತಿಸಲಾಗಿತ್ತು. ಈ ಪೈಕಿ ಸ.ನಂ. 136-1ಡಿ1 5-50 ಎಕರೆ ಜಾಗದ ಒತ್ತುವರಿ ತೆರವು ಪ್ರಕ್ರಿಯೆ ನಡೆದಿತ್ತು. ಆದರೆ, ಖಾಸಗಿ ಜಾಗದಲ್ಲಿ ಒತ್ತುವರಿ ಎಂಬ ಫಲಕ ಹಾಕುವ ಮೂಲಕ ಗೊಂದಲ ಸೃಷ್ಟಿಸಲಾಗಿತ್ತು.ತಪ್ಪು ಒಪ್ಪಿಕೊಂಡ ಅಧಿಕಾರಿ: ತಹಸೀಲ್ದಾರ್ ತರಾಟೆ136-1ರಲ್ಲಿ 5-50ಎಕರೆ ಸರ್ಕಾರಿ ಜಾಗ ಒತ್ತುವರಿಯಾಗಿದೆ. ಆದರೆ ಸರ್ವೇ ವರದಿ ಸಲ್ಲಿಸುವ ವೇಳೆ ಸುಶೀಲಾ ರಾಮದಾಸ್ ಅವರ ಹೆಸರು ಉಲ್ಲೇಖಿಸಿದ್ದು ತಪ್ಪಾಗಿದೆ ಎಂದು ಮಂಗಳವಾರ ಸ್ಥಳಕ್ಕೆ ಆಗಮಿಸಿದ್ದ ಭೂಮಾಪಕರು ಹೇಳಿದರು.ಹದ್ದುಬಸ್ತು ಸರ್ವೇ ವೇಳೆ ಮೊದಲ ಸರ್ವೇಯ ತಪ್ಪು ಸರಿಪಡಿಸಲಾಗಿದೆ ಎಂದು ಅವರು ತಿಳಿಸಿದರು.ಭೂಮಾಪಕರು ಮಾಡಿದ ತಪ್ಪಿನಿಂದ ನಾವು ಅಪವಾದ ಎದುರಿಸುವಂತಾಗಿದೆ. ಎಡಿಎಲ್‌ಆರ್ ಸಮ್ಮುಖದಲ್ಲಿಯೇ ಮತ್ತೊಮ್ಮೆ ಸರ್ವೇ ಮಾಡಿಸಿ ಸರ್ಕಾರಿ ಜಾಗ ಒತ್ತುವರಿ ಆಗಿರುವುದನ್ನು ಪತ್ತೆಹಚ್ಚಲಾಗುವುದು. ಜತೆಗೆ, ಖಾಸಗಿ ಜಾಗದಲ್ಲಿ ಒತ್ತುವರಿ ಸರ್ಕಾರಿ ಜಾಗ ಎಂಬ ಫಲಕ ಹಾಕಲು ಕಾರಣರಾದವರಿಗೆ ನೋಟಿಸ್ ನೀಡಲಾಗುವುದು ಎಂದು ವಿರಾಜಪೇಟೆ ತಹಸೀಲ್ದಾರ್ ಅನಂತಶಂಕರ್ ಹೇಳಿದರು.ಅಲ್ಲದೆ, ನಿಮ್ಮ ತಪ್ಪಿನಿಂದ ನಾವು ತಲೆತಗ್ಗಿಸುವಂತಾಗಿದೆ ಎಂದು ಭೂಮಾಪಕರನ್ನು ತರಾಟೆಗೆ ತೆಗೆದುಕೊಂಡರು.ಕಿರುಕುಳ– ಅಪಮಾನಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿರುವ ನಾನು ನಿವೃತ್ತಿ ಬಳಿಕ ಬಂದ ಹಣದಲ್ಲಿ 13-88ಎಕರೆ ಜಾಗ ಖರೀದಿಸಿದ್ದೆ. ಆದರೆ ಮೂರು ವರ್ಷಗಳಿಂದ ನನಗೆ ಕಿರುಕುಳ ನೀಡಿದ್ದಾರೆ. ತೋಟದ ಕಾರ್ಮಿಕರ ಎದುರು ಅವಮಾನ ಮಾಡಿದ್ದಾರೆ ಎಂದು ನಿವೃತ್ತ ಸೇನಾಧಿಕಾರಿ ಮೇಜರ್ ಕೆ.ಸುಶೀಲಾ ರಾಮದಾಸ್ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.ನಾಂಗಲ ತೋಟದಲ್ಲಿ ನಾನು ಹೆಚ್ಚಿನ ಸಮಯ ಕಳೆಯುತ್ತಿದ್ದೆ. ಅತ್ಯಂತ ಇಷ್ಟಪಟ್ಟ ಜಾಗ ಇದಾಗಿತ್ತು. ಆದರೆ ಅಧಿಕಾರಿಗಳು ನೀಡಿದ ಕಿರುಕುಳ ಮತ್ತು ಅವಮಾನದಿಂದ ನನ್ನ ಜಾಗವನ್ನು ಮಾರಾಟ ಮಾಡಿದ್ದೇನೆ. ಇದು ನನಗೆ ಬಹಳ ನೋವುಂಟು ಮಾಡಿದೆ. ಸೇನಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಕ್ಕೆ ಸಿಕ್ಕ ಕೊಡುಗೆ ಇದೆಂದು ಅವರು ನೋವು ವ್ಯಕ್ತಪಡಿಸಿದ್ದಾರೆ.======================ಭಾರತೀಯ ಸೇನೆಯಲ್ಲಿ ದಶಕಗಳ ಕಾಲ ಸೇವೆ ಸಲ್ಲಿಸಿ ಬಂದಿರುವ ನನ್ನ ಮೇಲೆ ಸರ್ಕಾರಿ ಜಾಗ ಒತ್ತುವರಿಯ ಆರೋಪ ಹೊರಿಸಿ, ಮೂರು ವರ್ಷಗಳಿಂದ ಕಿರುಕುಳ ನೀಡಿದ್ದಾರೆ. ವಿರಾಜಪೇಟೆ ಆರ್‌ಐ ನೀಡಿದ ಕಿರುಕುಳದಿಂದಾಗಿಯೇ ನನ್ನ ಜಾಗ ಮಾರಾಟ ಮಾಡಿದ್ದೇನೆ.-ಮೇಜರ್ ಕೆ.ಸುಶೀಲಾ ರಾಮದಾಸ್, ನಿವೃತ್ತ ಸೇನಾಧಿಕಾರಿ
---------------------------------------------------ಭೂಮಾಪಕರು ಮತ್ತು ಕಂದಾಯ ನಿರೀಕ್ಷಕರು ಮಾಡಿದ ತಪ್ಪಿನಿಂದ ತಲೆ ತಗ್ಗಿಸುವಂತಾಗಿದೆ. ತಪ್ಪಿತಸ್ಥ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲಾಗುವುದು. ಎಡಿಎಲ್‌ಆರ್ ಸಮ್ಮುಖದಲ್ಲಿ ಸರ್ವೇ ಮಾಡಿಸಿ ಒತ್ತುವರಿ ಜಾಗ ತೆರವುಗೊಳಿಸಲು ಕ್ರಮ ಕೈಗೊಳ್ಳಲಾಗುವುದು.-ಅನಂತಶಂಕರ್, ವಿರಾಜಪೇಟೆ ತಹಸೀಲ್ದಾರ್--------------------------------------------------------5.50 ಎಕರೆ ಸರ್ಕಾರಿ ಜಾಗ ಒತ್ತುವರಿ ಆಗಿರುವುದು ಸಂ.ನಂ.136/1 ರಲ್ಲಿಯೇ ಹೊರತು, ಸ.ನಂ. 136/1ಡಿ1 ರಲ್ಲಿ ಅಲ್ಲ. ಆದರೆ, ಖಾಸಗಿ ಜಾಗದಲ್ಲಿ ತಪ್ಪಾಗಿ ಫಲಕ ಅಳವಡಿಸಲಾಗಿತ್ತು.- ರಘುವೀರ್ ಭೂಮಾಪಕರು, ವಿರಾಜಪೇಟೆ