ಬೇಡ್ತಿ-ಅಘನಾಶಿನಿ ನದಿ ಪಾತ್ರದ ಜನರಿಗೆ ಎಷ್ಟು ನೀರಿನ ಅಗತ್ಯವಿದೆ ಎಂದು ಯಾವುದೇ ಅಧ್ಯಯನ ನಡೆಸಿಲ್ಲ. ಈ ಸಂಬಂಧ ಸಮಿತಿಯನ್ನೂ ರಚಿಸಿಲ್ಲ. ಇದರಿಂದ ದೊಡ್ಡ ಅನ್ಯಾಯವಾಗುತ್ತದೆ. ಬಲಶಾಲಿಗಳ ಒತ್ತಡಕ್ಕೆ ಮಣಿದು ಸರ್ಕಾರ ನದಿ ತಿರುವು ಯೋಜನೆಗೆ ಮುಂದಾಗುತ್ತಿದೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.
ಕನ್ನಡಪ್ರಭ ವಾರ್ತೆ ಬೆಂಗಳೂರು:
ಬೇಡ್ತಿ-ಅಘನಾಶಿನಿ ನದಿ ಪಾತ್ರದ ಜನರಿಗೆ ಎಷ್ಟು ನೀರಿನ ಅಗತ್ಯವಿದೆ ಎಂದು ಯಾವುದೇ ಅಧ್ಯಯನ ನಡೆಸಿಲ್ಲ. ಈ ಸಂಬಂಧ ಸಮಿತಿಯನ್ನೂ ರಚಿಸಿಲ್ಲ. ಇದರಿಂದ ದೊಡ್ಡ ಅನ್ಯಾಯವಾಗುತ್ತದೆ. ಬಲಶಾಲಿಗಳ ಒತ್ತಡಕ್ಕೆ ಮಣಿದು ಸರ್ಕಾರ ನದಿ ತಿರುವು ಯೋಜನೆಗೆ ಮುಂದಾಗುತ್ತಿದೆ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ‘ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ’ ಸ್ವಾತಂತ್ರ್ಯ ಉದ್ಯಾನವನದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿ, ನೈಸರ್ಗಿಕ ಸೃಷ್ಟಿಯನ್ನು ಕಾಪಾಡುವುದು ಕೇವಲ ಒಂದು ಜಿಲ್ಲೆಯ ಜನರ ಕೆಲಸವಲ್ಲ. ಬದಲಾಗಿ ಪಶ್ಚಿಮ ಘಟ್ಟ ಹಾಗೂ ಅಲ್ಲಿಯ ನದಿಗಳನ್ನು ಸಂರಕ್ಷಿಸುವುದು ಇಡೀ ರಾಜ್ಯ ಹಾಗೂ ದೇಶದ ನಾಗರಿಕರ ಕರ್ತವ್ಯ. ಈ ನಿಟ್ಟಿನಲ್ಲಿ ಏಕಮುಖವಾಗಿ ಆಲೋಚಿಸದೇ, ಎಲ್ಲರಿಗೂ ನ್ಯಾಯ ಕೊಡಿಸುವ ರೀತಿಯಲ್ಲಿ ಸರ್ಕಾರಗಳು ಕೆಲಸ ಮಾಡಬೇಕು. ಈ ಹೋರಾಟದಲ್ಲಿ ಎಂದೆಂದಿಗೂ ಉತ್ತರ ಕನ್ನಡ ಜಿಲ್ಲೆಯ ಜನರೊಂದಿಗೆ ಇರುವುದಾಗಿ ಘೋಷಿಸಿದರು.ನದಿ ತಿರುವು ವಿರುದ್ಧ ಒಗ್ಗಟ್ಟು ಪ್ರದರ್ಶಿಸಿ: ಉತ್ತರ ಕನ್ನಡ ಜಿಲ್ಲೆಯ ಅಸ್ತಿತ್ವಕ್ಕೆ ಸಂಚಕಾರ ತರುವ ನದಿ ತಿರುವ ಯೋಜನೆಯನ್ನು ಜನಪ್ರತಿನಿಧಿಗಳು ಒಗ್ಗಟ್ಟಾಗಿ ವಿರೋಧಿಸಬೇಕು. 15 ದಿನದೊಳಗೆ ಸರ್ಕಾರದೊಂದಿಗೆ ಸಭೆ ನಡೆಸುವ ಜವಾಬ್ದಾರಿ ವಹಿಸಿಕೊಳ್ಳಬೇಕು ಎಂದು ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಅಧ್ಯಕ್ಷ ಅನಂತ ಹೆಗಡೆ ಅಶಿಸರ ಆಗ್ರಹಿಸಿದರು.