ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಇದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಯೂ ಇಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕನ್ನಡಪ್ರಭ ವಾರ್ತೆ ಮಂಗಳೂರು
ದ್ವೇಷ ಭಾಷಣ ಮಸೂದೆ ಸರ್ವಾನುಮತದಿಂದ ಅಂಗೀಕಾರವಾಗಿದ್ದು, ರಾಜ್ಯಪಾಲರು ಇದನ್ನು ವಾಪಸ್ ಕಳಿಸಿಲ್ಲ, ತಿರಸ್ಕರಿಸಿಯೂ ಇಲ್ಲ ಅಥವಾ ಅಂಕಿತವನ್ನೂ ಹಾಕಿಲ್ಲ. ಅವರು ಕರೆದಾಗ ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಅಂಕಿತ ಹಾಕದ ಬಗ್ಗೆ ಪ್ರತಿಕ್ರಿಯಿಸಿ, ಮಸೂದೆಯನ್ನು ವಿಧಾನಮಂಡಲದ ಅಧಿವೇಶನದಲ್ಲಿ ಸರ್ವಾನುಮತದಿಂದ ಅಂಗೀಕರಿಸಲಾಗಿದೆ. ನಂತರ ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ರಾಜ್ಯಪಾಲರು ಮಸೂದೆಯ ಸ್ವೀಕಾರವನ್ನೂ ಮಾಡಿಲ್ಲ, ಮಸೂದೆಯನ್ನು ತಿರಸ್ಕರಿಸಿಯೂ ಇಲ್ಲ. ಅಂಕಿತ ಹಾಕದೆ ಅವರ ಬಳಿಯೇ ಇಟ್ಟುಕೊಂಡಿದ್ದಾರೆ. ಅವರು ಕರೆದು ವಿವರಣೆ ಕೇಳಿದರೆ, ಈ ಬಗ್ಗೆ ವಿವರಣೆ ನೀಡಲಾಗುವುದು ಎಂದು ತಿಳಿಸಿದರು.
ಬ್ಯಾನರ್ ತೆಗೆದಿದ್ದೇ ಪ್ರಚೋದನೆ:ಬಳ್ಳಾರಿಯಿಂದ ಬಿಜೆಪಿಯವರು ಪಾದಯಾತ್ರೆ ಮಾಡುವ ಕುರಿತು ಪ್ರತಿಕ್ರಿಯಿಸಿ, ಹಿಂದೆ ಬಳ್ಳಾರಿಯಲ್ಲಿ ಕಾನೂನುಬಾಹಿರ ಗಣಿಗಾರಿಕೆ ಮಾಡುತ್ತಿರುವ ಬಗ್ಗೆ ವಿಧಾನಸಭೆಯಲ್ಲಿ ಚರ್ಚೆ ಮಾಡಿದಾಗ ರೆಡ್ಡಿ ಸಹೋದರರು ಹಾಗೂ ಯಡಿಯೂರಪ್ಪ ನನಗೆ ಸವಾಲು ಹಾಕಿದ್ದರು. ಅದಕ್ಕಾಗಿ ಅಂದು ನಾವು ಬಳ್ಳಾರಿಗೆ ಪಾದಯಾತ್ರೆ ಕೈಗೊಂಡಿದ್ದೆವು. ಅಂದು ನಾವು ಮಾಡಿದ ಪಾದಯಾತ್ರೆ ಬಳ್ಳಾರಿಯಲ್ಲಿ ನಡೆಯುತ್ತಿದ್ದ ಕಾನೂನುಬಾಹಿರ ಗಣಿಗಾರಿಕೆ ವಿರುದ್ಧ. ಈಗ ಬಿಜೆಪಿಯವರು ಪಾದಯಾತ್ರೆ ಮಾಡುತ್ತಿರುವುದು ಏಕೆ? ಎಂದು ಅವರು ಪ್ರಶ್ನಿಸಿದರು.
