ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಿ ತೆರಳುವ ವೇಳೆ ಕಾಂಗ್ರೆಸ್ ಸದಸ್ಯರ ದುರ್ವರ್ತನೆ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದ್ದು ಜನತಂತ್ರವೇ ತಲೆ ತಗ್ಗಿಸುವಂತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ಕನ್ನಡಪ್ರಭ ವಾರ್ತೆ ಹೊನ್ನಾಳಿ

ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡಿ ತೆರಳುವ ವೇಳೆ ಕಾಂಗ್ರೆಸ್ ಸದಸ್ಯರ ದುರ್ವರ್ತನೆ ಪ್ರಜಾಪ್ರಭುತ್ವಕ್ಕೆ ಕಳಂಕವಾಗಿದ್ದು ಜನತಂತ್ರವೇ ತಲೆ ತಗ್ಗಿಸುವಂತಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಆಕ್ರೋಶ ವ್ಯಕ್ತಪಡಿಸಿದರು.

ತಾಲೂಕಿನ ತಮ್ಮ ನಿವಾಸದಲ್ಲಿ ಶನಿವಾರ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದರು.

ರಾಜ್ಯಪಾಲರು ಜಂಟಿ ಅಧಿವೇಶವನ್ನು ಕುರಿತು ಮಾತನಾಡಿ ನಂತರ ಹಿಂದಿರುಗುವಾಗ ಅನಗತ್ಯವಾಗಿ ಅವರ ಮೇಲೆ ಮುಗಿಬೀಳುವ, ದಮ್ಕಿ ಹಾಕುವ ಪ್ರಯತ್ನವೂ ನಡೆಯಿತು. ವಿಧಾನ ಪರಿಷತ್ತಿನ ಎಸ್.ರವಿ. ಬಿ.ಕೆ.ಹರಿಪ್ರಸಾದ್, ಮಾಗಡಿ ಶಾಸಕ ಬಾಲಕೃಷ್ಣ, ಹೊಸಕೋಟೆ ಶಾಸಕ ಶರತ್‌ ಬಚ್ಚೇಗೌಡ ಸೇರಿ ಹಲವಾರು ಸದಸ್ಯರು ರಾಜ್ಯಪಾಲರನ್ನು ಎಳೆದಾಡುವ ಪ್ರಯತ್ನ ಮಾಡಿದರು. ಅಷ್ಟೊತ್ತಿಗೆ ಮಾರ್ಷಲ್‌ಗಳು ರಾಜ್ಯಪಾಲರ ರಕ್ಷಣೆಗೆ ಬಂದರು ಎಂದು ಹೇಳಿದರು.

ರಾಜ್ಯಪಾಲರಿಗೆ ದಮ್ಕಿ ಹಾಗೂ ಎಳೆದಾಡಿದ ವಿಧಾನ ಪರಿಷತ್, ವಿಧಾನಸಭೆಯ ಶಾಸಕರನ್ನು ಕೂಡಲೇ ಅಮಾನತ್ತಿಲ್ಲಡಬೇಕು. ಅವರ ವಿರುದ್ದ ಕ್ರಮ ಜರುಗಿಸಬೇಕು ಎಂದು ಉಭಯ ಸದನದ ಆಧ್ಯಕ್ಷರನ್ನು ಆಗ್ರಹಿಸಿದರು.

