ಕನಕಪುರ: ಗ್ರಾಮೀಣ ಪ್ರದೇಶಗಳಲ್ಲಿ ಜೀವನೋಪಾಯಕ್ಕಾಗಿ ಜಾನಪದ ಕಲೆಗಳನ್ನೇ ಅವಲಂಬಿಸಿರುವ ಸಮುದಾಯಗಳ ಏಳಿಗೆಗಾಗಿ ಸಂಘ ಸಂಸ್ಥೆಗಳು ಜವಾಬ್ದಾರಿಯುತವಾಗಿ ಕಾರ್ಯ ನಿರ್ವಹಿಸಿದಾಗ ಮಾತ್ರ ನಶಿಸುತ್ತಿರುವ ಜಾನಪದ ಕಲೆಗಳನ್ನು ಸಂರಕ್ಷಿಸಲು ಸಾಧ್ಯ ಎಂದು ರಂಗಭೂಮಿ ಕಲಾವಿದ, ಕಿರುತೆರೆ ಹಾಗೂ ಬೆಳ್ಳಿತೆರೆ ನಟ ಎಂ.ಸಿ.ನಾಗರಾಜು ಹೇಳಿದರು. ತಾಲೂಕಿನ ಕೊಟ್ಟಗಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದುರ್ಗಾ ಪರಮೇಶ್ವರಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್‌ ಕಾರ್ಯದರ್ಶಿ ಕೆ.ಶಿವರಾಮು ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಮಾಜಿ ಸದಸ್ಯ ಕೆ.ಕಾಳಯ್ಯ ಸಾರಥ್ಯದಲ್ಲಿ ಆಯೋಜಿಸಿದ್ದ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.ಇತ್ತೀಚಿನ ದಿನಗಳಲ್ಲಿ ನಮ್ಮ ಸಂಸ್ಕೃತಿ ಪ್ರತಿಬಿಂಬವಾದ ಜಾನಪದ ಕಲೆಗಳು ಮರೆಯಾಗುತ್ತಿವೆ. ಈ ಕಲೆಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಗ್ರಾಮೀಣ ಮಟ್ಟದಲ್ಲಿ ಹೆಚ್ಚು ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಸಂಕಷ್ಟದಲ್ಲಿರುವ ಜಾನಪದ ಕಲಾವಿದರಿಗೆ ನೆರವಾಗಬೇಕು. ಸರ್ಕಾರಿ ಸೌಲಭ್ಯಗಳನ್ನು ಜನಪದ ಕಲಾವಿದರಿಗೆ ತಲುಪಿಸುವ ಕೆಲಸವನ್ನು ಸಂಘ ಸಂಸ್ಥೆಗಳು ಮಾಡಿದಾಗ ಮಾತ್ರ ನಮ್ಮ ಮುಂದಿನ ಪೀಳಿಗೆಗೆ ಜಾನಪದ ಕಲೆ, ಸಾಹಿತ್ಯ, ಪರಂಪರೆ ಉಳಿಸಲು ಸಾಧ್ಯ ಎಂದು ತಿಳಿಸಿದರು.ಆಕಾಶವಾಣಿ ಕಲಾವಿದ ಚಿಕ್ಕ ಮರೀಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿರುವ ಜಾನಪದ ಕಲಾವಿದರಲ್ಲಿ ಹೆಚ್ಚಿನವರು ಅವಿದ್ಯಾವಂತರು ಹಾಗೂ ಅಸಂಘಟಿತರಾಗಿದ್ದಾರೆ. ತಮ್ಮ ಕಲೆಗಳ ಪ್ರದರ್ಶನಕ್ಕೆ ಬೇಕಾದ ವಾದ್ಯ ಪರಿಕರಗಳನ್ನು ತಾವೇ ತಯಾರಿಸಿಕೊಂಡು ಪ್ರದರ್ಶನ ನೀಡುವುದು ಗಮನಾರ್ಹ ಸಂಗತಿ. ಆದರೆ ಸರ್ಕಾರದಿಂದ ಈ ಗ್ರಾಮೀಣ ಕಲಾವಿದರಿಗೆ ಸೂಕ್ತ ಪ್ರಾಶಸ್ತ್ಯ ಸಿಗದಿರುವುದರಿಂದ ಜಾನಪದ ಕಲೆಗಳನ್ನು ಜೀವನೋಪಾಯಕ್ಕಾಗಿ ನಂಬಿಕೊಂಡಿದ್ದ ಕಲಾವಿದರು ಜಾನಪದ ಕಲೆಗಳಿಂದ ದೂರ ಉಳಿಯುತ್ತಿದ್ದಾರೆ ಎಂದು ವಿಷಾದಿಸಿದರು.

