ಗ್ಯಾರಂಟಿ ಹಣ ಸಂಗ್ರಹಕ್ಕಾಗಿ ರೈತರಿಗೆ ಸರ್ಕಾರ ಬರೆ

| Published : Nov 08 2023, 01:02 AM IST / Updated: Nov 08 2023, 01:03 AM IST

ಗ್ಯಾರಂಟಿ ಹಣ ಸಂಗ್ರಹಕ್ಕಾಗಿ ರೈತರಿಗೆ ಸರ್ಕಾರ ಬರೆ
Share this Article
  • FB
  • TW
  • Linkdin
  • Email

ಸಾರಾಂಶ

ನೀರಾವರಿ ಪಂಪ್‌ಸೆಟ್‌ಗೆ ಕೃಷಿಕರ ಸ್ವಂತ ಹಣದಲ್ಲಿ ವಿದ್ಯುತ್‌ ಸಂಪರ್ಕದ ಆದೇಶ ಹಿಂಪಡೆಯಲಿ: ಲೋಕಿಕೆರೆ ನಾಗರಾಜ ತಾಕೀತು

ನೀರಾವರಿ ಪಂಪ್‌ಸೆಟ್‌ಗೆ ಕೃಷಿಕರ ಸ್ವಂತ ಹಣದಲ್ಲಿ ವಿದ್ಯುತ್‌ ಸಂಪರ್ಕದ ಆದೇಶ ಹಿಂಪಡೆಯಲಿ: ಲೋಕಿಕೆರೆ ನಾಗರಾಜ ತಾಕೀತು

ಕನ್ನಡಪ್ರಭ ವಾರ್ತೆ ದಾವಣಗೆರೆ

ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಕೃಷಿ ಪಂಪ್‌ಸೆಟ್‌ಗಳಿಗೆ ಟ್ರಾನ್ಸ್‌ಫಾರ್ಮರ್‌ ಸಹಿತ ಮೂಲ ಸೌಲಭ್ಯ ಒದಗಿಸುವ ಯೋಜನೆ ರದ್ದುಪಡಿಸಿ, ರೈತರು ಸ್ವಂತ ಖರ್ಚಿನಲ್ಲಿ ವಿದ್ಯುತ್ ಸಂಪರ್ಕ ಪಡೆಯಬೇಕೆಂಬ ಆದೇಶ ಹೊರಡಿಸಿರುವುದು ಬರದಿಂದ ತತ್ತರಿಸಿದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಲೋಕಿಕೆರೆ ನಾಗರಾಜ ಆಕ್ರೋಶ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಇಂಧನ ಇಲಾಖೆ ಅಧೀನ ಕಾರ್ಯದರ್ಶಿ ಡಿ.ಎಂ.ವಿನೋದ ಕುಮಾರ ಅ.7ಕ್ಕೆ ಹೊರಡಿಸಿದ ಆದೇಶದಲ್ಲಿ ಸೆ.22ರ ನಂತರ ನೋಂದಣಿಯಾಗುವ ನೀರಾವರಿ ಪಂಪ್‌ ಸೆಟ್ ಗಳಿಗೆ ರೈತರು ತಮ್ಮ ಸ್ವಂತ ಹಣದಲ್ಲಿ ವಿದ್ಯುತ್‌ ಸಂಪರ್ಕ ಪಡೆಯಬೇಕೆಂದಿದ್ದು, ಇದರಿಂದ ರೈತರು ನೀರಾವರಿ ಪಂಪ್‌ಸೆಟ್‌ಗೆ ವಿದ್ಯುತ್ ಸಂಪರ್ಕ ಹೊಂದಲು ಲಕ್ಷಾಂತರ ರು. ಖರ್ಚು ಮಾಡಬೇಕಾದ ಸ್ಥಿತಿ ಇದ್ದು, ತಕ್ಷಣ ಈ ಆದೇಶ ಹಿಂಪಡೆಯಲಿ ಎಂದರು.

ಕಳೆದೊಂದು ದಶಕದಿಂದ ಅಕ್ರಮ ಸಕ್ರಮ ಜಾರಿಯಲ್ಲಿತ್ತು. ರೈತರು ಸುಮಾರು 20 ಸಾವಿರ ರು. ಶುಲ್ಕ ಪಾವತಿಸಿ, ಪಂಪ್‌ಸೆಟ್‌ ವಿದ್ಯುತ್ ಸಂಪರ್ಕ ಪರವಾನಗಿ ಪಡೆದರೆ, ವಿದ್ಯುತ್ ಕಂಪನಿಗಳೇ ವಿದ್ಯುತ್ ಸಂಪರ್ಕ ಕಲ್ಪಿಸಬೇಕಿತ್ತು. ಆದರೆ, ಕಾಂಗ್ರೆಸ್ ಸರ್ಕಾರದ ಹೊಸ ನೀತಿಯಿಂದ ವಿದ್ಯುತ್ ಜಾಲ ಎಷ್ಟೇ ದೂರ ಇದ್ದರೂ, ರೈತರು ತಮ್ಮ ಸ್ವಂತ ಹಣದಲ್ಲಿ ವಿದ್ಯುತ್ ಕಂಬ, ತಂತಿ ಹಾಕಿಸಬೇಕಿದೆ. ಅಲ್ಲದೇ, ಲಕ್ಷಾಂತರ ರು. ಖರ್ಚು ಮಾಡಿ, ಟ್ರಾನ್ಸಫಾರ್ಮರ್ ಪಡೆಯಬೇಕಾದ ಸಂದಿಗ್ಧ ಸ್ಥಿತಿ ನಿರ್ಮಿಸಲಾಗಿದೆ ಎಂದು ದೂರಿದರು.

