ಯೋಜನೆಯ ಪೈಪ್‌ಲೈನ್ ಹಾಕುವುದನ್ನು ಯಾರು ಬೇಕಾದರೂ ಮಾಡಬಹುದು. ಆದರೆ ನೀರು ಕೊಡಬೇಕಲ್ಲ, ನೀರು ಕೊಡಿಸುವುದಕ್ಕೆ ವ್ಯವಸ್ಥೆ ಮಾಡದೆ ಕೇವಲ ಪೈಪ್‌ಲೈನ್ ಹಾಕಿದರೆ ಅದು ದುಡ್ಡು ಹೊಡೆಯುವ ಕೆಲಸವಾಗುತ್ತದೆ ಅಷ್ಟೇ.
ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಜನರಿಗೆ ದ್ರೋಹ ಬಗೆಯಬೇಡಿ । ಎತ್ತಿನಹೊಳೆ ’ನಾಳೆ ಬಾ’ ಅನ್ನುವ ಯೋಜನೆಯಂತಾಗಿದೆ: ಎಚ್‌ಡಿ ಕುಮಾರಸ್ವಾಮಿ
ಕನ್ನಡಪ್ರಭ ವಾರ್ತೆ ಕೋಲಾರಈ ಹಿಂದೆಯೇ ನಾನು ಹೇಳಿದ್ದ ಮಾತಿಗೆ ಈಗಲೂ ಬದ್ಧನಿದ್ದೇನೆ. ಚಿಕ್ಕಬಳ್ಳಾಪುರ-ಕೋಲಾರ ಜಿಲ್ಲೆಗಳಿಗೆ ಎತ್ತಿನಹೊಳೆ ನೀರು ಕೊಡುವುದು ಈ ಸರ್ಕಾರಕ್ಕೆ ಸಾಧ್ಯವಿಲ್ಲ. ಇವತ್ತು ನೀರು ಕೊಡುತ್ತೇವೆ, ನಾಳೆ ಕೊಡುತ್ತೇವೆ ಎಂದು ಜನರಿಗೆ ಸುಳ್ಳು ಹೇಳುತ್ತಿದ್ದಾರೆ. ಈ ಜಿಲ್ಲೆಗಳ ಪಾಲಿಗೆ ಎತ್ತಿನಹೊಳೆ ’ನಾಳೆ ಬಾ’ ಅನ್ನುವ ಯೋಜನೆಯಾಗಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಲೇವಡಿ ಮಾಡಿದರು.
ಮುಳಬಾಗಿಲಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಯೋಜನೆಯ ಪೈಪ್‌ಲೈನ್ ಹಾಕುವುದನ್ನು ಯಾರು ಬೇಕಾದರೂ ಮಾಡಬಹುದು. ಆದರೆ ನೀರು ಕೊಡಬೇಕಲ್ಲ, ನೀರು ಕೊಡಿಸುವುದಕ್ಕೆ ವ್ಯವಸ್ಥೆ ಮಾಡದೆ ಕೇವಲ ಪೈಪ್‌ಲೈನ್ ಹಾಕಿದರೆ ಅದು ದುಡ್ಡು ಹೊಡೆಯುವ ಕೆಲಸವಾಗುತ್ತದೆ ಅಷ್ಟೇ. ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ನೀರು ತರುತ್ತೇವೆ ಎಂದು ಹೇಳಿ ಆ ಭಾಗದ ಜನತೆಗೆ ದ್ರೋಹ ಬಗೆಯಬೇಡಿ, ದುಡ್ಡು ಹೊಡೆಯುವ ಕಾರ್ಯಕ್ರಮ ಮಾಡಬೇಡಿ ಎಂದರು.