ಸಾರಾಂಶ
ಕನ್ನಡಪ್ರಭ ವಾರ್ತೆ ಬೀದರ್
ಕಾಂಗ್ರೆಸ್ಸಿಗರು ದಲಿತ ಸಮುದಾಯಕ್ಕೆ ಸೇರಿದ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರಿಗೆ ಅವಮಾನ ಮಾಡಿದ್ದಾರೆ ಎಂದು ಶಾಸಕ ಪ್ರಭು ಚವ್ಹಾಣ್ ಆಕ್ರೋಶ ವ್ಯಕ್ತಪಡಿಸಿದರು.ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯ ಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಮುಡಾ ಅಕ್ರಮಗಳಿಗೆ ಸಂಬಂಧಿಸಿದಂತೆ ಸಂವಿಧಾನಬದ್ಧ ಅಧಿಕಾರ ಬಳಸಿ ತನಿಖೆ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ. ಆದರೆ ಅವರ ವಿರುದ್ಧವೇ ಪ್ರತಿಭಟನೆ ನಡೆಸುವ ಮೂಲಕ ಅವಮಾನ ಮಾಡಿದ್ದಾರೆ ಎಂದರು.
ಕೇಂದ್ರ ಸಚಿವ ಸೇರಿ ಐದು ದಶಕಗಳ ಕಾಲ ವಿವಿಧ ಹುದ್ದೆಗಳನ್ನು ನಿಭಾಯಿಸಿದ ಅನುಭವಿ ರಾಜಕಾರಣಿ ಥಾವರ್‌ಚೆಂದ್ ಗೆಹ್ಲೋಟ್ ಅವರಿಗೆ ಅಗೌರವ ತೋರುವ ಹೇಳಿಕೆ ನೀಡಿ, ಪ್ರತಿಭಟನೆ ನಡೆಸುವ ಮೂಲಕ ದಲಿತ ಸಮುದಾಯಕ್ಕೆ ಮಾಡುವ ಅಪಮಾನ ಇದಾಗಿದೆ.ತನ್ನ ತಪ್ಪುಗಳನ್ನು ಮುಚ್ಚಿಕೊಳ್ಳಲು ರಾಜ್ಯಪಾಲರ ಮೇಲೆ ಗೂಬೆ ಕೂರಿಸುವ ಷಡ್ಯಂತ್ರ ಕಾಂಗ್ರೆಸ್ ಮಾಡುತ್ತಿದೆ. ಮುಡಾದಲ್ಲಿ ಅಂದಾಜು 5 ಸಾವಿರ ಕೋಟಿ ರು. ಹಗರಣ ನಡೆದಿದೆ. ಮುಡಾ ಕುರಿತು ಅಧಿವೇಶನದಲ್ಲಿ ವಿರೋಧ ಪಕ್ಷದವರಿಗೆ ಮಾತನಾಡಲು ಅವಕಾಶ ನೀಡಲಿಲ್ಲ. ಸಿಎಂ ವಿರುದ್ಧ ತನಿಖೆಗೆ ಇದೀಗ ರಾಜ್ಯಪಾಲರು ಅನುಮತಿ ನೀಡಿದ್ದಾರೆ. ತನಿಖೆಗೆ ಸಹಕರಿಸಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.
ಐದು ಗ್ಯಾರಂಟಿ ಯೋಜನೆಗಳ ಆಮಿಷ ತೋರಿಸಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಇದೀಗ ಅವುಗಳನ್ನು ಸಮರ್ಪಕವಾಗಿ ಜಾರಿ ಮಾಡುತ್ತಿಲ್ಲ. ಮಹಿಳೆಯರಿಗೆ ಕಳೆದ ಮೂರು ತಿಂಗಳಿನಿಂದ ಗೃಹಲಕ್ಷ್ಮಿ ಹಣ ಜಮೆಯಾಗಿಲ್ಲ. ರಾಜ್ಯದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ನೀಡುತ್ತಿಲ್ಲ ಎಂದು ದೂರಿದರು.ಜಿಲ್ಲೆಯಾದ್ಯಂತ ರಸ್ತೆಗಳಲ್ಲಿ ಬಿದ್ದಿರುವ ಗುಂಡಿಗಳನ್ನು ಮುಚ್ಚಲು ಸರ್ಕಾರಕ್ಕೆ ಆಗುತ್ತಿಲ್ಲ. ಜಿಲ್ಲಾ ಸಂಕೀರ್ಣ ಕಾಮಗಾರಿ ಇನ್ನೂ ಆರಂಭಿಸಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರಿಗೆ ಬಿಜೆಪಿ ವಿರುದ್ಧ ಮಾತನಾಡುವುದೇ ದೊಡ್ಡ ಕೆಲಸ ಆಗಿದೆ. ಜಿಲ್ಲೆಯ ಸಮಸ್ಯೆಗಳ ಕುರಿತು ಹೋರಾಟ ಮಾಡಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಜಯಕುಮಾರ ಕಾಂಗೆ, ಅಂಬಾರಾಯ ಅಷ್ಟಗಿ ಮಾತನಾಡಿದರು. ಮಾಜಿ ಶಾಸಕ ಗುಂಡಪ್ಪ ವಕೀಲ, ಪ್ರಮುಖರಾದ ಬಾಬು ವಾಲಿ, ವಿಜಯಕುಮಾರ ಪಾಟೀಲ್ ಗಾದಗಿ, ವಸಂತ ಬಿರಾದಾರ್, ಗುರುನಾಥ ಜ್ಯಾಂತಿಕರ್, ಶಿವರಾಜ ಅಲ್ಮಾಜೆ, ಜೈಭೀಮ ಬಂಧು, ರವಿ ನಿಜಾಂಪುರ, ಗುರುನಾಥ ರಾಜಗೀರಾ, ಧೋಂಡಿಬಾ ನರೋಟೆ, ಬಸವರಾಜ ಕಲಬುರಗಿ, ಗುಂಡಪ್ಪ ಬುಧೇರಾ ಇತರರಿದ್ದರು.ಬೃಹತ್ ಹೋರಾಟ ಇಂದು
ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಹಾಗೂ ರಾಜ್ಯಪಾಲರಿಗೆ ಅಪಮಾನ ಮಾಡಿದ್ದನ್ನು ಖಂಡಿಸಿ ಬಿಜೆಪಿಯಿಂದ ಗುರುವಾರ ನಗರದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಸೋಮನಾಥ ಪಾಟೀಲ್ ತಿಳಿಸಿದ್ದಾರೆ. ಬೆಳಗ್ಗೆ 10 ಗಂಟೆಗೆ ನಗರದ ಗಣೇಶ ಮೈದಾನದಲ್ಲಿ ಸೇರಿ, ಡಾ.ಅಂಬೇಡ್ಕರ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಪತ್ರ ಸಲ್ಲಿಸಲಾಗುವುದು. ಪಕ್ಷದ ಮುಖಂಡರು, ಕಾರ್ಯಕರ್ತರು ಹಾಗೂ ದಲಿತಪರ ಸಂಘಟನೆಗಳ ಪ್ರಮುಖರು ಹೋರಾಟದಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.