ಸಾರಾಂಶ
ಕುರುಗೋಡು: ರಾಜ್ಯ ಸರ್ಕಾರವು ಕೈಗಾರಿಕಾ ಮಾಲೀಕರ ಜತೆ ಸೇರಿ ಕಾನೂನು ಬಾಹಿರವಾಗಿ ಮೋಸದ ಭೂ ಬೆಲೆ ನಿಗದಿಪಡಿಸಿ ಬಡ ರೈತರನ್ನು ವಂಚಿಸಿರುವುದು ಸರಿಯಲ್ಲ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಯು.ಬಸವರಾಜ ಆರೋಪಿಸಿದರು.ಸಮೀಪದ ವೇಣಿವೀರಾಪುರ ಗ್ರಾಮದಲ್ಲಿ ಭೂ ಸಂತ್ರಸ್ತರ ಹೋರಾಟ ಸಮಿತಿ ಸೇರಿದಂತೆ ವಿವಿಧ ಕನ್ನಡಪರ ಸಂಘಟನೆಗಳಿಂದ ಹಮ್ಮಿಕೊಂಡಿದ್ದ ರೈತರ ಬೃಹತ್ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಸರ್ಕಾರವು ತನ್ನ ವಿಳಂಬ ನೀತಿ ಕೈಬಿಟ್ಟು ಸರ್ಕಾರದ ನಿಯಮಗಳ, ಸರ್ವೋಚ್ಚ ನ್ಯಾಯಾಲಯದ ಆದೇಶದಂತೆ ಮೂಲ ಬೆಲೆಯ ಅನುಸಾರ ಪ್ರತಿ ಎಕರೆಗೆ ₹30 ಲಕ್ಷ ಭೂ ಪರಿಹಾರವನ್ನು ಬಡ ರೈತರಿಗೆ ನೀಡಬೇಕು ಎಂದು ಹೇಳಿದರು.ಆರ್ಸೆಲರ್ ಮಿತ್ತಲ್, ಬ್ರಹ್ಮಣಿ ಸ್ಟೀಲ್(ಉತ್ತಮಗಾಲ್ವ), ಎನ್ಎಂಡಿಸಿ ಕಂಪನಿಗಳು ಕೈಗಾರಿಕೆಗಳ ಸ್ಥಾಪನೆಗಾಗಿ ಬಡ ರೈತರಿಂದ ಭೂಮಿ ವಶಪಡಿಸಿಕೊಂಡು ಸುಮಾರು 14 ವರ್ಷಗಳಾದರೂ ಕೈಗಾರಿಕೆಗಳನ್ನು ಸ್ಥಾಪಿಸಿದೇ ಭೂ ಸಂತ್ರಸ್ತರ ಜೀವನದ ಜೊತೆ ಚೆಲ್ಲಾಟವಾಡುತ್ತಿರುವುದು ಶೋಚನೀಯ. ಕುಡತಿನಿ ಸೇರಿದಂತೆ ಸುತ್ತಲಿನ ಏಳು ಗ್ರಾಮಗಳ ರೈತರು 449 ದಿನಗಳಿಂದ ಅನಿರ್ದಿಷ್ಟಾವಧಿಯ ಧರಣಿ ನಡೆಸುತಿದ್ದರೂ ಜಿಲ್ಲಾಡಳಿತ, ಜನಪ್ರತಿನಿಧಿಗಳು ಕಂಡೂ ಕಾಣದಂತೆ ಮೌನ ವಹಿಸಿರುವುದು ಎಷ್ಟು ಸರಿ? ಮುಖ್ಯಮಂತ್ರಿ, ಸಚಿವರು, ಅಧಿಕಾರಿಗಳ ನೇತೃತ್ವದಲ್ಲಿ ಬೆಳಗಾವಿ ಅಧಿವೇಶನದಲ್ಲಿ ಸಭೆ ನಡೆಸಿ ರೈತರಿಗೆ ತ್ವರಿತವಾಗಿ ನ್ಯಾಯ ಒದಗಿಸುತ್ತೇವೆ ಎಂದು ಸುಳ್ಳು ಭರವಸೆ ನೀಡಿದ್ದಾರೆ. ಸರ್ಕಾರವು ಬಡರೈತರ ಪರ ನಿಲ್ಲದೇ ಭ್ರಷ್ಟ ಕಂಪನಿಗಳ ಜೊತೆ ಕೈಜೋಡಿಸಿ ಅಗತ್ಯ ಭೂ ಪರಿಹಾರ ನೀಡದೇ ಭೂಸಂತ್ರಸ್ತರನ್ನು ವಂಚಿಸುವುದು ತೀವ್ರ ಬೇಸರದ ಸಂಗತಿ ಎಂದರು.ರೈತರು ಭೂಮಿ ಇಲ್ಲದೇ ಮೂಲ ಭೂ ಬೆಲೆಯ ಪರಿಹಾರವಿಲ್ಲದೇ ಹಲವಾರು ವರ್ಷಗಳಿಂದ ಪರದಾಡುತ್ತಿದ್ದಾರೆ. ಕಾರ್ಖಾನೆಗಳನ್ನು ಸ್ಥಾಪಿಸಿ ಇಲ್ಲವೇ ರೈತರ ಜಮೀನುಗಳನ್ನು ವಾಪಸ್ ನೀಡಬೇಕು. ರಾಜ್ಯ ಸರ್ಕಾರವು ನುಡಿದಂತೆ ನಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.ಈ ಸಂದರ್ಭದಲ್ಲಿ ಸಿಐಟಿಯು ರಾಜ್ಯ ಉಪಾಧ್ಯಕ್ಷ ಜೆ.ಸತ್ಯಬಾಬು, ಮುಖಂಡರಾದ ಜೆ.ಎಂ. ಚೆನ್ನಬಸಯ್ಯ, ಪಿ.ಆರ್. ವೆಂಕಟೇಶ್, ಎಂ.ತಿಪ್ಪೇಸ್ವಾಮಿ, ಜಂಗ್ಲಿಸಾಬ್, ಎ.ಸ್ವಾಮಿ, ಸಂಪತ್ಕುಮಾರ್, ನಾಗಲಿಂಗಾಚಾರಿ ಇದ್ದರು. ಚಂದ್ರರೆಡ್ಡಿ, ಮಲ್ಲಿಕಾರ್ಜುನ, ಬಸವನಗೌಡ ಭಾಗವಹಿಸಿದ್ದರು.
;Resize=(128,128))
;Resize=(128,128))
;Resize=(128,128))
;Resize=(128,128))