ಸಾರಾಂಶ
ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ, ಬಳ್ಳಾರಿಯಲ್ಲಿ ಪಕ್ಷದ ಮುಖಂಡರು ಹಾಗೂ ಕಾಯಕರ್ತರು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಬಳ್ಳಾರಿ: ಮುಡಾ ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ, ನೂರಾರು ಕಾಂಗ್ರೆಸ್ ಕಾರ್ಯಕರ್ತರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ರಾಜ್ಯಪಾಲರು ಸಂವಿಧಾನ ರಕ್ಷಣೆ ಮಾಡುವ ಬದಲು ಸಂವಿಧಾನ ವಿರೋಧಿ ಧೋರಣೆ ಕೈಗೊಂಡಿದ್ದಾರೆ. ಈ ಮೂಲಕ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.ಪಕ್ಷದ ಜಿಲ್ಲಾಧ್ಯಕ್ಷ ಅಲ್ಲಂ ಪ್ರಶಾಂತ್ ನೇತೃತ್ವದಲ್ಲಿ ಇಲ್ಲಿನ ಗಡಗಿ ಚನ್ನಪ್ಪ ವೃತ್ತದಲ್ಲಿ ಜರುಗಿದ ಪ್ರತಿಭಟನೆಯಲ್ಲಿ ಜಮಾಯಿಸಿದ್ದ ಪಕ್ಷದ ಮುಖಂಡರು ಹಾಗೂ ಕಾಯಕರ್ತರು, ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರಲ್ಲದೆ, ಈ ಇಬ್ಬರ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ರಾಜ್ಯಸಭಾ ಸದಸ್ಯ ಸೈಯದ್ ನಾಸಿರ್ ಹುಸೇನ್, ನಗರ ಶಾಸಕ ನಾರಾ ಭರತ್ ರೆಡ್ಡಿ ಹಾಗೂ ಲಿಡ್ಕರ್ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ್ ಅವರು, ಬಿಜೆಪಿಯ ಷಡ್ಯಂತ್ರಕ್ಕೆ ಜಗ್ಗುವುದಿಲ್ಲ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಹಾಗೂ ಶೋಷಿತ ಸಮುದಾಯಗಳ ಪರ ಆಡಳಿತ ನೀಡುತ್ತಿರುವ ಸಿದ್ಧರಾಮಯ್ಯ ಅವರು ಯಾವುದೇ ಕಾರಣಕ್ಕೂ ರಾಜಿನಾಮೆ ನೀಡುವುದಿಲ್ಲ. ಐದು ವರ್ಷಗಳ ಅವಧಿ ಪೂರ್ಣಗೊಳಿಸುತ್ತಾರೆ. ಸಿದ್ದರಾಮಯ್ಯ ಅವರ ಪರ ಕಾಂಗ್ರೆಸ್ ಹೈಕಮಾಂಡ್ ಹಾಗೂ ರಾಜ್ಯದ ಎಲ್ಲ ನಾಯಕರು ಇದ್ದಾರೆ. ಬಿಜೆಪಿಯ ಹುನ್ನಾರಗಳ ವಿರುದ್ಧ ಕಾನೂನು ಹೋರಾಟ ಮಾಡುತ್ತೇವೆ. ಹೋರಾಟಗಳ ಮೂಲಕ ಬಿಜೆಪಿಯ ರಾಜಕೀಯ ಹುನ್ನಾರಗಳನ್ನು ಜನರಿಗೆ ತಿಳಿಸುತ್ತೇವೆ ಎಂದು ಹೇಳಿದರು.ಗಡಗಿ ಚನ್ನಪ್ಪ ವೃತ್ತದಿಂದ ಮೆರವಣಿಗೆ ಹೊರಟ ಪ್ರತಿಭಟನಾಕಾರರು, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ, ರಾಷ್ಟ್ರಪತಿಗೆ ಬರೆದ ಮನವಿಪತ್ರವನ್ನು ಜಿಲ್ಲಾಡಳಿತಕ್ಕೆ ಸಲ್ಲಿಸಿದರು.
ಕಂಪ್ಲಿ ಶಾಸಕ ಜೆ.ಎನ್. ಗಣೇಶ್, ಸಿರುಗುಪ್ಪ ಶಾಸಕ ಬಿ. ನಾಗರಾಜ್, ಮಾಜಿ ಶಾಸಕ ಕೆ.ಎಸ್.ಎಲ್. ಸ್ವಾಮಿ, ಮೇಯರ್ ನಂದೀಶ್ ಮುಲ್ಲಂಗಿ, ಬುಡಾ ಅಧ್ಯಕ್ಷ ಜೆ.ಎಸ್. ಆಂಜಿನೇಯಲು, ಮಾಜಿ ಮೇಯರ್ ರಾಜೇಶ್ವರಿ, ಪಾಲಿಕೆ ಸದಸ್ಯರಾದ ಪಿ. ಗಾದೆಪ್ಪ, ವಿಕ್ರಮ್ (ವಿಕ್ಕಿ), ಬಿ.ವಿ. ಶಿವಯೋಗಿ, ಜಿ.ಪಂ. ಮಾಜಿ ಸದಸ್ಯ ಎ. ಮಾನಯ್ಯ, ಎಲ್. ಮಾರೆಣ್ಣ, ಬೆಣಕಲ್ ಬಸವರಾಜ, ಎರಗುಡಿ ಮುದಿ ಮಲ್ಲಯ್ಯ, ವೆಂಕಟೇಶ ಹೆಗಡೆ, ವಿಷ್ಣು ಬೋಯಪಾಟಿ, ಯತೀಂದ್ರಗೌಡ, ವಿಕೆ ಬಸಪ್ಪ, ಮಂಜುಳಾ, ಅಭಿಲಾಷ್, ಎರಕುಲಸ್ವಾಮಿ, ಹುಮಾಯೂನ್ ಖಾನ್, ಶೋಭಾ ಕಾಳಿಂಗ ಹಾಗೂ ಪಕ್ಷದ ನೂರಾರು ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.