ಬಳ್ಳಾರಿಯಲ್ಲಿ ಮಹರ್ಷಿ ವಾಲ್ಮೀಕಿ ಪ್ರತಿಮೆ ಉದ್ಘಾಟನೆ ಬಗ್ಗೆ ಹಾಕಿದ್ದ ಬ್ಯಾನರನ್ನು ತೆಗೆಯಬೇಕಾದ ಅಗತ್ಯವೇನಿತ್ತು?. ಅದನ್ನು ತೆಗೆದದ್ದೇ ಘಟನೆಗೆ ಪ್ರಚೋದನೆ ಆಗಿದೆ. ಜನಾರ್ದನ ರೆಡ್ಡಿ, ಶ್ರೀರಾಮುಲು ಅವರು ಸ್ಥಾನ ಕಳೆದುಕೊಂಡಿದ್ದರಿಂದ ಅಸೂಯೆಯಿಂದ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಟೀಕಿಸಿದರು.ಕುರ್ಚಿ ಕಾಳಗ ಬಿಜೆಪಿ, ಮಾಧ್ಯಮಗಳ ಸೃಷ್ಟಿ:‘ಸಂಕ್ರಾಂತಿ ಬಳಿಕ ಕುರ್ಚಿ ಕಾಳಗ ಪಾರ್ಟ್-2 ಆರಂಭ’ ಎಂದಿದ್ದ ಬಿಜೆಪಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಟಾಂಗ್ ಕೊಟ್ಟಿದ್ದಾರೆ. ‘ಮುಖ್ಯಮಂತ್ರಿ ಕುರ್ಚಿ ಬಗ್ಗೆ ಕಾಳಗವೇ ಇಲ್ಲ. ಸುಮ್ಮನೆ ಹೇಳ್ತಾರೆ. ಇದೆಲ್ಲಾ ಮಾಧ್ಯಮಗಳ ಸೃಷ್ಟಿ’ ಎಂದು ಪ್ರತಿಕ್ರಿಯಿಸಿದ್ದಾರೆ.
ಮಂಗಳೂರಿನಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಸಂಕ್ರಾಂತಿ ಬಳಿಕ ಕುರ್ಚಿ ಕಾಳಗ ಪಾರ್ಟ್-2 ಆರಂಭ’ ಎಂಬ ಬಿಜೆಪಿ ಟ್ವೀಟ್ ಬಗ್ಗೆ ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿ, ‘ಬಿಜೆಪಿಯವರು ಹೇಳುವಂತೆ ಯಾವುದೇ ಕಾಳಗ ನಮ್ಮಲ್ಲಿಲ್ಲ. ಕಾಳಗ ಎಂಬುದೆಲ್ಲಾ ಬಿಜೆಪಿ ಮತ್ತು ಮಾಧ್ಯಮದವರ ಸೃಷ್ಟಿ’ ಎಂದರು.ಬಿಜೆಪಿ ಟ್ವೀಟ್‌ನಲ್ಲಿ ಏನಿತ್ತು?:‘ಸಿದ್ದರಾಮಯ್ಯನವರೇ, ನಿಮಗೆ ಇಷ್ಟು ದಿನ ಕೊಟ್ಟ ಮಾತನ್ನು ನೆನಪಿಸುತ್ತಿದ್ದ ಡಿ.ಕೆ.ಶಿವಕುಮಾರ್ ಅವರ ತಾಳ್ಮೆಯ ಕಟ್ಟೆ ಈಗ ಒಡೆದಂತಿದೆ. ಗೌರವಯುತವಾಗಿ ಕುರ್ಚಿ ಬಿಟ್ಟು ಹೋಗದಿದ್ದರೆ, ಕಳುಹಿಸಬೇಕಾಗುತ್ತದೆ’. ‘ಕಾಂಗ್ರೆಸ್ ಕುರ್ಚಿ ಕಾಳಗ ಎರಡನೇ ಆವೃತ್ತಿ ನಿರೀಕ್ಷಿಸಿ, ಸಂಕ್ರಾಂತಿಯ ನಂತರ’ ಎಂದು ಕರ್ನಾಟಕ ಬಿಜೆಪಿ ಟ್ವೀಟ್ ಮಾಡಿತ್ತು.