ಪ್ರಜಾಸೌಧ ಕಟ್ಟಡಕ್ಕೆ ಯೋಗ್ಯ ಜಾಗದ ವರದಿ ಸರ್ಕಾರಕ್ಕೆ

| Published : Sep 04 2025, 01:01 AM IST

ಸಾರಾಂಶ

ಈಗಾಗಲೇ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಮಂಜೂರು ಆಗಿದೆ. ಕಂದಾಯ ಸಚಿವರು ಹಾಗೂ ಸ್ಥಳೀಯ ಶಾಸಕರು ಸ್ಥಳ ಗುರುತಿಸಲು ತಿಳಿಸಿದ್ದು, ಅದರಂತೆ ಪ್ರಜಾಸೌಧ ಕಟ್ಟಡಕ್ಕೆ ಯೋಗ್ಯ ಜಾಗದ ವರದಿ ಸಿದ್ಧಪಡಿಸಿ ಸ್ಥಳೀಯರ ಅಭಿಪ್ರಾಯ ಪಡೆದು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಮ್ಮದ್‌ ರೋಷನ್‌ ಹೇಳಿದರು.

ಕನ್ನಡಪ್ರಭ ವಾರ್ತೆ ಕಾಗವಾಡ

ಈಗಾಗಲೇ ಪ್ರಜಾಸೌಧ ನಿರ್ಮಾಣಕ್ಕೆ ಸರ್ಕಾರದಿಂದ ಹಣ ಮಂಜೂರು ಆಗಿದೆ. ಕಂದಾಯ ಸಚಿವರು ಹಾಗೂ ಸ್ಥಳೀಯ ಶಾಸಕರು ಸ್ಥಳ ಗುರುತಿಸಲು ತಿಳಿಸಿದ್ದು, ಅದರಂತೆ ಪ್ರಜಾಸೌಧ ಕಟ್ಟಡಕ್ಕೆ ಯೋಗ್ಯ ಜಾಗದ ವರದಿ ಸಿದ್ಧಪಡಿಸಿ ಸ್ಥಳೀಯರ ಅಭಿಪ್ರಾಯ ಪಡೆದು ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಮ್ಮದ್‌ ರೋಷನ್‌ ಹೇಳಿದರು.

