ಸಾರಾಂಶ
ಮೇಗುಂದಾ ಹೋಬಳಿ ರೈತ, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು, ರಾಜಕೀಯ ಮುಖಂಡರ ಸಭೆಯಲ್ಲಿ ಆರೋಪ
ಕನ್ನಡಪ್ರಭ ವಾರ್ತೆ, ಕೊಪ್ಪಜನವಿರೋಧಿ ಅರಣ್ಯ ಕಾಯ್ದೆಗಳ ಪರಿಣಾಮ ಮಲೆನಾಡಿನ ಜನ ಸಂಕಷ್ಟದಲ್ಲಿ ಸಿಲುಕಿದ್ದು, ಇದನ್ನು ಪರಿಹರಿಸಬೇಕಿದ್ದ ಜನ ಪ್ರತಿನಿಧಿಗಳು ಹಾಗೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ಕಾನೂನು, ಸುಪ್ರಿಂಕೋರ್ಟ್ ನೆಪ ಮುಂದಿಟ್ಟು ರೈತ ಮತ್ತು ಕಾರ್ಮಿಕರ ಜೀವನದೊಂದಿಗೆ ಚೆಲ್ಲಾಟವಾಡುತ್ತಿವೆ ಎಂದು ಮಲೆನಾಡು ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಅದ್ಯಕ್ಷ ಅತ್ತಿಕುಳಿ ಸುಂದರೇಶ್ ಹೇಳಿದರು.ಜಯಪುರದಲ್ಲಿ ಶನಿವಾರ ನಡೆದ ಮೇಗುಂದಾ ಹೋಬಳಿ ವ್ಯಾಪ್ತಿಯ ರೈತ, ಕಾರ್ಮಿಕ ಸಂಘಟನೆಗಳ ಪದಾಧಿಕಾರಿಗಳು ಹಾಗೂ ರಾಜಕೀಯ ಪಕ್ಷಗಳ ಮುಖಂಡರ ಸಭೆಯಲ್ಲಿ ಮಾತನಾಡಿದ ಅವರು, ಮಲೆನಾಡನ್ನು ಕಸ್ತೂರಿ ರಂಗನ್ ವರದಿ, ಸೆಕ್ಷನ್ ೪, ಆನೆ ಬಿಡಾರ ಸೇರಿದಂತೆ, ರಾಷ್ಟ್ರೀಯ ಉದ್ಯಾನವನ ಹಾಗೂ ಹುಲಿಯೋಜನೆ ಹೆಸರಿನಲ್ಲಿ ಒಕ್ಕಲೆಬ್ಬಿಸುವ ಪ್ರಯತ್ನ ನಡೆಸಲಾಗುತ್ತಿದೆ. ಇದನ್ನು ತಡೆಯುವ ಬಗ್ಗೆ ಸರ್ಕಾರ ಗಳು, ಜನ ಪ್ರತಿನಿಧಿಗಳು ನಿರ್ಲಕ್ಷ್ಯ ವಹಿಸಿದ್ದು, ಇದಕ್ಕಾಗಿ ನಾವು ಸಂಘಟಿತ ಹೋರಾಟ ನಡೆಸಬೇಕಿದೆ ಎಂದರು.
ಕಲ್ಲುಗುಡ್ಡೆ ನಾಗರಿಕ ಹೋರಾಟ ಸಮಿತಿ ಅದ್ಯಕ್ಷ ನಾರಾಯಣ ಬೆಂಡೆಹಕ್ಲು ಮಾತನಾಡಿ, ಜನವಿರೋಧಿ ಅರಣ್ಯ ಕಾಯ್ದೆಗಳ ವಿರುದ್ಧ ಕಲ್ಲುಗುಡ್ಡೆ ಯಿಂದ ಕೊಪ್ಪ ಉಪ ಅರಣ್ಯಾಧಿಕಾರಿ ಕಚೇರಿವರೆಗೆ ಕಾಲ್ನಡಿಗೆ ಜಾಥಾವನ್ನು ನಾಗರಿಕ ಹಿತರಕ್ಷಣಾ ಸಮಿತಿಯಿಂದ ಹಮ್ಮಿಕೊಂಡಿದ್ದು ಇದಕ್ಕೆ ಹೋಬಳಿ ಆನೇಕ ಸಂಘಟನೆಯವರು ಸಹಕಾರ ನೀಡುತ್ತಿದ್ದಾರೆ. ಇದೇ ರೀತಿ ಶೃಂಗೇರಿ ಕ್ಷೇತ್ರದ ಎಲ್ಲಾ ಹೋಬಳಿಗಳಿಂದಲೂ ಈ ಕುರಿತು ಜಾಥಾ ಹೊರಟು ಕೊಪ್ಪದಲ್ಲಿ ಸೇರಿ ಸಮಾವೇಷಗೊಂಡು, ಸಂಬಂದಪಟ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಸೂಕ್ತ ಪರಿಹಾರ ಕಂಡುಕೊಳ್ಳಬೇಕು ಎಂದರು.ಮಲೆನಾಡು ಪ್ರಾಂತ್ಯ ಅಡಕೆ ಬೆಳೆಗಾರರ ಸಂಘದ ಕೊಪ್ಪ ತಾಲೂಕು ಅಧ್ಯಕ್ಷ ಕುಕ್ಕುಡಿಗೆ ರವಿಂದ್ರ ಮಾತನಾಡಿ, ಅರಣ್ಯ ಕಾಯ್ದೆಗಳು ಮಲೆನಾಡಿಗೆ ಮಾರಕವಾಗಿದ್ದು, ಈ ಜಟಿಲ ಸಮಸ್ಯೆ ಪರಿಹರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಜಂಟಿಯಾಗಿ ವಿಶೇಷ ಆಸಕ್ತಿ ವಹಿಸಬೇಕಿದೆ ಎಂದರು.
