ಸರ್ಕಾರದಲ್ಲಿ ಹಣ ಇರದಿದ್ದರೆ ಪರಿಹಾರ ಕೊಡುವುದು ಬಿಡಲಿ ಆದರೆ ಭಿಕ್ಷುಕರಂತೆ ₹2,500 ಇನ್ಪುಟ್ ಸಬ್ಸಿಡಿಯಲ್ಲಿ ಅತಿ ಕಡಿಮೆ ಪರಿಹಾರ ನೀಡಲು ಮುಂದಾದ ಸರ್ಕಾರ ರಾಜ್ಯದ ರೈತರನ್ನು ಭಿಕ್ಷುಕರಂತೆ ಹೀನಾಯವಾಗಿ ನೋಡುತ್ತಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಆಕ್ರೋಶ ಹೊರಹಾಕಿದರು.
ಕನ್ನಡಪ್ರಭ ವಾರ್ತೆ ವಿಜಯಪುರ
ಸರ್ಕಾರದಲ್ಲಿ ಹಣ ಇರದಿದ್ದರೆ ಪರಿಹಾರ ಕೊಡುವುದು ಬಿಡಲಿ ಆದರೆ ಭಿಕ್ಷುಕರಂತೆ ₹2,500 ಇನ್ಪುಟ್ ಸಬ್ಸಿಡಿಯಲ್ಲಿ ಅತಿ ಕಡಿಮೆ ಪರಿಹಾರ ನೀಡಲು ಮುಂದಾದ ಸರ್ಕಾರ ರಾಜ್ಯದ ರೈತರನ್ನು ಭಿಕ್ಷುಕರಂತೆ ಹೀನಾಯವಾಗಿ ನೋಡುತ್ತಿದೆ ಎಂದು ಅಖಂಡ ಕರ್ನಾಟಕ ರೈತ ಸಂಘದ ಮುಖಂಡರು ಆಕ್ರೋಶ ಹೊರಹಾಕಿದರು. ರಾಜ್ಯ ಸರ್ಕಾರ ಆರ್ಥಿಕವಾಗಿ ಸಂಪೂರ್ಣ ದಿವಾಳಿಯಾಗಿದೆ. ರೈತರಿಗೆ ಕನಿಷ್ಠ ₹25,000 ಪ್ರತಿ ಎಕರೆಯಂತೆ ಪರಿಹಾರ ನೀಡಲು ರಾಜ್ಯ ಸರ್ಕಾರಕ್ಕೆ ಯೋಗ್ಯತೆ ಇಲ್ಲದಂತಾಗಿದೆ. ಆದ್ದರಿಂದ ಹಣಕಾಸಿನಿಂದ ಕಂಗೆಟ್ಟಿರುವ ರಾಜ್ಯ ಸರ್ಕಾರಕ್ಕೆ ಆರ್ಥಿಕ ಬಲ ತುಂಬಲು ಅಖಂಡ ಕರ್ನಾಟಕ ರೈತ ಸಂಘದಿಂದ ದೇಣಿಗೆ ಸಂಗ್ರಹಿಸಿ ರವಾನಿಸಲು ಮುಂದಾಗಿದ್ದೇವೆ ಎಂದರು.ಗುರುವಾರ ಬೆಳಗ್ಗೆ 11.30ಕ್ಕೆ ನಗರದ ಶ್ರೀ ಸಿದ್ದೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸುವ ಮೂಲಕ ದೇಣಿಗೆ ಸಂಗ್ರಹಿಸುವ ಕಾರ್ಯಕ್ಕೆ ಚಾಲನೆ ನೀಡಿದ ಸಂಘಟನೆಯ ಪದಾಧಿಕಾರಿಗಳು ಲಾಲ್ ಬಹದ್ದೂರ್ ಶಾಸ್ತ್ರೀ ಮಾರುಕಟ್ಟೆಯ ಮೂಲಕ ಗಾಂಧಿ ವೃತ್ತ, ಬಸವೇಶ್ವರ ವೃತ್ತ ಹಾಗೂ ಡಾ.ಅಂಬೇಡ್ಕರ್ ವೃತ್ತದ ಮೂಲಕ ವಿವಿಧ ಅಂಗಡಿಗಳಿಗೆ ಹಾಗೂ ತರಕಾರಿ ಮಾರುವ ರೈತರು ಹಾಗೂ ರೈತ ಮಹಿಳೆಯರಿಂದ ದೇಣಿಗೆ ಪಡೆದು ಜಿಲ್ಲಾಧಿಕಾರಿಗಳ ಕಚೇರಿಗೆ ತಲುಪಿ ಅಪರ ಜಿಲ್ಲಾದಿಕಾರಿ ಡಾ.ಔದ್ರಾಮರಿಗೆ ಮನವಿ ಹಾಗೂ ₹4,025 ಡಿಡಿಯನ್ನು ಸರ್ಕಾರಕ್ಕೆ ರವಾನಿಸಲು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಅಖಂಡ ಕರ್ನಾಟಕ ರಾಜ್ಯ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ರಾಜ್ಯ ಸಂಘಟನಾ ಕಾರ್ಯದರ್ಶಿ ವಿಠ್ಠಲ ಬಿರಾದಾರ, ಜಿಲ್ಲಾ ಸಂಚಾಲಕ ಪಾಂಡು ಹ್ಯಾಟಿ, ಪದಾಧಿಕಾರಿಗಳಾದ ರಾಮನಗೌಡ ಹಾದಿಮನಿ, ಗುರುಲಿಂಗಪ್ಪ ಪಡಸಲಗಿ, ಹೊರಕೆರಪ್ಪ ತೆಲಗಿ, ಶೆಟ್ಟಪ್ಪ ಲಮಾಣಿ, ಬಸವರಾಜ ಹೊಸಳ್ಳಿ, ಮಲ್ಲಿಕಾರ್ಜುನ ಬಟಗಿ, ವಿನೋದ ಖೇಡ, ಜಲಾಲಸಾಬ್ ಮುಲ್ಲಾ, ಸಿದ್ರಾಮಪ್ಪ ಕಂಬಾರ, ಲಾಯಪ್ಪ ಇಂಗಳೆ ಇದ್ದರು.