ಸಾರಾಂಶ
-ರಾಜ್ಯ ಬಜೆಟ್‌ನಲ್ಲಿ ಕಳೆದ ಸಲ ಏನೂ ಕೊಟ್ಟಿಲ್ಲ, ಈ ಸಲವಾದರೂ ಸರ್ಕಾರ ಗಮನ ಹರಿಸಲು ಆಗ್ರಹ
------ಕನ್ನಡಪ್ರಭ ವಾರ್ತೆ ದಾವಣಗೆರೆ
ಕೇಂದ್ರ, ರಾಜ್ಯ ಸರ್ಕಾರಗಳು ತಮ್ಮ ಅನುಕೂಲಕ್ಕೆ ಬೆಲೆ ಏರಿಸುವ ಮೂಲಕ ಜನ ಸಾಮಾನ್ಯರ ಮೇಲೆ ಆರ್ಥಿಕ ಬರೆ ಎಳೆಯುತ್ತಿವೆ ಎಂದು ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್. ಕುಮಾರಪ್ಪ ಆರೋಪಿಸಿದರು.ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಂಚ ಗ್ಯಾರಂಟಿ ಯೋಜನೆ ನೀಡುವುದಾಗಿ ಕಾಂಗ್ರೆಸ್ ಸರ್ಕಾರವು ರಾಜ್ಯದ ಜನತೆ ಮೂಗಿಗೆ ತುಪ್ಪ ಸವರುವ ಮೂಲಕ ಸುಲಿಗೆ ಮಾಡುತ್ತಿರುವ ಸರ್ಕಾರವಾಗಿದೆ ಎಂದರು.
ಸರ್ಕಾರ ಬೆಲೆ ಏರಿಕೆ, ಆಸ್ತಿ ತೆರಿಗೆ ಶುಲ್ಕ ಶೇ.600 ಮಾರ್ಗದರ್ಶನ ಮೌಲ್ಯಗಳು ಶೇ.30, ವಾಹನ ನೋಂದಣಿ ಶುಲ್ಕ ಶೇ.10, ಆಸ್ಪತ್ರೆ ಸೇವಾ ಶುಲ್ಕ ಶೇ.5, ಬೆಂಗಳೂರು ಮೆಟ್ರೋ ದರಗಳ ಶೇ.50ರಷ್ಟು, ನೀರಿನ ಕರ ಶೇ.30, ವಿದ್ಯುತ್ ದರ ಶೇ.14.5, ಬಸ್ಸು ದರ ಶೇ.15, ಹಾಲಿನ ದರ ಶೇ.14, ಬಿತ್ತನೆ ಬೀಜಗಳ ಬೆಲೆ ಶೇ.60, ಬಿಯರ್ ಬೆಲೆ ಶೇ.45 ಹೀಗೆ ಅನೇಕ ದರ ಏರಿಸುವ ಮೂಲಕ ಕಾಂಗ್ರೆಸ್‌ನ ಬೆಲೆ ಏರಿಕೆಯ ಗ್ಯಾರಂಟಿ ಸರ್ಕಾರವಾಗಿದೆ ಎಂದು ಅವರು ಟೀಕಿಸಿದರು.ಜನನ ಮತ್ತು ಮರಣ ಪ್ರಮಾಣಪತ್ರಕ್ಕೆ 5 ರು. ಇದ್ದ ಶುಲ್ಕವನ್ನು 50 ರು.ಗೆ ಹೆಚ್ಚಿಸಲಾಗಿದೆ. 50 ರು. ಕೊಡುವಲ್ಲಿ 500 ರು. ವಸೂಲು ಮಾಡಲಾಗುತ್ತಿದೆ. ಜನರಿಗೆ ಅನುಕೂಲ ಮಾಡುವುದಕ್ಕಿಂತ ಹೆಚ್ಚಿಸುವ ಕೆಲಸವನ್ನು ಕಾಂಗ್ರೆಸ್ ಸರ್ಕಾರ ಮಾಡುತ್ತಿದೆ. 2028ಕ್ಕೆ ಮತ್ತೆ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿಯುವ ಹಗಲುಗನಸು ಕಾಣುತ್ತಿರುವ ಕಾಂಗ್ರೆಸ್ಸಿಗೆ ಜನಹಿತ, ಅಭಿವೃದ್ಧಿಗಿಂತಲೂ ಪದವಿ, ಅಧಿಕಾರವೇ ಮುಖ್ಯವಾಗಿದೆ ಎಂದು ಅವರು ದೂರಿದರು.
