ಕುಡಿಯುವ ನೀರು ಪೂರೈಸಲು ಸರ್ಕಾರಗಳು ವಿಫಲ

| Published : Sep 20 2024, 01:35 AM IST

ಸಾರಾಂಶ

ಮಹದಾಯಿ ಯೋಜನೆಗೆ ಗೋವಾ ಸುಪ್ರೀಂಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಸರಿಯಾದ ಕಾನೂನು ತಜ್ಞರ ಮುಖಾಂತರ ವಾದ ಮಾಡುತ್ತಿಲ್ಲ. ರಾಜ್ಯದ ಸದಸ್ಯರು ನಿದ್ದೆ ಮಾಡುತ್ತಿದ್ದಾರೆ.

ನವಲಗುಂದ:

ರಾಜ್ಯದ ಜನತೆಗೆ ಸಮರ್ಪಕವಾಗಿ ಕುಡಿಯುವ ನೀರು ಪೂರೈಸುವಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ವಿಫಲವಾಗಿವೆ ಎಂದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಪ್ರವೀಣ ಕುಮಾರ ಶೆಟ್ಟಿ ಆರೋಪಿಸಿದ್ದಾರೆ.

ಕಪ್ಪತಗುಡ್ಡ ರಕ್ಷಣೆ ಹಾಗೂ ಮಹದಾಯಿ ಯೋಜನೆ ಜಾರಿಗೆ ಆಗ್ರಹಿಸಿ ಪಾದಯಾತ್ರೆಗೆ ನರಗುಂದಕ್ಕೆ ಹೋಗುವ ವೇಳೆ ಪಟ್ಟಣದ ರೈತ ಭವನದಲ್ಲಿ ಹುತಾತ್ಮ ಬಸಪ್ಪ ಲಕ್ಕುಂಡಿ ಅವರ ವೀರಗಲ್ಲಿಗೆ ಮಾಲಾರ್ಪಣೆ ಮಾಡಿ ಅವರು ಮಾತನಾಡಿದರು.

ಕುಡಿಯುವ ನೀರಿನ ಯೋಜನೆಗೆ ಸಾವಿರಾರು ಕೋಟಿ ರು. ಮೀಸಲಿಟ್ಟಿದ್ದೇವೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಚುನಾವಣೆ ವೇಳೆ ಹೇಳಿದ್ದರು. ಆದರೆ ಈಗ ಅದರ ಬಗ್ಗೆ ಮಾತೇ ಇಲ್ಲ ಎಂದರು.

ಮಹದಾಯಿ ಯೋಜನೆಗೆ ಗೋವಾ ಸುಪ್ರೀಂಕೋರ್ಟ್‌ನಲ್ಲಿ ತಕರಾರು ಅರ್ಜಿ ಸಲ್ಲಿಸಿದೆ. ಆದರೆ ನಮ್ಮ ರಾಜ್ಯ ಸರ್ಕಾರ ಸರಿಯಾದ ಕಾನೂನು ತಜ್ಞರ ಮುಖಾಂತರ ವಾದ ಮಾಡುತ್ತಿಲ್ಲ. ರಾಜ್ಯದ ಸದಸ್ಯರು ನಿದ್ದೆ ಮಾಡುತ್ತಿದ್ದಾರೆ. ಅವರನ್ನು ಎಚ್ಚರಿಸಲು ಪಾದಯಾತ್ರೆ ಮಾಡುತ್ತಿದ್ದೇವೆ. ಈ ಭಾಗದ ಪ್ರಮುಖ ಬೇಡಿಕೆಯಾದ ಕಳಸಾ-ಬಂಡೂರಿ, ಮಹದಾಯಿ ಯೋಜನೆ ಕೂಡಲೇ ಅನುಷ್ಠಾನ ಮಾಡಬೇಕು. ರಾಜ್ಯ ಸರ್ಕಾರ, ಕೇಂದ್ರ ಸರ್ಕಾರ ರೈತರ ಸಮಸ್ಯೆಗಳನ್ನು ಕಣ್ತೆರೆದು ನೋಡಬೇಕು. ಅದೇ ರೀತಿ ಕಪ್ಪತಗುಡ್ಡವನ್ನು ಗಣಿಗಾರರಿಗೆ ನೀಡಬಾರದು. ಕಪ್ಪತಗುಡ್ಡಕ್ಕೆ ಪ್ರಾಧಿಕಾರ ರಚಿಸಬೇಕು ಎಂದು ಒತ್ತಾಯಿಸಿದರು.

ರೈತ ಮುಖಂಡ ಸುಭಾಶ್ಚಂದ್ರಗೌಡ ಪಾಟೀಲ ಮಾತನಾಡಿ, ಮಹದಾಯಿ ಯೋಜನೆ ರಾಜಕಾರಣಿಗಳಿಂದ ವಿಳಂಬವಾಗುತ್ತಿದೆ ಎಂದು ಆರೋಪಿಸಿದರು.

ಈ ವೇಳೆ ಜಿಲ್ಲಾಧ್ಯಕ್ಷ ಮಂಜುನಾಥ ಲೋತಿಮಠ, ತಾಲೂಕು ಅಧ್ಯಕ್ಷ ವಿಕ್ರಂ ಕುರಿ, ಕಳಸಾ-ಬಂಡೂರಿ ಹೋರಾಟ ಸಮಿತಿ ಅಧ್ಯಕ್ಷ ಯಲ್ಲಪ್ಪ ದಾಡಿಭಾವಿ ಹಾಗೂ ರೈತರು, ಹೋರಾಟಗಾರರು ಹಾಜರಿದ್ದರು.