ಸಾರಾಂಶ
ಬಿ.ಚ್.ಕೈಮರದಲ್ಲಿ ಬರಡು ರಾಸು ಚಿಕಿತ್ಸಾ ಶಿಬಿರ ಹಾಗೂ ಮಿಶ್ರ ತಳಿ ಕರು - ಹಸುಗಳ ಪ್ರದರ್ಶನ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರಅನುಗ್ರಹ ಯೋಜನೆಯಡಿ ಹಸು ಸತ್ತರೆ ಸರ್ಕಾರದಿಂದ ₹10 ಸಾವಿರ ಪರಿಹಾರ ನೀಡಲಾಗುತ್ತದೆ ಎಂದು ಪಶು ಆಸ್ಪತ್ರೆ ಮುಖ್ಯ ಪಶು ವೈದ್ಯಾಧಿಕಾರಿ (ಆಡಳಿತ) ಡಾ.ಪ್ರೀತಂ ಕುಮಾರ್ ತಿಳಿಸಿದರು.
ಭಾನುವಾರ ಬಿ.ಎಚ್.ಕೈಮರದಲ್ಲಿ ಪಶು ಪಾಲನಾ ಇಲಾಖೆ ಹಾಗೂ ಬಿ.ಎಚ್.ಕೈಮರ ಹಾಲು ಉತ್ಪಾದಕರ ಸಂಘದ ಸಂಯುಕ್ತ ಆಶ್ರಯದಲ್ಲಿ ನಡೆದ ಬರಡು ರಾಸು ಚಿಕಿತ್ಸಾ ಶಿಬಿರ ಹಾಗೂ ಮಿಶ್ರ ಕರು ಹಾಗೂ ಹಸುಗಳ ಪ್ರದರ್ಶನ ಕಾರ್ಯಕ್ರಮದಲ್ಲಿ ಪಶು ಇಲಾಖೆಯಿಂದ ಸಿಗುವ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು.6 ತಿಂಗಳ ಒಳಗಿನ ಮೇಕೆ ಸತ್ತರೆ 3 ಸಾವಿರ, 6 ತಿಂಗಳ ಮೇಲ್ಪಟ್ಟ ಕುರಿ, ಮೇಕೆಗಳು ಸತ್ತರೆ ₹5 ಸಾವಿರ ರುಪಾಯಿ ನೀಡಲಾಗುವುದು. ಅಲ್ಲದೆ ಹಸು, ಎಮ್ಮೆಗಳಿಗೆ ಕಾಲುಬಾಯಿ ಜ್ವರ,ಚರ್ಮ ಗಂಟು ರೋಗಗಳಿಗೆ ಉಚಿತ ಲಸಿಕೆ ನೀಡಲಾಗುವುದು. ಕಂದು ರೋಗಕ್ಕೆ ಲಸಿಕೆ, ಕುರಿ, ಮೇಕೆಗಳಿಗೆ ಪಿಪಿಆರ್ ಲಸಿಕೆ ನೀಡಲಾಗುವುದು. ಕೋಳಿಗಳ ಶೀತ ಜ್ವರಕ್ಕೆ ಹಾಗೂ ನಾಯಿಗಳಿಗೆ ರೇಬೀಸ್ ಲಸಿಕೆ ನೀಡಲಾಗುವುದು ಎಂದರು.
ತುರ್ತು ಸಂದರ್ಭದಲ್ಲಿ 1962ಕ್ಕೆ ಕರೆ ಮಾಡಿದರೆ ಪಶು ಇಲಾಖೆ ತುರ್ತು ವಾಹನ ಮನೆ ಬಾಗಿಲಿಗೆ ಬಂದು ಹಸುಗಳಿಗೆ ಉಚಿತವಾಗಿ ಚಿಕಿತ್ಸೆ ಮಾಡಲಾಗುವುದು. ಹೆಣ್ಣುಕರುಗಳ ವೀರ್ಯ ನಳಿಕೆ ಶೀಘ್ರದಲ್ಲೇ ಪಶು ಆಸ್ಪತ್ರೆಗೆ ಬರಲಿದೆ. ಹಸುಗಳು ಕರು ಹಾಕಿ 3 ತಿಂಗಳ ನಂತರ ಕೃತಕ ಗರ್ಭಧಾರಣೆ ಮಾಡಿಸಬಹುದು. ಆರೋಗ್ಯವಂತ ಹೆಣ್ಣು ಕರು 18 ರಿಂದ 20 ತಿಂಗಳಿಗೆ ಬೆದೆಗೆ ಬರುತ್ತದೆ ಎಂದು ವಿವರಿಸಿದರು.ಕೆಡಿಪಿ ಸದಸ್ಯ ಹಾಗೂ ಗುಬ್ಬಿಗಾ ಗ್ರಾಪಂ ಸದಸ್ಯ ಕೆ.ವಿ.ಸಾಜು ಉದ್ಘಾಟಿಸಿ ಮಾತನಾಡಿ, ಪಶು ಇಲಾಖೆ ಇಂತಹ ಕಾರ್ಯಕ್ರಮ ಏರ್ಪಡಿಸುವುದರಿಂದ ರೈತರಿಗೆ ಹಸು ಸಾಕಲು ಉತ್ತೇಜನ ಬರುತ್ತದೆ. ಇತ್ತೀಚಿನ ವರ್ಷಗಳಲ್ಲಿ ಜಾನುವಾರುಗಳ ಸಾಕಾಣಿಕೆ ಕಷ್ಟವಾಗುತ್ತಿದೆ. 1962 ರ ತುರ್ತು ವಾಹನದ ಬಗ್ಗೆ ರೈತರಿಗೆ ಸೂಕ್ತ ಮಾಹಿತಿ ನೀಡಬೇಕು ಎಂದರು.
