ಧಾರವಾಡ:

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯಿಂದ ವಿಭಜಿಸಿ ಧಾರವಾಡಕ್ಕೆ ಪ್ರತ್ಯೇಕ ಮಹಾನಗರ ಪಾಲಿಕೆ ಮಾಡುವ ಪ್ರಸ್ತಾವನೆಗೆ ರಾಜ್ಯಪಾಲ ಥಾವರಚೆಂದ್‌ ಗೆಹಲೋತ್‌ ಅವರು ಮಂಗಳವಾರ ಕೆಲವು ಷರತ್ತುಗಳೊಂದಿಗೆ ಅನುಮೋದನೆ ನೀಡಿ, ಮುಂದಿನ ಪ್ರಕ್ರಿಯೆಗಾಗಿ ಕಡತವನ್ನು ಸರ್ಕಾರಕ್ಕೆ ಕಳುಹಿಸಿದ್ದಾರೆ.

ಪ್ರತ್ಯೇಕ ಪಾಲಿಕೆ ಪ್ರಸ್ತಾವನೆ ಇತ್ಯರ್ಥಗೊಳಿಸಲು ಸರ್ಕಾರವು ಕೆಲ ನಿಬಂಧನೆ ಪಾಲಿಸಬೇಕು ಎಂದು ರಾಜ್ಯಪಾಲರು ಸರ್ಕಾರಕ್ಕೆ ಕಳುಹಿಸಿರುವ ಅನುಮೋದನೆಯಲ್ಲಿ ಷರತ್ತುಗಳನ್ನು ಹಾಕಿದ್ದಾರೆ. ಅಸ್ತಿತ್ವದಲ್ಲಿರುವ ಹು-ಧಾ ಮಹಾನಗರ ಪಾಲಿಕೆಯ ಚುನಾಯಿತ ಸಂಸ್ಥೆಯ ಅವಧಿ ಪೂರ್ಣಗೊಂಡ ನಂತರ ವಿಭಜನೆಯ ಅಧಿಸೂಚನೆಯು ಜಾರಿಗೊಳ್ಳಬೇಕು. ಸದ್ಯ ನಡೆಯುತ್ತಿರುವ ಜನಗಣತಿ ಪ್ರಕ್ರಿಯೆ ಪೂರ್ಣಗೊಳ್ಳುವ ವರೆಗೂ ಈಗ ಹುಬ್ಬಳ್ಳಿ-ಧಾರವಾಡದಲ್ಲಿ ಅಸ್ತಿತ್ವದಲ್ಲಿ ಇರುವ ಗಡಿಗಳನ್ನು ಬದಲಾಯಿಸದಂತೆ ಷರತ್ತು ವಿಧಿಸಲಾಗಿದೆ. ಇದರೊಂದಿಗೆ ಹುಬ್ಬಳ್ಳಿ ಹಾಗೂ ಧಾರವಾಡ ಮಹಾನಗರ ಪಾಲಿಕೆಗಳಿಗೆ ಆರ್ಥಿಕ ನೆರವು ಹಾಗೂ ಆದಾಯ ವಿತರಣೆ ಲಭ್ಯವಾಗುವಂತೆ ಅಗತ್ಯ ಕ್ರಮಕೈಗೊಳ್ಳಲು ರಾಜ್ಯಪಾಲರು ಸಲಹೆ ನೀಡಿ ಕಡತವನ್ನು ಸರ್ಕಾರಕ್ಕೆ ಹಿಂದುರಿಗಿಸಿದ್ದಾರೆ.

2025ರ ಏಪ್ರಿಲ್‌ನಲ್ಲಿ ಕಳುಹಿಸಿದ್ದ ಪ್ರಸ್ತಾವನೆ:

ಧಾರವಾಡಕ್ಕೆ ಪ್ರತ್ಯೇಕ ಪಾಲಿಕೆ ರಚಿಸುವಂತೆ ರಾಜ್ಯ ಸರ್ಕಾರ ತೀರ್ಮಾನ ಪ್ರಕಟಿಸಿ 2025ರ ಏಪ್ರಿಲ್ 28ರಂದು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಿತ್ತು. ಆದರೆ, ಈ ವರೆಗೂ ಅನುಮೋದನೆ ಸಿಕ್ಕಿರಲಿಲ್ಲ. ಈ ಮಧ್ಯೆ ಬಿಜೆಪಿ ಅಧಿಕಾರದ ಪಾಲಿಕೆಯಲ್ಲಿ ಬೃಹತ್‌ ಮಹಾನಗರ ಪಾಲಿಕೆಯ ಠರಾವು ಮಾಡಲಾಗಿತ್ತು. ಜೊತೆಗೆ ಶಾಸಕ ಅರವಿಂದ ಬೆಲ್ಲದ ಅವರು ಪ್ರತ್ಯೇಕ ಪಾಲಿಕೆ ಬೇಡ ಎಂಬ ಪತ್ರವನ್ನು ಸಹ ರಾಜ್ಯಪಾಲರಿಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ಪ್ರತ್ಯೇಕ ಪಾಲಿಕೆಯ ಧ್ವನಿ ಜೋರುಗೊಂಡಿತ್ತು. ಈ ಒತ್ತಡಕ್ಕೆ ಮಣಿದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹಾಗೂ ಕಾರ್ಮಿಕ ಸಚಿವ ಸಂತೋಷ ಲಾಡ್‌ ನೇತೃತ್ವದಲ್ಲಿ ಪ್ರತ್ಯೇಕವಾಗಿ ರಾಜ್ಯಪಾಲರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗಿತ್ತು. ಇದೀಗ ರಾಜ್ಯಪಾಲರು ಕಡತಕ್ಕೆ ಅನುಮೋದನೆ ನೀಡಿರುವ ಪ್ರತಿಯನ್ನು ಮಾಜಿ ಮೇಯರ್ ಶಿವು ಹಿರೇಮಠ ಮಂಗಳವಾರ ಪ್ರತ್ಯೇಕ ಪಾಲಿಕೆ ಹೋರಾಟಗಾರರಿಗೆ ತಲುಪಿಸಿದರು.


