ಮಾರ್ಚ್‌ 9ರಂದು ಸರ್ಕಾರದಿಂದ ಧಾರವಾಡದಲ್ಲಿ ಉದ್ಯೋಗ ಮೇಳ

| Published : Mar 07 2025, 12:46 AM IST

ಮಾರ್ಚ್‌ 9ರಂದು ಸರ್ಕಾರದಿಂದ ಧಾರವಾಡದಲ್ಲಿ ಉದ್ಯೋಗ ಮೇಳ
Share this Article
  • FB
  • TW
  • Linkdin
  • Email

ಸಾರಾಂಶ

ಮಾ. 9ರಂದು ಧಾರವಾಡದ ಕರ್ನಾಟಕ ಕಾಲೇಜು ಆವರಣದಲ್ಲಿ ಕೌಶಲ್ಯ ರೋಜಗಾರ - ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ. ಮೇಳದ ನೋಂದಣಿ ಪ್ರಕ್ರಿಯೆ ಫೆ. 25ರಿಂದ ಆರಂಭಿಸಲಾಗಿದೆ. ಇಲ್ಲಿಯವರೆಗೆ ನಾಲ್ಕು ಸಾವಿರ ಉದ್ಯೋಗ ಆಕಾಂಕ್ಷಿಗಳು ಆನ್‌ಲೈನ್ ನೋಂದಣಿ ಪಡೆದಿದ್ದು, ಮಾ. 7 ಕೊನೆ ದಿನ.

ಧಾರವಾಡ: ಸರ್ಕಾರದ ನಿರ್ದೇಶನದಂತೆ ಮಾ. 9ರಂದು ನಗರದ ಕರ್ನಾಟಕ ಕಾಲೇಜು ಆವರಣದಲ್ಲಿ ಕೌಶಲ್ಯ ರೋಜಗಾರ - ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದ್ದು, ಸಿದ್ಧತೆಗಳು ಆರಂಭವಾಗಿವೆ ಎಂದು ಜಿಲ್ಲಾಧಿಕಾರಿ ದಿವ್ಯ ಪ್ರಭು ತಿಳಿಸಿದರು.

ಕರ್ನಾಟಕ ಕಾಲೇಜು ಆವರಣಕ್ಕೆ ಗುರುವಾರ ಭೇಟಿ ನೀಡಿ ಉದ್ಯೋಗಮೇಳದ ಸಿದ್ಧತೆ ಪರಿಶೀಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮೇಳದ ನೋಂದಣಿ ಪ್ರಕ್ರಿಯೆ ಫೆ. 25ರಿಂದ ಆರಂಭಿಸಲಾಗಿದೆ. ಇಲ್ಲಿಯವರೆಗೆ ನಾಲ್ಕು ಸಾವಿರ ಉದ್ಯೋಗ ಆಕಾಂಕ್ಷಿಗಳು ಆನ್‌ಲೈನ್ ನೋಂದಣಿ ಪಡೆದಿದ್ದು, ಮಾ. 7 ಕೊನೆ ದಿನ. ಆದರೂ ಮಾ. 9ರಂದು ಸ್ಥಳದಲ್ಲಿ ನೋಂದಣಿ ಮಾಡಿ ಸಂದರ್ಶನಕ್ಕೆ ಹಾಜರಾಗಲು ಅವಕಾಶವಿದೆ.

ಉದ್ಯೋಗ ನೀಡುವ ಕಂಪನಿಗಳು ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಇವತ್ತಿನವರೆಗೆ 65 ಕೈಗಾರಿಕೆಗಳು, 25 ಮಾನವ ಸಂಪನ್ಮೂಲ ಸಂಸ್ಥೆಗಳು ಭಾಗಿಯಾಗಲು ನೋಂದಾಯಿಸಿಕೊಂಡಿವೆ. ವಿವಿಧ ಕೌಶಲ್ಯ ಹಾಗೂ ಶೈಕ್ಷಣಿಕ ಹಿನ್ನಲೆಯುಳ್ಳ ಸುಮಾರು 3 ಸಾವಿರ ಉದ್ಯೋಗಿಗಳ ಅಗತ್ಯವಿದ್ದು, ಉದ್ಯೋಗ ನೀಡುವ ಭರವಸೆ ನೀಡಿವೆ ಎಂದು ಅವರು ಹೇಳಿದರು.

