ರಾಮನಗರ: ರೈತರಿಗೆ ಬರ ಪರಿಹಾರ ಹಾಗೂ ವಿಶೇಷ ಚೇತನರಿಗೆ ಮಾಸಾಶನ ಕೊಡಲು ಹಣ ಇಲ್ಲ. ಕಾಂಗ್ರೆಸ್ ಸರ್ಕಾರದ ಖಜಾನೆಯೂ ಖಾಲಿ ಆಗಿ ಹೋಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು
ರಾಮನಗರ: ರೈತರಿಗೆ ಬರ ಪರಿಹಾರ ಹಾಗೂ ವಿಶೇಷ ಚೇತನರಿಗೆ ಮಾಸಾಶನ ಕೊಡಲು ಹಣ ಇಲ್ಲ. ಕಾಂಗ್ರೆಸ್ ಸರ್ಕಾರದ ಖಜಾನೆಯೂ ಖಾಲಿ ಆಗಿ ಹೋಗಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತೀವ್ರ ವಾಗ್ದಾಳಿ ನಡೆಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ವಿಶೇಷ ಚೇತನರು ರಾಮನಗರದಿಂದ ವಿಧಾನಸೌಧದವರೆಗೆ ಹಮ್ಮಿಕೊಂಡಿರುವ ಪಾದಯಾತ್ರೆಗೆ ಚಾಲನೆ ನೀಡುವುದಕ್ಕೂ ಮುನ್ನ ಮಾತನಾಡಿದ ಅಶೋಕ್, ಅನ್ಯಾಯ ಮತ್ತು ತುಳಿತಕ್ಕೆ ಒಳಗಾದವರ ಪರವಾಗಿ ಇರಬೇಕೆಂದು ಸಂವಿಧಾನ ಹೇಳುತ್ತದೆ. ಆ ಸಂವಿಧಾನದ ಪುಸ್ತಕವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಜೇಬಿನಲ್ಲಿ ಇಟ್ಟುಕೊಂಡು ಓಡಾಡುತ್ತಾರೆ. ಬಹುಶ ಆ ಪುಸ್ತಕ ಖಾಲಿ ಇರಬೇಕು. ಸರ್ಕಾರದ ಖಜಾನೆಯೂ ಖಾಲಿ ಆಗಿದೆ ಎಂದು ವ್ಯಂಗ್ಯವಾಡಿದರು.ಬರಗಾಲದಲ್ಲಿ ರೈತರು ಕಣ್ಣೀರಿಡುತ್ತಿದ್ದರೆ, ವೇತನ ಹೆಚ್ಚಳವಾಗದೆ, ಮಾಸಾಶನ ಸಿಗದೆ ಅಂಗವಿಕಲರ ಮನೆಗಳ ದೀಪ ಆರಿ ಹೋಗಿದೆ. ಆ ದೀಪಗಳನ್ನು ಬೆಳಗುವ ಯೋಗ್ಯತೆ ಇಲ್ಲದ ಮುಖ್ಯಮಂತ್ರಿಗಳು ದಸರಾದಲ್ಲಿ ದೀಪಾಲಂಕಾರ ಉದ್ಘಾಟಿಸಲು ಹೋಗಿದ್ದರು. 2 ಗಂಟೆ ವಿದ್ಯುತ್ ಕೊಡಲಾಗದಿದ್ದರೂ ಆಡಂಬರದ ದಸರಾ ಮಾಡಿಕೊಂಡು ದುಂದು ವೆಚ್ಚ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಈ ಸರ್ಕಾರ ಸಂಪೂರ್ಣದಿವಾಳಿ ಆಗಿದೆ ಅಂತ ಹಣಕಾಸು ಇಲಾಖೆಯೇ ಒಪ್ಪಿಕೊಂಡಿದೆ. ಆದರೂ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಣ ಇದೆ ಅಂತಾರೆ. ಹಾಗಾದರೆ ವಿಕಲಚೇತನರಿಗೆ ಹಣ ಬಿಡುಗಡೆ ಮಾಡಲಿ. 5 ತಿಂಗಳಿಂದ ವಿಶೇಷ ಚೇತನರಿಗೆ ಮಾಸಾಶನ ಕೊಡುತ್ತಿಲ್ಲ ಅಂದರೆ ಸರ್ಕಾರಕ್ಕೆ ನಾಚಿಕೆ ಆಗೋದಿಲ್ವಾ ಎಂದು ಕಿಡಿಕಾರಿದರು.ಈ ಹಿಂದೆ ಬರ ಬಂದಾಗ ರೈತರಿಗೆ 18 ರಿಂದ 40 ಸಾವಿರ ಪರಿಹಾರ ಕೊಟ್ಟಿದ್ದೇವೆ. ಆದರೆ, ಕಾಂಗ್ರೆಸ್ ಸರ್ಕಾರ 2500 ರುಪಾಯಿ ಪರಿಹಾರ ಘೋಷಿಸಿದೆ. ಕೇವಲ ಮೂರು ದಿನ ಕೂಲಿಗೆ ಹೋದರೆ ಆ ಹಣ ಸಂಪಾದಿಸಬಹುದು. ನಿಮ್ಮ ಯೋಗ್ಯತೆ ಇಷ್ಟೇ ಎಂದು ರೈತರೇ ಪರಿಹಾರ ಹಣದ ಜೊತೆಗೆ 100 ರುಪಾಯಿ ಸೇರಿಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ವಾಪಸ್ ಕೊಡುತ್ತಿದ್ದಾರೆ.