ಪಟ್ಟಣದ ಉರ್ದು ಶಾಲೆಯ ಹತ್ತಿರ ನೂತನ ಪ್ರಜಾಸೌಧ ನಿರ್ಮಾಣಕ್ಕೆ ಗುರುತಿಸಿರುವ ಸ್ಥಳಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲನೆ ಮಾಡಿ ಮಾತನಾಡಿದ ಅವರು, ಕಂದಾಯ ಸಚಿವರ ನಿರ್ದೇಶನದಂತೆ ಇಂದು ಪ್ರಜಾಸೌಧ ಜಾಗದ ಪರಿಶೀಲನೆ ಮಾಡಲಾಗಿದ್ದು, ಸತತ ಮಳೆಯ ಕಾರಣ ಮಣ್ಣು ಪರೀಕ್ಷೆ ನಡೆಸಲು ವಿಳಂಬವಾಗಿದೆ. ಮಳೆ ಕಡಿಮೆಯಾದ ಕೂಡಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಮಣ್ಣು ಪರೀಕ್ಷೆ ಮಾಡಿ ವರದಿ ನೀಡುವಂತೆ ಸೂಚನೆ ನೀಡಿದ್ದೇವೆ. ವರದಿ ಬಂದ ಬಳಿಕೆ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದು ತಿಳಿಸಿದರು.ಶಾಸಕ ರಾಜು ಕಾಗೆ ಮಾತನಾಡಿ, ಪಟ್ಟಣದಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ಸರ್ವೇ ನಂ.6ರಲ್ಲಿ ಗುರುತಿಸಿರುವ ಜಾಗ ಯೋಗ್ಯವಾಗಿದ್ದು, ಸದ್ಯ ಪಕ್ಕದಲ್ಲೇ ಮರಾಠಿ ಹಾಗೂ ಉರ್ದು ಶಾಲೆಗಳು ಹಾಗೂ ಪಶು ಆಸ್ಪತ್ರೆಯ ಕಟ್ಟಡ ಬಹಳ ವರ್ಷಗಳಿಂದ ಇದ್ದು, ಇದನ್ನು ಜಿಲ್ಲಾಧಿಕಾರಿಗಳು ಪರಿಶೀಲನೆ ನಡೆಸಿ ಸರ್ಕಾರಕ್ಕೆ ವರದಿ ನೀಡಬೇಕು. ನಾನು ಒಬ್ಬ ಜವಾಬ್ದಾರಿ ಸ್ಥಾನದಲ್ಲಿದ್ದು ಕಟ್ಟಡ ನಿರ್ಮಿಸಲು ಯೋಗ್ಯ ಜಾಗವನ್ನು ಗುರುತಿಸಿದ್ದೇನೆ. ₹8.60 ಕೊಟಿಗಳಿಗೆ ಗೃಹ ಮಂಡಳಿಗೆ ಕಟ್ಟಡದ ಗುತ್ತಿಗೆ ನೀಡಲಾಗಿದೆ. ಆದಷ್ಟು ಬೇಗ ವರದಿ ನೀಡಿ ಪ್ರಜಾಸೌಧ ನಿರ್ಮಾಣಕ್ಕೆ ಕ್ರಮಕೈಗೊಳ್ಳಬೇಕು ಎಂದು ತಿಳಿಸಿದರು.ಈ ವೇಳೆ ನ್ಯಾಯವಾದಿಗಳ ಸಂಘದ ಸದಸ್ಯರು ನ್ಯಾಯಾಲಯದ ಮಂಜೂರಾದ ಜಾಗದ ಪಹಣಿಯನ್ನು ಹಾಗೂ ಮಳೆಗಾಲದಲ್ಲಿ ನ್ಯಾಯಾಲಯದ ಕಡತಗಳಿಗೆ ಜಾಗದ ಸಮಸ್ಯೆ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಆದಷ್ಟು ಬೇಗ ಅದನ್ನು ಸರಿಪಡಿಸಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು.ಈ ವೇಳೆ ತಹಸೀಲ್ದಾರ್‌ ರವೀಂದ್ರ ಹಾದಿಮನಿ, ಉಪತಹಸೀಲ್ದಾರ್‌ ರಶ್ಮಿ ಜಕಾತಿ, ಅಣ್ಣಾಸಾಬ ಕೋರೆ, ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಲ್ಲಿಕಾರ್ಜುನ ಮಗದುಮ್ಮ, ಕಂದಾಯ ನಿರೀಕ್ಷಕ ಎಸ್.ಬಿ.ಮುಲ್ಲಾ, ಪಿಎಸೈ ರಾಘವೇಂದ್ರ ಖೋತ, ಗ್ರಾಮ ಲೆಕ್ಕಾಧಿಕಾರಿ ಕೆ.ಕೆ.ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.ಈ ಭಾಗದಲ್ಲಿ ಕಳೆದ 20 ವರ್ಷಗಳಿಂದ 5 ಬಾರಿ ಶಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ. ಯಾವುದು ಸರಿ, ತಪ್ಪು ಎನ್ನುವುದು ನನಗೆ ಗೊತ್ತಿದೆ. ಸರ್ಕಾರ ಟೆಂಡರ್‌ ಕರೆದು ಹಣ ಬಿಡುಗಡೆಗೊಳಿಸಿದರು, ಅಧಿಕಾರಿಗಳು ಅನುಮತಿ ನೀಡಬೇಕು. ಕಾಗವಾಡ ತಾಲೂಕು ಘೋಷಣೆಯಾಗಿ ಎಳೆಂಟು ವರ್ಷಗಳಾದರು ಇನ್ನು ಪೂರ್ಣ ಪ್ರಮಾಣದ ಕಚೇರಿಗಳು ಬಂದಿಲ್ಲ. ಎಲ್ಲ ಸರ್ಕಾರಿ ಕಚೇರಿಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಆದ್ದರಿಂದ ಜಿಲ್ಲಾಧಿಕಾರಿ ಕೂಡಲೇ ಪರಿಶೀಲಿಸಿ ಅನುಮತಿ ನೀಡಬೇಕು.

-ರಾಜು ಕಾಗೆ, ಶಾಸಕರು.