ಸರ್ಕಾರಗಳು ಮನಮೋಹನಸಿಂಗ್ ರ ಚಿಂತನೆ ಅಳವಡಿಸಿಕೊಳ್ಳಿ: ಕಸಾಪ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ

| Published : Dec 29 2024, 01:17 AM IST

ಸರ್ಕಾರಗಳು ಮನಮೋಹನಸಿಂಗ್ ರ ಚಿಂತನೆ ಅಳವಡಿಸಿಕೊಳ್ಳಿ: ಕಸಾಪ ಜಿಲ್ಲಾಧ್ಯಕ್ಷ ಕೋಡಿ ರಂಗಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಮನಮೋಹನ್ ಸಿಂಗ್ ಅವರ ವಿವಿಧ ಕ್ಷೇತ್ರಗಳ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸುತ್ತಾ ಅವರಿಗೆ ಇಡೀ ದೇಶ ಋಣಿಯಾಗಿರಬೇಕು, ಅಮೆರಿಕ ದೇಶದ ಆರ್ಥಿಕ ಸ್ಥಿತಿ ಕುಸಿದಾಗಲೂ ಕೂಡ ಅಗತ್ಯ ಮಾರ್ಗದರ್ಶನ ನೀಡಿ ಅಮೆರಿಕಾದ ಆರ್ಥಿಕ ಸ್ಥಿತಿಯನ್ನು ಸುಸ್ಥಿರಗೊಳಿಸಲು ನೆರವಾಗಿದ್ದಾರೆ. ಇಂತಹ ಮಹಾನ್ ಚಿಂತಕರ ವಿಚಾರಧಾರೆಗಳನ್ನು ನಾವು ಓದಿ ತಿಳಿದು ಪಾಲಿಸಬೇಕು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ದೇಶದ ಮಾಜಿ ಪ್ರಧಾನಮಂತ್ರಿ ಹಾಗೂ ವಿಶ್ವದ ಶ್ರೇಷ್ಠ ಅರ್ಥಶಾಸ್ತ್ರಜ್ಞ ಎಂದು ಹೆಸರಾಗಿದ್ದ ಡಾ. ಮನಮೋಹನ್ ಸಿಂಗ್ ಅವರು ಹಲವು ಆರ್ಥಿಕ ನೀತಿಗಳ ಮೂಲಕ ಭಾರತವನ್ನು ವಿಶ್ವದ ಬಲಿಷ್ಠ ರಾಷ್ಟ್ರವನ್ನಾಗಿಸಿದರು ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ.ಕೋಡಿ ರಂಗಪ್ಪ ಅಭಿಪ್ರಾಯಪಟ್ಟರು.

ನಗರದ ನಂದಿ ರಂಗಮಂದಿರದ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಯಲ್ಲಿ ಶುಕ್ರವಾರ ಜಿಲ್ಲಾ ಮತ್ತು ತಾಲೂಕು ಸಾಹಿತ್ಯ ಪರಿಷತ್ತಿನ ಘಟಕಗಳು ಆಯೋಜಿಸಿದ್ದ ಡಾ. ಮನಮೋಹನ್ ಸಿಂಗ್ ಅವರಿಗೆ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಗೌರವ ಸಮರ್ಪಿಸಿ ಮಾತನಾಡಿದರು.

90ರ ದಶಕದಲ್ಲಿ ಭಾರತದ ಬಡ ಜನತೆಗೆ ಹಣ ಸಂಪಾದಿಸುವ ಅವಕಾಶಗಳು ಕುಗ್ಗಿ ಹೋಗಿದ್ದವು. ಇಂತಹ ದಯನೀಯ ಸ್ಥಿತಿಯಿಂದ ಬಡವರನ್ನು ಮೇಲೆತ್ತಲು ಆರ್ಥಿಕ ಉದಾರೀಕರಣ ನೀತಿಯನ್ನು ಜಾರಿಗೊಳಿಸಿದರು. ದುಡಿಮೆಗೆ ಹೆಚ್ಚು ಅವಕಾಶಗಳು ತೆರೆದುಕೊಳ್ಳುವಂತೆ ಆರ್ಥಿಕ ವ್ಯವಸ್ಥೆ ರೂಪಿಸಿದರು ಎಂದರು.

ದೇಶದ ಎಲ್ಲ ವರ್ಗಗಳ ಮಕ್ಕಳಿಗೆ ಯಾವುದೇ ತಾರತಮ್ಯವಿಲ್ಲದೆ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಕಲ್ಪಿಸುವ ಉದ್ದೇಶದಿಂದ ಶಿಕ್ಷಣದ ಹಕ್ಕನ್ನು ಶಾಸನಬದ್ಧವಾಗಿ ಜಾರಿಗೊಳಿಸಿ, ಸಾಕ್ಷರತೆಯ ಪ್ರಮಾಣ ಮತ್ತು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ಇದಕ್ಕಾಗಿ ದೇಶದ ಜನತೆ ಡಾ. ಮನಮೋಹನ್ ಸಿಂಗ್ ಅವರಿಗೆ ಋಣಿಯಾಗಿರಬೇಕು ಎಂದು ಹೇಳಿದರು.

