ಸಾರಾಂಶ
ಬಡ ಮತ್ತು ದಲಿತ ಕುಟುಂಬಗಳಿಗೆ ಸಾಗುವಳಿ ಜಮೀನು ನೀಡುವಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿವೆ.
ಹಗರಿಬೊಮ್ಮನಹಳ್ಳಿ: ರಾಜ್ಯ ಮತ್ತು ಕೇಂದ್ರ ಸರಕಾರಗಳು ರೈತ, ಕಾರ್ಮಿಕ ಮತ್ತು ಮಹಿಳೆಯರ ವಿರೋಧಿ ನೀತಿ ಅನುಸರಿಸುತ್ತಿವೆ. ಬೆಲೆ ಏರಿಕೆ ತಡೆಗಟ್ಟುವಲ್ಲಿ ಸರ್ಕಾರಳು ಸಂಪೂರ್ಣ ವಿಫಲವಾಗಿವೆ ಎಂದು ಸಿಪಿಎಂ ಪಕ್ಷದ ರಾಜ್ಯ ಕಾರ್ಯಾದರ್ಶಿ ಯು.ಬಸವರಾಜ ಬೇಸರ ವ್ಯಕ್ತಪಡಿಸಿದರು.
ಪಟ್ಟಣದ ವಿಶ್ವಕರ್ಮ ಸಮುದಾಯ ಭವನದಲ್ಲಿ ಸಿಪಿಎಂ ಪಕ್ಷದ ೧೦ನೇ ತಾಲೂಕು ಸಮ್ಮೇಳನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಬಡ ಮತ್ತು ದಲಿತ ಕುಟುಂಬಗಳಿಗೆ ಸಾಗುವಳಿ ಜಮೀನು ನೀಡುವಲ್ಲಿ ಅನಗತ್ಯವಾಗಿ ವಿಳಂಬ ಮಾಡುತ್ತಿವೆ. ಜಿಂದಾಲ್ ಕಂಪನಿಗೆ ಅತ್ಯಂತ ಕಡಿಮೆ ಬೆಲೆಯಲ್ಲಿ ೩೬೫೭ ಎಕರೆ ಜಮೀನು ನೀಡಿರುವ ರಾಜ್ಯ ಸರ್ಕಾರ ರೈತರ ವಿಷಯದಲ್ಲಿ ಕನಿಷ್ಠ ಕಾಳಜಿವಹಿಸಿಲ್ಲ ಎಂದು ದೂರಿದರು.ಪಕ್ಷದ ಜಿಲ್ಲಾ ಸಮಿತಿ ಸದಸ್ಯ ಎಸ್.ಜಗನ್ನಾಥ ಪ್ರಾಸ್ತಾವಿಕವಾಗಿ ಮಾತನಾಡಿದರು.ಪಕ್ಷದ ರಾಜ್ಯ ಸಮಿತಿ ಸದಸ್ಯ ಆರ್.ಎಸ್.ಬಸವರಾಜ, ಬಿ.ಮಾಳಮ್ಮ ಮಾತನಾಡಿದರು. ಪಕ್ಷದ ತಾಲೂಕು ಸಮಿತಿ .ಸದಸ್ಯ ಕೆ.ಗಾಳೆಪ್ಪ, ಕೆ.ಅಂಜಿನಮ್ಮ, ಪಿ.ಚಾಂದ್‌ಭೀ, ಎಂ.ಆನಂದ್, ಕೆ.ರಮೇಶ್ ಇತರರಿದ್ದರು. ಪಕ್ಷದ ಮುಖಂಡ ಆನಂದ ನಿರ್ವಹಿಸಿದರು. ಇದಕ್ಕೂ ಮುನ್ನ ಸಮ್ಮೇಳನದ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಹಗರಿಬೊಮ್ಮನಹಳ್ಳಿ ಪಟ್ಟಣದಲ್ಲಿ ಸಿಪಿಎಂ ಪಕ್ಷದ ೧೦ನೇ ತಾಲೂಕು ಸಮ್ಮೇಳನದ ಹಿನ್ನೆಲೆಯಲ್ಲಿ ಪಕ್ಷದ ಮುಖಂಡರು ಪಟ್ಟಣದ ಬಸವೇಶ್ವರ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು.