ಸರ್ಕಾರ ನಿಗದಿಪಡಿಸಿರುವ ೩.೨೫ ಲಕ್ಷ ರು. ಮಿತಿಯಿಂದಾಗಿ ಬೋರ್‌ವೆಲ್ ಆಳ ಹೆಚ್ಚಾದಾಗ ಬಡ ರೈತರು ತಮ್ಮ ಕೈಯಿಂದ ಹಣ ಹಾಕಬೇಕಾದ ಪರಿಸ್ಥಿತಿ ಇದೆ. ಬಡ ರೈತರಿಗೆ ಇದು ಹೊರೆಯಾಗಲಿದೆ. ಆದ್ದರಿಂದ ಬೋರ್‌ವೆಲ್ ಎಷ್ಟೇ ಆಳಕ್ಕೆ ಹೋದರೂ, ಅದಕ್ಕೆ ತಗಲುವ ಸಂಪೂರ್ಣ ವೆಚ್ಚ ಹಾಗೂ ಪಂಪ್ ಸೆಟ್ ಸಾಮಗ್ರಿಗಳನ್ನು ಸರ್ಕಾರವೇ ಭರಿಸುವಂತಾಗಬೇಕು. ಈ ನಿಟ್ಟಿನಲ್ಲಿ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಸಲಾಗುವುದು

ಕನ್ನಡಪ್ರಭ ವಾರ್ತೆ ಕೋಲಾರ

ಸರ್ಕಾರ ನಿಗದಿಪಡಿಸಿರುವ ೩.೨೫ ಲಕ್ಷ ರು. ಮಿತಿಯಿಂದಾಗಿ ಬೋರ್‌ವೆಲ್ ಆಳ ಹೆಚ್ಚಾದಾಗ ಬಡ ರೈತರು ತಮ್ಮ ಕೈಯಿಂದ ಹಣ ಹಾಕಬೇಕಾದ ಪರಿಸ್ಥಿತಿ ಇದೆ. ಬಡ ರೈತರಿಗೆ ಇದು ಹೊರೆಯಾಗಲಿದೆ. ಆದ್ದರಿಂದ ಬೋರ್‌ವೆಲ್ ಎಷ್ಟೇ ಆಳಕ್ಕೆ ಹೋದರೂ, ಅದಕ್ಕೆ ತಗಲುವ ಸಂಪೂರ್ಣ ವೆಚ್ಚ ಹಾಗೂ ಪಂಪ್ ಸೆಟ್ ಸಾಮಗ್ರಿಗಳನ್ನು ಸರ್ಕಾರವೇ ಭರಿಸುವಂತಾಗಬೇಕು. ಈ ನಿಟ್ಟಿನಲ್ಲಿ ನಿಯಮಾವಳಿಗಳಿಗೆ ತಿದ್ದುಪಡಿ ತರಲು ಸರ್ಕಾರದ ಮಟ್ಟದಲ್ಲಿ ಗಂಭೀರ ಚರ್ಚೆ ನಡೆಸಲಾಗುವುದು ಎಂದು ಶಾಸಕ ಕೊತ್ತೂರು ಮಂಜುನಾಥ್ ತಿಳಿಸಿದರು.

ನಗರದ ತಮ್ಮ ಕಚೇರಿ ಬಳಿ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದಿಂದ ಕೋಲಾರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅರ್ಹ ಫಲಾನುಭವಿಗಳಿಗೆ ಕೊರೆಸಲಾಗಿದ್ದ ಕೊಳವೆಬಾವಿಗಳಿಗೆ ಪಂಪು ಮೋಟಾರ್ ಪೈಪುಗಳನ್ನು ವಿತರಿಸಿ ಮಾತನಾಡಿದ ಅವರು ವಿವಿಧ ಕಾರಣಗಳಿಂದಾಗಿ ಕಳೆದ ೨೦೨೧-೨೨ ರಿಂದ ೨೦೨೩-೨೪ನೇ ಸಾಲಿನ ಬೋರ್‌ವೆಲ್ ಮತ್ತು ಪಂಪ್ ಸೆಟ್ ವಿತರಣಾ ಯೋಜನೆಗಳು ನೆನಗುದಿಗೆ ಬಿದ್ದಿದ್ದವು. ನಾವು ನಿರಂತರವಾಗಿ ಅಧಿಕಾರಿಗಳೊಂದಿಗೆ ಚರ್ಚಿಸಿ, ಓಡಾಡಿ, ಬಾಕಿ ಇದ್ದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದೇವೆ. ಇಂದು ಹಳೆಯ ಬಾಕಿ ಸೇರಿದಂತೆ ಒಟ್ಟು ೩೨ ಅರ್ಹ ಫಲಾನುಭವಿಗಳಿಗೆ ಪಂಪ್, ಮೋಟರ್, ಕೇಬಲ್ ಒಳಗೊಂಡ ಸಂಪೂರ್ಣ ಕಿಟ್‌ಗಳನ್ನು ವಿತರಿಸಲಾಗಿದೆ. ಅಲ್ಲದೆ, ೨೦೨೪-೨೫ನೇ ಸಾಲಿನ ಬೋರ್‌ವೆಲ್ ಕೊರೆಯುವ ಕಾಮಗಾರಿಗಳೂ ಪ್ರಗತಿಯಲ್ಲಿವೆ ಎಂದು ಮಾಹಿತಿ ನೀಡಿದರು.