ವಿಕಲಚೇತನರ ಶಾಪ ತಟ್ಟದೆ ಬಿಡಲ್ಲ:ಮುಖ್ಯಮಂತ್ರಿಗಳ ತವರು ಜಿಲ್ಲೆಯಲ್ಲಿಯೇ ಹೋರಾಟ ನಡೆಸುತ್ತಿದ್ದರು ವಿಶೇಷಚೇತನರನ್ನು ಕರೆದು ಮಾತನಾಡುವ ಸೌಜನ್ಯ ತೋರಿಸಿಲ್ಲ. ನಿಮ್ಮ ಬೇಡಿಕೆಗಳಲ್ಲಿ ಎಲ್ಲವನ್ನು ಅಲ್ಲದಿದ್ದರು ಕೆಲವನ್ನಾದರು ಈಡೇರಿಸಬಹುದಿತ್ತು. ಆದರೆ, ಇದು ಬಂಡೆ ಸರ್ಕಾರ ಎಂಬುದನ್ನು ಸಾಬೀತು ಮಾಡಿದೆ. ನೀವು ಪಾದಯಾತ್ರೆ ಮಾಡಿದರೆ ಸರ್ಕಾರಕ್ಕೆ ಶಾಪ ತಟ್ಟದೆ ಬಿಡಲ್ಲ. ನಿಮ್ಮ ಕಣ್ಣೀರಿಗೆ ಈ ಸರ್ಕಾರ ಭಸ್ಮವಾಗುತ್ತದೆ ಎಂದು ಎಚ್ಚರಿಸಿದರು.
ತಿಂಗಳಿಂದ ನೀವು ಸತ್ಯಾಗ್ರಹ ನಡೆಸುತ್ತಿದ್ದೀರಿ. ಸರ್ಕಾರಕ್ಕೆ ಮಾನ ಮರ್ಯಾದೆ ಇದ್ದಿದ್ದರೆ ನಿಮ್ಮಲ್ಲಿಗೆ ಬರಬೇಕಾಗಿತ್ತು. ಆದರೆ, ಬೆಳಗ್ಗೆಯಾದರೆ ಸಾಕು ಸರ್ಕಾರ ಸ್ಟಿಂಗ್ ಸ್ಟಂಗ್ ನಲ್ಲಿಯೇ ಮುಳುಗಿ ಹೋಗಿದೆ. ರೈತರು, ದೀನ ದಲಿತರು ಹಾಗೂ ವಿಕಲಚೇತನರ ಬಗ್ಗೆ ಕಾಳಜಿಯೇ ಇಲ್ಲದಂತಾಗಿದೆ. ಈ ಸರ್ಕಾರ ಬೇಡಿಕೆ ಈಡೇರಿಸುತ್ತಾರೊ ಇಲ್ಲವೊ ಎಂಬುದು ಪಾದಯಾತ್ರೆ ಮೂಲಕವೇ ಫೈನಲ್ ಆಗಬೇಕು. ಅಲ್ಲಿವರೆಗೆ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ. ಗಾಂಧಿ ಮಾರ್ಗದಲ್ಲಿ ಶಾಂತಿಯುತ ಹೋರಾಟ ಮುಂದುವರಿಯಲಿದೆ ಎಂದು ಅಶೋಕ್ ಎಚ್ಚರಿಕೆ ನೀಡಿದರು.ನಿಮ್ಮ ಹೋರಾಟಕ್ಕೆ ಸರ್ಕಾರ ಹೆದರಿದೆ :