ಒಬ್ಬ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ಹಾಗೂ ಕೇಂದ್ರ ಸರ್ಕಾರದಿಂದ ನೇಮಕಗೊಂಡಿರುವ ರಾಜ್ಯಪಾಲರಿಂದ ಕೇಂದ್ರ ಸರ್ಕಾರವನ್ನು ಟೀಕಿಸುವ 11 ಪುಟದ ವರದಿಯನ್ನು ಓದಿಸುವ ಪ್ರಯತ್ನ ಮಾಡಿದ್ದು ಸರಿಯಲ್ಲ, ಅದಕ್ಕಾಗಿಯೇ ರಾಜ್ಯಪಾಲರು ಕೇವಲ ಒಂದು ನಿಮಿಷದಲ್ಲೇ ತಮ್ಮ ಭಾಷಣವನ್ನು ಓದಿ ತೆರಳಿದ್ದಾರೆ. ಇದಕ್ಕೆ ರಾಜ್ಯ ಸರ್ಕಾರ ಆಕ್ರೋಶಗೊಂಡು ಅವರ ಮೇಲೆ ಮುಗಿಬೀಳುವ ಪ್ರಯತ್ನ ಮಾಡಿದ್ದು ಖಂಡನಿಯ ಎಂದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದ ವೇಳೆ ಅಂದಿನ ರಾಜ್ಯಪಾಲ ಹಾಗೂ ಕೇಂದ್ರ ಕಾನೂನು ಮಾಜಿ ಸಚಿವ ಹಂಸಭಾರದ್ವಾಜ್ ಹೇಗೆ ನಡೆದುಕೊಂಡರು ಎಂದು ಕಾಂಗ್ರೆಸ್‌ನವರು ಮರತುಬಿಟ್ಟರೇ? ಈ ರಾಜ್ಯಪಾಲರು ಒಂದು ನಿಮಿಷವಾದರೂ ಓದಿದರು. ಆದರೆ ಆಗ ಓದದೇ ಹಿಂತಿರಿಗಿದ್ದರು. ಅಷ್ಟೇ ಅಲ್ಲ ಯಾರೋ ಖಾಸಗಿ ವ್ಯಕ್ತಿಗಳು ಯಡಿಯೂರಪ್ಪ ವಿರುದ್ದ ದೂರು ನೀಡಿದಾಕ್ಷಣ ಅವರ ವಿರುದ್ಧ ತನಿಖೆಗೆ ಆದೇಶಿಸಿದ್ದರು.ಆಗ ರಾಜ್ಯಪಾಲರ ನಡೆ ಸರಿ ಇತ್ತೇ? ಎಂದು ಕಾಂಗ್ರೆಸ್ ನಾಯಕರನ್ನು ತರಾಟೆಗೆ ತೆಗೆದುಕೊಂಡರು.

ಕಾಂಗ್ರೆಸ್ ಅವಧಿಯಲ್ಲಿ ಕೇವಲ 100 ದಿನಗಳ ಕೆಲಸ, ದಿನಕ್ಕೆ ಕೇವಲ 175 ರು., ಪ್ರತಿ ವ್ಯಕ್ತಿಗೆ ವರ್ಷಕ್ಕೆ 17,400 ರು. ಸಿಗುತ್ತಿತ್ತು. ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಅಧಿಕಾರಕ್ಕೆ ಬಂದ ಕೂಡಲೇ, ಹಂತ ಹಂತವಾಗಿ ನರೇಗಾದಲ್ಲಿ ಕೆಲಸ ಮಾಡುವ ಪ್ರತಿಯೊಬ್ಬರಿಗೂ 126 ದಿನ ಕೆಲಸ, ದಿನಕ್ಕೆ 375 ರು. ಹಾಗೂ ವರ್ಷಕ್ಕೆ ಪ್ರತಿಯೊಬ್ಬ ನರೇಗಾದಡಿಯಲ್ಲಿ ಕೆಲಸ ಮಾಡುವವರಿಗೆ 46,875 ರು. ಕೊಡುತ್ತಿದೆ. ಈಗ ಯಾವುದು ಸರಿ ಎಂದು ನೀವೇ ಆತ್ಮವಲೋಕನ ಮಾಡಿಕೊಳ್ಳಿ ಎಂದು ಕಾಂಗ್ರೆಸ್ಸಿಗರಿಗೆ ತಿರುಗೇಟು ನೀಡಿದರು.

ಬಿಜೆಪಿ ತಾಲೂಕು ಅಧ್ಯಕ್ಷ ನಾಗರಾಜ್, ಜಿಲ್ಲಾ ಬಿಜೆಪಿ ಮುಖಂಡ ನೆಲಹೊನ್ನೆ ಮಂಜುನಾಥ್, ಶಿವಾನಂದ್, ಎಸ್.ಎಸ್.ಬೀರಪ್ಪ, ಶಿವು ಹುಡೇದ್, ಅನಿಲ್‌ ಕುಂದುರು, ರಾಜು ಪಲ್ಲವಿ, ಹನುಮಂತಪ್ಪ ಸೇರಿ ಹಲವಾರು ಬಿಜೆಪಿ ಮುಖಂಡರು ಹಾಜರಿದ್ದರು.