ಇವರ ಕಾಲದಲ್ಲಿ ಜಾರಿಗೊಳಿಸಿದ ರಾಜತಾಂತ್ರಿಕ ನೀತಿಗಳಿಂದ ಮತ್ತು ಜಾಗತಿಕ ಆರ್ಥಿಕ ಒಡಂಬಡಿಕೆಗಳಿಂದ ಭಾರತದ ಆರ್ಥಿಕ ಸೂಚ್ಯಂಕಗಳು ಉತ್ತಮಗೊಳ್ಳಲು ಕಾರಣವಾಯಿತು. ಇಂಥ ಶ್ರೇಷ್ಠ ಆರ್ಥಿಕ ತಜ್ಞ, ವೈಜ್ಞಾನಿಕ ಚಿಂತಕ, ಜನಪರ ಕಾಳಜಿ ಹೊಂದಿದ್ದ ರಾಜಕೀಯ ಮುತ್ಸದ್ಧಿ ಡಾ. ಮನಮೋಹನ್ ಸಿಂಗ್ ಅವರ ಚಿಂತನೆಗಳನ್ನು ಸರ್ಕಾರಗಳು ಹಾಗೂ ಆರ್ಥಿಕ ಸಂಸ್ಥೆಗಳು ಅಳವಡಿಸಿಕೊಂಡರೆ ದೇಶದ ಸ್ವಾವಲಂಬನೆ ಸಾಧ್ಯವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಶ್ರದ್ಧಾಂಜಲಿ ಅರ್ಪಿಸಿ ಮಾತನಾಡಿದ ಡಾ.ಎಂ.ಶಂಕರ್, ಸರ್ದಾರ್ ಚಾಂದ್ ಪಾಷಾ, ಅಣ್ಣಮ್ಮ ಮತ್ತು ಸತೀಶ್ ರವರು, ಡಾ.ಮನಮೋಹನ್ ಸಿಂಗ್ ಅವರ ವಿವಿಧ ಕ್ಷೇತ್ರಗಳ ಕೊಡುಗೆಗಳ ಬಗ್ಗೆ ಪ್ರಸ್ತಾಪಿಸುತ್ತಾ ಅವರಿಗೆ ಇಡೀ ದೇಶ ಋಣಿಯಾಗಿರಬೇಕು, ಅಮೆರಿಕ ದೇಶದ ಆರ್ಥಿಕ ಸ್ಥಿತಿ ಕುಸಿದಾಗಲೂ ಕೂಡ ಅಗತ್ಯ ಮಾರ್ಗದರ್ಶನ ನೀಡಿ ಅಮೆರಿಕಾದ ಆರ್ಥಿಕ ಸ್ಥಿತಿಯನ್ನು ಸುಸ್ಥಿರಗೊಳಿಸಲು ನೆರವಾಗಿದ್ದಾರೆ. ಇಂತಹ ಮಹಾನ್ ಚಿಂತಕರ ವಿಚಾರಧಾರೆಗಳನ್ನು ನಾವು ಓದಿ ತಿಳಿದು ಪಾಲಿಸಬೇಕು ಎಂದು ಹೇಳಿದರು.

ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ತಾಲೂಕು ಕಸಾಪ ಅಧ್ಯಕ್ಷ ಯಲವಹಳ್ಳಿ ಸೊಣ್ಣೆಗೌಡ, ಜಿಲ್ಲಾ ಘಟಕದ ಸದಸ್ಯರಾದ ಎಸ್. ಎನ್. ಅಮೃತ್ ಕುಮಾರ್, ಟಿವಿ ಚಂದ್ರಶೇಖರ್, ಶಿಡ್ಲಘಟ್ಟದ ಅಧ್ಯಕ್ಷ ಪಟೇಲ್ ನಾರಾಯಣಸ್ವಾಮಿ ,ಎಸ್ ಸತೀಶ್, ಚಲಪತಿ ಗೌಡ, ಪ್ರೇಮ ಲೀಲಾ, ವೆಂಕಟೇಶ್ ಹಾಗೂ ಶಶಿಕಲಾ, ಸುಜಾತ, ಮಹಮ್ಮದ್ ಬಿಲಾಲ್, ವೆಂಕಟೇಶ್ ಮತ್ತಿತರರು ಶ್ರದ್ಧಾಂಜಲಿ ಸಲ್ಲಿಸಿದರು.