ಮಲೆನಾಡು ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಸಂಚಾಲಕ ಮಣಿಕಂಠನ್ ಕಂದಸ್ವಾಮಿ ಮಾತನಾಡಿ, ಅರಣ್ಯ ಕಾಯ್ದೆಗಳ ಸಮಸ್ಯೆ ದಿನದಿಂದ ದಿನಕ್ಕೆ ಬಿಗಡಾಯಿಸುತ್ತಿದ್ದು, ಇದಕ್ಕೆ ಪರಿಹಾರವೇನು ಎಂಬ ಬಗ್ಗೆ ಬಹಳಷ್ಟು ಗೊಂದಲವಿದೆ. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರದ ಪಾತ್ರ ಮತ್ತು ಜವಾಬ್ಧಾರಿಯ ಬಗ್ಗೆ ಬಹಿರಂಗ ಚರ್ಚೆಯಾಗಬೇಕು ಎಂದರು.ಮಲೆನಾಡು ರೈತ ಮತ್ತು ಕಾರ್ಮಿಕ ಹಿತರಕ್ಷಣಾ ಸಮಿತಿ ಪ್ರಧಾನ ಕಾರ್ಯದರ್ಶಿ ಕಿಬ್ಳಿ ಪ್ರಸನ್ನ ಕುಮಾರ್ ಮಾತನಾಡಿ, ಕ್ಷೇತ್ರದ ಎಲ್ಲಾ ಸಂಘಟನೆಗಳು ಸೇರಿ ಸಾಮೂಹಿಕ ನಿರ್ಣಯ ಮಾಡಿ ಬೃಹತ್ ಹೋರಾಟಕ್ಕೆ ಸಜ್ಜಾಗಬೇಕು. ಹಾಗಾದಾಗ ಮಾತ್ರ ರೈತ ಕಾರ್ಮಿಕ ಹೋರಾಟಕ್ಕೆ ಯಶಸ್ಸು ಸಿಗುತ್ತದೆ ಎಂದರು.
ಸಭೆಯಲ್ಲಿ ಸಹ್ಯಾದ್ರಿ ಕಾಫಿ ಬೆಳೆಗಾರರ ಸಂಘದ ಅದ್ಯಕ್ಷ ಜಯರಾಜ್, ಕಸಾಪ ಕೊಪ್ಪ ತಾ. ಮಾಜಿ ಅದ್ಯಕ್ಷ ನಟರಾಜ್ ಗುಡ್ಡೇತೋಟ, ಜನಶಕ್ತಿಯ ಜಿಲ್ಲಾ ಕಾರ್ಯದರ್ಶಿ ಸುರೇಶ್, ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಕೇಂದ್ರ ಸಮಿತಿ ಸದಸ್ಯ ರಾಮು ಕೌಳಿ, ಕಲ್ಲುಗುಡ್ಡೆ ನಾಗರಿಕ ಹಿತರಕ್ಷಣ ಸಮಿತಿ ಗೌರವಾದ್ಯಕ್ಷ ಶಿವಶಂಕರ್, ಉಪಾಧ್ಯಕ್ಷ ಭರತ್‌ರಾಜ್ ಕಲ್ಲುಗುಡ್ಡೆ ಹಾಗೂ ಇತರ ಪದಾಧಿಕಾರಿಗಳು, ನಾಗರಿಕರಿದ್ದರು.