ಬಿ.ಎಚ್. ಕೈಮರದ ಹಾಲು ಉತ್ಪಾದಕರ ಸಂಘದ ಅಧ್ಯಕ್ಷ ಬಿ.ಟಿ.ನಾಗರಾಜು ಮಾತನಾಡಿ, ನರಸಿಂಹರಾಜಪುರ ತಾಲೂಕಿನಲ್ಲಿ ಹಾಸನ ಕೆ.ಎಂ.ಎಫ್.ನ ಹಾಲು ಮಾರಾಟವಾಗುತ್ತಿದೆ.ಆದರೆ, ಇಲ್ಲಿನ ಹಾಲಿನ ಡೈರಿಯಲ್ಲಿ ಶೇಖರಣೆಯಾದ ಹಾಲನ್ನು ಶಿವಮೊಗ್ಗ ಕೆ.ಎಂ.ಎಫ್. ನವರು ಖರೀದಿ ಮಾಡುತ್ತಿದ್ದಾರೆ.ಆದ್ದರಿಂದ ಚಿಕ್ಕಮಗಳೂರು ನಗರದಲ್ಲಿ ಹಾಲಿನ ಡೈರಿ ಪ್ರಾರಂಭಿಸಿದರೆ ಇಲ್ಲಿನ ಹಾಲನ್ನು ಖರೀದಿ ಮಾಡಿ ಸರ್ಕಾರದಿಂದ ರೈತರಿಗೆ ಸಿಗುವ ಸೌಲಭ್ಯ ಪಡೆಯಬಹುದು. ಪಶು ಇಲಾಖೆಯವರು ಈ ಬಗ್ಗೆ ಗಮನ ನೀಡಬೇಕು ಎಂದರು.ಚಿಕಿತ್ಸೆ ಅಗತ್ಯ ಇರುವ ಜಾನುವಾರುಗಳಿಗೆ ಚಿಕಿತ್ಸೆ ನೀಡಲಾಯಿತು. 40- 50 ಜಾನುವಾರುಗಳ ಪ್ರದರ್ಶನ ಏರ್ಪಡಿಸಿ ಇದರಲ್ಲಿ ಭಾಗವಹಿಸಿದ್ದ ಎಲ್ಲಾ ಜಾನುವಾರುಗಳ ಮಾಲೀಕರಿಗೆ ಮಿನ್ಟೂರಲ್ ಮಿಕ್ಸರ್, ಹಾಲಿನ ಕ್ಯಾನು, ಕ್ಯಾಲ್ಸಿಯಂ ಲಿಕ್ವಿಡ್, ಹೇನಿನ ಮತ್ತು ಗಾಯದ ಔಷಧಿ,, ಮಿನುರಲ್ ಟ್ಯಾಬ್ಲೇಟ್, ಆಯಿಂಟ್ ಮೆಂಟ್, ಬೇವಿನ ಎಣ್ಣೆಯನ್ನು ಉಚಿತವಾಗಿ ನೀಡಲಾಯಿತು.
ವೇದಿಕೆಯಲ್ಲಿ ಕೈಮರ ಹಾಲು ಉತ್ಪಾದಕರ ಸಂಘದ ಉಪಾಧ್ಯಕ್ಷ ಕೆ.ಜೆ.ಆಂಟೋನಿ, ಗ್ರಾಮ ಪಂಚಾಯಿತಿ ಸದಸ್ಯ ವಸಂತ ಕೋಟ್ಯಾನ್, ಪಶು ವೈದ್ಯಾಧಿಕಾರಿ ಡಾ.ರೇಣುಕಪ್ರಸಾದ್, ಜಾನುವಾರು ಅಧಿಕಾರಿ ಶೇಷಾಚಲ ಇದ್ದರು.