ಆ ಜಿಲ್ಲೆಗಳ ಜನರ ಶ್ರಮ ರಾಜ್ಯಕ್ಕೆ ದೊಡ್ಡ ಕೊಡುಗೆ ಎನ್ನುವುದರಲ್ಲಿ ಎರಡು ಮಾತಿಲ್ಲ. ನೀರಿಲ್ಲದಿದ್ದರೂ ತಮ್ಮ ಕಾಯಕದಿಂದ ರಾಜ್ಯದ ಆರ್ಥಿಕತೆಗೆ ಅವರು ಶಕ್ತಿ ತುಂಬಿದ್ದಾರೆ. ನಾನು ೨೦೧೩-೧೪ರಲ್ಲಿ ಆದಿಚುಂಚನಗಿರಿ ಮಹಾಸ್ವಾಮೀಜಿ ಉಪಸ್ಥಿತಿಯಲ್ಲಿ ಚಿಕ್ಕಬಳ್ಳಾಪುರದಲ್ಲಿ ಈ ಯೋಜನೆಗೆ ಭೂಮಿಪೂಜೆ ನೆರವೇರಿಸಿದ ದಿನವೇ ನಾನು ಕೋಲಾರದಲ್ಲಿ ಇದ್ದೆ. ಆವತ್ತೇ ನಾನು ಹೇಳಿದ್ದೆ. ಇವರಿಂದ ನೀರು ಕೊಡಲು ಆಗುವುದಿಲ್ಲ ಎಂದು, ಶಂಕುಸ್ಥಾಪನೆ ಮಾಡಿದ್ದ ಅಂದಿನ ಮುಖ್ಯಮಂತ್ರಿ ಒಂದೆರಡು ವರ್ಷಗಳಲ್ಲಿ ಕೋಲಾರದ ಕೊನೆ ಅಂಚಿನವರೆಗೂ ನೀರು ಕೊಡುತ್ತೇವೆ ಎಂದು ಭರವಸೆ ನೀಡಿದ್ದರು ಎಂಬ ಮಾತನ್ನು ಸರ್ಕಾರಕ್ಕೆ ನೆನಪಿಸಿದರು.
ಸಿದ್ದರಾಮಯ್ಯ ೧-೨ ವರ್ಷದಲ್ಲಿ ನೀರು ಹರಿಸುತ್ತೇವೆ ಎಂದಿದ್ದರು. ಅದು ಸಾಧ್ಯವಾಗುವುದಿಲ್ಲ ಎಂದು ಹೇಳಿದ್ದ ನನ್ನ ಮಾತನ್ನು ಅಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಲಘುವಾಗಿ ತಳ್ಳಿಹಾಕಿದ್ದರು. ಅವರು ಮಾತು ಕೊಟ್ಟು ೧೨-೧೩ ವರ್ಷ ಕಳೆದಿದೆ. ಆದರೆ ಯೋಜನೆ ಹಾಸನ ದಾಟಿ ಮುಂದೆ ಬರಲಿಲ್ಲ. ಜಲಾಶಯ ಎಲ್ಲಿ ನಿರ್ಮಾಣ ಮಾಡ್ತಿದ್ದಾರೆ? ದೇವರಾಯನದುರ್ಗದ ಬಳಿ ೧೦ ಟಿಎಂಸಿ ನೀರು ಸಂಗ್ರಹಕ್ಕೆ ಜಲಾಶಯ ಕಟ್ಟುತ್ತೇವೆ ಎಂದರು, ಆಮೇಲೆ ಅದು ೫ ಟಿಎಂಸಿ ಮಟ್ಟಕ್ಕೆ ಬಂತು. ಈಗ ೨ ಟಿಎಂಸಿಗೆ ಬಂದಿದೆ. ಇವತ್ತಿನವರೆಗೂ ಈ ಕುರಿತು ನಿಖರ ತೀರ್ಮಾನ ಮಾಡಿಲ್ಲ. ಕಳೆದ ಮೂರು ವರ್ಷಗಳಿಂದ ಮುಂದಿನ ಜೂನ್‌ಗೆ ನೀರು ಹರಿಸುತ್ತೇವೆ ಎಂದು ಹೇಳುತ್ತಲೇ ಇದ್ದಾರೆ ಎಂದು ಸಚಿವ ಕುಮಾರಸ್ವಾಮಿ ಕಿಡಿಕಾರಿದರು.