ಗೋವಿಂದ ಪೈ, ಕುವೆಂಪು, ಶಿವರುದ್ರಪ್ಪ ಕನ್ನಡದ ಆಧುನಿಕ ತ್ರಿರತ್ನಗಳು: ಚಾಮರಾಜನಗರ ವಿವಿಯ ಮೂಕಳ್ಳಿ ಬಸವಣ್ಣ

| Published : Nov 11 2024, 01:04 AM IST

ಗೋವಿಂದ ಪೈ, ಕುವೆಂಪು, ಶಿವರುದ್ರಪ್ಪ ಕನ್ನಡದ ಆಧುನಿಕ ತ್ರಿರತ್ನಗಳು: ಚಾಮರಾಜನಗರ ವಿವಿಯ ಮೂಕಳ್ಳಿ ಬಸವಣ್ಣ
Share this Article
  • FB
  • TW
  • Linkdin
  • Email

ಸಾರಾಂಶ

ರಾಷ್ಟ್ರಪ್ರಶಸ್ತಿ ವಿಜೇತರಾದ ಗೋವಿಂದ ಪೈ, ಕುವೆಂಪು, ಜಿ.ಎಸ್.ಶಿವರುದ್ರಪ್ಪ ಅವರು ಕನ್ನಡ ಕಂಡಂತಹ ಆಧುನಿಕ ತ್ರಿರತ್ನಗಳು ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮೂಕಳ್ಳಿ ಬಸವಣ್ಣ ಹೇಳಿದರು. ಚಾಮರಾಜನಗರದಲ್ಲಿ ಕನ್ನಡ ರಾಜ್ಯೋತ್ಸವದ 9ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕನ್ನಡ ರಾಜ್ಯೋತ್ಸವ

ಚಾಮರಾಜನಗರ: ರಾಷ್ಟ್ರಪ್ರಶಸ್ತಿ ವಿಜೇತರಾದ ಗೋವಿಂದ ಪೈ, ಕುವೆಂಪು, ಜಿ.ಎಸ್.ಶಿವರುದ್ರಪ್ಪ ಅವರು ಕನ್ನಡ ಕಂಡಂತಹ ಆಧುನಿಕ ತ್ರಿರತ್ನಗಳು ಎಂದು ಚಾಮರಾಜನಗರ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಮುಖ್ಯಸ್ಥ ಮೂಕಳ್ಳಿ ಬಸವಣ್ಣ ಹೇಳಿದರು.

ನಗರದ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಕಚೇರಿಯಲ್ಲಿ ಅಖಿಲ ಕರ್ನಾಟಕ ಕನ್ನಡ ಮಹಾಸಭಾ, ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ನಿಂದ 50 ದಿನಗಳವರೆಗೆ ಅಯೋಜಿಸಿರುವ ಕನ್ನಡ ರಾಜ್ಯೋತ್ಸವದ 9ನೇ ದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು

ಈ ಮೂವರು ಸಾಹಿತಿಗಳಿಂದ ಜೀವನ ಮೌಲ್ಯ ಸಿಕ್ಕಿದೆ. ಅವರ ಆದರ್ಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಅವರ ಚಿಂತನೆಗಳನ್ನು ಮಕ್ಕಳಿಗೆ ತಲುಪಿಸುವ ಕೆಲಸ ಆಗಬೇಕು. ಕನ್ನಡ ಭಾಷೆ ಸುಮಾರು 1500 ವರ್ಷಗಳ ಇತಿಹಾಸ ಹೊಂದಿದೆ ಎಂದರು.

ಕನ್ನಡ ಮೊಟ್ಟಮೊದಲ ರಾಷ್ಟಕವಿ ಗೋವಿಂದ ಪೈ ಅವರಿಗೆ ಮದ್ರಾಸ್ ಸರ್ಕಾರ ರಾಷ್ಟ್ರದ ಕವಿ ಪ್ರಶಸ್ತಿ ನೀಡಿ ಸನ್ಮಾನಿಸಿತು. ಕನ್ನಡ ಅಲ್ಲದೆ ಕೊಂಕಣಿ, ಇಂಗ್ಲಿಷ್ ಸೇರಿದಂತೆ ಅನೇಕ ಭಾಷೆಯಲ್ಲಿ ಪಾಂಡಿತ್ಯ ಹೊಂದಿದ್ದರು. ಕನ್ನಡ ಭಾಷೆ ಶ್ರೀಮಂತ ಭಾಷೆಯಾಗಿದೆ. ಗೋವಿಂದ ಪೈರಂತಹ ಸಂಶೋಧಕರು ಬರದಿದ್ದರೆ ಪಂಪ ನಮಗೆ ಸಿಗುತ್ತಿರಲಿಲ್ಲ. ಪಂಪನಿಂದ ಹಿಡಿದು ಪ್ರಾಚೀನ ಕವಿಗಳನ್ನು ಚಾಲ್ತಿಗೆ ತರುವ ಮೂಲಕ ಕನ್ನಡ ಕಟ್ಟುವ ಕೆಲಸವನ್ನು ಗೋವಿಂದ ಪೈ ಮಾಡಿದ್ದಾರೆ ಎಂದು ತಿಳಿಸಿದರು.

ಕುವೆಂಪು ಜಗತ್ತು ಕಂಡಂತಹ ಶ್ರೇಷ್ಠಕವಿಯಾಗಿದ್ದರು. ಅವರ ಪಂಚಸೂತ್ರಗಳು ಅಳವಡಿಸಿಕೊಳ್ಳಬೇಕು. ಅದೇ ರೀತಿಯಲ್ಲಿ ಡಾ.ಜಿ.ಎಸ್.ಶಿವರುದ್ರಪ್ಪ ಅವರು ವಿಶ್ವಪ್ರಜ್ಞೆ ಚಿಂತನೆ ಬೆಳೆಸಿದವರು. ಸಾಹಿತ್ಯ ಸಂಶೋಧನಾ ಹಿನ್ನೆಲೆಯಲ್ಲಿ ಸೇವೆ ಸಲ್ಲಿಸಿದರು. ಹಲವಾರು ವಿಷಯ ತಿಳಿದುಕೊಂಡಿದ್ದರು. ಈ ಮೂವರು ನಾಡಿಗೆ ತಮ್ಮದೇಯಾದಂತ ಕೊಡುಗೆ ನೀಡಿದ್ದಾರೆ ಎಂದರು.

ಕನ್ನಡ ಮಹಾಸಭಾದ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ, ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ, ಬರಹಗಾರ ಲಕ್ಷ್ಮೀನರಸಿಂಹ, ಶಾ.ಮುರಳಿ, ತಮಿಳು ಸಂಘ ಶಿವಲಿಂಗಮೂರ್ತಿ, ಮತ್ತುರಾಜು, ನಂಜುಂಡಶೆಟ್ಟಿ, ಪಣ್ಯದಹುಂಡಿ ರಾಜು, ವೀರಭದ್ರ, ತಾಂಡವಮೂರ್ತಿ, ಆಟೋ ಲಿಂಗರಾಜು, ರಾಚಪ್ಪ ಹಾಜರಿದ್ದರು.