ಬೇಡ್ತಿ ಮತ್ತು ಅಘನಾಶಿನಿ ನದಿ ತಿರುವು ಯೋಜನೆ ವಿರೋಧಿಸಿ ಸಮಿತಿ ಶನಿವಾರ ನಗರದ ಸ್ವಾತಂತ್ರ್ಯ ಉದ್ಯಾನವನದಲ್ಲಿ ಆಯೋಜಿಸಿದ್ದ ಬೃಹತ್ ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಉತ್ತರ ಕನ್ನಡ ಜಿಲ್ಲೆಯ ಜೀವ ನದಿಗಳ ಉಳಿವಿಗಾಗಿ ಜಿಲ್ಲೆಯ ಎಲ್ಲ ಜನಪ್ರತಿನಿಧಿಗಳು ಪಕ್ಷಾತೀತವಾಗಿ ಒಗ್ಗಟ್ಟಿನಿಂದ ನಿಲ್ಲಬೇಕು. ಎಲ್ಲ ರಾಜಕೀಯ ಬದಿಗಿಟ್ಟು ಜನರ ಕೂಗಿಗೆ ಧ್ವನಿಯಾಗಬೇಕು. 15 ದಿನದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸಭೆ ನಡೆಸುವ ಜವಾಬ್ದಾರಿಯನ್ನು ಜಿಲ್ಲೆಯ ಜನಪ್ರತಿನಿಧಿಗಳು ಹೊರಬೇಕು ಎಂದು ಮನವಿ ಮಾಡಿದರು.ಇಷ್ಟೊಂದು ಸಂಖ್ಯೆಯಲ್ಲಿ ಜನ ಆಗಮಿಸುತ್ತಾರೆ ಎಂಬ ನಿರೀಕ್ಷೆ ಇರಲಿಲ್ಲ. ಯೋಜನೆ ವಿರೋಧಿಸಿ ರಾಜ್ಯ ಸರ್ಕಾರಕ್ಕೆ ಒಂದು ಲಕ್ಷ ಪತ್ರ ಬರೆಯಲಾಗುವುದು. ರಾಜ್ಯ ಸರ್ಕಾರ ಡಿಪಿಆರ್ ನಿಲ್ಲಿಸಬೇಕು. ಉತ್ತರ ಕನ್ನಡ ಜಿಲ್ಲೆಯು ಈಗಾಗಲೇ ಹಲವು ಯೋಜನೆಗಳಿಂದ ಕಷ್ಟಕ್ಕೆ ಸಿಲುಕಿದೆ. ಈಗ ಮತ್ತೆ ಬೇಡ್ತಿ-ಅಘನಾಶಿನಿ ನದಿ ತಿರುವು ಯೋಜನೆ ಮಾಡುವುದರಿಂದ ಜಿಲ್ಲೆಯ ಅರ್ಧಕ್ಕೂ ಅಧಿಕ ತಾಲೂಕುಗಳು ಅತೀವ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಮಲೆನಾಡಿನ ರೈತರು, ಕರಾವಳಿಯ ಮೀನುಗಾರರು ಹಾಗೂ ಎರಡೂ ಕಡೆಯ ಜೀವ ಸಂಕುಲಗಳಿಗೆ ಅತಿಯಾದ ಹಾನಿಯಾಗುವ ಯೋಜನೆಯನ್ನು ಕೂಡಲೇ ಕೈಬಿಡಬೇಕು ಎಂದು ಒತ್ತಾಯಿಸಿದರು.ಕೋಟ್‌ಗಳು...ಜಲಕ್ಷಾಮದ ಭಯಯೋಜನೆಯಿಂದಾಗಿ ಭವಿಷ್ಯದಲ್ಲಿ ಉತ್ತರ ಕನ್ನಡ ಜಿಲ್ಲೆ ಜಲಕ್ಷಾಮ ಎದುರಿಸಬೇಕಾಗುತ್ತದೆ. ಯಾವುದೇ ಒಬ್ಬ ವಿಜ್ಞಾನಿಯ ಸಮ್ಮತಿಯೂ ಇಲ್ಲದ ಈ ಯೋಜನೆಯನ್ನು ಸರ್ಕಾರ ಏಕೆ ಮಾಡುತ್ತಿದೆ ಎನ್ನುವುದನ್ನು ನಾವು ಪ್ರಶ್ನಿಸಲೇಬೇಕಿದೆ. ಇನ್ನಾದರೂ ಸರ್ಕಾರ ಕಣ್ತೆರೆದು ಉತ್ತರ ಕನ್ನಡದ ಜನರ ಅಹವಾಲು ಸ್ವೀಕರಿಸಲಿ.