ಯಾವುದೇ ಇಲಾಖೆಯನ್ನು ಬೇಕಾದರೂ ಉದಾಹರಣೆಯಾಗಿ ತೆಗೆದುಕೊಳ್ಳಿ. ಯಾವ ಇಲಾಖೆಯಲ್ಲಿ ಎಷ್ಟು ದುಡ್ಡು ಹೊಡೆಯುವುದಕ್ಕೆ ಸಾಧ್ಯ ಅನ್ನುವ ಒಂದೇ ಒಂದು ದಂಧೆ ನಡೆಯುತ್ತಿದೆ. ಯಾವುದೇ ಒಂದು ಇಲಾಖೆಯಲ್ಲೂ ಪಾರದರ್ಶಕ ಆಡಳಿತ ಎಲ್ಲೂ ಕಾಣುತ್ತಿಲ್ಲ. ಯಾವ ಇಲಾಖೆಯಲ್ಲಿ ಎಷ್ಟು ಹಣ ಲೂಟಿ ಮಾಡಬಹುದು ಎಂಬುದಷ್ಟೇ ನಡೆಯುತ್ತಿದೆ ಎಂದು ಕೇಂದ್ರ ಸಚಿವರು ಟೀಕಾಪ್ರಹಾರ ನಡೆಸಿದರು.
೨೫೦೦ ಯಾರಿಗೆ ಕೊಟ್ಟಿದ್ದಾರೆ:ಸಿದ್ದರಾಮಯ್ಯನವರು ೨ನೇ ಬಾರಿ ಸಿಎಂ ಆದಾಗ ಪ್ರಮುಖವಾಗಿ ಮುನ್ನೆಲೆಗೆ ಬಂದಿದ್ದು ಅಧಿಕಾರ ಹಂಚಿಕೆ ವಿಚಾರ ಮಾತ್ರ. ಎರಡೂವರೆ ವರ್ಷದ ಅವಧಿ, ಯಾವಾಗ ಮುಖ್ಯಮಂತ್ರಿ ರಾಜೀನಾಮೆ ಕೊಡುತ್ತಾರೆ, ಯಾವಾಗ ಇನ್ನೊಬ್ಬರು ಬಂದು ಕೂರುತ್ತಾರೆ ಎನ್ನುವುದೇ ಆಯಿತು. ಯಾರು ಮುಂದಿನ ಸಿಎಂ ಆಗ್ತಾರೆ ಎನ್ನುವ ಚರ್ಚೆಯೇ ಮುನ್ನೆಲೆಗೆ ಬಂತು. ಇದರ ಜತೆಗೆ ಗ್ಯಾರಂಟಿ ಯೋಜನೆಗಳನ್ನು ಹೇಳಿಕೊಂಡು ಬಂದಿದ್ದಾರೆ. ನುಡಿದಂತೆ ನಡೆದಿದ್ದೇವೆ ಎಂದು ನಡೆದಿದ್ದೆವೆ ಅಂತ ಹೇಳಿಕೊಂಡು ಬಂದಿದ್ದಾರೆ. ಗ್ಯಾರಂಟಿಯಿಂದ ರಾಜ್ಯದ ಜನರ ಅರ್ಥಿಕ ಶಕ್ತಿ ವೃದ್ದಿ ಮಾಡಿದ್ದೀವಿ ಎಂದು ಹೇಳಿದ್ದಾರೆ. ಹಾಗಿದ್ದರೆ ಬರದಿಂದ ಕಂಗೆಟ್ಟಿರುವ ಜನರು ಯಾಕೆ ಕಣ್ಣೀರು ಹಾಕುತ್ತಿದ್ದಾರೆ. ಮೂರು ದಿನಗಳಿಂದ ಕೇಂದ್ರ ತಂಡ ಬಂದು ರಾಜ್ಯ ಪ್ರವಾಸ ಮಾಡುತ್ತಿದೆ, ಅವರ ಎದುರು ಹಳ್ಳಿಗಳಲ್ಲಿ ರೈತರು ಕಣ್ಣಿರು ಹಾಕ್ತಿದಾರೆ, ದಿನಗೂಲಿ ಸಿಕ್ತಿಲ್ಲ, ಹಳ್ಳಿಗಳಿಗೆ ಜನ ಮನೆಗೆ ಬೀಗ ಹಾಕಿ ಗುಳೆ ಹೋಗ್ತಿದ್ದಾರೆ. ಈ ಸರಕಾರ ನೋಡಿದರೆ ೨,೫೦೦ ಘೋಷಣೆ ಮಾಡಿ ಕೈತೊಳೆದುಕೊಂಡಿದೆ. ಎಷ್ಟು ಜನ ರೈತರಿಗೆ ಈ ಹಣ ತಲುಪಿದೆ ಎಂಬುದು ಗೊತ್ತಿಲ್ಲ ಎಂದು ಹೇಳಿದರು.
