ಎಸ್‌ಸಿ, ಎಸ್‌ಟಿ ಪಂಗಡ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಸರ್ಕಾರ: ಎಸ್. ಫಕ್ಕಿರಪ್ಪ

| Published : Mar 27 2024, 01:07 AM IST

ಎಸ್‌ಸಿ, ಎಸ್‌ಟಿ ಪಂಗಡ ಕಲ್ಯಾಣಕ್ಕೆ ಶ್ರಮಿಸುತ್ತಿರುವ ಸರ್ಕಾರ: ಎಸ್. ಫಕ್ಕಿರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಪ್ರತಿಯೊಬ್ಬ ನಾಗರಿಕನ ಅಭಿವೃದ್ಧಿಗಾಗಿ ಸಂವಿಧಾನದಡಿ ಮೀಸಲಾತಿ ಕಲ್ಪಿಸಿದರು.

ಮುಂಡಗೊಡ: ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಜನರ ಕಲ್ಯಾಣಕ್ಕಾಗಿ ವಿಶೇಷ ಪ್ಯಾಕೇಜ್ ಮೂಲಕ ಸರ್ಕಾರಗಳು ಸಮುದಾಯ ಅಭಿವೃದ್ಧಿಪಡಿಸಲು ಶ್ರಮಿಸುತ್ತಿವೆ ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ಎಸ್. ಫಕ್ಕಿರಪ್ಪ ತಿಳಿಸಿದರು.

ಪಟ್ಟಣದ ಲೊಯೋಲ ವಿಕಾಸ ಕೇಂದ್ರದಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಅಭಿವೃದ್ಧಿ ಯೋಜನೆ ಕುರಿತು ೨ ದಿನಗಳ ಕಾಲ ತರಬೇತಿ ಕಾರ್ಯಾಗಾರವನ್ನು ಗಿಡಕ್ಕೆ ನೀರು ಎರೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಭಾರತದ ಪ್ರತಿಯೊಬ್ಬ ನಾಗರಿಕನ ಅಭಿವೃದ್ಧಿಗಾಗಿ ಸಂವಿಧಾನದಡಿ ಮೀಸಲಾತಿ ಕಲ್ಪಿಸಿದರು. ತುಳಿತಕ್ಕೊಳಗಾದ ಎಲ್ಲ ಸಮುದಾಯಗಳ ಕಲ್ಯಾಣಕ್ಕಾಗಿ ಪ್ರತಿವರ್ಷ ಬಜೆಟ್‌ನ್ನು ಸರ್ಕಾರಗಳು ಸಿದ್ಧಪಡಿಸಿ ಜನರಿಗೆ ನೀಡುತ್ತಿವೆ. ಅವುಗಳ ಮಾಹಿತಿ ಈ ದಿನ ತಿಳಿಯೋಣ. ಎಲ್ಲ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ದಿ ಸಾಧಿಸಲು ಪಣ ತೊಡೋಣ ಎಂದರು.

ಸಂಪನ್ಮೂಲ ವ್ಯಕ್ತಿ, ಬೆಂಗಳೂರಿನ ಜೀವಿಕಾ ಸಂಸ್ಥೆಯ ಪಿ.ಜೆ. ಗೊವಿಂದರಾಜ ಮಾತನಾಡಿ, ಜನರ ಕಲ್ಯಾಣಕ್ಕಾಗಿ ಸರ್ಕಾರದಲ್ಲಿರುವ ೩೩ ಇಲಾಖೆಗಳಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗಿರುವ ವಿಶೇಷ ಬಜೆಟ್ ಶಿಬಿರಾರ್ಥಿಗಳಿಗೆ ಅರ್ಥೈಸಿದರು.ಬಜೆಟ್‌ನಲ್ಲಿರುವ ಅನುದಾನವನ್ನು ಪಡೆದುಕೊಳ್ಳುವ ವಿಧಾನ ಹಾಗೂ ಬಳಕೆ, ಪಡೆದುಕೊಳ್ಳುವಾಗ ಬರುವ ಅಡೆತಡೆಗಳ ನಿವಾರಣೆ, ಅರ್ಜಿ ಸಲ್ಲಿಸುವಿಕೆ ಮಾಹಿತಿ ಸಂಗ್ರಹ, ಇವುಗಳ ಕುರಿತು ಸವಿಸ್ತಾರವಾಗಿ ವಿವತರಿಸಿದರು, ನಮ್ಮ ಸೌಲಭ್ಯ ಮತ್ತು ಹಕ್ಕುಗಳಿಗಾಗಿ ಸದಾ ಜಾಗೃತರಾಗಿ ಕಾರ್ಯಾಂಗದ ಮೂಲಕ ಹೇಗೆ ಸೌಲಭ್ಯಗಳನ್ನು ಪಡೆದುಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಬಹುದೆಂದು ತಿಳಿಸಿದ ಅವರು, ಪ್ರತಿಯೊಬ್ಬರು ಸರ್ಕಾರಿ ಅಧಿಕಾರಿಗಳ ಕರ್ತವ್ಯಗಳನ್ನು ತಿಳಿಯುವುದು ಅತಿ ಅವಶ್ಯ. ರಾಜ್ಯ ಸರ್ಕಾರಗಳು ಬಿಡುಗಡೆಗೊಳಿಸುವ ಬಜೆಟ್ ಪ್ರತಿಯನ್ನು ಪ್ರತಿಯೊಬ್ಬರೂ ಅರ್ಥ ಮಾಡಿಕೊಳ್ಳುವುದು ಪ್ರಮುಖವಾಗಿದೆ. ಯಾವ ಸಂದರ್ಭದಲ್ಲಿ ಯಾವ ರೀತಿಯ ಸರ್ಕಾರಿ ಆದೇಶಗಳು ಕಾಯಿದೆಗಳು ಬರುತ್ತವೆ, ಅವುಗಳನ್ನು ಕೂಡಾ ತಿಳಿಯುವುದು ಮುಖ್ಯ ಎಂದರು.