ಸೇವೆಗಾಗಿ ಅಧಿಕಾರ ಮಾಡುವ ಕಾಳಜಿ ಕಾಂಗ್ರೆಸ್ಸಿಗೆ ಇಲ್ಲವಾಗಿದೆ. ಆಸ್ಪತ್ರೆ ಶುಲ್ಕ, ಲಿಕ್ಕರ್, ತೈಲ ಬೆಲೆ ಏರಿಕೆ, ಮೆಟ್ರೋ ದರ ಏರಿಕೆ ಹೀಗೆ ಎಲ್ಲದರ ದರ ಹೆಚ್ಚಿಸುತ್ತಿದ್ದರೆ ಜನರು ಹಣವನ್ನು ಎಲ್ಲಿಂದ ತರಬೇಕು? ಹೈದರಾಬಾದ್ ಇತರೆ ಕಡೆಯೂ ಮೆಟ್ರೋ ದರ ಹೆಚ್ಚಿಸಿಲ್ಲ. ಆದರೆ, ಕೇಂದ್ರದ ಬಿಜೆಪಿ ಸರ್ಕಾರ, ರಾಜ್ಯದ ಕಾಂಗ್ರೆಸ್ ಸರ್ಕಾರವು ಜನರನ್ನು ಸುಲಿಗೆ ಮಾಡುತ್ತಿದ್ದು, ಇದನ್ನು ಆಮ್ ಆದ್ಮಿ ಪಕ್ಷವು ಸಹಿಸುವುದಿಲ್ಲ ಎಂದು ಅವರು ಹೇಳಿದರು.ಕಳೆದ ಸಲ ರಾಜ್ಯ ಬಜೆಟ್‌ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ದಾವಣಗೆರೆ ಜಿಲ್ಲೆಗೆ ಏನೂ ಕೊಡಲಿಲ್ಲ. ಮಾ.7ಕ್ಕೆ ಬಜೆಟ್ ಮಂಡಿಸಲಿರುವ ರಾಜ್ಯ ಸರ್ಕಾರ ದಾವಣಗೆರೆ ಜಿಲ್ಲೆಗೆ ಯೋಜನೆ, ಕಾರ್ಯಕ್ರಮಗಳನ್ನು ಘೋಷಣೆ ಮಾಡಬೇಕು. ಈಗನ ಬೆಲೆ ಏರಿಕೆ ಕೈಬಿಟ್ಟು, ಜನರಿಗೆ ನೆಮ್ಮದಿಯ ಬದುಕನ್ನು ಕಟ್ಟಿಕೊಡಬೇಕು. ಬೆಲೆ ಏರಿಕೆಗೆ ಉಭಯ ಸರ್ಕಾರಗಳೂ ಕಾರಣವಾಗಿದ್ದು, ಇನ್ನಾದರೂ ಬೆಲೆ ಇಳಿಸುವ ಮೂಲಕ ಅನುಕೂಲ ಮಾಡಿಕೊಡಬೇಕು ಎಂದು ಕೆ.ಎಸ್.ಶಿವಕುಮಾರಪ್ಪ ಒತ್ತಾಯಿಸಿದರು.
ಪಕ್ಷದ ಮುಖಂಡ ಎಸ್.ಕೆ.ಆದಿಲ್ ಖಾನ್ ಮಾತನಾಡಿ, ಶಿಕ್ಷಣ, ಆರೋಗ್ಯ ಕ್ಷೇತ್ರಕ್ಕೆ ರಾಜ್ಯ ಸರ್ಕಾರಕ್ಕೆ ಏನೂ ಮಾಡಿಲ್ಲ. ಜನಪರ ಕೆಲಸಗಳ ಬಗ್ಗೆ ಗಮನ ಹರಿಸುತ್ತಿಲ್ಲ. ಶಿಕ್ಷಣ ಕ್ಷೇತ್ರವಂತೂಸಂಪೂರ್ಣ ಹದಗೆಟ್ಟಿದೆ. ಜನಪರ ಕೆಲಸ ಬಿಟ್ಟು, ಜನರ ಸುಲಿಗೆಗೆ ಕಾಂಗ್ರೆಸ್ ಸರ್ಕಾರ ಇಳಿದಿದೆ. ಈಗ ಪಾಲಿಕೆಗೆ ಮತ್ತೆ ಚುನಾವಣೆ ಶೀಘ್ರವೇ ಬರಲಿದ್ದು, ಕಾಂಗ್ರೆಸ್ಸಿನವರು ಈಗ ಅಭಿವೃದ್ಧಿ ಕೆಲಸ ಶುರು ಮಾಡಿದ್ದಾರೆ. ಹೀಗೆ ರಾಜಕಾರಣ ಮಾಡಿದರೆ ಜನ ಸಾಮಾನ್ಯರ ಗತಿ ಏನು ಎಂದು ಪ್ರಶ್ನಿಸಿದರು.ಪಕ್ಷದ ಮುಖಂಡರಾದ ಸುರೇಶ ಶಿಡ್ಲಪ್ಪ, ಕೆ.ರವೀಂದ್ರ ಇದ್ದರು.
.............ಕ್ಯಾಪ್ಷನ್
19ಕೆಡಿವಿಜಿ4ದಾವಣಗೆರೆಯಲ್ಲಿ ಬುಧವಾರ ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷ ಕೆ.ಎಸ್.ಶಿವಕುಮಾರಪ್ಪ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.