ಮುಖ್ಯಮಂತ್ರಿ ಹುದ್ದೆ ಕಿತ್ತುಕೊಳ್ಳುವುದಕ್ಕೆ, ಅದನ್ನು ಕಿತ್ತುಕೊಂಡು ಕುರ್ಚಿ ಮೇಲೆ ಕೂತು ಮೇಲೆ ಪ್ರಮಾಣ ಸ್ವೀಕಾರ ಮಾಡೋದಕ್ಕೆ, ಪ್ರಮಾಣ ಸ್ವೀಕರಿಸಿದ ಮೇಲೆ ಕ್ಯಾಬಿನೆಟ್ ಮಾಡುವುದಕ್ಕೆ, ಕ್ಯಾಬಿನೆಟ್ ಮಾಡಿದ ಮೇಲೆ ಖಾತೆಗಳ ಹಂಚಿಕೆಗೆ ದೆಹಲಿಗೆ ಮುಖ್ಯಮಂತ್ರಿ ಸುತ್ತಿದ್ದು ಬಿಟ್ಟರೆ ರಾಜ್ಯಕ್ಕೆ ಏನು ಮಾಡಿದ್ದಾರೆ? ಮೂರು ದಿನಗಳ ಆಡಳಿತ ಅಂದ್ರೆ ಅದರಲ್ಲಿ ಅರ್ಧ ಪಾಲು ಬರಿ ದೆಹಲಿಗೆ ಹೋಗಿಬರುವುದಷ್ಟೇ ಆಯಿತು. ಯಾವ ಪುರುಷಾರ್ಥಕ್ಕೆ ಇವರು ಮೂರು ದಿನಗಳ ಸಂಭ್ರಮ ಆಚರಿಸಿಕೊಂಡರು ಎಂಬುದು ನನಗೆ ಅರ್ಥವಾಗುತ್ತಿಲ್ಲ ಎಂದು ಸಚಿವರು ಟೀಕಿಸಿದರು.ಸಿಎಂ ಪ್ರಧಾನಿಯನ್ನು ಕಾಪಿ ಮಾಡುತ್ತಿದ್ದಾರೆ:
ಪ್ರಧಾನಿ ನರೇಂದ್ರ ಮೋದಿ ಅವರಿಗಿಂತ ನಾನೇನು ಕಡಿಮೆ ಇಲ್ಲ ಎನ್ನುವ ರೀತಿಯಲ್ಲಿ ಈ ಮುಖ್ಯಮಂತ್ರಿ ಬಿಂಬಿಸಿಕೊಳ್ಳುತ್ತಿದ್ದಾರೆ. ಆದರೆ ರಾಜ್ಯದ ವಾಸ್ತವ ಸ್ಥಿತಿಯೇ ಬೇರೆ ಇದೆ. ಮುಖ್ಯಮಂತ್ರಿ ವಿಷನ್ ೨೦೩೭, ವಿಷನ್ ೨೦೪೭ ಎಂದೆಲ್ಲ ಹೇಳುತ್ತಿದ್ದಾರೆ. ಅದಕ್ಕೆಲ್ಲ ಹಣ ಎಲ್ಲಿಂದ ತರುತ್ತಾರೆ? ಈಗ ಬೇರೆ ಇಂಟಿಗ್ರೇಟೆಡ್ ಟೌನ್ಷಿಪ್‌ಗಳನ್ನು ಮಾಡುತ್ತೇವೆ ಎಂದು ಹೇಳುತ್ತಿದ್ದಾರೆ. ಅವರ ಭೂಮಿಗೆ ಬೆಲೆ ತಂದುಕೊಳ್ಳುವುದು ಅದರ ಹಿಂದಿನ ಉದ್ದೇಶವಾಗಿದೆ. ೨೦೦೬ರಲ್ಲಿ ನಾನು ೫ ಟೌನ್‌ಶಿಪ್ ಮಾಡಲು ಹೊರಟಾಗ ರೈತರ ಭೂಮಿ ಕಿತ್ತುಕೊಳ್ಳುತ್ತಿದ್ದಾರೆ ಎಂದು ನನ್ನ ಮೇಲೆ ಮುಗಿಬಿದ್ದಿದ್ದರು. ಇವತ್ತು