ಸಂಸದ ಗೋವಿಂದ ಕಾರಜೋಳ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೊಂದ ಪೋಷಕರಿಗೆ ಸಾಂತ್ವನ ಹೇಳಿದರು.

ನೊಂದ ಪೋಷಕರಿಗೆ ಸಾಂತ್ವನ । ಘಟನೆ ಬಗ್ಗೆ ವಿಷಾಧ ವ್ಯಕ್ತಪಡಿಸಿದ ಸಂಸದ

ಕನ್ನಡಪ್ರಭ ವಾರ್ತೆ, ಚಿತ್ರದುರ್ಗ

ದರ್ಶನ್ ಗ್ಯಾಂಗ್‌ನಿಂದ ಹತ್ಯೆಗೊಳಗಾದ ಚಿತ್ರದುರ್ಗದ ರೇಣುಕಾಸ್ವಾಮಿ ಮನೆಗೆ ಬುಧವಾರ ಸಂಸದ ಗೋವಿಂದ ಕಾರಜೋಳ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿ, ಇದೊಂದು ಆಘಾತಕಾರಿ ಘಟನೆಯಾಗಿದ್ದು, ಮಗನ ಕಳೆದುಕೊಂಡ ಹೆತ್ತವರ ನೋವು ನಮಗೆ ಅರಿವಿದೆ. ನಿಮ್ಮ ನೋವಿನೊಂದಿಗೆ ಜೊತೆ ಇರುವುದಾಗಿ ಭರವಸೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೇಣುಕಾಸ್ವಾಮಿ ಹತ್ಯೆ ಮನಸ್ಸಿಗೆ ನೋವು ಉಂಟುಮಾಡಿದ್ದು, ಸಮಾಜದಲ್ಲಿ ಇಂತಹ ಅಹಿತಕರ ಘಟನೆಗಳು ನಡೆಯಬಾರದು. ಯಾರೂ ಕೂಡ ಕಾನೂನು ಕೈಗೆತ್ತಿಕೊಳ್ಳಬಾರದು ಎಂದರು.

ಸರ್ಕಾರ ಇಂತಹ ಘಟನೆಗಳು ನಡೆದಾಗ ಗಂಭೀರವಾಗಿ ಪರಿಗಣಿಸಬೇಕು. ಯಾರೇ ತಪ್ಪು ಮಾಡಿದರು ಕಠಿಣ ಶಿಕ್ಷೆ ಆಗಬೇಕು. ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಕರೆದೊಯ್ದು ಚಿತ್ರಹಿಂಸೆ ಕೊಟ್ಟು ಕೊಲೆ‌ ಮಾಡಲಾಗಿದೆ. ಹುಬ್ಬಳ್ಳಿ, ಚಿತ್ರದುರ್ಗದಲ್ಲಿ ಇಂತಹ ಘಟನೆಗಳು ಪದೇ ಪದೇ ನಡೆಯುತ್ತಿವೆ. ಜನರಿಗೆ ಸರ್ಕಾರ ಮತ್ತು ಕಾನೂನಿನ ಭಯ ಇಲ್ಲದಂತಾಗಿದೆ. ಆದ್ದರಿಂದ ಸರ್ಕಾರ ಇಂತಹ ಪ್ರಕರಣಗಳನ್ನು ವಿಶೇಷವಾಗಿ ತನಿಖೆ ಮಾಡಬೇಕು ಎಂದರು.

ಪ್ರಕರಣದ ಹಿಂದೆ ಯಾರೇ ಇದ್ದರು ಅವರಿಗೆ ಕಠಿಣ ಶಿಕ್ಷೆ ವಿಧಿಸಿ ಸಮಾಜಕ್ಕೆ ಸಂದೇಶ ಕೊಡಬೇಕು. ತನಿಖೆಯಿಂದ ಸತ್ಯ ಹೊರಬರಲಿ. ರೇಣುಕಾಸ್ವಾಮಿಯಿಂದ ಯಾರಿಗಾದರೂ ನೋವಾಗಿದ್ರೆ ಪೊಲೀಸರಿಗೆ ದೂರು ನೀಡಬಹುದಿತ್ತು. ಕೊಲೆ ಮಾಡಿರುವುದು ಯಾರೂ ಸಹಿಸಿಕೊಳ್ಳುವಂತದ್ದಲ್ಲ ಎಂದರು.ಸರ್ಕಾರ ಮೃತ ಕುಟುಂಬಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಬೇಕು. ಮೃತನ ಪತ್ನಿಗೆ ಸರ್ಕಾರಿ ಕೆಲಸ ಕೊಟ್ಟು ಕುಟುಂಬ ಕಾಪಾಡುವ ಕೆಲಸ ಮಾಡಲಿ ಸಲಹೆ ಮಾಡಿದರು. ಈ ವೇಳೆ ಶಾಸಕ ತಿಪ್ಪಾರೆಡ್ಡಿ ಇದ್ದರು.

