ಸಾರಾಂಶ
ಕನ್ನಡಪ್ರಭ ವಾರ್ತೆ ದೇವರಹಿಪ್ಪರಗಿ
ರೈತರು ಕಷ್ಟದಲ್ಲಿದ್ದರೂ ಯಾವ ಸರ್ಕಾರಗಳು ರೈತರನ್ನು ಮನುಷ್ಯರಂತೆ ಕಾಣುತ್ತಿಲ್ಲ. ನಮ್ಮ ಕಷ್ಟಗಳನ್ನು ಪರಿಹರಿಸಿಕೊಳ್ಳಬೇಕಾದರೇ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯ ಎಂದು ರೈತ ಸಂಘದ ರಾಜ್ಯಾಧ್ಯಕ್ಷ ಚುನಪ್ಪ ಪೂಜಾರಿ ಹೇಳಿದರು.ತಾಲೂಕಿನ ಕೋರವಾರ ಗ್ರಾಮದಲ್ಲಿ ಸೋಮವಾರ ನಡೆದ ರೈತ ಜಾಗೃತ ಸಮಾವೇಶ ಹಾಗೂ ಸದಸ್ಯತ್ವ ಅಭಿಯಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರ ರೈತರಿಗಾಗಿ ಜಾರಿಗೆ ತಂದಿರುವ ಪ್ರಗತಿಪರ ಯೋಜನೆಗಳು ರೈತರ ಕೈ ಸೇರುತ್ತಿಲ್ಲ ಎಂದು ದೂರಿದರು.ರೈತ ಸಂಘದ ರಾಜ್ಯ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಮಾತನಾಡಿ, ಒಕ್ಕಲಿಗ ಒಕ್ಕದಿದ್ದರೇ ಬಿಕ್ಕುವುದು ಜಗವೆಲ್ಲ ಹೆಸರಿಗಷ್ಟೇ ಆಗಿದೆ. ದೇಶದ ಜನರಿಗೆ ಅನ್ನ ನೀಡುತ್ತಿರುವುದು ರೈತ. ಇಂದು ತನ್ನ ಉಳಿವಿಗಾಗಿ ಹೋರಾಟದ ಹಾದಿ ಹಿಡಿದಿರುವುದು ವಿಪರ್ಯಾಸ ಎಂದರು.ತಾಲೂಕು ಘಟಕದ ಅಧ್ಯಕ್ಷ ಈರಪ್ಪ ಕುಳೆಕುಮಟಗಿ ಪ್ರಾಸ್ತಾವಿಕವಾಗಿ ಮಾತನಾಡಿ, ತಾಲೂಕಿನಲ್ಲಿ ರೈತ ಸಂಘ ಒಗ್ಗಟ್ಟಾಗಿ ಧೈರ್ಯದಿಂದ ರೈತರ ಸಮಸ್ಯೆಯ ಕುರಿತು ಸಂಘಟನೆ ಹೋರಾಟ ಮಾಡುತ್ತಿದೆ. ಬರುವಂತ ದಿನಗಳಲ್ಲಿ ಇನ್ನೂ ಹೆಚ್ಚಿನ ಹೋರಾಟಕ್ಕೆ ಬೆಂಬಲ ಸಹಕಾರ ಅಗತ್ಯ ಎಂದು ತಿಳಿಸಿದರು.ಜಿಲ್ಲಾ ಕೃಷಿ ಅಧಿಕಾರಿ(ಜೆಡಿ) ಡಿ.ಡಬ್ಲ್ಯೂ.ರಾಜಶೇಖರ್ ಮಾತನಾಡಿ, ಕೃಷಿಯಲ್ಲಿ ಆಧುನಿಕ ತಂತ್ರಜ್ಞಾನ ಬಳಸಿಕೊಂಡು ಸರ್ಕಾರದ ಸೌಲಭ್ಯ ಪಡೆಯಲು ಸಂಘಗಳ ಮೂಲಕ ರೈತರು ಸರ್ಕಾರದ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಇಂದು ರೈತರು ಆಧುನಿಕ ತಂತ್ರಜ್ಞಾನ ಬಳಸಿಕೊಂಡು 1 ಎಕರೆ ಪ್ರದೇಶದಲ್ಲಿ ಬೆಳೆದು ಲಾಭ ಪಡೆಯುತ್ತಿದ್ದಾರೆ. ಹವಾಮಾನ ವೈಪರಿತ್ಯದಿಂದ ರೈತರ ಬೆಳೆಗಳು ಹಾಳಾಗುತ್ತಿದ್ದು, ಬೆಳೆಗಳ ವಿಮೆ ಮಾಡಿ ರೈತರು ವಿಮಾ ಸೌಲಭ್ಯ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ರೈತರಿಗೆ ಕೃಷಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಸಂದರ್ಭದಲ್ಲಿ ರಾಜ್ಯದ ಕಾರ್ಯಧಕ್ಷ ಮಹಾಂತಗೌಡ ಸುಭೇದಾರ, ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಸೇರಿದಂತೆ ಹಲವಾರು ಜನ ಮುಖಂಡರು ಮಾತನಾಡಿದರು.ಅಭಿನವ ಕಾಶಿಲಿಂಗ ಮಹಾಸ್ವಾಮಿಗಳು ಚೌಕಿಮಠ ಸಾನ್ನಿಧ್ಯ ವಹಿಸಿದ್ದರು. ರೈತ ಚೇತನ ಪ್ರೊ.ನಂಜುಂಡಸ್ವಾಮಿ ಅವರ ಫೋಟೋ ಪ್ರತಿಮೆಗೆ ಪುಷ್ಪ ನಮನ ಸಲ್ಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.ಇದೇ ಸಂದರ್ಭದಲ್ಲಿ ಮುಖಂಡರುಗಳಾದ ಬಸನಗೌಡ ಲಿಂಗದಳ್ಳಿ (ಚಬನೂರ), ಸಚಿನಗೌಡ ಪಾಟೀಲ ಕುದುರಿಸಾಲವಾಡಗಿ, ಭೀಮನಗೌಡ ಸಿದರಡ್ಡಿ, ಸಂಗಮೇಶ ಛಾಯಗೋಳ, ಅಪ್ಪುಗೌಡ ಪೊಲೀಸಪಾಟೀಲ, ಗೌರವಾಧ್ಯಕ್ಷ ಶಿವಾನಂದ ಹಿರೇಮಠ, ಕೃಷಿ ಅಧಿಕಾರಿ ಸೋಮನಗೌಡ ಬಿರಾದಾರ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಸಂಘಟನೆಯ ಪದಾಧಿಕಾರಿಗಳು, ಗ್ರಾಪಂ ಸದಸ್ಯರು ಹಾಗೂ ಸುತ್ತ-ಮುತ್ತಲಿನ ಗ್ರಾಮದ ರೈತರು ಭಾಗವಹಿಸಿದ್ದರು. ರಮೇಶ ಚಾಂದಕವಠೆ ಕಾರ್ಯಕ್ರಮ ನಿರೂಪಿಸಿದರು. ಎಂ.ಡಿ.ವನಹಳ್ಳಿ ಸ್ವಾಗತಿಸಿ, ವಂದಿಸಿದರು.
ನಮ್ಮ ಸಮಸ್ಯೆಗಳನ್ನು ನಾವೇ ಪರಿಹರಿಸಿಕೊಳ್ಳಬೇಕು. ಅದಕ್ಕಾಗಿ ರೈತರೆಲ್ಲಾ ಒಗ್ಗಟ್ಟಾಗಬೇಕು. ಜನಪ್ರತಿನಿಧಿಗಳು ಶ್ರೀಮಂತರಾಗುತ್ತಿದ್ದು ರೈತರು ಬೇಸಾಯದಿಂದ ಸಾಲಬಾಧೆಯಿಂದ ನರಳುತ್ತಿದ್ದಾರೆ. ಕಾನೂನಡಿಯಲ್ಲಿ ನಮಗೆ ಸೇರಬೇಕಾದ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ಆದಕಾರಣ ಸವಲತ್ತುಗಳನ್ನು ಪಡೆಯಲು ರೈತ ಸಂಘಕ್ಕೆ ಸೇರಬೇಕು.
-ಚುನಪ್ಪ ಪೂಜಾರಿ, ರೈತ ಸಂಘದ ರಾಜ್ಯಾಧ್ಯಕ್ಷ.