ಸಾರಾಂಶ
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರು ಕೇಳಿಬಂದಿರುವುದರಿಂದ ರಾಜ್ಯಪಾಲರು ಅವರಿಗೆ ಶೋಕಾಸ್ ನೋಟಿಸ್ ನೀಡಿದ್ದಾರೆ. ಇದರಿಂದ ಆಕ್ರೋಶಗೊಂಡಿರುವ ಶೋಷಿತ ಸಮುದಾಯಗಳು ನೋಟಿಸ್ ಹಿಂಪಡೆಯುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದವು.
ಧಾರವಾಡ:
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಷಯದಲ್ಲಿ ರಾಜ್ಯಪಾಲರ ನಡೆ ವಿರೋಧಿಸಿ ಕರ್ನಾಟಕ ಶೋಷಿತ ಸಮುದಾಯ ಮಹಾ ಒಕ್ಕೂಟ ಜಿಲ್ಲಾ ಘಟಕವು ಜಿಲ್ಲಾಧಿಕಾರಿ ಕಚೇರಿ ಮುಂಭಾಗ ಸೋಮವಾರ ಪ್ರತಿಭಟಿಸಿತು.ನಗರದ ಕಡಪಾ ಮೈದಾನದಿಂದ ಪ್ರತಿಭಟನಾ ಮೆರವಣಿಗೆ ಕೈಗೊಂಡ ಮಹಾ ಒಕ್ಕೂಟ, ಜ್ಯುಬ್ಲಿ ವೃತ್ತ, ಕೋರ್ಟ್ ಸರ್ಕಲ್ ಮಾರ್ಗವಾಗಿ ಜಿಲ್ಲಾಧಿಕಾರಿ ಕಚೇರಿಗೆ ಬಂದು ಕೆಲಕಾಲ ಪ್ರತಿಭಟಿಸುವ ಜತೆ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿತು.ಸುದೀಘ 40 ವರ್ಷ ರಾಜಕೀಯ ಜೀವನದಲ್ಲಿ ಕಪ್ಪು ಚುಕ್ಕೆ ಇಲ್ಲದ ನಾಯಕ ಸಿದ್ದರಾಮಯ್ಯ. ಜೆಡಿಎಸ್-ಬಿಜೆಪಿ ನಾಯಕರು ಹಾಗೂ ಜಾತಿವಾದಿಗಳು ಸಿದ್ದರಾಮಯ್ಯ ಹೆಸರಿಗೆ ಮಸಿ ಬಳಿಯುವ ನಿಟ್ಟಿನಲ್ಲಿ ರಾಜ್ಯಪಾಲರನ್ನು ಸಹ ಬಳಸಿಕೊಳ್ಳುತ್ತಿರುವುದು ನಾಚಿಕಗೇಡು ಎಂದರು.
ಅಧಿಕಾರದ ಆಸೆಗಾಗಿ ಕೆಲವು ಪಟ್ಟಭದ್ರ ಹಿತಾಶಸಕ್ತಿಗಳು ಸಿದ್ದರಾಮಯ್ಯರ ತೇಜೋವಧೆಗೆ ಯತ್ನಿಸುತ್ತಿವೆ. ರಾಜ್ಯಪಾಲರು ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸಲು ಹೊರಟಿದ್ದಾಗಿಯೂ ಪ್ರತಿಭಟನಕಾರರು ಗಂಭೀರ ಆಪಾದನೆ ಮಾಡಿದರು. ಮುಡಾ ನಿವೇಶನ ಹಾಗೂ ವಾಲ್ಮೀಕಿ ಹಗಣರಣದಲ್ಲಿ ಸಿದ್ದರಾಮಯ್ಯ ಹೆಸರು ತಳಕು ಹಾಕಿ, ಅವರನ್ನು ರಾಜಕೀಯವಾಗಿ ಮುಗಿಸಲು ನಡೆದ ಹುನ್ನಾರಕ್ಕೆ ಬಿಜೆಪಿಯ ರಾಷ್ಟ್ರೀಯ ನಾಯಕರು ಕೂಡ ಕುಮ್ಮಕ್ಕು ನೀಡುತ್ತಿರುವುದಾಗಿ ಆರೋಪಿಸಿದರು.ರಾಜ್ಯಪಾಲರು ಮುಖ್ಯಮಂತ್ರಿಗೆ ನೀಡಿದ ನೋಟಿಸ್ ಹಿಂಪಡೆಯಬೇಕು. ಇಲ್ಲವಾದರೆ, ರಾಜಭವನ ಚಲೋ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿ, ಜಿಲ್ಲಾಧಿಕಾರಿಗಳ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ನಾಗರಾಜ ಗುರಿಕಾರ, ದಾನಪ್ಪ ಕಬ್ಬೇರ, ಮೊಹನ ಹೊಸಮನಿ, ಸೂರಜ್ ಗೌಳಿ, ಹನುಮಂತಪ್ಪ ಅಂಬಿಗೇರ, ಕವಿತಾ ಕಬ್ಬೇರ, ಭೀಮಣ್ಣ ಹೊಸಕೇರಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.