ಸಾರಾಂಶ
ಡಿ. ದೇವರಾಜ ಅರಸು 109ನೇ ಜನ್ಮದಿನಾಚರಣೆ
ಕನ್ನಡಪ್ರಭ ವಾರ್ತೆ ಕೊಪ್ಪಳಸರ್ವರಿಗೂ ಸಮಬಾಳು, ಸರ್ವರಿಗೂ ಸಮಪಾಲು ನೀಡಿದ ಧೀಮಂತ ನಾಯಕ ದೇವರಾಜ ಅರಸು ಸಾಮಾಜಿಕ ಪರಿವರ್ತನೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.
ಜಿಲ್ಲಾಡಳಿತ, ಜಿಪಂ, ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮತ್ತು ಡಿ. ದೇವರಾಜ ಅರಸು ಅಭಿವೃದ್ಧಿ ನಿಗಮದ ಸಹಯೋಗದಲ್ಲಿ ನಗರದ ಸಾಹಿತ್ಯ ಭವನದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಡಿ. ದೇವರಾಜ ಅರಸು ಅವರ 109ನೇ ಜನ್ಮ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ದೇವರಾಜ ಅರಸು ಗ್ರಾಮೀಣ ಪ್ರದೇಶದಲ್ಲಿ ಜನಿಸಿ, ಬಡವರ ಶೋಷಿತರ, ದೀನ ದಲಿತರ, ಆರ್ಥಿಕವಾಗಿ ಹಿಂದುಳಿದವರ ಎಲ್ಲ ಜನರ ಜೀವನವನ್ನು ಅರಿತುಕೊಂಡು ಅವರೆಲ್ಲರ ಸಮಸ್ಯೆಗಳ ನಿವಾರಣೆಗಾಗಿ ಶ್ರಮಿಸಿದ್ದು, ದೇಶದಲ್ಲಿಯೇ ಉತ್ತಮ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದಾರೆ. ಅಸ್ಪೃಶ್ಯತೆ ನಿವಾರಣೆ, ಮುಜರಾಯಿ ಇಲಾಖೆಯ ದೇವಸ್ಥಾನಗಳಿಗೆ ದಲಿತ ಅರ್ಚಕರ ನೇಮಕ, ದೇವಾಲಯಗಳಲ್ಲಿ ಬೆತ್ತಲೆ ಸೇವೆ ನಿಷೇಧ, ಜಾತಿ ನಿಂದನೆ ಕಾಯ್ದೆ ಜಾರಿಯಂತಹ ಮಹತ್ವದ ಕಾರ್ಯಕ್ರಮ ಜಾರಿಗೆ ತಂದವರು ದೇವರಾಜ ಅರಸು. ಜಗಜ್ಯೋತಿ ಬಸವಣ್ಣನವರ ಸಮಾನತೆಯ ಪರಿಕಲ್ಪನೆಯನ್ನು ದೇವರಾಜ ಅರಸು ಮೈಗೂಡಿಸಿಕೊಂಡಿದ್ದರು. ಅರಸು ತಮ್ಮ ಆಡಳಿತ ಅವಧಿಯಲ್ಲಿ ದಿಟ್ಟ ನಿರ್ಧಾರಗಳ ಮೂಲಕ ರಾಜ್ಯದ ಅಭಿವೃದ್ಧಿಗೆ ಹಲವಾರು ಕೊಡುಗೆ ನೀಡಿದ್ದಾರೆ ಎಂದು ಹೇಳಿದರು.
ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, ಜನಪರ ಕೆಲಸ ಮತ್ತು ಜನಮನದ ನಾಯಕ ಎಂದರೆ ದೇವರಾಜ ಅರಸು. ಅವರು ತಬ್ಬಲಿ ಜಾತಿಗಳ ತಂದೆ ಎಂದರೆ ತಪ್ಪಾಗಲಾರದು. ಬಹಳಷ್ಟು ಸವಾಲು ಎದುರಿಸಿ ಹಿಂದುಳಿದವರ, ದೀನ ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಆದರ್ಶ ರಾಜಕಾರಣಿಯಾಗಿರುವ ದೇವರಾಜ ಅರಸು ಆಡಳಿತದ ಕಾಲಾವಧಿಯು ಬಡ ಹಿಂದುಳಿದ, ಶೋಷಿತ ವರ್ಗಗಳ ಪಾಲಿಗೆ ಒಂದು ಸುವರ್ಣಯುಗವಾಗಿತ್ತು ಎಂದರು.ಕೊಪ್ಪಳದ ನಿವೃತ್ತ ಪ್ರಾಂಶುಪಾಲರು, ಪ್ರಗತಿಪರ ಚಿಂತಕ ಅಲ್ಲಮಪ್ರಭು ಬೆಟ್ಟದೂರು ಡಿ.ದೇವರಾಜ ಅರಸು ಕುರಿತು ವಿಶೇಷ ಉಪನ್ಯಾಸ ನೀಡಿದರು.
ಕಾರ್ಯಕ್ರಮದಲ್ಲಿ ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ ಕುಮಾರ, ಜಿಪಂ ಉಪಕಾರ್ಯದರ್ಶಿ ಮಲ್ಲಪ್ಪ ತೊದಲಬಾಗಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಸುರೇಶ ಕೋಕರೆ, ಕೊಪ್ಪಳ ತಹಶೀಲ್ದಾರ ವಿಠಲ್ ಚೌಗಲಾ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಇಲಾಖೆಯ ಪತ್ರಾಂಕಿತ ವ್ಯವಸ್ಥಾಪಕ ಬಿ.ವಿ. ಮಠ, ಕೊಪ್ಪಳ ತಾಲೂಕು ಹಿಂದುಳಿದ ಕಲ್ಯಾಣಾಧಿಕಾರಿ ನಗರತ್ನ, ಇಲಾಖೆಯ ವಿಸ್ತರಣಾಧಿಕಾರಿ ಎಚ್.ಕೆ. ಬೆಟಗೇರಿ, ಪ್ರಾಶುಂಪಾಲ ಮಂಜುನಾಥ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.ವೇದಿಕೆ ಕಾರ್ಯಕ್ರಮಕ್ಕೂ ಮೊದಲು ಗವಿಸಿದ್ದೇಶ್ವರ ಮಠದಿಂದ ಸಾಹಿತ್ಯ ಭವನದವರೆಗೆ ಡಿ. ದೇವರಾಜ ಅರಸು ಅವರ ಭಾವಚಿತ್ರದ ಮೆರವಣಿಗೆ ನಡೆಯಿತು.