ನಿಮ್ಮ ವಿರುದ್ಧ ಯಾರು ಶಿಸ್ತು ಕ್ರಮ ಕೖಗೊಳ್ಳುತ್ತಾರೊ ನಾನು ನೋಡುತ್ತೇನೆ. ಯಾರನ್ನಾದರು ಅಮಾನುತು ಮಾಡಿದರೆ ಆ ಕಮಿಷನರ್ ಜನ್ಮ ಜಾಲಾಡಿ ಬಿಡುತ್ತೇನೆ. ಪರಿಹಾರ ಕೊಡೋದು ಬಿಟ್ಟು ನೋಟಿಸ್ ಕೊಡುತ್ತಿರುವ ನಿಮಗೆ ನಾಚಿಕೆ ಆಗೋದಿಲ್ವಾ. ಅವರಿಗೆಲ್ಲ ನೋಟಿಸ್ ಕೊಟ್ಟು ಬೆದರಿಕೆ ಹಾಕಿ ಕಿರುಕುಳ ನೀಡಿದರೆ ನೀನು ಉಳಿಯೋದು ಕಷ್ಟ ಎಂದು ಎಚ್ಚರಿಸಿದರು.ನವ ಕರ್ನಾಟಕ ಎಂಆರ್ ಡಬ್ಲ್ಯೂ, ವಿಆರ್ ಡಬ್ಲ್ಯೂ, ಯುಆರ್ ಡಬ್ಲ್ಯೂ ವಿಕಲಚೇತನರ ಗೌರವಧನ ಕಾರ್ಯಕರ್ತರ ಸಂಘದ ಸಂಸ್ಥಾಪಕ ಅಧ್ಯಕ್ಷ ಅಂಬಾಡಿ ಮೇಟಿ, ರಾಜ್ಯಾಧ್ಯಕ್ಷ ಫಕೀರ್ ಗೌಡ, ರಾಜ್ಯ ಸಂಚಾಲಕ ಅನಿಲ್ ಕೆ.ಗೌಡ , ಪದಾಧಿಕಾರಿಗಳಾದ ಯಶೋಧಾ, ನಾಗರಾಜು, ಗುರುಮಲ್ಲಮ್ಮ, ಬಿಜೆಪಿ ಮುಖಂಡರಾದ ಪ್ರಮೋದ್ , ಗೌತಮ್ ಗೌಡ, ಪ್ರಸಾದ್ ಗೌಡ, ಆನಂದಸ್ವಾಮಿ, ದೇವರಾಜು, ಮಂಜುನಾಥ್ ಮತ್ತಿತರರು ಹಾಜರಿದ್ದರು.
ಕೋಟ್...ಆಡಂಬರದ ದಸರಾ ಮಾಡುತ್ತಿರುವ ಸಿಎಂ ಡಿಕೆಶಿಗೆ ಆ ತಾಯಿ ಚಾಮುಂಡೇಶ್ವರಿ ಕ್ಷಮಿಸಲ್ಲ. ಒಂದೆಡೆ ವಿಶೇಷ ಚೇತನರಿಂದ ಕಣ್ಣೀರು ಹಾಕಿಸಿ, ಮತ್ತೊಂದೆಡೆ ಚಾಮುಂಡಿ ತಾಯಿಗೆ ಆರತಿ ಬೆಳಗಿದರೆ ಶ್ರೇಯಸ್ಸು ಸಿಗಲ್ಲ. ಜಾಹೀರಾತುಗಳಿಗೆ ಖರ್ಚು ಮಾಡುತ್ತಿರುವ ಹಣದಲ್ಲಿ ಕಾಲು ಭಾಗದಷ್ಟು ಕೊಟ್ಟಿದ್ದರೂ ವಿಕಲಚೇತನರ ಸಮಸ್ಯೆ ಬಗೆ ಹರಿಯುತ್ತಿತ್ತು. ಮುಖ್ಯಮಂತ್ರಿಗಳು ರಾಜೀನಾಮೆ ಕೊಟ್ಟು ಮನೆಗೆ ಹೋಗೋದು ಸೂಕ್ತ.
- ಆರ್.ಅಶೋಕ್ , ವಿಪಕ್ಷ ನಾಯಕರು16ಕೆಆರ್ ಎಂಎನ್ 3,4.ಜೆಪಿಜಿ
3.ವಿಪಕ್ಷ ನಾಯಕ ಆರ್.ಅಶೋಕ್ ವಿಶೇಷ ಚೇತನರನ್ನು ಉದ್ದೇಶಿಸಿ ಮಾತನಾಡಿದರು.4.ವಿಪಕ್ಷ ನಾಯಕ ಆರ್.ಅಶೋಕ್ ಸತ್ಯಾಗ್ರಹ ನಿರತ ವಿಶೇಷ ಚೇತನರ ಕುಶಲೋಪರಿ ವಿಚಾರಿಸಿದರು.