ಬಸವಕೇಂದ್ರ ಮುರುಘಾಮಠದ ಬಸವಪ್ರಭು ಸ್ವಾಮೀಜಿ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ನೊಂದ ಕುಟುಂಬಕ್ಕೆ ಸಾಂತ್ವನ ಹೇಳಿದರು. ಯಾರೂ ನಿರೀಕ್ಷಿಸದ ಘಟನೆ ಇದಾಗಿದೆ. ಇಂತಹ ಆಘಾತಗಳ ಸಹಿಸಿಕೊಳ್ಳುವ ಶಕ್ತಿಯ ಬಸವಾದಿ ಶರಣರು ನೀಡಲಿ. ಕಾನೂನು ಕೈಗೆತ್ತಿಕೊಳ್ಳುವುದು ತಪ್ಪು ಎಂದರು.ಛಲವಾದಿ ಗುರುಪೀಠದ ಬಸವ ನಾಗಿದೇವ ಸ್ವಾಮೀಜಿ ಭೇಟಿ ನೀಡಿ ಸಾಂತ್ವನ ಹೇಳಿ, ಸಾಮಾಜಿಕ ಜಾಲದ ಅತಿಯಾದ ಬಳಕೆ ದುರಂತ ಅಂತ್ಯಕ್ಕೆ ಕಾರಣವಾಗುತ್ತಿದೆ. ಸಾರ್ವಜನಿಕ ಜೀವನದಲ್ಲಿ ಇರುವವರು ಸಮಾಜಕ್ಕೆ ಮಾದರಿಯಾಗುವಂತೆ ನಡೆದುಕೊಳ್ಳಬೇಕು. ಕುಟುಂಬಕ್ಕೆ ಆಧಾರವಾಗಿದ್ದ ಯುವಕನ ಪ್ರಾಣವನ್ನೇ ಬಲಿ ತೆಗೆದುಕೊಂಡಿರುವುದು ಖಂಡನೀಯ. ರೇಣುಕಸ್ವಾಮಿ ಕುಟುಂಬ ಉಜ್ಜಯಿನಿ ಪೀಠದ ಸದ್ಭಕ್ತರಾಗಿದ್ದು ದುಃಖ ಭರಿಸುವ ಶಕ್ತಿ ಭಗವಂತ ನೀಡಲಿ ಎಂದಿದ್ದಾರೆ.

ಅಜಿತ್ ಹನುಮಕ್ಕನವರ್ ಸಾಂತ್ವನ

ಏಷ್ಯಾನೆಟ್ ಸುವರ್ಣ ನ್ಯೂಸ್ ನ ಅಜಿತ್ ಹನುಮಕ್ಕನವರ್ ರೇಣುಕಾಸ್ವಾಮಿ ನಿವಾಸಕ್ಕೆ ಭೇಟಿ ನೀಡಿ ಪೋಷಕರಿಗೆ ಸಾಂತ್ವನ ಹೇಳಿದರು.

ನಂತರ ಮಾತನಾಡಿ, ನೋವಿನಲ್ಲಿರುವ ಕುಟುಂಬದ ಜೊತೆ ಮಾತನಾಡಬಾರದು ಎಂದು ಹೇಳುತ್ತಾರೆ. ಆದರೆ ನಿಮ್ಮ ಜೊತೆ ನಾವಿದ್ದೇವೆ. ಸಾಂತ್ವನ ಹೇಳುವುದು ನಮ್ಮ ಜವಾಬ್ದಾರಿ.

ರೇಣುಕಾಸ್ವಾಮಿ ತಪ್ಪು ಮಾಡಿದ್ದರೆ, ಅಶ್ಲೀಲ ಮೆಸೇಜ್ ಹಾಕಿದ್ದರೆ ಬುದ್ಧಿವಾದ ಹೇಳಬಹುದಿತ್ತು, ಕನಿಷ್ಟ ಪೊಲೀಸರ ಗಮನಕ್ಕೆ ತರಬಹುದಿತ್ತು. ಈ ರೀತಿ ಚಿತ್ರದುರ್ಗದಿಂದ ಅಪಹರಣ ಮಾಡಿ ಮನಸೋ ಇಚ್ಚೆ ಹಲ್ಲೆಮಾಡಿ ಕೋಲೆಮಾಡುವ ಅಗತ್ಯವಿರಲಿಲ್ಲ. ಕುಟುಂಬಕ್ಕೆ ನ್ಯಾಯ ದೊರಕಿಸಿಕೊಡುವುದು ನಮ್ಮ ಕರ್ತವ್ಯ ಎಂದು ತಿಳಿಸಿದ್ದಾರೆ.