ಯಾವುದೇ ರಾಜಕೀಯ ಪಕ್ಷಗಳು ಅಧಿಕಾರದಲ್ಲಿ ಇರಲಿ, ರೈತವಿರೋಧಿ ನೀತಿಗಳಿಗೆ ಬೆಂಬಲ ನೀಡಬಾರದು. ಸಾಮಾನ್ಯ ವರ್ಗದ ಜನರಿಂದ ಹಿಡಿದು ಪ್ರಧಾನಮಂತ್ರಿವರೆಗೂ ತಿನ್ನುವುದು ರೈತರು ಬೆಳೆದ ಅನ್ನವನ್ನೇ ಎನ್ನುವುದನ್ನು ಮರೆಯಬಾರದು ಎಂದು ಕಾಂಗ್ರೆಸ್ ವಕ್ತಾರ ಹೊದಿಗೆರೆ ರಮೇಶ್ ಹೇಳಿದ್ದಾರೆ.
- ಮಣ್ಣು ಸಾಗಣೆ ಟ್ರ್ಯಾಕ್ಟರ್‌ಗಳಿಗೆ ಅಡ್ಡಿ ಖಂಡಿಸಿ ಪ್ರತಿಭಟನೆಯಲ್ಲಿ ಹೊದಿಗೆರೆ ರಮೇಶ್
- - -ಕನ್ನಡಪ್ರಭ ವಾರ್ತೆ ಚನ್ನಗಿರಿ
ಯಾವುದೇ ರಾಜಕೀಯ ಪಕ್ಷಗಳು ಅಧಿಕಾರದಲ್ಲಿ ಇರಲಿ, ರೈತವಿರೋಧಿ ನೀತಿಗಳಿಗೆ ಬೆಂಬಲ ನೀಡಬಾರದು. ಸಾಮಾನ್ಯ ವರ್ಗದ ಜನರಿಂದ ಹಿಡಿದು ಪ್ರಧಾನಮಂತ್ರಿವರೆಗೂ ತಿನ್ನುವುದು ರೈತರು ಬೆಳೆದ ಅನ್ನವನ್ನೇ ಎನ್ನುವುದನ್ನು ಮರೆಯಬಾರದು ಎಂದು ಕಾಂಗ್ರೆಸ್ ವಕ್ತಾರ ಹೊದಿಗೆರೆ ರಮೇಶ್ ಹೇಳಿದರು.ಬುಧವಾರ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ಹುಚ್ಚವ್ವನಹಳ್ಳಿ ಮಂಜುನಾಥ್ ಬಣದ ತಾಲೂಕು ಘಟಕದಿಂದ ರೈತರು ಜಮೀನು, ರಸ್ತೆ ಮತ್ತು ವ್ಯವಸಾಯಕ್ಕೆ ಮಣ್ಣು ಸಾಗಿಸುವ ಟ್ರ್ಯಾಕ್ಟರ್‌ಗಳಿಗೆ ಅಡ್ಡಿ ಪಡಿಸುತ್ತಿರುವ ಕ್ರಮ ಖಂಡಿಸಿ ಹಮ್ಮಿಕೊಂಡಿದ್ದ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ಮತ್ತು ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.