ಹೆಲ್ಫ್ ಡೆಸ್ಕ್‌ ಇರಲಿದೆ: ಮಾ. 9ರಂದು ಬೆಳಗ್ಗೆ 9ರಿಂದ ಸಂಜೆ 5ರ ವರೆಗೆ ಮೇಳ ಮಾಡುವುದಕ್ಕೆ ಎಲ್ಲ ಸಿದ್ಧತೆ ಮಾಡಿಕೊಂಡಿದ್ದೇವೆ. ಇಲ್ಲಿ ಬರುವ ಅಭ್ಯರ್ಥಿಗಳಿಗೆ ಅಗತ್ಯ ಎಲ್ಲ ಅನುಕೂಲಗಳನ್ನು ಮಾಡಿದ್ದೇವೆ. ಕೆಸಿಡಿ ಪ್ರವಾಸೋದ್ಯಮ ವಿಭಾಗ, ಡಾ. ವಿ.ಕೃ. ಗೋಕಾಕ ಗ್ರಂಥಾಲಯ ಸೇರಿದಂತೆ ಕಾಲೇಜಿನ ವಿವಿಧೆಡೆ ಉದ್ಯೋಗ ಆಕಾಂಕ್ಷಿಗಳ ಸಂದರ್ಶನಕ್ಕೆ ಸಿದ್ಧತೆ ನಡೆದಿದೆ. ಸಂದರ್ಶನಕ್ಕಾಗಿ ಐಟಿಐ, ಡಿಪ್ಲೊಮಾ, ಎಸ್‌ಎಸ್‌ಎಲ್‌ಸಿ, ಪಿಯುಸಿ ಮಾಡಿದವರಿಗೆ ಪ್ರತ್ಯೇಕ ಕೊಠಡಿ ಮತ್ತು ಎಂಜಿನಿಯರಿಂಗ್‌ ಮತ್ತು ಸ್ನಾತಕೋತ್ತರ ಪದವಿ ಮಾಡಿದವರಿಗೆ ಪ್ರತ್ಯೇಕ ಕೊಠಡಿ ರೂಪಿಸಲಾಗುತ್ತಿದೆ. ಅಂಗವಿಕಲರಿಗೆ ಪ್ರತ್ಯೇಕವಾಗಿ ಕೊಠಡಿಗಳನ್ನು ಮಾಡಿದ್ದೇವೆ. ಉದ್ಯೋಗ ಬಯಸಿ ಬರುವ ಯುವಸಮುದಾಯಕ್ಕೆ ಸರಿಯಾದ ಮಾಹಿತಿ, ಮಾರ್ಗದರ್ಶನ ನೀಡಲು ಸುಮಾರು 20ರಿಂದ 25 ಹೆಲ್ಪ್ ಡೆಸ್ಕ್ ತೆರೆಯಲಾಗುತ್ತದೆ ಎಂದರು.

ಕೆಲವು ಕೈಗಾರಿಕೆಗಳು, ಸರ್ಕಾರಿ ಕೈಗಾರಿಕೆಗಳು ಸಹ ಉದ್ಯೋಗ ಮೇಳದಲ್ಲಿ ಇರುವುದರಿಂದ ಬೇರೆ ಬೇರೆ ವಿದ್ಯಾರ್ಹತೆ ಹೊಂದಿದವರಿಗೆ ಅವಕಾಶವಿದೆ. ಕಂಪನಿಯವರು ವಿದ್ಯಾರ್ಥಿಗಳಿಗೆ ಸಂವಾದ, ಕೌನ್ಸೆಲಿಂಗ್‌ನಲ್ಲಿ ಹುದ್ದೆ, ವೇತನ ಮತ್ತು ಇತರ ವಿಷಯದ ಕುರಿತು ಮಾಹಿತಿ ನೀಡುತ್ತಾರೆ.

ಉದ್ಯೋಗ ಮೇಳದ ಯಶಸ್ವಿ ಆಯೋಜನೆಗಾಗಿ ವಿವಿಧ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಲಾಗುತ್ತದೆ. ನೂರು ಸ್ವಯಂಸೇವಕರನ್ನು ಸಹ ನೇಮಿಸಲಾಗುತ್ತದೆ. ಕುಡಿಯುವ ನೀರು, ಶೌಚಾಲಯ, ವೇಟಿಂಗ್ ಸ್ಥಳ, ಎಲ್ಲ ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ಉದ್ಯೋಗಮೇಳದ ಶಿಸ್ತುಬದ್ಧ ಸಂಘಟಿಸಲು ಉಪವಿಭಾಗಾಧಿಕಾರಿಗಳನ್ನು ನೋಡಲ್ ಅಧಿಕಾರಿಯಾಗಿ ನೇಮಿಸಿದ್ದು, ಜಿಲ್ಲಾ ಕೌಶಲ್ಯ ಅಧಿಕಾರಿ, ಜಿಪಂ ಯೋಜನಾ ನಿರ್ದೇಶಕರು ಸೇರಿದಂತೆ ಇತರ ಅಧಿಕಾರಿಗಳು ಉದ್ಯೋಗಮೇಳದ ಸಿದ್ಧತೆ ಮಾಡುತ್ತಿದ್ದಾರೆ ಎಂದರು.

ಜಿಪಂ ಸಿಇಒ ಭುವನೇಶ ಪಾಟೀಲ ಸಿದ್ಧತೆ ಕುರಿತು ಮಾತನಾಡಿದರು. ಪೊಲೀಸ್ ಆಯುಕ್ತ ಎನ್. ಶಶಿಕುಮಾರ ಮಾತನಾಡಿ, ಉದ್ಯೋಗಮೇಳಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಯಾವುದೇ ತೊಂದರೆ ಆಗದಂತೆ ಸಂಚಾರ ಮಾರ್ಗ, ಪ್ರತ್ಯೇಕವಾಗಿ ವಾಹನಗಳ ನಿಲುಗಡೆಗೆ ಸ್ಥಳ ಗುರುತಿಸಲಾಗಿದೆ. ಕೆಸಿಡಿ ಮುಖ್ಯದ್ವಾರದ ಹತ್ತಿರದ ಮೈದಾನದಲ್ಲಿ ವಾಹನ ಪಾರ್ಕಿಂಗ್‌ಗೆ ಸ್ಥಳ ನಿಗದಿಗೊಳಿಸಲಾಗಿದೆ ಎಂದರು.

ಉಪವಿಭಾಗಾಧಿಕಾರಿ ಶಾಲಂ ಹುಸೇನ್, ಉಪ ಪೊಲೀಸ್ ಆಯುಕ್ತ ರವೀಶ ಸಿ.ಆರ್., ಸಹಾಯಕ ಪೊಲೀಸ್‌ ಆಯುಕ್ತ ಪ್ರಶಾಂತ ಸಿದ್ದನಗೌಡರ, ಧಾರವಾಡ ತಹಸೀಲ್ದಾರ್‌ ಡಿ.ಎಚ್. ಹೂಗಾರ ಮತ್ತಿತರರು ಇದ್ದರು.