- ಸ್ವರ್ಣವಲ್ಲಿ ಸಂಸ್ಥಾನದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ (ಸಂದೇಶ)ದೊಡ್ಡ ದುರಂತ
ಒಂದಿಷ್ಟು ಜಿರಳೆಗಳು ಮಾಡುವ ಸದ್ದಿಗೆ ಕಿವಿಗೊಡುವ ಸರ್ಕಾರ, ಉತ್ತರ ಕನ್ನಡದ ಪರಿಸರ ಪ್ರೇಮಿ ಜನರ ನೋವಿಗೆ ಸ್ಪಂದಿಸಬೇಕು. ಕಾಡು ಹಾಗೂ ಮನುಷ್ಯರ ರಕ್ಷಣೆಗಾಗಿ ಬೀದಿಗಿಳಿಯುವ ಪರಿಸ್ಥಿತಿಯನ್ನು ಸರ್ಕಾರ ತಂದಿಟ್ಟಿರುವುದು ದೊಡ್ಡ ದುರಂತವಾಗಿದೆ.- ಡಾ.ಗಿರಿಧರ ಕಜೆ, ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷದೌರ್ಜನ್ಯ:ಪರಿಸರ ಎಂದರೆ ಯಾರೋ ನಾಲ್ಕು ಜನರಿಗೆ ಸಂಬಂಧಪಟ್ಟಿರದೆ ಪ್ರತಿಯೊಬ್ಬರಿಗೂ ಸಂಬಂಧಿಸಿದ್ದಾಗಿದೆ. ಅಭಿವೃದ್ಧಿ ಹೆಸರಿನಲ್ಲಿ ದೌರ್ಜನ್ಯ ಎಸಗಲಾಗುತ್ತಿದ್ದು ನಾವೆಲ್ಲಾ ಎಚ್ಚರಗೊಳ್ಳಬೇಕಿದೆ. ಉತ್ತರ ಕನ್ನಡ ಜಿಲ್ಲೆಯ ಕಾಡನ್ನು ರಕ್ಷಿಸುವುದು ಪ್ರತಿಯೊಬ್ಬ ಕನ್ನಡಿಗನ ಕೆಲಸವಾಗಿದೆ.- ಜಯಂತ್ ಕಾಯ್ಕಿಣಿ, ಸಾಹಿತಿಕೊಲೆ ಮಾಡಬೇಡಿ:
ಬೇಡ್ತಿ-ಅಘನಾಶಿನಿ ನದಿಯ ಸುತ್ತ ಎಲ್ಲೂ ಇಲ್ಲದ ಜೀವ ವೈವಿಧ್ಯತೆಯಿದೆ. ಇದರ ಲಾಭವನ್ನು ಇಡೀ ದೇಶ ಪಡೆಯುತ್ತಿದೆ. ಈ ಜೀವ ವೈವಿಧ್ಯದ ಕೊಲೆ ಮಾಡುವ ಅಪರಾಧಕ್ಕೆ ಸರ್ಕಾರ ಕೈ ಹಾಕಬಾರದು. ಯಾವುದೇ ಕಾರಣಕ್ಕೂ ನದಿ ತಿರುವು ಯೋಜನೆಗೆ ಮುಂದಾಗಬಾರದು.- ಯಲ್ಲಪ್ಪ ರೆಡ್ಡಿ, ಪರಿಸರ ಹೋರಾಟಗಾರಜೀವನಾಡಿ:ನಮ್ಮ ನದಿಗಳು ನಮ್ಮ ಬದುಕಿನ ಜೀವನಾಡಿಯಾಗಿವೆ. ಈ ನೆಲ-ಜಲ ಹಾಗೂ ಪ್ರಕೃತಿ ರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಹಾಗೂ ನೈತಿಕ ಜವಾಬ್ದಾರಿಯಾಗಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಯಾವುದೇ ಹೊಸ ಮಾರಕ ಯೋಜನೆಗಳನ್ನು ಕೈಗೆತ್ತಿಕೊಳ್ಳಬಾರದು.- ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ (ಸಂದೇಶ)
ರಾಜ್ಯದ ಹೋರಾಟವಾಗಲಿ:ನದಿಗಳಿಗೆ ಆಗಿರುವ ಸ್ಥಿತಿ ನಮ್ಮ ಹೋರಾಟಕ್ಕೆ ಆಗಬಾರದು. ಇದು ಕೇವಲ ಉತ್ತರ ಕನ್ನಡದ ಹೋರಾಟ ಆಗಬಾರದು. ರಾಜ್ಯದ, ದೇಶದ ಹೋರಾಟವಾಗಬೇಕು. ಸಮುದ್ರಕ್ಕೆ ಸೇರುವ ನೀರು ವ್ಯರ್ಥವಾಗುತ್ತದೆ ಎನ್ನುವ ಆಲೋಚನೆಯೇ ತಪ್ಪಾಗಿದೆ.