ಕಸಾಪ ತಾಲೂಕು ಘಟಕದ ಅಧ್ಯಕ್ಷ ಶಿವಲಿಂಗಯ್ಯ ಮಾತನಾಡಿ, ಪ್ರತಿಯೊಂದು ಜಾನಪದ ಕಲೆಗಳು ಸಮಾಜಕ್ಕೆ ನಮ್ಮ ಸಂಸ್ಕೃತಿಯ ಇತಿಹಾಸದ ಸಂದೇಶ ಕೊಡುತ್ತವೆ. ಆದರೆ ಇಂದು ಸಾಂಸ್ಕೃತಿಕ ಕಲೆಗಳ ಅಧಃಪತನವಾಗುತ್ತಿದೆ. ನಮ್ಮ ಮುಂದಿನ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಜಾನಪದ ಕಲೆಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸಾಮುದಾಯಿಕ ಜವಾಬ್ದಾರಿಯನ್ನು ಎಲ್ಲರೂ ತೆಗೆದುಕೊಳ್ಳುವ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದಲ್ಲಿ ತಮಟೆ, ಪೂಜಾ ಕುಣಿತ, ವೀರಗಾಸೆ, ಪಟ್ಟದ ಕುಣಿತ ಮುಂತಾದ ಜಾನಪದ ಕಲಾ ತಂಡಗಳ ಮೆರವಣಿಗೆ ನಡೆಸಲಾಯಿತು. ನಾಲ್ಕು ಜನ ಜಾನಪದ ಕಲಾವಿದರಾದ ಜವಳಗೇರೆದೊಡ್ಡಿ ಶಿವಣ್ಣ, ದೊಡ್ಡ ಆಲಹಳ್ಳಿ ಲೋಕೇಶ್, ತಿಗಳರಹೊಸಹಳ್ಳಿ ಭದ್ರಗಿರಯ್ಯ, ಗುಗಾರೆದೊಡ್ಡಿ ಬಾಲಕೃಷ್ಣಯ್ಯರನ್ನು ಸನ್ಮಾನಿಸಲಾಯಿತು.

ಕರಾಪ್ರಾಶಾಶಿಸಂ ರಾಮನಗರ ಜಿಲ್ಲಾ ಗೌರವಾಧ್ಯಕ್ಷ ರಮೇಶ್, ಜಿಲ್ಲಾ ಉಪಾಧ್ಯಕ್ಷ ನೇ.ರ. ಪ್ರಭಾಕರ್, ತಾ.ಅಧ್ಯಕ್ಷ ಚಂದ್ರಶೇಖರ್, ಕೊಟ್ಟಗಾಳು ಗ್ರಾಪಂ ಅಭಿವೃದ್ಧಿ ಅಧಿಕಾರಿ ಭಾಗೀರಥಿ, ಬಿಜ್ಜಳ್ಳಿಯ ಸುಗ್ಗಿ ಸಾಂಸ್ಕೃತಿಕ ಟ್ರಸ್ಟ್ ವೆಂಕಟಚಲುವಯ್ಯ, ವಕೀಲ ಸುರೇಶ ಇತರರು ಉಪಸ್ಥಿತರಿದ್ದರು.

ಕೆ ಕೆ ಪಿ ಸುದ್ದಿ 01:


ಕನಕಪುರ ತಾಲೂಕಿನ ಕೊಟ್ಟಗಾಳು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ದುರ್ಗಾ ಪರಮೇಶ್ವರಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಟ್ರಸ್ಟ್‌ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸಹಯೋಗದಲ್ಲಿ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ನಡೆಯಿತು.