ಸಾರಾಂಶ
ಮಂಗಳೂರು : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆ ಸೇರಿದಂತೆ ಸರ್ಕಾರದ ಯಾವುದೇ ಯೋಜನೆಗಳು ಬಡವರು, ಶೋಷಿತರ ಉದ್ಧಾರಕ್ಕಾಗಿ ಹೊರತು ಶ್ರೀಮಂತರಿಗಲ್ಲ. ಗ್ಯಾರಂಟಿ ಯೋಜನೆಗಳನ್ನು ಶ್ರೀಮಂತರು ಪಡೆಯುತ್ತಿದ್ದು, ಅದಕ್ಕೆ ನಿಯಂತ್ರಣ ಹಾಕುವ ನಿಟ್ಟಿನಲ್ಲಿ ಚಿಂತನೆ ನಡೆಸುತ್ತಿದ್ದೇವೆ ಎಂದು ರಾಜ್ಯ ಆರೋಗ್ಯ ಸಚಿವ, ದ.ಕ. ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಮಂಗಳೂರಲ್ಲಿ ಶುಕ್ರವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಗ್ಯಾರಂಟಿ ಯೋಜನೆ ನಿಜವಾಗಿಯೂ ಯಾರು ಕಷ್ಟದಲ್ಲಿದ್ದಾರೆ, ಯಾರಿಗೆ ಅಗತ್ಯವಿದೆ ಅಂತಹ ಬಡವರಿಗೆ ತಲುಪಬೇಕು. ಫಲಾನುಭವಿಗಳಿಗೆ ಯೋಜನೆ ತಲುಪುವಲ್ಲಿ ಅನ್ಯಾಯವಾಗಬಾರದು. ಅಗತ್ಯವಿಲ್ಲದವರಿಗೆ ಕೊಟ್ಟು ಪ್ರಯೋಜನವಿಲ್ಲ ಎಂದರು.ದಾವಣಗೆರೆಯಲ್ಲಿ ಕಾಲರಾ ಪ್ರಕರಣದ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಅಲ್ಲಿ ಆಸ್ಪತ್ರೆ ವ್ಯವಸ್ಥೆ ಚೆನ್ನಾಗಿದೆ. ಸ್ಥಳೀಯಾಡಳಿತ ಜತೆ ಈ ಬಗ್ಗೆ ಮತನಾಡುತ್ತೇನೆ. ಚಿಕಿತ್ಸೆಗೆ ಬೇಕಾದ ವ್ಯವಸ್ಥೆಯನ್ನು ಇಲಾಖೆ ಮಾಡಲಿದೆ. ಪ್ರಕರಣಕ್ಕೆ ಸಂಬಂಧಿಸಿ ತಪಾಸಣೆ ನಡೆಸಲಾಗುತ್ತಿದ್ದು, ಕಲುಷಿತ ನೀರಾಗಿದ್ದರೆ ಸರಿಪಡಿಸಲಾಗುವುದು ಎಂದರು.
ಆಹಾರ ಸುರಕ್ಷತೆಗೆ ವಿಶೇಷ ಒತ್ತು: ರಾಜ್ಯದಲ್ಲಿ ಆಹಾರ ಗುಣಮಟ್ಟಪರಿಶೀಲನೆ ಮಾಡಲಾಗುತ್ತಿದೆ. ಆಹಾರದ ತಯಾರಿ, ಹೊಟೆಲ್, ರೆಸ್ಟೋರೆಂಟ್‌ಗಳಲ್ಲಿ ಪರಿಶೀಲನೆಗೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಕೇಕ್, ಖೋವಾ ಐಟಂ ಎಲ್ಲ ಪರೀಕ್ಷೆ ಮಾಡಿದ್ದೇವೆ. ಅದರ ವರದಿ ಇನ್ನಷ್ಟೇ ಬರಬೇಕಿದೆ. ಮುಂದಿನ ತಿಂಗಳು ಉಳಿದ ಆಹಾರ ಪದಾರ್ಥಗಳನ್ನು ಪರಿಶೀಲನೆಗೆ ತೆಗೆದುಕೊಳ್ಳುತ್ತೇವೆ. ಕೆಎಫ್‌ಸಿ ಸೇರಿದಂತೆ ನಾಲ್ಕು ಆಹಾರ ಉದ್ದಿಮೆಗಳ ಪರವಾನಿಗೆ ಅಮಾನತು ಮಾಡಲಾಗಿದೆ ಎಂದರು.
ಆರೋಗ್ಯ ಇಲಾಖೆಯ ವರ್ಗಾವಣೆಯಲ್ಲಿ ಅಕ್ರಮ ನಡೆದಿರುವ ಶಂಕೆ ಕುರಿತಂತೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಯಾವುದೇ ವರ್ಗಾವಣೆ ರೂಲ್ಸ್ ಪ್ರಕಾರ, ಸೀನಿಯಾರಿಟಿ ಪ್ರಕಾರ ಆಗಬೇಕು. ಶಿಫಾರಸು ಮಾಡಿದರೆ ವರ್ಗಾವಣೆಗೊಳಿಸುವ ಅಧಿಕಾರ ನಿರ್ದೇಶಕರಿಗೆ ಇದೆ. ಅದರಲ್ಲಿ ಲೋಪ ದೋಷಗಳಾಗಿರುವ ಬಗ್ಗೆ ನನಗೆ ಗೊತ್ತಿಲ್ಲ. ಹಾಗೇನಾದರೂ ಆಗಿದ್ದರೆ ಸರಿಪಡಿಸಿಕೊಳ್ಳಬಹುದು. ಅದು ಏನು ಎಂದು ನೋಡ್ತೀನಿ, ನಾನು ಅದರ ಬಗ್ಗೆ ತಿಳಿದುಕೊಂಡು ಮಾತನಾಡುತ್ತೇನೆ ಎಂದರು.