ಈಗಾಗಲೇ ೭,೫೦೦ ಎಕರೆ ಭೂಮಿಯನ್ನು ನೋಟಿಫೈ ಮಾಡಿದ್ದಾರೆ. ಮುಂದಿನ ಮಾರ್ಚ್ ಒಳಗೆ ೫೦ ಸಾವಿರ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎನ್ನುತ್ತಾರೆ. ಇಲ್ಲಿಗೆ ಬಂಡವಾಳ ಹೂಡಲು ಯಾರು ಬಂದಿದ್ದಾರೆ? ನಮ್ಮ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಯ ಎಷ್ಟು ಮಕ್ಕಳಿಗೆ ಉದ್ಯೋಗ ಕೊಟ್ಟಿದ್ದಾರೆ? ಬೇರೆ ರಾಜ್ಯಗಳಿಂದ ಬಂದವರೇ ತುಂಬಿಕೊಂಡಿದ್ದಾರೆ. ಕೆಜಿಎಫ್‌ನಲ್ಲಿ ಇಂಡಸ್ಟ್ರಿಯಲ್ ಕಾರಿಡಾರ್ ಮಾಡುವುದಾಗಿ ಘೋಷಿಸಿದ್ದಾರೆ. ಆದರೆ ಅದಕ್ಕೆ ನೀರು ಎಲ್ಲಿಂದ ತರುತ್ತಾರೆ? ಎಂದು ಪ್ರಶ್ನಿಸಿದರು.ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡಿ:
ಹಾಲಿನ ದರ ಏರಿಕೆಗೆ ನನ್ನ ವಿರೋಧವಿಲ್ಲ ಎಂದ ಸಚಿವ ಕುಮಾರಸ್ವಾಮಿ, ಬೆಲೆ ಏರಿಕೆಯ ಹೊರೆ ಗ್ರಾಹಕರ ಮೇಲೆ ಹಾಕಬಾರದು. ರೈತರಿಗೆ ಕೊಡುವ ೫ ಪ್ರೋತ್ಸಾಹ ಧನ ಹೆಚ್ಚಿಸಿ ೬ನೇ ಗ್ಯಾರಂಟಿ ಎಂದು ಕೊಡಿ. ಸಾಧ್ಯವಾದರೆ ೫ ಅಥವಾ ೧೦ ಮೊತ್ತವನ್ನು ರೈತನಿಗೆ ಪ್ರೋತ್ಸಾಹ ಧನದ ರೂಪದಲ್ಲಿ ಕೊಡಿ. ನೀವು ಒಂದು ಕಡೆ ಹಾಲಿನ ದರ ಹೆಚ್ಚಿಸಿ ಅದರ ಭಾರವನ್ನು ಗ್ರಾಹಕರ ಮೇಲೆ ಹಾಕಬೇಡಿ ಎಂದು ಕೇಂದ್ರ ಸಚಿವರು ಸಲಹೆ ನೀಡಿದರು.