ಪ್ರತಿ ಫಲಾನುಭವಿಗೆ ಒಟ್ಟು ೩,೨೫,೦೦೦ ರು. ಅನುದಾನ ನಿಗದಿಯಾಗಿದೆ. ಇದರಲ್ಲಿ ಬೋರ್‌ವೆಲ್ ಕೊರೆಯಲು ತಗಲುವ ವೆಚ್ಚವನ್ನು ಕಳೆದು, ಇನ್ನುಳಿದ ಬಾಕಿ ಮೊತ್ತದಲ್ಲಿ ಫಲಾನುಭವಿಗಳಿಗೆ ಅಗತ್ಯವಿರುವ ಪಂಪ್, ಮೋಟರ್ ಹಾಗೂ ಇತರ ಸಾಮಗ್ರಿ ಒದಗಿಸಲಾಗುತ್ತದೆ. ಬೋರ್‌ವೆಲ್ ಆಳ ಹೆಚ್ಚಾದಂತೆ ಸಾಮಗ್ರಿಗಳ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತದೆ ಇಲಾಖೆಯ ವತಿಯಿಂದ ಸಾಲ ಸೌಲಭ್ಯಗಳನ್ನು ಪಡೆದು ಕೃಷಿ ಚಟುವಟಿಕೆಗಳನ್ನು ನಡೆಸುವಂತೆ ಫಲಾನುಭವಿಗಳಿಗೆ ತಿಳಿಸಿದರು.

ಸಾರ್ವಜನಿಕರೊಬ್ಬರು ೨೦೧೯-೨೦ನೇ ಸಾಲಿನ ’ಪಂಚಮುಖಿ’ ಯೋಜನೆಯಡಿ ತಮಗೆ ಇನ್ನು ಪಂಪ್ ಸೆಟ್ ಸಿಕ್ಕಿಲ್ಲವೆಂದು ಶಾಸಕರ ಗಮನಕ್ಕೆ ತಂದರು. ಇದಕ್ಕೆ ತಕ್ಷಣವೇ ಸ್ಪಂದಿಸಿದ ಕೊತ್ತೂರು ಮಂಜುನಾಥ್, ಆ ಅವಧಿಯಲ್ಲಿ ಡ್ರಿಲ್ಲಿಂಗ್, ಪಂಪ್ ಹಾಗೂ ಮೋಟರ್ ಎಲ್ಲವನ್ನೂ ಸೇರಿಸಿ ಒಬ್ಬರೇ ಗುತ್ತಿಗೆದಾರರಿಗೆ ಟೆಂಡರ್ ನೀಡಲಾಗಿತ್ತು. ಆ ಗುತ್ತಿಗೆದಾರ ಕೆಲವು ಕಡೆ ಕೆಲಸ ಮಾಡಿ, ಬಾಕಿ ಉಳಿಸಿ ನಾಪತ್ತೆಯಾಗಿದ್ದಾನೆ. ಬರುವ ಶುಕ್ರವಾರದಂದು ನಾನೇ ಖುದ್ದಾಗಿ ಬೆಂಗಳೂರಿಗೆ ತೆರಳಿ ಎಂಡಿ ಅವರನ್ನು ಭೇಟಿಯಾಗಿ ಚರ್ಚಿಸುತ್ತೇನೆ. ನಿಯಮ ಉಲ್ಲಂಘಿಸಿರುವ ಗುತ್ತಿಗೆದಾರನ ವಿರುದ್ಧ ಪೊಲೀಸ್ ದೂರು ದಾಖಲಿಸಿಯಾದರೂ ಸರಿ, ಬಾಕಿ ಇರುವ ಫಲಾನುಭವಿಗಳಿಗೆ ನ್ಯಾಯ ಕೊಡಿಸುತ್ತೇನೆ, ಎಂದು ಆಶ್ವಾಸನೆ ನೀಡಿದರು.

ಎಂಎಲ್ಸಿ ಎಂ.ಎಲ್ ಅನಿಲ್ ಕುಮಾರ್, ಕುಡಾ ಅಧ್ಯಕ್ಷ ಮಹಮ್ಮದ್ ಹನೀಫ್, ಗ್ಯಾರಂಟಿ ಜಿಲ್ಲಾ ಅಧ್ಯಕ್ಷ ವೈ ಶಿವಕುಮಾರ್ ತಾಲೂಕು ಅಧ್ಯಕ್ಷ ವೇಮಗಲ್ ಮುನಿಯಪ್ಪ, ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೈಲಾಂಡಹಳ್ಳಿ ಮುರಳಿ, ನಗರ ಬ್ಲಾಕ್ ಅಧ್ಯಕ್ಷ ಸೈಯದ್ ಅಪ್ಸರ್, ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಮಹಾಲಿಂಗಪ್ಪ, ಗುತ್ತಿಗೆದಾರ ಬಾಬು, ಕಾಂಗ್ರೆಸ್ ಮುಖಂಡರಾದ ಪೆಮ್ಮಶೆಟ್ಟಿಹಳ್ಳಿ ಸುರೇಶ್, ಫೈರೋಜ್ ಖಾನ್, ನದೀಂ ಬೇಗ್, ವೀರೇಂದ್ರ ಪಾಟೀಲ್, ಜನ್ನಘಟ್ಟ ನವೀನ್, ರಾಜಕಲ್ಲಹಳ್ಳಿ ಶ್ರೀನಿವಾಸ್, ಧನಮಟ್ನಹಳ್ಳಿ ಲೋಕೇಶ್, ಚಿನ್ನಾಪುರ ನಾರಾಯಣಸ್ವಾಮಿ ಇದ್ದರು.