ಈ ವೇಳೆ ಪತ್ರ ಓದಿದ ಸತ್ಯಾಗ್ರಹದ ನೇತೃತ್ವ ವಹಿಸಿರುವ ಬಿ.ಡಿ. ಹಿರೇಮಠ, ಕೇಂದ್ರ ಸರ್ಕಾರದ ಜನಗಣತಿ ನಿರ್ದೇಶನಾಲಯವು 2026 ಜನವರಿ 1ರಿಂದ ಮಾರ್ಚ್ 31, 2027ರ ವರೆಗೆ ಈಗ ಅಸ್ತಿತ್ವದಲ್ಲಿ ಇರುವ ಗಡಿಗಳನ್ನು ಬದಲಾಯಿಸದಂತೆ ಸೂಚನೆ ನೀಡಿದ್ದಾರೆ. ಈ ಆದೇಶ ಪ್ರಕಟಗೊಳ್ಳುವ ಪೂರ್ವವೇ ಈ ಪ್ರಸ್ತಾವನೆ ಹೋಗಿದ್ದರಿಂದ ಇದಕ್ಕೆ ಅದು ಅನ್ವಯಿಸಲಾರದು. ರಾಜ್ಯಪಾಲರಿಗೆ ಸಲಹೆ ನೀಡಿದವರಿಗೆ ಕಾನೂನು ಜ್ಞಾನ ಇಲ್ಲವೆಂದು ಕಾಣುತ್ತದೆ. ಏನೇ ಆಗಲಿ. ಈಗ ರಾಜ್ಯಪಾಲರು ತಮ್ಮ ಜವಾಬ್ದಾರಿಯನ್ನು ರಾಜ್ಯ ಸರ್ಕಾರದ ಮೇಲೆ ಹಾಕಿದ್ದಾರೆ. ಕಾಂಗ್ರೆಸ್- ಬಿಜೆಪಿಯ ನಾಯಕರೆಲ್ಲರೂ ಸೇರಿ ಅದಕ್ಕೆ ಅಂತಿಮ ಮುದ್ರೆ ಹಾಕಿಸಬೇಕು ಎಂದು ಹಿರೇಮಠ ಆಗ್ರಹಿಸಿದರು.

ಒಟ್ಟಾರೆ, ಕಳೆದ 12 ದಿನಗಳ ನಿರಂತರ ಹೋರಾಟದ ಫಲವಾಗಿ ಪ್ರತ್ಯೇಕ ಪಾಲಿಕೆ ಬಗ್ಗೆ ಇರುವ ಗೊಂದಲಗಳಿಗೆ ತೆರೆ ಬಿದ್ದಿದೆ. ಆದರೆ, ಇಷ್ಟು ದಿನ ರಾಜ್ಯಪಾಲರ ಬಳಿ ಇದ್ದ ಪಾಲಿಕೆಯ ವಿಭಜನೆ ಚೆಂಡು ಈಗ ರಾಜ್ಯ ಸರ್ಕಾರದ ಅಂಗಳಕ್ಕೆ ಹೋಗಿದೆ.ಅಂತಿಮ ಮುದ್ರೆ ವರೆಗೂ ಹೋರಾಟ..

ಪ್ರತ್ಯೇಕ ಪಾಲಿಕೆಯ ನಿರ್ಧಾರಕ್ಕೆ ಇನ್ನೂ ಅಂತಿಮ ಮುದ್ರೆ ಬಿದ್ದಿಲ್ಲ. ಈ ಸರ್ಕಾರ ಮುತುವರ್ಜಿ ವಹಿಸಿ ಶೀಘ್ರ ಇತ್ಯರ್ಥಗೊಳಿಸಬೇಕು. ಅಲ್ಲಿಯವರೆಗೆ ನಮ್ಮ ಹೋರಾಟ ಮುಂದುವರಿಯಲಿದೆ. ಈ ಮೊದಲು ನಿರ್ಧರಿಸಿದಂತೆ ಮೇ 30ರಂದು ಧಾರವಾಡ ಬಂದ್ ಹಾಗೂ ಆಮರಣಾಂತ ಉಪವಾಸ ಇರಲಿದೆ.

ಬಿ.ಡಿ. ಹಿರೇಮಠ ಹೋರಾಟಗಾರರು