ಬೆಂಗಳೂರಿನ ಸಮಸ್ಯೆಗಳನ್ನು ಬಗೆಹರಿಸಲು ಯೋಗ್ಯತೆ ಇಲ್ಲದವರು, ಸಿಂಗಾಪುರ ಮಾಡುತ್ತೇವೆ ಎಂದು ಭ್ರಮೆ ಹುಟ್ಟಿಸುತ್ತಿದ್ದಾರೆ. ೯೭೫ ಅರ್ಜಿಗಳು ವಿಲೇವಾರಿಯಾಗದೆ ಧೂಳು ಹಿಡಿದು ಬಿದ್ದಿವೆ, ಉದ್ಯಮಿಗಳು ಬೇರೆ ರಾಜ್ಯಗಳಿಗೆ ಹೋಗುತ್ತಿದ್ದಾರೆ. ಹಿಂದೆ ಸಿದ್ದರಾಮಯ್ಯರ ಮೊದಲ ಅವಧಿಯಲ್ಲಿ ೧ ಲಕ್ಷ ಮನೆ ಕಟ್ಟಿಕೊಡುವುದಾಗಿ ಘೋಷಿಸಿದ್ದರು. ಕೃಷ್ಣ ಬೈರೇಗೌಡರ ಕ್ಷೇತ್ರದಲ್ಲಿ ಗುದ್ದಲಿಪೂಜೆ ಮಾಡಿದ್ದರು. ಇವತ್ತಿನವರೆಗೆ ಎಷ್ಟು ಮನೆ ಕೊಟ್ಟಿದ್ದಾರೆ? ೨೦ ಸಾವಿರ ಮನೆಗಳನ್ನೂ ಪೂರ್ಣಗೊಳಿಸಲು ಆಗಿಲ್ಲ. ಫಲಾನುಭವಿಗಳು ಹಣ ಕಟ್ಟಲು ಶಕ್ತರಿಲ್ಲ. ಈಗ ಮತ್ತೆ ೫೦ ಸಾವಿರ ಕಾರ್ಮಿಕರಿಗೆ ಮನೆ ಕಟ್ಟಿಕೊಡುವುದಾಗಿ ಹೊಸ ಘೋಷಣೆ ಮಾಡಿದ್ದಾರೆ. ಬರೀ ಗಾಳಿಗೋಪುರ ಕಟ್ಟುವುದು ಬಿಟ್ಟರೆ ವಾಸ್ತವದಲ್ಲಿ ಏನೂ ಆಗುತ್ತಿಲ್ಲ ಎಂದು ಕೇಂದ್ರ ಸಚಿವರು ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಸಿದ್ಧಾರ್ಥ ಟ್ರಸ್ಟ್ ಮೇಲೆ ಯಾಕೆ ಮಾಡಿಲ್ಲ:ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಿದ್ದಾರ್ಥ ವಿಹಾರ ಟ್ರಸ್ಟ್‌ಗೆ ಸರ್ಕಾರಿ ಜಮೀನು ಪಡೆದ ವಿಚಾರದಲ್ಲಿ ಹೈಕೋರ್ಟ್ ಆದೇಶದ ನಂತರವೂ ಲೋಕಾಯುಕ್ತ ತನಿಖೆ ಮಾಡಿಸಲು ಇವರಿಗೆ ಧೈರ್ಯವಿಲ್ಲ ಎಂದು ಪ್ರಶ್ನಿಸಿದ ಸಚಿವರು, ಬುದ್ಧ, ಸಿದ್ದಾರ್ಥ, ಅಂಬೇಡ್ಕರ್ ಹೆಸರು ಹೇಳಿಕೊಂಡು ತಮ್ಮ ಕುಟುಂಬದ ಹಿತಾಸಕ್ತಿ ನೋಡಿಕೊಳ್ಳುತ್ತಿದ್ದಾರೆ. ಮೊದಲು ತಮ್ಮ ಮನೆಯ ದೋಷಗಳನ್ನು ಸರಿಪಡಿಸಿಕೊಳ್ಳಲಿ, ಆಮೇಲೆ ನಮ್ಮ ಕುಟುಂಬದ ಬಗ್ಗೆ ಮಾತನಾಡಲಿ ಎಂದು ತಿರುಗೇಟು ಕೊಟ್ಟರು.
