ಸರ್ಕಾರದ ಎರಡು ವರ್ಷದ ಸಾಧನೆ, ಹೊಸಪೇಟೆಯಲ್ಲಿ ಸಮಾವೇಶ

| Published : May 20 2025, 01:08 AM IST

ಸರ್ಕಾರದ ಎರಡು ವರ್ಷದ ಸಾಧನೆ, ಹೊಸಪೇಟೆಯಲ್ಲಿ ಸಮಾವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಎರಡು ವರ್ಷದ ಹಿಂದೆ ಚುನಾವಣಾ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಆಶ್ವಾಸನೆ ನೀಡಿದೆ.

ಕಾರವಾರ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದು ಎರಡು ವರ್ಷವಾಗಿರುವ ಹಿನ್ನೆಲೆಯಲ್ಲಿ ಸಮರ್ಪಣಾ ಸಂಕಲ್ಪ ಎನ್ನುವ ಹೆಸರಿನಲ್ಲಿ ಹೊಸಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ ಎಂದು ಕಾಂಗ್ರೆಸ್ ಮುಖಂಡ ಕೆ.ಶಂಭು ಶೆಟ್ಟಿ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಎರಡು ವರ್ಷದ ಹಿಂದೆ ಚುನಾವಣಾ ಸಂದರ್ಭದಲ್ಲಿ ಪಂಚ ಗ್ಯಾರಂಟಿ ಆಶ್ವಾಸನೆ ನೀಡಿದ್ದು, ನಮಗೆ ಬಹುಮತದಿಂದ ಜನರು ಸರ್ಕಾರ ರಚಿಸಲು ಅವಕಾಶ ಮಾಡಿಕೊಟ್ಟರು. ಸರ್ಕಾರ ರಚನೆಯಾದ ನಂತರ ಈ ಗ್ಯಾರಂಟಿ ಈಡೇರಿಸಲು ಸಾಧ್ಯವಿಲ್ಲ ಎಂದು ವಿರೋಧ ಪಕ್ಷದವರು ಆರೋಪಿಸಿದರು. ಆದರೆ ಸರ್ಕಾರ ಈ ಗ್ಯಾರಂಟಿ ಜಾರಿ ಮಾಡಿ ಜನರಿಗೆ ಅನುಕೂಲ ಮಾಡಿಕೊಟ್ಟಿದೆ ಎಂದರು.

ಗ್ಯಾರಂಟಿಯಿಂದ ಸರ್ಕಾರ ದಿವಾಳಿಯಾಗಿಲ್ಲ. ಬದಲಾಗಿ ಸರ್ಕಾರದ ಆರ್ಥಿಕ ಪರಿಸ್ಥಿತಿ ಚೆನ್ನಾಗಿ ಆಗಿದೆ. ಬಿಜೆಪಿಯವರು ಮಹಾರಾಷ್ಟ್ರ ಹಾಗೂ ದೆಹಲಿ ಚುನಾವಣೆಯಲ್ಲಿ ನಮ್ಮ ಗ್ಯಾರಂಟಿ ನಕಲು ಮಾಡಿದ್ದರು. ಆದರೆ ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೆ ಬಂದ ನಂತರ ಬಿಜೆಪಿ ಗ್ಯಾರಂಟಿ ನೀಡಿ ಕಿತ್ತುಕೊಳ್ಳುವ ಕೆಲಸ ಮಾಡಿದೆ. ಆದರೆ ನಮ್ಮ ರಾಜ್ಯದಲ್ಲಿ ಮಾತ್ರ ಜನರು ಗ್ಯಾರಂಟಿಯಿಂದ ನೆಮ್ಮದಿಯಾಗಿ ಇರುವಂತೆ ನಮ್ಮ ಸರ್ಕಾರ ಮಾಡಿದೆ ಎಂದರು.

ಗ್ಯಾರಂಟಿ ಹಣದಿಂದ ಶಿಕ್ಷಣ, ವಸ್ತು ಖರೀದಿ ಸೇರಿದಂತೆ ನಾನಾ ಅಂಶಗಳಿಗೆ ಬಳಕೆಯಾಗುತ್ತಿದೆ. ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೂರನೇ ಸ್ಥಾನದಲ್ಲಿದೆ. 320 ಕಿಲೋ ಮೀಟರ್ ಕರಾವಳಿ ಪ್ರದೇಶವನ್ನು ಪ್ಲಾಸ್ಟಿಕ್ ಮುಕ್ತಗೊಳಿಸಲು ಸರ್ಕಾರ ₹820 ಕೋಟಿ ಬಿಡುಗಡೆ ಮಾಡಿದೆ ಎಂದು ಹೇಳಿದರು.

ತಾಲೂಕು ಗ್ಯಾರಂಟಿ ಕಮಿಟಿ ಅಧ್ಯಕ್ಷ ರಾಜೇಂದ್ರ ರಾಣೆ, ಕಾರವಾರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅರವಿಂದ್ ಕಲ್ಗುಟ್ಕರ್, ಮಚ್ಚೇಂದ್ರ ಮಹಾಲೆ ಇದ್ದರು.