ರೈತರಿಗೆ ನೋಂದಣಿ ಶುಲ್ಕ ಪಾವತಿಸುವುದೇ ಕಷ್ಟವಾಗಿತ್ತು. ಅಂತಹದ್ದರಲ್ಲಿ ಸರ್ಕಾರದ ಹೊಸ ನೀತಿಯಿಂದ ರೈತರು ಪಂಪ್‌ಸೆಟ್‌ಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ಲಕ್ಷಾಂತರ ರು. ಖರ್ಚು ಮಾಡಬೇಕಾಗಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ನಂತರವೇ 200ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದು, ಇದು ದುರ್ದೈವ. ಬರ ಪರಿಸ್ಥಿತಿಯಲ್ಲಿ ಕೃಷಿ ಪಂಪ್ ಸೆಟ್‌ಗೂ ಸ್ವಂತ ಹಣ ಹೊಂದಿಸಲಾಗದ ರೈತರು ಜೀವನ ನಡೆಸುವುದೇ ಕಷ್ಟಕರ ಎಂಬ ಸ್ಥಿತಿಗೆ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ ಸರ್ಕಾರ ರೈತರನ್ನು ನೂಕುತ್ತಿದೆ ಎಂದು ಆರೋಪಿಸಿದರು.

ರೈತ ಮೋರ್ಚಾ ರಾಜ್ಯ ಸಮಿತಿ ಮುಖಂಡ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ, ಕಡ್ಲೇಬಾಳು ಧನಂಜಯ, ಮಾಜಿ ಮೇಯರ್ ಎಚ್‌.ಎನ್‌.ಗುರುನಾಥ, ಅಣಜಿ ಗುಡ್ಡೇಶ, ಎಪಿಎಂಸಿ ಮಾಜಿ ಅಧ್ಯಕ್ಷ ಎಚ್‌.ಜಿ. ಗಣೇಶಪ್ಪ ಕುಂದುವಾಡ, ಬಾತಿ ರೇವಣಸಿದ್ದಪ್ಪ, ಕಡ್ಲೇಬಾಳು ಬಸವರಾಜ, ಅಣಬೇರು ಶಿವಪ್ರಕಾಶ ಇತರರಿದ್ದರು.

ಯಾವ ಸಚಿವರು ರೈತರ ಸಂಕಷ್ಟ ಆಲಿಸಿಲ್ಲ

ಬಿಜೆಪಿ ತಂದ ರೈತ ಪರ ಯೋಜನೆಗಳಾದ ಕಿಸಾನ್ ಸಮ್ಮಾನ್‌ ನಿಧಿ, ರೈತ ವಿದ್ಯಾನಿಧಿ, ಭೂ ಚೇತನ, ಭೂ ಸಿರಿ ಸೇರಿ ಅನೇಕ ಯೋಜನೆಗಳ ಅನುದಾನದ ನೆಪವೊಡ್ಡಿ, ಕಾಂಗ್ರೆಸ್ ಸರ್ಕಾರ ರದ್ದುಪಡಿಸಿದೆ. ವಿದ್ಯುತ್ ಅಭಾವ, ರೈತರ ಸರಣಿ ಆತ್ಮಹತ್ಯೆ, ಬರ ಪೀಡಿತ ಪ್ರದೇಶದ ರೈತರ ನೆರವಿಗೆ ಬರಬೇಕಾದ ಕಾಂಗ್ರೆಸ್ ಸರ್ಕಾರವಾಗಲೀ, ಜಿಲ್ಲಾ ಉಸ್ತುವಾರಿ ಸಚಿವರೂ ಬರ ಪೀಡಿತ ಪ್ರದೇಶಕ್ಕೆ ಹೋಗಿ ರೈತರ ಅಹವಾಲು, ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿಲ್ಲ ಎಂದು ಲೋಕಿಕೆರೆ ನಾಗರಾಜ ದೂರಿದರು.

ಕೃಷಿ ಪಂಪ್‌ಸೆಟ್ ಗೆ ರೈತರು ಸ್ವಂತ ಖರ್ಚಿನಲ್ಲಿ ಹೊಸ ಸಂಪರ್ಕ ಪಡೆಯುವ ಆದೇಶ ರದ್ದುಪಡಿಸಿ, ಹಿಂದಿನ ಪದ್ಧತಿಯನ್ನೇ ಮುಂದುವರಿಸದಿದ್ದರೆ ರಾಜ್ಯದಲ್ಲಿ ಸುಮಾರು 35 ಲಕ್ಷ ಪಂಪ್ ಸೆಟ್‌ ಬಳಕೆದಾರ ರೈತರು ಕಾಂಗ್ರೆಸ್ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ.

ನಾಗರಾಜ ಲೋಕಿಕೆರೆ, ಜಿಲ್ಲಾಧ್ಯಕ್ಷ, ಬಿಜೆಪಿ ರೈತ ಮೋರ್ಚಾ.