ಮೈತ್ರಿಯ ಸ್ಥಳೀಯ ಮಟ್ಟದಲ್ಲಿ ಸಣ್ಣಪುಟ್ಟ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಸಹಜ. ರಾಜಕಾರಣಿಗಳು ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಯೋಚಿಸುವುದುಂಟು. ವಿಜಯೇಂದ್ರ ಹೇಳಿದಂತೆ, ಈಗಲೇ ಸೀಟು ಹೊಂದಾಣಿಕೆ ಮತ್ತು ಚರ್ಚೆ ನಡೆಸುವುದು ಒಳ್ಳೆಯ ಬೆಳವಣಿಗೆ. ಅಂತಿಮ ನಿರ್ಧಾರ ವರಿಷ್ಠರು ತೆಗೆದುಕೊಳ್ಳುತ್ತಾರೆ. ಕೋಲಾರ ಜಿಲ್ಲೆಯಲ್ಲಿ ಮೈತ್ರಿ ನಡೆಯಲ್ಲ ಎಂದು ಹೇಳಿದವರು ಯಾರು? ನಮ್ಮಿಂದಲೇ ರಾಜಕೀಯ ಜೀವನ ಆರಂಭಿಸಿ, ನಮಗೇ ಟೋಪಿ ಹಾಕಿ ಹೋದವರು ಹೇಳಿದ್ದು ಅಲ್ಲವೇ? ಸಮಯ ಬಂದಾಗ ಎಲ್ಲದಕ್ಕೂ ಉತ್ತರ ಸಿಗುತ್ತದೆ ಎಂದರು.ಪೆರಿಫೆರಲ್ ರಿಂಗ್ ರೋಡ್ ಯೋಜನೆಯಲ್ಲಿ ನೈಸ್ ಕಂಪನಿಗೆ ಅನುಕೂಲ ಮಾಡಿಕೊಡಲು ರಾಜ್ಯ ಸರಕಾರ ಮುಂದಾಗಿದೆ. ಬಿಡಿಎ ಖಾಲಿ ಸೈಟ್‌ಗಳನ್ನು ಮಾರಾಟ ಮಾಡಿ ಹಣ ಹೊಂದಿಸಲು ಹೊರಟಿದ್ದಾರೆ. ಜನರ ಮನೆಗಳನ್ನು ಬುಲ್ಡೋಜರ್ ಹಚ್ಚಿ ಕೆಡವಿ ಬೀದಿಗೆ ತರುತ್ತಿದ್ದಾರೆ. ಇದು ಬಡವರ ಪರವಾದ ಸರ್ಕಾರವಲ್ಲ, ನೈಸ್ ಮಾಲೀಕರ ಜೊತೆ ಕೈಜೋಡಿಸಿರುವ ಸರ್ಕಾರ ಎಂದು ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಸಂಸದ ಎಂ.ಮಲ್ಲೇಶ್ ಬಾಬು, ಶಾಸಕ ಸಮೃದ್ಧಿ ಮಂಜುನಾಥ್, ಮಾಜಿ ಶಾಸಕ ಚೌಡರೆಡ್ಡಿ ತೂಪಲ್ಲಿ, ಸಿಎಂಆರ್ ಶ್ರೀನಾಥ್, ಆನಂದರೆಡ್ಡಿ ಇದ್ದರು.