ವೈಕುಂಠ ಏಕಾದಶಿ ಪ್ರಯುಕ್ತ ಮಂಗಳವಾರ ರಾಜ್ಯದ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು.
ಕನ್ನಡಪ್ರಭ ವಾರ್ತೆ ಬೆಂಗಳೂರು
ವೈಕುಂಠ ಏಕಾದಶಿ ಪ್ರಯುಕ್ತ ಮಂಗಳವಾರ ರಾಜ್ಯದ ವಿಷ್ಣು ದೇವಾಲಯಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆದವು.ಹಬ್ಬದ ಅಂಗವಾಗಿ ದೇಗುಲಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಪಂಚಾಮೃತಾಭಿಷೇಕ, ಪುಷ್ಪಾಭಿಷೇಕ ಸೇರಿದಂತೆ ವಿವಿಧ ವಿಶೇಷ ಪೂಜೆಗಳನ್ನು ನೆರವೇರಿಸುವ ಮೂಲಕ ಭಕ್ತಾದಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಮುಂಜಾನೆಯಿಂದಲೇ ಭಕ್ತರು ದೇವಸ್ಥಾನಗಳಿಗೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು. ಬಹುತೇಕರು ಉಪವಾಸ ವ್ರತದೊಂದಿಗೆ ದೇವಾಲಯಗಳಲ್ಲಿ ವಿಶೇಷ ಪೂಜೆಗಳಲ್ಲಿ ಭಾಗಿಯಾಗಿದ್ದರು. ಎಲ್ಲಡೆ ಗೋವಿಂದಾ ಗೋವಿಂದ ನಾಮಸ್ಮರಣೆ ಮೊಳಗಿತು.
ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಶಿವನಸಮುದ್ರ ಸಮೂಹ ದೇವಾಲಯದಲ್ಲಿರುವ ಮಧ್ಯರಂಗನಾಥಸ್ವಾಮಿ ದೇವಸ್ಥಾನದಲ್ಲಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ, ಹೂಗಳ ಅಲಂಕಾರ ಮಾಡಲಾಯಿತು. ಪ್ರಾತಃಕಾಲದಲ್ಲಿ ಮಧ್ಯರಂಗನಾಥಸ್ವಾಮಿಗೆ ಸುಪ್ರಭಾತ ಸೇವೆ, ಸಹಸ್ರ ನಾಮ, ತೋಮಾಲೆ ಸೇವೆ ನೈವೇದ್ಯ ನಡೆಸಿ ಮಹಾಮಂಗಳಾರತಿ ಮಾಡಲಾಯಿತು. ವೈಕುಂಠ ದ್ವಾರ (ಸ್ವರ್ಗದ ಬಾಗಿಲು) ತೆಗೆಯುವ ಮೂಲಕ ಭಕ್ತರನ್ನು ಕಳುಹಿಸಲಾಯಿತು.ಮಂಗಳೂರಿನ ಡೊಂಗರಕೇರಿ ಶ್ರೀವೆಂಕಟರಮಣ ದೇವಸ್ಥಾನದಲ್ಲಿ ಪುಷ್ಪಯಾಗ, ಅಷ್ಟಾವಧಾನ ಸೇವೆ, ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ, ನಾಮತ್ರಯ ಮಹಾಮಂತ್ರ ಜಪಯಜ್ಞಗಳನ್ನು ನೆರವೇರಿಸಲಾಯಿತು. ದೇವರ ಮುಂದೆ ದೀಪ ಬೆಳಗಿಸಿ, ತುಳಸಿ ದಳ ಅರ್ಪಣೆ ಮಾಡಲಾಯಿತು.
ದಾವಣಗೆರೆಯ ಎಂಸಿಸಿ ಬಿ ಬ್ಲಾಕ್ ನಲ್ಲಿರುವ ವೆಂಕಟೇಶ್ವರ ದೇವಾಲಯದಲ್ಲಿ ವೆಂಕಟೇಶ್ವರ ಸ್ವಾಮಿ ದರ್ಶನಕ್ಕೆ 3 ಕಿ.ಮೀ.ಗೂ ಅಧಿಕ ದೂರ ಭಕ್ತರ ಸರತಿ ಸಾಲು ಕಂಡು ಬಂತು. ಮೈ ಕೊರೆಯುವ ಚಳಿಯಲ್ಲೂ ಬೆಳಗ್ಗೆ 4 ಗಂಟೆಯಿಂದಲೆ ದೇವರ ದರ್ಶನಕ್ಕಾಗಿ ಭಕ್ತರು ಸರತಿ ಸಾಲಿನಲ್ಲಿ ನಿಂತಿದ್ದರು.---ಮಧುಗಿರಿಯಲ್ಲಿ ಪರಂ ದಂಪತಿ ಪೂಜೆ:ತುಮಕೂರು ಜಿಲ್ಲೆ ಮಧುಗಿರಿಯ ಪುರಾಣ ಪ್ರಸಿದ್ಧ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ಗೃಹ ಸಚಿವ ಪರಮೇಶ್ವರ್ ಅವರು ಪತ್ನಿ ಕನ್ನಿಕಾ ಪರಮೇಶ್ವರ್ ಅವರು ಪೂಜೆ ಸಲ್ಲಿಸಿದರು. ಲಕ್ಷ್ಮೀವೆಂಕಟರಣಸ್ವಾಮಿ, ಅಲುವೇಲು ಮಂಗಲಮ್ಮ ಹಾಗೂ ಪದ್ಮಾವತಿಗೆ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷವಾಗಿ ವಸ್ತ್ರಾಭರಣಗಳನ್ನು ತೊಡಿಸಿ, ಹೂವಿನ ಅಲಂಕಾರ ಮಾಡಲಾಗಿತ್ತು. ಜೊತೆ ಶ್ರೀಲಕ್ಷ್ಮೀವೆಂಕಟರಮಣಸ್ವಾಮಿ ಮತ್ತು ದಂಡಿನ ಮಾರಮ್ಮ ದೇವಸ್ಥಾನಗಳಿಗೆ ಭೇಟಿ ಕೊಟ್ಟು, ವಿಶೇಷ ಪೂಜೆ ನೆರವೇರಿಸಿದರು.