ಲೊಯೋಲ ವಿಕಾಸ ಕೇಂದ್ರ‍ ನಿರ್ದೇಶಕ ಫಾದರ್ ಅನಿಲ್ ಡಿಸೋಜಾ ಮಾತನಾಡಿ, ಮತದಾನದ ಮಹತ್ವ, ಮತದಾರರ ಪಟ್ಟಿಯಲ್ಲಿ ಪ್ರತಿಯೊಬ್ಬರೂ ತಮ್ಮ ಹೆಸರನ್ನು ಖಚಿತಪಡಿಸಿಕೊಳ್ಳುವುದು, ಮತದಾರ ಚೀಟಿ ತಿದ್ದುಪಡಿ, ಅರ್ಹ ಯುವ ಮತದಾರರ ಹೆಸರು ನೋಂದಣಿ ಮಾಡಿಸಿಕೊಳ್ಳುವುದು ಯೋಗ್ಯ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಮತ್ತು ಮತದಾನದ ದಿನ ಕಡ್ಡಾಯವಾಗಿ ಮತದಾನ ಮಾಡುವುದು ವೃದ್ಧರಿಗೆ, ಅಂಗವಿಕಲರಿಗೆ ಚುನಾವಣೆ ಆಯೋಗ ವಿಶೇಷ ವ್ಯವಸ್ಥೆಯನ್ನು ಮಾಡಿರುವುದರಿಂದ ಯಾರಿಗೆಲ್ಲ ಮತದಾನ ಕೇಂದ್ರಕ್ಕೆ ತೆರಳಿ ಮತ ಚಲಾಯಿಸಲು ಸಾಧ್ಯವಿಲ್ಲವೋ ಅಂಥವರು ತಾಲೂಕು ದಂಡಾಧಿಕಾರಿಗಳ ಗಮನಕ್ಕೆ ತರವುದರ ಮೂಲಕ ಪ್ರತಿಯೊಬ್ಬರೂ ಮತದಾನದಲ್ಲಿ ಭಾಗವಹಿಸಿ ಅಮೂಲ್ಯ ಮತದಾನ ನೀಡಿ ದೇಶದ ಭವಿಷ್ಯವನ್ನು ಉಜ್ವಲಗೊಳಿಸಲು ಕರ್ತವ್ಯ ನಿರ್ವಹಿಸಿ ಎಂದರು.

ಸುಭಾಷ ವಡ್ಡರ, ಗೋಪಾಲ ನಡಕಿನಮನಿ ಹನಮಂತ ಕಟ್ಟಿಮನಿ, ಜೂಜೆ ಸಿದ್ದಿ, ರಾಜಬಿ ಹುಲಕೊಪ್ಪ, ಲಕ್ಷ್ಮಣ ಮುಳೆ, ರಾಘವೇಂದ್ರ ಹರಿಜನ, ಸಂತೋಷ ಕಟ್ಟಿಮನಿ, ಮತ್ತು ಎಲ್‌ವಿಕೆ ಸಿಬ್ಬಂದಿ ಉಪಸ್ಥಿತರಿದ್ದರು. ನಾಗರಾಜ ಕಟ್ಟಿಮನಿ ನಿರೂಪಿಸಿದರು. ಮಲ್ಲಮ್ಮ ನೀರಲಗಿ ಸ್ವಾಗತಿಸಿದರು. ಶಾಂತಾ ಬೋವಿವಡ್ಡರ ವಂದಿಸಿದರು.