- ತೇಜಸ್ವಿನಿ ಅನಂತಕುಮಾರ್, ಅದಮ್ಯ ಚೇತನದ ಅಧ್ಯಕ್ಷೆಬಲಿ ಬೇಡ:
ಯಾರದ್ದೋ ಸ್ವಾರ್ಥಕ್ಕೆ ನದಿ ತಿರುವು ಯೋಜನೆ ಮಾಡುವುದು ಹಾಗೂ ಉತ್ತರ ಕನ್ನಡದ ಜನರನ್ನು ಬಲಿ ಹಾಕುವುದು ಸರಿಯಲ್ಲ. ಮಳೆಯಿಲ್ಲದೆ ಈಗಲೇ ಆ ನದಿಗಳಲ್ಲಿ ನೀರಿಲ್ಲ, ತಕ್ಷಣ ಡಿಪಿಎಆರ್ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ಸೂಕ್ತ ಸಮಿತಿ ರಚಿಸಬೇಕು.- ಭೀಮಣ್ಣ ನಾಯ್ಕ್, ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕ
ನೈಸರ್ಗಿಕ ಸಮತೋಲನಕ್ಕೆ ಹಾನಿ:ನದಿ ತಿರುವು ಯೋಜನೆಯಿಂದ ಉತ್ತರ ಕನ್ನಡದ ನೈಸರ್ಗಿಕ ಸಮತೋಲನಕ್ಕೆ ಹಾನಿಯಾಗುತ್ತದೆ. ನಾವು ಮಲೆನಾಡಿನ ಜನರು ನಾಲ್ಕು ದಶಕದಿಂದ ತಾಳ್ಮೆಯಿಂದ ಹೋರಾಟ ಮಾಡುತ್ತಿದ್ದೇವೆ. ಆದರೆ ನಮ್ಮ ತಾಳ್ಮೆ ಪರೀಕ್ಷಿಸುವ ಕೆಲಸ ಮಾಡಬೇಡಿ.
- ಶಾಂತಾರಾಮ್ ಸಿದ್ದಿ, ವಿಧಾನ ಪರಿಷತ್ ಮಾಜಿ ಸದಸ್ಯದೊಡ್ಡ ಅಪಾಯ:ಪಶ್ಚಿಮಘಟ್ಟಗಳ ಅರಣ್ಯ, ನದಿಗಳನ್ನು ನಾಶಪಡಿಸುವ ಯೋಜನೆಯನ್ನು ಸರ್ಕಾರ ತಂದರೆ, ದೊಡ್ಡ ಅಪಾಯ ಎದುರಾಗುತ್ತದೆ. ಬೆಂಗಳೂರಿನಲ್ಲಿ ಮಳೆ ನೀರು ಕೊಯ್ಲು ಸಮರ್ಪಕವಾಗಿ ಅನುಷ್ಠಾನ ಮಾಡಬೇಕು. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ 4800 ಕೆರೆಗಳನ್ನು ಪುನಃಶ್ಚೇತನಗೊಳಿಸಿದರೆ ನೀರಿನ ಸಮಸ್ಯೆ ಉಂಟಾಗುವುದಿಲ್ಲ.
- ಟಿ.ವಿ.ರಾಮಚಂದ್ರ, ಹಿರಿಯ ವಿಜ್ಞಾನಿಪಾವಿತ್ರ್ಯ ಉಳಿಸಿ:
ಅಮೆರಿಕ, ಯೂರೋಪ್ ಸೇರಿ ವಿದೇಶಗಳಲ್ಲಿ ಕಟ್ಟಿರುವ ಅಣೆಕಟ್ಟುಗಳನ್ನು ಕೆಡವಿ ನದಿಗಳ ಮುಕ್ತ ಹರಿವಿಗೆ ಅವಕಾಶ ಮಾಡಿಕೊಡುತ್ತಿದ್ದಾರೆ. ಆದರೆ ನಮ್ಮಲ್ಲಿ ಇದರ ವಿರುದ್ಧ ದಿಕ್ಕಿನಲ್ಲಿ ಹೊರಟಿದ್ದಾರೆ. ಅಪರೂಪದ ನದಿಯ ಪಟ್ಟ ಹೊಂದಿರುವ ಬೇಡ್ತಿ-ಅಘನಾಶಿನಿಯ ಪಾವಿತ್ರ್ಯವನ್ನು ಉಳಿಸುವ ಕೆಲಸಕ್ಕೆ ಎಲ್ಲರೂ ಕೈ ಜೋಡಿಸಬೇಕು.- ನಾಗೇಶ್ ಹೆಗಡೆ, ಪತ್ರಕರ್ತ.