ನಿರ್ವಸಿತರಿಗೆ ಸರ್ಕಾರದಿಂದ ಮನೆ ನಿರ್ಮಾಣ: ಕಂದಾಯ ಸಚಿವ ಭರವಸೆ

| Published : Aug 01 2024, 12:18 AM IST

ಸಾರಾಂಶ

ಮಳೆಯಿಂದ ನಿರ್ವಸಿತರಿಗೆ ಸರ್ಕಾರ ಅಗತ್ಯ ಪರಿಹಾರ ನೀಡುವುದರ ಜೊತೆಗೆ ಸೂಕ್ತ ಸ್ಥಳದಲ್ಲಿ ಮನೆ ನಿರ್ಮಿಸಿ ಕೊಡಲಿದೆ. ಯಾರೂ ಸಹ ಆತಂಕಕ್ಕೆ ತುತ್ತಾಗಬಾರದು. ಸದ್ಯ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ಹೂಡುವಂತಾಗಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಡಿಕೇರಿ

ಮಳೆಯಿಂದ ನಿರ್ವಸಿತರಿಗೆ ಸರ್ಕಾರ ಅಗತ್ಯ ಪರಿಹಾರ ನೀಡುವುದರ ಜೊತೆಗೆ ಸೂಕ್ತ ಸ್ಥಳದಲ್ಲಿ ಮನೆ ನಿರ್ಮಿಸಿ ಕೊಡಲಿದೆ. ಯಾರೂ ಸಹ ಆತಂಕಕ್ಕೆ ತುತ್ತಾಗಬಾರದು. ಸದ್ಯ ಪರಿಹಾರ ಕೇಂದ್ರದಲ್ಲಿ ವಾಸ್ತವ್ಯ ಹೂಡುವಂತಾಗಬೇಕು ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಮನವಿ ಮಾಡಿದ್ದಾರೆ. ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಹಾಗೂ ಶಾಸಕ ಡಾ.ಮಂತರ್ ಗೌಡ ಅವರು ಕೊಡಗು ಜಿಲ್ಲೆಯ ಮಳೆ ಹಾನಿ ಪ್ರದೇಶಗಳಿಗೆ ಬುಧವಾರ ಭೇಟಿ ನೀಡಿ ವೀಕ್ಷಿಸಿದ ಅವರು ಸಂತ್ರಸ್ತರಿಗೆ ಸಾಂತ್ವನ ಹೇಳಿದರು.

ಕುಶಾಲನಗರ ತಾಲ್ಲೂಕಿನ ಹಾರಂಗಿ ಬಳಿಯ ಅತ್ತೂರು ಗ್ರಾಮಕ್ಕೆ ತೆರಳಿ, ಅಲ್ಲಿನ ಮನೆ ಹಾನಿ ವೀಕ್ಷಿಸಿದ ಸಚಿವದ್ವಯರು ಸಂತ್ರಸ್ತ ಕುಟುಂಬದವರಿಗೆ ಧೈರ್ಯ ತುಂಬಿದರು.

ಮುಂಗಾರು ಸಂದರ್ಭದಲ್ಲಿ ಅವಘಡಗಳನ್ನು ತಪ್ಪಿಸಿಕೊಳ್ಳುವುದು ಅತೀಮುಖ್ಯ. ಆ ನಿಟ್ಟಿನಲ್ಲಿ ಜೀವ ಉಳಿಸಿಕೊಳ್ಳುವತ್ತ ಗಮನಹರಿಸಬೇಕು ಎಂದು ಸಲಹೆ ಮಾಡಿದರು.

ವಾಲ್ನೂರು ತ್ಯಾಗತ್ತೂರು ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಭೇಟಿ ನೀಡಿ ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು.

ಪ್ರವಾಹ ಪೀಡಿತ ಮತ್ತು ಭೂಕುಸಿತ ಪ್ರದೇಶದ ಜನರು ಭಾರಿ ಮಳೆ ಸಂದರ್ಭ ಕಾಳಜಿ ಕೇಂದ್ರಕ್ಕೆ ಸ್ಥಳಾಂತರವಾಗುವುದು ಅತೀ ಮುಖ್ಯವಾಗಿದೆ. ಜೀವ ಉಳಿಸಿಕೊಂಡಲ್ಲಿ ಮುಂದೆ ಏನಾದರೂ ಸಾಧನೆ ಮಾಡಬಹುದು. ಆ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಮುನ್ನೆಚ್ಚರವಹಿಸಬೇಕು ಎಂದು ಸಚಿವದ್ವಯರು ಹೇಳಿದರು.

ಸಂತ್ರಸ್ತರು ಆರೋಗ್ಯ ಕಡೆ ಗಮನಹರಿಸಬೇಕು. ಕಾಳಜಿ ಕೇಂದ್ರದಲ್ಲಿ ಎಲ್ಲಾ ರೀತಿಯ ಮೂಲ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಸಮಸ್ಯೆಗಳಿದ್ದಲ್ಲಿ ತಹಸೀಲ್ದಾರರು ಅಥವಾ ಜಿಲ್ಲಾಡಳಿತದ ಗಮನಕ್ಕೆ ತರಬೇಕು ಎಂದು ಹೇಳಿದರು.

ಶಾಸಕ ಡಾ.ಮಂತರ್ ಗೌಡ ಮಾತನಾಡಿ, ಸರ್ಕಾರ ಸಂತ್ರಸ್ತರಿಗೆ ಅಗತ್ಯ ಮೂಲಸೌಲಭ್ಯ ಒದಗಿಸಲಿದ್ದು, ಯಾರೂ ಸಹ ಆತಂಕಕ್ಕೆ ತುತ್ತಾಗಬಾರದು. ಧೈರ್ಯದಿಂದ ಬದುಕು ಕಟ್ಟಿಕೊಳ್ಳುವತ್ತ ಮುನ್ನಡೆಯಬೇಕು ಎಂದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಉಪ ವಿಭಾಗಾಧಿಕಾರಿ ವಿನಾಯಕ ನರ್ವಾಡೆ, ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸುಂದರರಾಜ್, ತಹಸೀಲ್ದಾರ್ ಕಿರಣ್ ಗೌರಯ್ಯ, ಕುಶಾಲನಗರ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ, ಕುಶಾಲನಗರ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರು, ಕೆಡಿಪಿ ಸದಸ್ಯರಾದ ಸುನಿತಾ, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣ ಪ್ರಸಾದ್ ಮತ್ತಿತರರು ಇದ್ದರು.