ಸಾರಾಂಶ
ತೀರ್ಥಹಳ್ಳಿ: ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರವನ್ನು ದೇವರೇ ಕಾಪಾಡಬೇಕಿದೆ. ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ 25 ಸಾವಿರ ರು. ವೇತನ ನೀಡುವ ಅಗತ್ಯವಿದೆಯೇ ಎಂದು ಶಾಸಕ ಆರಗ ಜ್ಞಾನೇಂದ್ರ ಟೀಕಿಸಿದರು.
ತೀರ್ಥಹಳ್ಳಿ: ಗ್ಯಾರಂಟಿ ಯೋಜನೆಗಳಿಂದಾಗಿ ರಾಜ್ಯ ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದ್ದು, ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ರಾಜ್ಯ ಸರ್ಕಾರವನ್ನು ದೇವರೇ ಕಾಪಾಡಬೇಕಿದೆ. ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷರಿಗೆ 25 ಸಾವಿರ ರು. ವೇತನ ನೀಡುವ ಅಗತ್ಯವಿದೆಯೇ ಎಂದು ಶಾಸಕ ಆರಗ ಜ್ಞಾನೇಂದ್ರ ಟೀಕಿಸಿದರು.ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಪಟ್ಟಣದ ಸುವರ್ಣ ಸಹಕಾರ ಭವನದಲ್ಲಿ ಶನಿವಾರ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ 8ನೇ ತಾಲೂಕು ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿರುವ ಭರವಸೆಯಂತೆ 6ನೇ ಗ್ಯಾರಂಟಿಯಾಗಿ ಅಂಗನವಾಡಿ ಕಾರ್ಯಕರ್ತೆಯರ ವೇತನವನ್ನು 15 ಸಾವಿರಕ್ಕೆ ಏರಿಸಬೇಕು. ಈ ಬಗ್ಗೆ ಸದನದಲ್ಲಿ ಧ್ವನಿ ಎತ್ತುಲಾಗುವುದು ಎಂದು ತಿಳಿಸಿದರು.ಅಂಗನವಾಡಿ ಕಾರ್ಯಕರ್ತೆಯರಿಗೆ ಕನಿಷ್ಠ ವೇತನ ನೀಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಸರ್ಕಾರ ಈ ಬಾರಿಯ ಮುಂಗಡ ಪತ್ರದಲ್ಲಿ ವೇತನವನ್ನು ಕೇವಲ ಒಂದು ಸಾವಿರ ರು. ಮಾತ್ರ ಏರಿಕೆ ಮಾಡಿದೆ. ಈ ಕಾರ್ಯಕರ್ತೆಯರ ಸೇವೆ ಅತ್ಯಂತ ಅಮೂಲ್ಯವಾಗಿದ್ದು ಅವರ ಬೇಡಿಕೆಗಳು ನ್ಯಾಯಯುತವಾಗಿವೆ. ರಾಜ್ಯ ಸರ್ಕಾರ ಚುನಾವಣೆ ಪೂರ್ವದಲ್ಲಿ ನೀಡಿರುವ ಆಶ್ವಾಸನೆಯಂತೆ ಕನಿಷ್ಠ ವೇತನವನ್ನು ನೀಡಬೇಕು ಎಂದು ಆಗ್ರಹಿಸಿದರು.ರಾಜ್ಯ ಸರ್ಕಾರ ಗ್ಯಾರಂಟಿ ಯೋಜನೆಗಳಿಗಾಗಿ ಎಸ್‍ಸಿ, ಎಸ್‍ಟಿ ಪಂಗಡಗಳಿಗೆ ಕಾಯ್ದಿರಿಸಿದ ಹಣವನ್ನು ದುರ್ಬಳಕೆ ಮಾಡಿಕೊಂಡಿದೆ ಎಂದು ದೂರಿದ ಅವರು, ಕೇಂದ್ರ ಸರ್ಕಾರದ ಸಂಜೀವಿನಿ ಯೋಜನೆಯಲ್ಲಿ ಜಿಲ್ಲೆಗೆ 74 ಕೋಟಿ ರು ಅನುದಾನ ಬಂದಿದ್ದು ಇದರಲ್ಲಿ ತಾಲೂಕಿಗೆ 11 ಕೋಟಿ ರು ಹಣ ಬಂದಿದೆ. ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥಗೌಡ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರ ದುಡಿಮೆಗೆ ಸರಿಯಾದ ವೇತನ ದೊರೆಯುವಂತಾಗಬೇಕು. ಇದರಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಹೊಣೆಗಾರಿಕೆ ಇದೆ ಎಂದರು.
ರಾಜ್ಯಕ್ಕೆ ನ್ಯಾಯಯುತವಾಗಿ ನೀಡಬೇಕಾದ ಅನುದಾನ ನೀಡುವಲ್ಲಿ ಕೇಂದ್ರ ಸರ್ಕಾರ ತಾರತಮ್ಯ ನೀತಿಯನ್ನು ತಾಳಿದೆ. ಮಹಿಳೆಯರು ಮತ್ತು ಸಾಮಾಜಿಕ ನ್ಯಾಯದ ಬಗೆಗೆ ಕಾಳಜಿ ಹೊಂದಿರುವ ಕಾರಣದಿಂದಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 52 ಸಾವಿರ ಕೋಟಿ ರು. ವೆಚ್ಚದ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದಿರುವುದನ್ನು ಜನತೆ ಮರೆಯಬಾರದು ಎಂದರು.ಪ್ರಾಸ್ತಾವಿಕವಾಗಿ ಮಾತನಾಡಿದ ತಾಲೂಕು ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸಂಘದ ಅಧ್ಯಕ್ಷೆ ಗಾಯಿತ್ರಿ ಹೆಗ್ಡೆ, ದಶಕಗಳಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸಲ್ಲಿಸುತ್ತಿರುವ ಬೇಡಿಕೆಗಳು ಈಡೇರುತ್ತಿಲ್ಲಾ. ಸರ್ಕಾರ ಅಗತ್ಯ ಸವಲತ್ತಿನೊಂದಿಗೆ ನಮ್ಮ ಕೆಲಸಕ್ಕೆ ಸರಿಯಾದ ಕೂಲಿ ಕೊಡಬೇಕು. ಮತ್ತು ತಾಲೂಕಿನ ಅಂಗನವಾಡಿಗಳನ್ನು ಮೇಲ್ದರ್ಜೆಗೆ ಏರಿಸಬೇಕು ಎಂದು ಒತ್ತಾಯಿಸಿದರು.ವೇದಿಕೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯರ ಫೆಡರೇಶನ್ ಅಧ್ಯಕ್ಷ ಅಮ್ಜದ್, ಕಾರ್ಯದರ್ಶಿ ಜಯಮ್ಮ, ಸಂಚಾಲಕ ಎನ್.ರವೀಂದ್ರ ನಾಯಕ್, ವಿಶಾಲಾಕ್ಷಿ, ಪಪಂ ಅಧ್ಯಕ್ಷ ರಹಮತ್ ಉಲ್ಲಾ ಅಸಾದಿ, ಸಹಕಾರಿ ಮುಖಂಡ ಕೆ.ನಾಗರಾಜ ಶೆಟ್ಟಿ ಇದ್ದರು.