ಸಾರಾಂಶ
ಕನ್ನಡಪ್ರಭ ವಾರ್ತೆ ಉಡುಪಿ
ಒಂದು ರಾಜ್ಯದ ಮುಖ್ಯಮಂತ್ರಿಗಳ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡುವಾಗ ಸಾಕಷ್ಟು ಕಾನೂನು ತಜ್ಞರೊಂದಿಗೆ ಚರ್ಚೆ ನಡೆಸಬೇಕಾಗುತ್ತದೆ. ನಮ್ಮ ರಾಜ್ಯ ರಾಜ್ಯಪಾಲರು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಬೇಕಿತ್ತು ಎಂದು ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.ಅವರು ಸೋಮವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.ಖಾಸಗಿ ವ್ಯಕ್ತಿಗಳು ಮುಖ್ಯಮಂತ್ರಿಗಳ ಮೇಲೆ ದೂರು ನೀಡಿದ ದಿನವೇ, ವಿಚಾರಣೆ, ಕಾನೂನು ಚರ್ಚೆಯೇ ಇಲ್ಲದೆ ಶೋಕಾಸ್ ನೋಟಿಸ್ ಜಾರಿಗೊಳಿಸಿರುವುದು ಸರಿಯೇ? ಘನತೆವೆತ್ತ ರಾಜ್ಯಪಾಲರ ಈ ನಡೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಿಎಂ ಸಿದ್ದರಾಮಯ್ಯ ಅವರ ರಾಜಕೀಯದ ಕೊನೆ ದಿನಗಳಲ್ಲಿ ಅವರ ವ್ಯಕ್ತಿತ್ವಕ್ಕೆ ಕಪ್ಪು ಚುಕ್ಕಿ ಇಡುವ ಪ್ರಯತ್ನ ಇದು, ಅದು ಸಫಲವಾಗುವುದಿಲ್ಲ ಎಂದವರು ಹೇಳಿದರು.1984ರಿಂದ ಸಿದ್ದರಾಮಯ್ಯ ಅವರ ಜೊತೆ ಕೆಲಸ ಮಾಡಿದ್ದೇನೆ. ಹಿಂದುಳಿದ ವರ್ಗ, ಮೀನುಗಾರರ ಹಿತೈಷಿಯಾಗಿ, ಹಣಕಾಸು ಸಚಿವರಾಗಿ ಅವರ ಅಧಿಕಾರವಧಿಯಲ್ಲಿ ಕೈಗೊಂಡ ತೀರ್ಮಾನಗಳು ವಿವಾದರಹಿತವಾಗಿದ್ದು, ಸಾಮಾನ್ಯ ಜನರಿಗೆ ಉಪಕಾರಿಯಾಗಿದ್ದವು ಎಂದರು.ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ ಮಾತನಾಡಿ, ರಾಜ್ಯಪಾಲರನ್ನು ಬಳಸಿಕೊಂಡು ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ಕೈ ಹಾಕಿದೆ. ಅಮಿಷ್ ಶಾ ಅವರ ಏಜೆಂಟ್‌ನಂತೆ ರಾಜ್ಯಪಾಲರು ವರ್ತಿಸಬಾರದು. ಪ್ರಾಸಿಕ್ಯೂಷನ್ ಅನುಮತಿ ಹಿಂಪಡೆಯಬೇಕು. ನೈತಿಕತೆ ಇದ್ದರೆ ರಾಜಿನಾಮೆ ನೀಡಿ ವಾಪಾಸ್ ಹೋಗಲಿ ಎಂದು ಆಗ್ರಹಿಸಿದರು.ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮುಖಂಡರಾದ ದಿನೇಶ್ ಹೆಗ್ಡೆ ಮೊಳಹಳ್ಳಿ, ಪ್ರಸಾದ್ ರಾಜ್ ಕಾಂಚನ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್ ಉಪಸ್ಥಿತರಿದ್ದರು.