ರೈತರು ತಮ್ಮ ತೋಟ, ಗದ್ದೆ, ಮತ್ತು ಜಮೀನುಗಳಿಗೆ ಅವರ ಖಾತೆಯಲ್ಲಿಯೇ ಇರುವ ಜಾಗ ಮತ್ತು ಕೆರೆಯ ಮಣ್ಣನ್ನು ತೆಗೆದುಕೊಂಡು ಹೋಗಲು ಅರಣ್ಯ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ತೊಂದರೆ ನೀಡೋದು ಸರಿಯಲ್ಲ. ಜಮೀನು ಸಮತಟ್ಟು ಮಾಡಲು ರೈತರು ಟ್ರ್ಯಾಕ್ಟರ್ ಮೂಲಕ ಮಣ್ಣನ್ನು ತಂದು ಹಾಕಿಕೊಳ್ಳುತ್ತಾರೆ. ಇದಕ್ಕೆ ಜಿಲ್ಲಾಧಿಕಾರಿ ಸಹಾ ಅನುಮತಿ ಕೊಟ್ಟಿದ್ದಾರೆ. ಜಿಲ್ಲಾಧಿಕಾರಿ ಸ್ಥಳಕ್ಕೆ ಬಂದು ಈ ಬಗ್ಗೆ ಸ್ಪಷ್ಟೀಕರಣ ಕೊಡುವವರೆಗೂ ರೈತರ ಹೋರಾಟ ನಿಲ್ಲಿಸುವುದಿಲ್ಲ ಎಂದು ಎಚ್ಚರಿಸಿದರು.ಯಾವ ರೈತರು ಮಣ್ಣು ಗಣಿಗಾರಿಕೆ ಮಾಡುತ್ತಿಲ್ಲ. ರಸಗೊಬ್ಬರ ಬೆಲೆ ಪ್ರತಿ ಕ್ವಿಂಟಲ್‌ಗೆ ₹6 ಸಾವಿರ ಆಗಿದೆ. ರೈತರು ಬೆಳೆದ ಮೆಕ್ಕೆಜೋಳದ ಬೆಳೆ ಕ್ವಿಂ. ₹1700 ಇದೆ. ರೈತರು ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆಗಳೇ ಸಿಗದೇ ಇದ್ದಾಗ ದುಬಾರಿ ಬೆಲೆಯ ರಸಗೊಬ್ಬರ ಖರೀದಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ತಾಲೂಕು ರೈತ ಸಂಘದ ಅಧ್ಯಕ್ಷ ಲಯೋದಹಳ್ಳಿ ರವಿಕುಮಾರ್ ಮಾತನಾಡಿ, ಮೈನಿಂಗ್ ಮಾಡುವವರಿಗೆ ಅಧಿಕಾರಿಗಳು ಬಿಡುತ್ತಾರೆ. ಆದರೆ ಬೆಳೆ ಬೆಳೆಯುವ ಹೊಲವನ್ನು ಹಸನು ಮಾಡಿಕೊಳ್ಳಲು ಮಣ್ಣನ್ನು ತರುವ ರೈತರ ಟ್ರ್ಯಾಕ್ಟರ್‌ಗಳನ್ನು ಸೀಜ್ ಮಾಡುತ್ತಾರೆ. ಅಧಿಕಾರಿಗಳು-ಜನಪ್ರತಿನಿಧಿಗಳು ಶ್ರಮಿಕವರ್ಗದ ಪರವಾಗಿ ಕೆಲಸ ಮಾಡಬೇಕು ಎಂದರು.ಪ್ರತಿಭಟನಾ ಟ್ರ್ಯಾಕ್ಟರ್ ರ್ಯಾಲಿಯು ಪಟ್ಟಣದ ಸರ್ಕಾರಿ ಪದವಿ ಕಾಲೇಜಿನ ಮುಂಭಾಗದಿಂದ ಪ್ರಾರಂಭಗೊಂಡಿತು. ಗಾಂಧಿ ವೃತ್ತದಲ್ಲಿ ರಸ್ತೆ ತಡೆ ನಡೆಸಲಾಯಿತು. ಇದರಿಂದಾಗಿ ರಾಷ್ಟ್ರೀಯ ಹೆದ್ದಾರಿ 13ರಲ್ಲಿ 1 ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಪ್ರಮುಖರಾದ ರಮೇಶ್, ರವಿ, ರಾಮಪ್ಪ, ರಾಜಪ್ಪ, ರಂಗಸ್ವಾಮಿ, ಮಂಜುನಾಥ್, ಅರುಣ್, ಗಂಡುಗಲಿ, ಕಿಶೋರ್, ರಾಕೇಶ್, ಜಯದೇವ್, ಶಿವರಾಜ್, ನವೀನ್, ದಿನೇಶ್ ಸೇರಿದಂತೆ ನೂರಾರು ಸಂಖ್ಯೆಯ ರೈತರು ಭಾಗವಹಿಸಿದ್ದರು.- - -
-21ಕೆಸಿಎನ್‌ಜಿ1, 2:ಜಮೀನು ರಸ್ತೆ ಮತ್ತು ವ್ಯವಸಾಯಕ್ಕೆ ಮಣ್ಣನ್ನು ಸಾಗಿಸುವ ಟ್ರ್ಯಾಕ್ಟರ್‌ಗಳಿಗೆ ಅಡ್ಡಿ ಪಡಿಸುವ ಕ್ರಮ ಚನ್ನಗಿರಿಯಲ್ಲಿ ಖಂಡಿಸಿ ಬೃಹತ್ ಟ್ರ್ಯಾಕ್ಟರ್ ರ್ಯಾಲಿ ನಡೆಯಿತು.