ರಾಜ್ಯಪಾಲರಿಂದ ವಿದ್ಯಾರ್ಥಿಗಳಿಗೆ ಭೋಜನ ವಿತರಣೆ

| Published : Jul 09 2025, 12:19 AM IST

ಸಾರಾಂಶ

ಘಟಿಕೋತ್ಸವದಲ್ಲಿ ಪಾಲ್ಗೊಂಡ ನಂತರ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಅನ್ನಪೂರ್ಣೇಶ್ವರಿ ಆಹಾರ ಸಮಿತಿ ವತಿಯಿಂದ ವಿತರಿಸುತ್ತಿರುವ ಬಿಸಿಯೂಟ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ರಾಜ್ಯಪಾಲರು ವಿದ್ಯಾರ್ಥಿಗಳಿಗೆ ತಾವೇ ಊಟ ಬಡಿಸುವ ಮೂಲಕ ಯೋಜನೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರುಘಟಿಕೋತ್ಸವದಲ್ಲಿ ಪಾಲ್ಗೊಂಡ ನಂತರ ತುಮಕೂರು ವಿಶ್ವವಿದ್ಯಾನಿಲಯದ ಆವರಣದಲ್ಲಿ ಅನ್ನಪೂರ್ಣೇಶ್ವರಿ ಆಹಾರ ಸಮಿತಿ ವತಿಯಿಂದ ವಿತರಿಸುತ್ತಿರುವ ಬಿಸಿಯೂಟ ವಿತರಣಾ ಕೇಂದ್ರಕ್ಕೆ ಭೇಟಿ ನೀಡಿದ ರಾಜ್ಯಪಾಲರು ವಿದ್ಯಾರ್ಥಿಗಳಿಗೆ ತಾವೇ ಊಟ ಬಡಿಸುವ ಮೂಲಕ ಯೋಜನೆಯ ಬಗ್ಗೆ ಮೆಚ್ಚುಗೆ ಸೂಚಿಸಿದರು.

ಪಾವಗಡ ರಾಮಕೃಷ್ಣ ಸೇವಾಶ್ರಮ ಹಾಗೂ ಆದರ್ಶನಗರದ ಶಿರಡಿ ಸಾಯಿಮಂದಿರದ ಸಹಯೋಗದಲ್ಲಿ ಅನ್ನಪೂರ್ಣೇಶ್ವರಿ ಆಹಾರ ಸಮಿತಿಯವರು ಮಾಡುತ್ತಿರುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ ಎಂದು ಶ್ಲಾಘಿಸಿದ ರಾಜ್ಯಪಾಲರು, ರಾಜ್ಯದ ಬೇರೆ ಯಾವ ವಿವಿಯಲ್ಲೂ ಇಂತಹ ಯೋಜನೆ ಕಂಡಿಲ್ಲ. ತುಮಕೂರು ವಿವಿಯಲ್ಲಿ ಕೇವಲ 5 ರೂಪಾಯಿಗೆ ಮಕ್ಕಳಿಗೆ ಊಟ ಕೊಡುತ್ತಿರುವುದು ಮಾದರಿಯಾಗಿದೆ ಎಂದು ಪ್ರಶಂಸಿಸಿದರು.ಈ ವೇಳೆ ಯೋಜನೆ ಕುರಿತು ರಾಜ್ಯಪಾಲರಿಗೆ ವಿವರಿಸಿದ ಪಾವಗಡ ರಾಮಕೃಷ್ಣ ಸೇವಾಶ್ರಮದ ಮುಖ್ಯಸ್ಥರಾದ ಸ್ವಾಮಿ ಜಪಾನಂದಜೀ ಹಾಗೂ ಕುಲಪತಿ ಪ್ರೊ.ಎಂ.ವೆಂಕಟೇಶ್ವರಲು ಅವರು ಕಳೆದ ಮೂರು ವರ್ಷಗಳಿಂದ ದಾನಿಗಳ ಸಹಕಾರ, ಸಮಿತಿ ಸದಸ್ಯರ ನಿಸ್ಪೃಹ ಕಾರ್ಯ ಬದ್ಧತೆಯಿಂದಾಗಿ ಯೋಜನೆ ಅನೂಚಾನವಾಗಿ ನಡೆದು ಬಂದಿದ್ದು, ಪ್ರಸಕ್ತ ಊಟದ ಯೋಜನೆ ಪ್ರಯೋಜನ ಪಡೆಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ 4000 ಕ್ಕೆ ವಿಸ್ತರಣೆಯಾಗಿದೆ. ವಿವಿಯ ನೂತನ ಜ್ಞಾನಸಿರಿ ಕ್ಯಾಂಪಸ್‌ನ ವಿದ್ಯಾರ್ಥಿಗಳಿಗೂ ಊಟ ವಿತರಿಸುತ್ತಿದ್ದು, ದೂರದ ಊರುಗಳಿಂದ ಬೆಳಿಗ್ಗೆ ಹಸಿದು ಬರುವ ವಿದ್ಯಾರ್ಥಿಗಳಿಗೆ ಬಿಸಿಯೂಟ ಅನುಕೂಲವಾಗಿದೆ ಎಂದರು. ಅನ್ನಪೂರ್ಣೆಶ್ವರಿ ಆಹಾರ ಸಮಿತಿ ಸದಸ್ಯರಾದ ಡಾ. ಎಸ್.ನಾಗಣ್ಣ, ಡಾ. ಎಚ್.ಜಿ. ಚಂದ್ರಶೇಖರ್, ಡಾ.ರಮೇಶ್‌ಬಾಬು, ನಟರಾಜಶೆಟ್ಟಿ, ಕುಲಸಚಿವರು, ಕಾಲೇಜಿನ ಪ್ರಾಂಶುಪಾಲೆ ಪ್ರೊ. ದ್ರಾಕ್ಷಾಯಿಣಿ, ಮತ್ತಿತರರು ಹಾಜರಿದ್ದರು.